ನವದೆಹಲಿ: ಗರ್ಭಾವಸ್ಥೆಯಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆ ಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಮಗುವಿನ ಆರೈಕೆಗಾಗಿ ಸೇವಿಸುವ ಆಹಾರ ಕ್ರಮದಿಂದ ಹಿಡಿದು ದೂರದ ಪ್ರಯಾಣದಿಂದಲೋ ಕೆಲವರಿಗೆ ಶೀತ, ಜ್ವರ, ದೇಹದ ನಾನಾ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ (Health Tips). ಹೀಗಾಗಿ ಬೇಗನೆ ಗುಣಮುಖರಾಗಲು ಪ್ಯಾರಾಸಿಟಮಾಲ್ (Paracetamol) ಮಾತ್ರೆ ಸೇವನೆ ಮಾಡುತ್ತಾರೆ. ಆದರೆ ಮಗುವಿನ ಬೆಳವಣಿಗೆ ದೃಷ್ಟಿಯಿಂದ ಗರ್ಭಿಣಿಯರು ಪ್ಯಾರಾಸಿಟಮಾಲ್ ಸೇವನೆ ಮಾಡುವುದು ಸುರಕ್ಷಿತವೇ ಎನ್ನುವ ಗೊಂದಲ ಇದ್ದರೆ ಈ ಬಗ್ಗೆ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಪ್ಯಾರಾಸಿಟಮಾಲ್ ಮಾತ್ರೆಯ ಸೇವನೆ ಗರ್ಭಿಣಿಗೆ ಮತ್ತು ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಈ ಅಧ್ಯಯನ ತಿಳಿಸಿದೆ. ಗರ್ಭಿಣಿಯರು ಪ್ಯಾರಾಸಿಟಮಾಲ್ ಮಾತ್ರೆ ಸೇವಿಸಿದರೆ ಏನೆಲ್ಲ ಅಡ್ಡ ಪರಿಣಾಮಗಳಾಗುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಿಣಿಯರ ದೇಹ ಬಹಳ ಸೂಕ್ಷ್ಮವಾಗಿರುವ ಕಾರಣ ರೋಗ ಬಾಧೆಗಳು ಹೆಚ್ಚಾಗಿ ಕಾಡುತ್ತವೆ. ಹೀಗಾಗಿ ಜ್ವರ, ಶೀತ, ಕೆಮ್ಮು, ಮೈ ಕೈ ನೋವು ಬಂದಿದೆ ಎಂದು ಗರ್ಭಿಣಿಯರು ಪ್ಯಾರಾಸಿಟಮಾಲ್ ಮಾತ್ರೆ ಸೇವಿಸುತ್ತಾರೆ. ಆದರೆ ಇದರಿಂದ ಗರ್ಭಾವಸ್ಥೆಯಲ್ಲಿ ಇರುವ ಮಗುವಿಗೆ ತೀವ್ರ ಹಾನಿ ಆಗುವ ಸಾಧ್ಯತೆ ಇದೆ. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಇದು ಸಮಸ್ಯೆ ತಂದೊಡ್ಡಬಹುದು.
ಎಡಿಎಚ್ ಡಿ ಸಮಸ್ಯೆ
ಗರ್ಭಾವಸ್ಥೆಯಲ್ಲಿ ಇರುವ ಮಗುವಿನ ಮಾನಸಿಕ ಬೆಳವಣಿಗೆಗೆ ಪ್ಯಾರಾಸಿಟಮಾಲ್ ಮಾತ್ರೆ ಅತೀ ಹೆಚ್ಚು ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಎಡಿಎಚ್‌ಡಿ ಅಂದರೆ ಚಂಚಲತೆಯ ಸಮಸ್ಯೆ ಎದುರಾಗುತ್ತದೆ. ಎಡಿಎಚ್‌ಡಿ ಸಮಸ್ಯೆ ಬಂದರೆ ಕೋಪ, ಕಿರಿಕಿರಿ ಇತ್ಯಾದಿ ಮಾನಸಿಕ ಸಮಸ್ಯೆ ಕಂಡುಬರುತ್ತದೆ. ಈ ಟ್ಯಾಬ್ಲೆಟ್‌ನ ಅತಿಯಾದ ಸೇವನೆಯು ಮುಂದೆ ಹುಟ್ಟುವ ಮಕ್ಕಳ ಮಾನಸಿಕ ಅಭಿವೃದ್ಧಿ ಕುಂಠಿತಗೊಳ್ಳುವಂತೆ ಮಾಡುತ್ತದೆ ಎನ್ನಲಾಗಿದೆ.
ಮೆದುಳಿನ ಬೆಳವಣಿಗೆ ಹಾನಿ
ಅಧ್ಯಯನದ ಪ್ರಕಾರ ಗರ್ಭಿಣಿಯರು ಪ್ಯಾರಾಸಿಟಮಾಲ್ ಮಾತ್ರೆ ಸೇವಿಸಿದರೆ ಮಗುವಿನ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳ್ಳಲಿದೆ. ಇದರ ಜತೆಗೆ ಮಗುವಿನ ಮೆದುಳಿನ ಬೆಳವಣಿಗೆಗೆ ಹಾನಿ ಆಗುವ ಸಾಧ್ಯತೆ ಇದೆ. ಮೆದುಳಿನ ಸ್ಮರಣಾ ಶಕ್ತಿ ಕಡಿಮೆ ಆಗುವುದು, ಯೋಚನಾ ಶೈಲಿ ಬದಲಾಗುವುದು, ತೊದಲು ಮಾತನಾಡುವುದು, ಉಚ್ಛರಣಾ ಸಮಸ್ಯೆ, ಅಸ್ವಸ್ಥತೆ, ಐಕ್ಯು ಮಟ್ಟ ಬಹಳ ಕಡಿಮೆ ಆಗುವ ಜತೆಗೆ ಅನೇಕ ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಮಗುವನ್ನು ಕಾಡುವ ಸಾಧ್ಯತೆ ಇದೆ.
ಇದನ್ನು ಓದಿ: Health Tips: ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಎಂದಿಗೂ ಇಡ್ಬೇಡಿ
ತಾಯಂದಿರಿಗೆ ಅಪಾಯ ಇದೆಯೇ?
ಪ್ಯಾರಾಸಿಟಮಾಲ್ ಮಾತ್ರೆ ಅತಿಯಾಗಿ ಸೇವಿಸುವುದು ಎಲ್ಲರಿಗೂ ಅಪಾಯ ತಂದೊಡ್ಡುತ್ತದೆ. ಗರ್ಭಿಣಿಯರು ಪ್ಯಾರಾಸಿಟಮಾಲ್ ಮಾತ್ರೆಯನ್ನು ಅತಿಯಾಗಿ ಸೇವಿಸಿದರೆ ರಕ್ತಸ್ರಾವ ಆಗುವ ಸಾಧ್ಯತೆ ಇದೆ. ಇದರ ಜತೆಗೆ ಮಗುವಿನ ಬೆಳವಣಿಗೆ ಮೇಲೆ ಮಾತ್ರೆ ಅಡ್ಡ ಪರಿಣಾಮ ಬೀರುವುದರಿಂದ ತಾಯಿಯ ಆರೋಗ್ಯ ಕೂಡ ಹದಗೆಡುವ ಸಾಧ್ಯತೆ ಇಲ್ಲದಿಲ್ಲ. ಹಾಗಾಗಿ ಸಣ್ಣ ಪುಟ್ಟ ರೋಗಗಳಿಗೆ ಮನೆ ಮದ್ದು ಸೇವಿಸುವುದು ಉತ್ತಮ. ಒಂದು ವೇಳೆ ತೀವ್ರ ಸಮಸ್ಯೆ ಇದ್ದಲ್ಲಿ ವೈದ್ಯಕೀಯ ಸಲಹೆ ಮೇರೆಗೆ ಬೇಕಾದ ಮೆಡಿಸಿನ್ ಪಡೆಯಬಹುದು.