ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗ್ಯಾಸ್, ಆ್ಯಸಿಡಿಟಿ, ಹೊಟ್ಟೆ ಉಬ್ಬರಕ್ಕೆ ರಾಮಬಾಣ ಲವಂಗ: ಎಷ್ಟು ಬಳಸಬೇಕು, ಹೇಗೆ ಬಳಸಬೇಕು?

Health Tips: ಗ್ಯಾಸ್, ಆ್ಯಸಿಡಿಟಿ ಮತ್ತು ಹೊಟ್ಟೆ ಉಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಅಡುಗೆಮನೆಯ ಲವಂಗ ಪರಿಣಾಮಕಾರಿ ಮನೆ ಮದ್ದು ಎಂದು ಹೃದ್ರೋಗ ತಜ್ಞರು ವಿವರಿಸಿದ್ದಾರೆ. ಯುಜೆನಾಲ್ ಅಂಶದ ಗುಣಗಳನ್ನು ಹೊಂದಿರುವುದರಿಂದ ಹೃದಯ ಮತ್ತು ಮಧುಮೇಹ ಸಂಬಂಧಿ ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗಿ ಕೆಲಸ ಮಾಡುತ್ತದೆ. ಲವಂಗವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಮತ್ತು ಲಾಭಗಳ ಕುರಿತು ತಜ್ಞರು ನೀಡುವ ಸಲಹೆ ಇಲ್ಲಿದೆ ನೋಡಿ.

ಗ್ಯಾಸ್, ಆ್ಯಸಿಡಿಟಿಯಿಂದ ಮುಕ್ತಿ ಬೇಕೇ? ಈ ಮನೆ ಮದ್ದು ಬಳಸಿ

ಸಾಂದರ್ಭಿಕ ಚಿತ್ರ -

Jyoti S
Jyoti S Nov 27, 2026 7:00 AM

ಬೆಂಗಳೂರು: ಅರಿಶಿನ, ಶುಂಠಿಯಂತೆ ಶತಮಾನಗಳಿಂದ ಭಾರತೀಯ ಮಸಾಲೆಗಳು ತಮ್ಮ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದ್ದು, ಅಡುಗೆಯ ರುಚಿ ಹೆಚ್ಚಿಸುವುದರ ಜತೆಗೆ ಆರೋಗ್ಯ ಕಾಪಾಡುವುದರಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ವಿಶೇಷ ಮಸಾಲೆಗಳಲ್ಲಿ ಲವಂಗವೂ (Clove) ಒಂದಾಗಿದ್ದು, ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಆ್ಯಸಿಡಿಟಿಗೆ ಇದು ಅಡುಗೆಮನೆಯಲ್ಲೇ ಇರುವ ಪರಿಣಾಮಕಾರಿ ಪರಿಹಾರ ಎಂದು ಹೃದ್ರೋಗ ತಜ್ಞರು ವಿವರಿಸಿದ್ದಾರೆ. ಹಿಂದಿನ ಕಾಲದಲ್ಲಿ ಅಜ್ಜ-ಅಜ್ಜಿಯರು ಬಾಯಿಯಲ್ಲಿ ಲವಂಗ ಇಟ್ಟುಕೊಳ್ಳುವುದನ್ನು ನೀವು ನೋಡಿರಬಹುದು.

ಶತಮಾನಗಳಿಂದ ಭಾರತೀಯ ಅಡುಗೆ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿ ಬಳಕೆಯಾಗುತ್ತಿರುವ ಈ ಪುಟ್ಟ ಮಸಾಲೆಯ ಶಕ್ತಿ ಇರುವುದು 'ಯುಜೆನಾಲ್' ಎಂಬ ನೈಸರ್ಗಿಕ ಸಂಯುಕ್ತದಲ್ಲಿ ಎಂದು ತಜ್ಞರು ಹೇಳಿದ್ದಾರೆ. ಗ್ಯಾಸ್‌, ಆ್ಯಸಿಡಿಟಿ, ಹೊಟ್ಟೆ ಉಬ್ಬರ ಮತ್ತು ಹಲ್ಲಿನ ಸಮಸ್ಯೆಗಳಂತಹ ಹಲವು ಸಮಸ್ಯೆಗಳಿಗೆ ಮನೆ ಮದ್ದಾಗಿದ್ದು, ಎಷ್ಟು ಬಳಸಬೇಕು? ಯಾವಾಗ ಬಳಸಬೇಕು? ಇದರ ಪ್ರಮುಖ ಲಾಭಗಳು ಹಾಗೂ ಪ್ರಯೋಜನಗಳ ಕುರಿತು ಹೃದ್ರೋಗ ತಜ್ಞರು ಹಲವು ಸಲಹೆ ನೀಡಿದ್ದಾರೆ.

ಪ್ರತಿದಿನ ಬೆಳಗ್ಗೆ ಲವಂಗ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳಿವು

ಯುಜೆನಾಲ್ ಲವಂಗದ ಪ್ರಬಲ ಅಂಶ

ಲವಂಗದ ಎಣ್ಣೆಯಲ್ಲಿ ಶೇ. 70ರಿಂದ 90ರಷ್ಟು ಭಾಗ ಇರುವ ಪ್ರಮುಖ ಜೈವಿಕ ಸಂಯುಕ್ತವೇ ಯುಜೆನಾಲ್. ಯುಜೆನಾಲ್‌ನಲ್ಲಿರುವ ಉರಿಯೂತ ನಿವಾರಕ, ನೋವು ನಿವಾರಕ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಫ್ರೀ ರ‍್ಯಾಡಿಕಲ್‌ಗಳನ್ನು ತಟಸ್ಥಗೊಳಿಸಿ, ವಿವಿಧ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳವಣಿಗೆಯನ್ನು ತಡೆಯುತ್ತವೆ. ಯುಜೆನಾಲ್ ನೈಸರ್ಗಿಕವಾಗಿ ಮರಗಟ್ಟಿಸುವ ಗುಣ ಹೊಂದಿರುವುದರಿಂದ ಹಲ್ಲು ನೋವು ಶಮನಗೊಳಿಸಲು, ಬಾಯಿ ದುರ್ವಾಸನೆ ಮತ್ತು ಇತರ ಬಾಯಿಯ ಸಮಸ್ಯೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ದಂತವೈದ್ಯರೂ ಹಲವು ವರ್ಷಗಳಿಂದ ಲವಂಗವನ್ನು ನಂಬಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಲವಂಗವು ಜೀರ್ಣಕಾರಕ ಕಿಣ್ವಗಳನ್ನು ಉತ್ತೇಜಿಸುವುದರಿಂದ ಗ್ಯಾಸ್, ಹೊಟ್ಟೆ ಉಬ್ಬರ, ಆ್ಯಸಿಡಿಟಿ ಮತ್ತು ಅಜೀರ್ಣದ ಅಸ್ವಸ್ಥತೆ ಕಡಿಮೆಯಾಗುತ್ತದೆ. ಲವಂಗದಲ್ಲಿರುವ ಯುಜೆನಾಲ್ ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ.

ಆರಂಭಿಕ ಸಂಶೋಧನೆಗಳ ಪ್ರಕಾರ ಲವಂಗವು ಆರೋಗ್ಯಕರ ಇನ್ಸುಲಿನ್ ಕಾರ್ಯ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುತ್ತದೆ. 2021ರ ಅಧ್ಯಯನದ ಪ್ರಕಾರ, ಲವಂಗ ಮತ್ತು ಅದರ ಮುಖ್ಯ ಅಂಶವಾದ ಯುಜೆನಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ಹಾಗೂ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ನೈಸರ್ಗಿಕ ವಿಧಾನಗಳ ಮೂಲಕ ಮುಟ್ಟಿನ ಸೆಳೆತ ಕಡಿಮೆ ಮಾಡೋದು ಹೇಗೆ?

ಲವಂಗ ಬಳಸುವ ವಿಧಾನ

ಲವಂಗವನ್ನು ಜಗಿಯಲು ಇಷ್ಟಪಡದಿದ್ದರೆ ರಾತ್ರಿ ಒಂದು ಅಥವಾ ಎರಡು ಲವಂಗವನ್ನು ನೀರಿನಲ್ಲಿ ನೆನೆಸಿಟ್ಟು, ಮಲಗುವ ಮುನ್ನ ಆ ನೀರನ್ನು ಕುಡಿಯಬಹುದು. ಊಟದ ಬಳಿಕ ಇದು ಹಿತ ನೀಡುವುದರ ಜತೆಗೆ ರಾತ್ರಿಯಿಡೀ ಜೀರ್ಣಕ್ರಿಯೆಗೆ ನೆರವಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಅನ್ನದ ಖಾದ್ಯಗಳು, ಸಾರು ಅಥವಾ ಚಹಾಗಳಿಗೆ ರುಚಿಗಾಗಿ ಇಡೀ ಲವಂಗ ಬಳಸಬಹುದು. ಕೇಕ್ ಮತ್ತು ಕುಕೀಸ್‌ನಂತಹ ಬೇಕಿಂಗ್ ತಿಂಡಿಗಳಲ್ಲಿ ಲವಂಗದ ಪುಡಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಚಹಾದಲ್ಲಿ ಒಂದು ಇಲ್ಲವೇ ಎರಡು ಲವಂಗಗಳನ್ನು ಬಳಸುವುದರಿಂದ ಇದು ಜೀರ್ಣಕ್ರಿಯೆಗೆ ಮತ್ತು ಹೃದಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಹಲ್ಲಿನ ನೋವು ತಗ್ಗಿಸಲು ಹಲ್ಲಿನ ಹೊರಭಾಗದಲ್ಲಿ ಹಚ್ಚುವುದರಿಂದ, ಹಲ್ಲು ನೋವು ಸಂಬಂಧಿತ ಸಮಸ್ಯೆಗಳು ಶಮನವಾಗುತ್ತವೆ.

ಎಷ್ಟು ಬಳಸಬೇಕು?

'ಹೆಚ್ಚಾದಷ್ಟೂ ಒಳ್ಳೆಯದಲ್ಲ' ಎಂಬುದನ್ನು ನೆನಪಿಡಿ, ಅತಿಯಾದ ಲವಂಗ, ಅದರಲ್ಲೂ ಗಾಢ ಲವಂಗದ ಎಣ್ಣೆಯು ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡಬಹುದು. ದಿನಕ್ಕೆ ಒಂದು ಅಥವಾ ಎರಡು ಲವಂಗ ಸಾಕು. ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಆ್ಯಸಿಡಿಟಿ ಸಮಸ್ಯೆ ಇರುವವರು ನಿಯಮಿತವಾಗಿ ಬಳಸುವುದು ಉತ್ತಮ ಎನ್ನುತ್ತಾರೆ ತಜ್ಞರು.