ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಟ್ರೋಕ್‌ನಿಂದ ಚೇತರಿಕೆ: ಮನೆಯಲ್ಲಿ ಸುರಕ್ಷಿತ ಜೀವನಕ್ಕೆ ಸರಳ ಮಾರ್ಗಗಳು

ಮನೆಯ ವಾತಾವರಣವನ್ನು ಸುರಕ್ಷಿತವಾಗಿರಿಸಿ: ಮನೆಯ ನೆಲವನ್ನು ಸ್ವಚ್ಛವಾಗಿ ಮತ್ತು ಒಣಗಿರುವಂತೆ ನೋಡಿಕೊಳ್ಳಿ. ಜಾರುವ ರಗ್ಗುಗಳು, ವಿದ್ಯುತ್ ತಂತಿಗಳು ಮತ್ತು ಅನಗತ್ಯ ವಸ್ತುಗಳನ್ನು ದಾರಿಯಿಂದ ತೆಗೆದು ಹಾಕಿ. ಬಾತ್‌ರೂಮ್‌ನಲ್ಲಿ ಹಿಡಿದುಕೊಳ್ಳುವ ಕಂಬಿಗಳು (Grab bars), ಜಾರದ ನೆಲಹಾಸು ಹಾಗೂ ಅಗತ್ಯವಿದ್ದಲ್ಲಿ ಶವರ್ ಚೇರ್ ಅಳವಡಿಸಿ

ಸ್ಟ್ರೋಕ್ (ಪಾರ್ಶ್ವವಾಯು) ವ್ಯಕ್ತಿಯ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಉಂಟು ಮಾಡಬಹುದು. ಮೆದುಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ಅಥವಾ ಮೆದುಳಿನಲ್ಲಿ ರಕ್ತಸ್ರಾವವಾದಾಗ ಸ್ಟ್ರೋಕ್ ಸಂಭವಿಸುತ್ತದೆ. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದ ನಂತರವೂ ಕೆಲವರಲ್ಲಿ ಕೈಕಾಲುಗಳ ದೌರ್ಬಲ್ಯ, ನಡೆಯಲು ತೊಂದರೆ, ಮಾತಿನ ಸಮಸ್ಯೆ, ನುಂಗಲು ಕಷ್ಟ ಹಾಗೂ ನೆನಪಿನ ಶಕ್ತಿಯಲ್ಲಿ ವ್ಯತ್ಯಾಸ ಕಂಡುಬರಬಹುದು. ಆಸ್ಪತ್ರೆಯಿಂದ ಮನೆಗೆ ಬಂದ ನಂತರವೂ ಚೇತರಿಕೆಯ ಪ್ರಕ್ರಿಯೆ ಮುಂದುವರಿಯುತ್ತದೆ. ಈ ಹಂತದಲ್ಲಿ ಮನೆಯವರ ಆರೈಕೆ ಮತ್ತು ಸುರಕ್ಷಿತ ವಾತಾವರಣ ಬಹಳ ಮುಖ್ಯ.

ಮನೆಯ ವಾತಾವರಣವನ್ನು ಸುರಕ್ಷಿತವಾಗಿರಿಸಿ: ಮನೆಯ ನೆಲವನ್ನು ಸ್ವಚ್ಛವಾಗಿ ಮತ್ತು ಒಣಗಿರುವಂತೆ ನೋಡಿಕೊಳ್ಳಿ. ಜಾರುವ ರಗ್ಗುಗಳು, ವಿದ್ಯುತ್ ತಂತಿಗಳು ಮತ್ತು ಅನಗತ್ಯ ವಸ್ತುಗಳನ್ನು ದಾರಿಯಿಂದ ತೆಗೆದು ಹಾಕಿ. ಬಾತ್‌ರೂಮ್‌ನಲ್ಲಿ ಹಿಡಿದುಕೊಳ್ಳುವ ಕಂಬಿಗಳು (Grab bars), ಜಾರದ ನೆಲಹಾಸು ಹಾಗೂ ಅಗತ್ಯವಿದ್ದಲ್ಲಿ ಶವರ್ ಚೇರ್ ಅಳವಡಿಸಿ. ಮೆಟ್ಟಿಲುಗಳನ್ನು ಬಳಸುವಾಗ ವಿಶೇಷ ಎಚ್ಚರಿಕೆ ವಹಿಸಿ.

ಇದನ್ನೂ ಓದಿ: Health Tips: ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!

ನಡೆಯುವಾಗ ಎಚ್ಚರಿಕೆ: ರೋಗಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ವಾಕರ್, ಕೋಲು ಅಥವಾ ಇತರ ಸಹಾಯಕ ಸಾಧನಗಳನ್ನು ಬಳಸಿ. ಆರಂಭದಲ್ಲಿ ಮನೆಯವರ ಸಹಾಯದೊಂದಿಗೆ ನಡೆಯಲು ಅಭ್ಯಾಸ ಮಾಡಿಸಿ. ಆತುರಪಡಿಸದೆ, ಬೀಳುವ ಅಪಾಯವನ್ನು ಕಡಿಮೆ ಮಾಡುವುದು ಮುಖ್ಯ.

ಔಷಧಿ ಮತ್ತು ಆಹಾರ: ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಲಿ. ನುಂಗಲು ತೊಂದರೆ ಇರುವವರಿಗೆ ವೈದ್ಯರು ಅಥವಾ ಸ್ಪೀಚ್ ಥೆರಪಿಸ್ಟ್ ಸೂಚಿಸಿದ ಆಹಾರದ ವಿಧಾನವನ್ನು ಅನುಸರಿಸಿ. ಊಟ ಮಾಡುವಾಗ ಕುಳಿತುಕೊಳ್ಳುವ ಭಂಗಿ ಸರಿಯಾಗಿರಲಿ.

ಪುನರ್ವಸತಿ ಮತ್ತು ಮಾನಸಿಕ ಬೆಂಬಲ: ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಮತ್ತು ಆಕ್ಯುಪೇಷನಲ್ ಥೆರಪಿಯನ್ನು ಮುಂದುವರಿಸಿ. ರೋಗಿಯನ್ನು ಸಾಧ್ಯವಾದಷ್ಟು ಸ್ವತಂತ್ರವಾಗಿ ದಿನನಿತ್ಯದ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸಿ. ಕುಟುಂಬದವರ ಪ್ರೀತಿ, ತಾಳ್ಮೆ ಮತ್ತು ಪ್ರೋತ್ಸಾಹ ಅವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಮತ್ತೆ ಸ್ಟ್ರೋಕ್ ಆಗದಂತೆ ತಡೆಯಿರಿ: ಮುಖ ಒಂದು ಕಡೆ ವಾಲುವುದು, ಕೈ ಅಥವಾ ಕಾಲಿನಲ್ಲಿ ಹಠಾತ್ ದೌರ್ಬಲ್ಯ, ಮಾತು ತೊದಲುವುದು, ಸಮತೋಲನ ತಪ್ಪುವುದು ಅಥವಾ ದೃಷ್ಟಿ ಮಸುಕಾ ಗುವುದು ಕಂಡುಬಂದರೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಿರಿ.

ಸ್ಟ್ರೋಕ್‌ನಿಂದ ಚೇತರಿಕೆ ಒಂದು ದಿನದ ಪ್ರಕ್ರಿಯೆಯಲ್ಲ. ಸರಿಯಾದ ಚಿಕಿತ್ಸೆ, ನಿಯಮಿತ ಪುನರ್ವಸತಿ, ಮನೆಯವರ ಸಹಕಾರ ಮತ್ತು ಸುರಕ್ಷಿತ ವಾತಾವರಣದಿಂದ ರೋಗಿಯ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.

ನೆನಪಿಡಿ: ಸುರಕ್ಷಿತ ಮನೆ, ನಿರಂತರ ಆರೈಕೆ ಮತ್ತು ಕುಟುಂಬದ ಬೆಂಬಲವೇ ಸ್ಟ್ರೋಕ್ ನಂತರದ ಉತ್ತಮ ಜೀವನಕ್ಕೆ ಬುನಾದಿ.