ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗು ಎದುರು ಸದಾ ಮೊಬೈಲ್ ನೋಡ್ತೀರಾ? ಮಕ್ಕಳ ಮಾತು ಬೆಳವಣಿಗೆ ಮೇಲೆ ಬೀರುತ್ತೆ ದೊಡ್ಡ ಪರಿಣಾಮ

Parents Screen Habit: ಮಕ್ಕಳು ಪಕ್ಕದಲ್ಲಿ ಆಡುವಾಗ ಮೆಸೇಜ್ ನೋಡುವುದು, ಊಟದ ವೇಳೆ ವರ್ಕ್ ನೋಟಿಫಿಕೇಶನ್ ಚೆಕ್ ಮಾಡುವುದು ಅಥವಾ ಮಲಗಿಸುವಾಗ ಸೋಷಿಯಲ್ ಮೀಡಿಯಾ ನೋಡುವುದು ಸಾಮಾನ್ಯ ಎನಿಸಬಹುದು. ಆದರೆ, ಕೆಲಸದ ಸಮಯದ ಹೊರತಾಗಿ ಪೋಷಕರು ಫ್ರೀ ಟೈಮ್‌ನಲ್ಲಿ ಮೊಬೈಲ್ ಬಳಸುವುದಕ್ಕೂ ಮಕ್ಕಳ ಮಾತು ಬೆಳವಣಿಗೆಗೂ ನಂಟಿದೆ ಎಂದು ಪೋರ್ಚುಗಲ್‌ನ ಸಂಶೋಧನೆ ತಿಳಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಮಕ್ಕಳು ಪಕ್ಕದಲ್ಲಿ ಆಡುವಾಗ ಮೆಸೇಜ್ ನೋಡುವುದು, ಊಟದ ವೇಳೆ ನೋಟಿಫಿಕೇಶನ್ ಚೆಕ್ ಮಾಡುವುದು ಅಥವಾ ಮಲಗಿಸುವಾಗ ರೀಲ್ಸ್ ನೋಡುವುದು ಇಂದಿನ ಮನೆಗಳಲ್ಲಿ ತೀರಾ ಸಾಮಾನ್ಯ. ಆದರೆ, ಕೆಲಸದ ಸಮಯದ ಹೊರತಾಗಿ ಪೋಷಕರು ಫ್ರೀ ಟೈಮ್‌ನಲ್ಲಿ ಮೊಬೈಲ್ ಬಳಸುವುದು (Parents Screen Habit) ಮತ್ತು ರಾತ್ರಿ ವೇಳೆ ಮಕ್ಕಳು ಟ್ಯಾಬ್ಲೆಟ್ ನೋಡುವುದಕ್ಕೂ 3ರಿಂದ 5 ವರ್ಷದ ಮಕ್ಕಳ ಮಾತು ಬೆಳವಣಿಗೆಯಲ್ಲಿನ ಹಿನ್ನಡೆಗೂ ನಂಟಿದೆ ಎಂದು ಪೋರ್ಚುಗಲ್‌ನ RISE-Health ಮತ್ತು ಅವೆರೊ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ. ಫೋನ್‌ನಲ್ಲಿ ಮುಳುಗಿರುವಾಗ ಮುಖಾಮುಖಿ ಮಾತುಕತೆ ಕಡಿಮೆಯಾಗಿ, ಮಗುವಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದು ಹಾಗೂ ಹೊಸ ಪದಗಳನ್ನು ಕಲಿಸುವ ಅವಕಾಶಗಳು ತಪ್ಪಿಹೋಗುವ ಸಾಧ್ಯತೆ ಇರುತ್ತದೆ.

ಇದು ನೇರ ಕಾರಣ-ಪರಿಣಾಮವನ್ನು ಸಾಬೀತುಪಡಿಸುವುದಿಲ್ಲವಾದರೂ, ಮಕ್ಕಳ ಮಾತು ಬೆಳವಣಿಗೆಗೆ ದಿನನಿತ್ಯದ ನೇರ ಸಂವಾದ ಮತ್ತು ಕಣ್ಣಿನ ಸಂಪರ್ಕ ಬಹಳ ಮುಖ್ಯ ಎಂಬುದನ್ನು ಸಂಶೋಧನೆ ನೆನಪಿಸಿದೆ. ಹಾಗಾಗಿ ಊಟದ ವೇಳೆ ಫೋನ್ ದೂರ ಇಡುವುದು, ಮಲಗುವ ಮುನ್ನ ಸ್ಕ್ರೀನ್ ಬದಲು ಕಥೆ ಹೇಳುವುದು ಮತ್ತು ಮಗು ತಾನಾಗಿಯೇ ಮಾತನಾಡಲು ಸಾಕಷ್ಟು ಸಮಯ ಕೊಡುವುದರಂತಹ ಸಣ್ಣ ಪ್ರಾಯೋಗಿಕ ಬದಲಾವಣೆಗಳನ್ನು ಮನೆಯಲ್ಲೇ ರೂಢಿಸಿಕೊಳ್ಳುವುದು ಮಕ್ಕಳ ಭಾಷಾ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಸಾವಲ್ಲೂ ಸಾರ್ಥಕತೆ ಕಾಣಬೇಕೇ? ಸತ್ತ ಬಳಿಕವೂ ಬದುಕಬೇಕಿದ್ದರೆ ಅಂಗಾಂಗ ದಾನ ಮಾಡಿ!

ದಿನನಿತ್ಯದ ಸಂವಾದ ಏಕೆ ಮುಖ್ಯ?

ಮಾತು ಬೆಳವಣಿಗೆ ಎಂದರೆ ಕೇವಲ ಹೊಸ ಪದ ಕಲಿಯುವುದಷ್ಟೇ ಅಲ್ಲ. ಮಕ್ಕಳಿಗೆ ಶಬ್ದಗಳನ್ನು ಕೇಳಿಸಿಕೊಳ್ಳಲು, ಉಚ್ಚಾರಣೆ ಅಭ್ಯಾಸ ಮಾಡಲು, ಭಾಷೆ ಅರ್ಥಮಾಡಿಕೊಳ್ಳಲು ಮತ್ತು ಸಂವಾದದಲ್ಲಿ ಭಾಗವಹಿಸಲು ಅವಕಾಶ ಬೇಕು. ಊಟದ ವೇಳೆ ಮಾತನಾಡುವುದು, ನರ್ಸರಿ ರೈಮ್ಸ್ ಹಾಡುವುದು, ಮಲಗುವ ಮುನ್ನ ಕಥೆ ಹೇಳುವುದು ಮತ್ತು ಒಟ್ಟಿಗೆ ಆಟವಾಡುವುದರಿಂದ ಈ ಕೌಶಲ್ಯ ಬೆಳೆಯುತ್ತದೆ.

ಮಕ್ಕಳಿಗೆ ಉತ್ತರಿಸಲು ಮತ್ತು ಮಾತು ಆರಂಭಿಸಲು ಸಾಕಷ್ಟು ಸಮಯ ಕೊಡಬೇಕು. ಮಗು ಏನು ಕೇಳುತ್ತದೆ ಎಂಬುದನ್ನು ದೊಡ್ಡವರೇ ಮೊದಲೇ ಊಹಿಸಿ ಹೇಳುವುದು ಅಥವಾ ಮಗುವಿನ ಪರವಾಗಿ ತಾವೇ ಉತ್ತರಿಸುವುದರಿಂದ ಸ್ವತಂತ್ರವಾಗಿ ಮಾತನಾಡುವ ಅವಕಾಶ ಕಡಿಮೆಯಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

parents screen habit

93 ಕುಟುಂಬಗಳ ಮೇಲೆ ಅಧ್ಯಯನ

‘ಸ್ಕ್ರೀನ್ ಯೂಸ್ ಅಂಡ್ ಫ್ಯಾಮಿಲಿ ಫಂಕ್ಷನಿಂಗ್ ಆಸ್ ಪ್ರೆಡಿಕ್ಟರ್ಸ್ ಆಫ್ ಫೋನೋಲಾಜಿಕಲ್ ಡೆವಲಪ್‌ಮೆಂಟ್ ಇನ್ ಚಿಲ್ಡ್ರನ್’ ಎಂಬ ಈ ಅಧ್ಯಯನದಲ್ಲಿ 3ರಿಂದ 5 ವರ್ಷ ವಯಸ್ಸಿನ ಮಕ್ಕಳಿರುವ 93 ಪೋರ್ಚುಗೀಸ್ ಮಾತನಾಡುವ ಕುಟುಂಬಗಳನ್ನು ಪರಿಶೀಲಿಸಲಾಗಿದೆ. ಕೆಲಸದ ಅವಧಿಯ ಹೊರತಾಗಿ ಪೋಷಕರ ಫೋನ್ ಬಳಕೆ, ರಾತ್ರಿ ವೇಳೆ ಮಕ್ಕಳ ಟ್ಯಾಬ್ಲೆಟ್ ಬಳಕೆ ಮತ್ತು ಅತಿಯಾದ ಅವಲಂಬಿತ ಕೌಟುಂಬಿಕ ಸಂಬಂಧಗಳು ಮಕ್ಕಳ ಮಾತು ಬೆಳವಣಿಗೆಯಲ್ಲಿ ಹಿನ್ನಡೆಯೊಂದಿಗೆ ಸಂಬಂಧ ಹೊಂದಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.

ಫೋನ್ ನೋಡುವುದು, ನೋಟಿಫಿಕೇಶನ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳುವುದರಿಂದ ಮುಖಾಮುಖಿ ಸಂವಾದ ಕಡಿಮೆಯಾಗುತ್ತದೆ. ಇದರಿಂದ ಮಗು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಮಗುವಿನ ಮಾತು ಕೇಳಿಸಿಕೊಳ್ಳುವುದು ಮತ್ತು ಹೊಸ ಪದಗಳನ್ನು ಪರಿಚಯಿಸುವ ಅವಕಾಶಗಳು ತಪ್ಪಿಹೋಗಬಹುದು. ಮಕ್ಕಳು ಕೇವಲ ದೊಡ್ಡವರ ಮಾತನ್ನು ಕೇಳಿಸಿಕೊಳ್ಳುವುದಷ್ಟೇ ಅಲ್ಲ, ತಾವೂ ಮಾತು ಆರಂಭಿಸಲು ಅವಕಾಶ ಸಿಗಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಗ್ಯಾಸ್, ಆ್ಯಸಿಡಿಟಿ, ಹೊಟ್ಟೆ ಉಬ್ಬರಕ್ಕೆ ರಾಮಬಾಣ ಲವಂಗ: ಎಷ್ಟು ಬಳಸಬೇಕು, ಹೇಗೆ ಬಳಸಬೇಕು?

ರಾತ್ರಿ ವೇಳೆಯ ಸ್ಕ್ರೀನ್ ಬಳಕೆಯಿಂದ ಆಗುವ ಪರಿಣಾಮ

ರಾತ್ರಿ ವೇಳೆ ಮಕ್ಕಳು ಟ್ಯಾಬ್ಲೆಟ್ ಬಳಸುವುದೂ ಮಾತು ಬೆಳವಣಿಗೆಯಲ್ಲಿನ ಕೊರತೆಯೊಂದಿಗೆ ಸಂಬಂಧ ಹೊಂದಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ರಾತ್ರಿ ವೇಳೆಯ ಸ್ಕ್ರೀನ್ ಬಳಕೆಯೇ ನೇರವಾಗಿ ಮಾತು ತಡವಾಗಲು ಕಾರಣ ಎಂದು ಇದು ನೇರವಾಗಿ ಸಾಬೀತುಪಡಿಸುವುದಿಲ್ಲವಾದರೂ, ಡಿಜಿಟಲ್ ಸಾಧನಗಳನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎಂಬುದರ ಬಗ್ಗೆ ಪೋಷಕರು ಗಮನ ಹರಿಸಬೇಕಾದ ಅಗತ್ಯವನ್ನು ಇದು ತೋರಿಸುತ್ತದೆ.

ಹೆಚ್ಚಿನ ಸ್ಕ್ರೀನ್ ಬಳಕೆಯು ಪೋಷಕರು ಮತ್ತು ಚಿಕ್ಕ ಮಕ್ಕಳ ನಡುವಿನ ಸಂವಾದ ಕಡಿಮೆ ಮಾಡುತ್ತದೆ ಎಂದು 2024ರಲ್ಲಿ ‘ಜಾಮಾ ಪೀಡಿಯಾಟ್ರಿಕ್ಸ್’ನಲ್ಲಿ ಪ್ರಕಟವಾದ ಅಧ್ಯಯನವೂ ತಿಳಿಸಿದೆ. ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮನೆಯಲ್ಲಿ ದೊಡ್ಡವರ ಮಾತುಗಳು, ಮಕ್ಕಳ ಧ್ವನಿ ಮತ್ತು ಸಂವಾದದ ಸರದಿಗಳು ಕಡಿಮೆಯಾಗುವುದು ಕಂಡುಬಂದಿತ್ತು.

parents screen habit 2

ಪೋಷಕರು ಏನು ಮಾಡಬೇಕು?

  • ಗಮನ ಬೇರೆಡೆ ಸೆಳೆಯುವುದನ್ನು ಕಡಿಮೆ ಮಾಡಲು ಪೋಷಕರು ಸಂಪೂರ್ಣವಾಗಿ ಫೋನ್ ಬಿಡಬೇಕೆಂದೇನಿಲ್ಲ. ದಿನನಿತ್ಯದ ಅಭ್ಯಾಸದಲ್ಲಿ ಸಣ್ಣ ಬದಲಾವಣೆ ಮಾಡಿದರೆ ಸಾಕು.
  • ಊಟದ ವೇಳೆ ಫೋನ್ ದೂರ ಇಟ್ಟು ಆಹಾರ, ಚಟುವಟಿಕೆ ಮತ್ತು ದಿನನಿತ್ಯದ ಅನುಭವಗಳ ಬಗ್ಗೆ ಮಾತನಾಡುವುದು.
  • ಒಟ್ಟಿಗೆ ಪುಸ್ತಕ ಓದುವುದನ್ನು ರೂಢಿಸಿಕೊಳ್ಳುವುದು. ಕಥೆ ಪುಸ್ತಕಗಳು ಹೊಸ ಪದ, ಶಬ್ದ ಮತ್ತು ವಾಕ್ಯ ರಚನೆಯನ್ನು ಪರಿಚಯಿಸುತ್ತವೆ.
  • ಮಕ್ಕಳನ್ನು ಮಾತನಾಡಲು ಪ್ರೋತ್ಸಾಹಿಸಿ, ವಾಕ್ಯವನ್ನು ನೀವೇ ಪೂರ್ಣಗೊಳಿಸುವ ಬದಲು ಮಗುವಿಗೆ ತಮ್ಮ ಆಲೋಚನೆ ಹೇಳಲು ಸಮಯ ಕೊಡಿ.
  • ಆಟಕ್ಕೆ ಸಮಯ ನೀಡುವುದು ಕೂಡ ತುಂಬಾ ಸಹಾಯಕಾರಿಯಾಗಿದೆ. ಹಾಡು, ಕಥೆ ಹೇಳುವುದು, ಆಟವಾಡುವುದು ಮತ್ತು ಸರಳ ಮಾತುಕತೆ ಭಾಷಾ ಬೆಳವಣಿಗೆಗೆ ನೆರವಾಗುತ್ತದೆ.
  • ರಾತ್ರಿ ಸ್ಕ್ರೀನ್-ಫ್ರೀ ಅಭ್ಯಾಸ ಮಾಡುವುದರಿಂದ ನೀವು ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಲ ಗಮನ ಕೊಡಲು ಸಾಧ್ಯವಾಗುತ್ತದೆ.

ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬ ಪೋಷಕರ ಮಗುವಿನ ಮಾತಿನ ಬೆಳವಣಿಗೆಯೂ ತಡವಾಗುತ್ತದೆ ಎಂಬುದು ಇದರ ಅರ್ಥವಲ್ಲ. ಈ ಅಧ್ಯಯನವು ಸಂಬಂಧವನ್ನು ಮಾತ್ರ ತೋರಿಸುತ್ತದೆ, ನೇರ ಕಾರಣ-ಪರಿಣಾಮದ ಪುರಾವೆಯಲ್ಲ ಎಂಬುದನ್ನು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.