ಸಮಗ್ರ ತನಿಖೆ ಜತೆ ಜಾಗೃತಿ ಮೂಡಿಸಲು ಕೇಂದ್ರ ಸರಕಾರಕ್ಕೆ ಸಂಸದೀಯ ಸಮಿತಿ ಶಿಫಾರಸು
ದೆಹಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ‘ಅeತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ’ (CKDU & Chronic Kidney Disease of Unknown Aetiology) ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರು ವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರು, ರೈತರು ಮತ್ತು ದೈಹಿಕ ಶ್ರಮ ವಹಿಸುವ ಕಾರ್ಮಿಕ ರಲ್ಲಿ ಈ ನಿಗೂಢ ಕಿಡ್ನಿ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಮತ್ತು ಕಟ್ಟುನಿಟ್ಟಿನ ಜಾಗೃತ ಜಾಲವನ್ನು ರೂಪಿಸುವಂತೆ ಸಂಸದೀಯ ಸಮಿತಿಯು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಹೆಸರೇ ಸೂಚಿಸುವಂತೆ ಈ ರೋಗಕ್ಕೆ ನಿಖರವಾದ ಕಾರಣಗಳು ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ತೀವ್ರತರವಾದ ಶಾಖದ ವಾತಾವರಣ, ಬಿಸಿಲಿಗೆ ಮೈಯೊಡ್ಡುವುದು ಹಾಗೂ ಕೀಟ ನಾಶಕಗಳ ಬಳಕೆ ಸೇರಿದಂತೆ ಹಲವು ಸಾಧ್ಯತೆಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಭಾರತದ ಸುಮಾರು 15 ರಾಜ್ಯಗಳಲ್ಲಿ ಈ ಸಿಕೆಡಿಯು (CKDU) ಇರುವುದು ಸಂಶೋಧನೆಯಿಂದ ತಿಳಿದುಬಂದಿದೆ.
ಅಜ್ಞಾತ ಕಾರಣಗಳ ಮೂತ್ರಪಿಂಡ ಕಾಯಿಲೆಯಿಂದ ಬಾಧಿತವಾಗಿರುವ ಆಂಧ್ರಪ್ರದೇಶ, ಒಡಿಶಾ ಮತ್ತು ಕರ್ನಾಟಕದ ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುವ ಕೃಷಿಕರು ಹಾಗೂ ಕಾರ್ಮಿಕ ವರ್ಗದವರ ಆರೋಗ್ಯ ತಪಾಸಣೆಗೆ ತಕ್ಷಣವೇ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಸಂಸದೀಯ ಸಚಿವಾಲಯದ ಸ್ಥಾಯಿ ಸಮಿತಿಯು ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: Kidney Health : ಎಲ್ಲಾ ವಯಸ್ಸಿನವರಲ್ಲೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯ: ತಡೆಗಟ್ಟುವಿಕೆ, ಆರೈಕೆ ಮತ್ತು ಜಾಗೃತಿ
ರಾಯಚೂರು ಸಿಕೆಡಿಯು ಕ್ಲಸ್ಟರ್: ಭಾರತದಲ್ಲಿ ಈ ರೋಗದ ಪ್ರಮಾಣದ ಕುರಿತು 2021ರಲ್ಲಿ ನಡೆದ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯು ಸಿಕೆಡಿಯು ರೋಗದ ಪ್ರಮುಖ ಕ್ಲಸ್ಟರ್ (ಹೆಚ್ಚು ಪ್ರಕರಣಗಳಿರುವ ಪ್ರದೇಶ) ಆಗಿ ಹೊರಹೊಮ್ಮಿದೆ. ಅದೇ ರೀತಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸಗಢ, ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣದ ಹಲವು ಜಿಲ್ಲೆಗಳಲ್ಲೂ ಇಂತಹ ಪ್ರಕರಣಗಳು ವರದಿಯಾಗಿವೆ. ಸುಮಾರು 30 ವರ್ಷಗಳ ಹಿಂದೆ ಮಧ್ಯ ಅಮೆರಿಕದ ದೇಶಗಳಲ್ಲಿ ಕಬ್ಬು ಕತ್ತರಿಸುವ ಕಾರ್ಮಿಕರಲ್ಲಿ ಈ ರೋಗವು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.
ತದನಂತರ ಉತ್ತರ ಶ್ರೀಲಂಕಾದಲ್ಲೂ ಇದು ಬೆಳಕಿಗೆ ಬಂದಿತ್ತು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಭಾರತದಲ್ಲಿ ದಶಕದ ಹಿಂದೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಯಾದ ಶ್ರೀಕಾಕುಲಂನ ‘ಉದ್ದಾನಂ’ ಎಂಬ ಪ್ರದೇಶದಲ್ಲಿ ಯಾವುದೇ ನಿಖರ ಕಾರಣವಿಲ್ಲದೆ ಸಾಲು ಸಾಲು ಕಿಡ್ನಿ ವೈಫಲ್ಯ ಪ್ರಕರಣಗಳು ವರದಿಯಾದಾಗ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
2015 ರ ವೇಳೆಗೆ ಈ ಪ್ರದೇಶದಲ್ಲಿ ಅಂದಾಜು 34000 ಜನರು ಸಿಕೆಡಿಯುಗೆ ತುತ್ತಾಗಿದ್ದರು ಮತ್ತು ಸುಮಾರು 4500 ಜನರು ಸಾವನ್ನಪ್ಪಿದ್ದರು. ಶ್ರೀಕಾಕುಲಂ ಘಟನೆಯ ನಂತರ ಸಿಕೆಡಿಯು ರೋಗವು ದೇಶದ ಹಲವು ರಾಜ್ಯಗಳಿಗೆ ಹರಡಿದೆ. ಅಧ್ಯಯನಗಳ ಪ್ರಕಾರ, ಈ ರೋಗಪೀಡಿತ ನಿರ್ದಿಷ್ಟ ಪ್ರದೇಶಗಳ ಶೇ.18 ರಿಂದ 20ರಷ್ಟು ಗ್ರಾಮೀಣ ಜನಸಂಖ್ಯೆಯು ಈ ನಿಗೂಢ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದೆ ಎಂದು ದಿ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕಿಡ್ನಿ ತಜ್ಞ ಡಾ.ವಿವೇಕಾನಂದ ಝಾ ಅವರು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿರುತ್ತವೆ. ಒಟ್ಟು ಕಿಡ್ನಿ ವೈಫಲ್ಯ ಪ್ರಕರಣಗಳಲ್ಲಿ ಶೇ.31ರಷ್ಟು ಮಧುಮೇಹದಿಂದ ಹಾಗೂ ಶೇ.13ರಷ್ಟು ರಕ್ತದೊತ್ತಡದಿಂದ ಸಂಭವಿಸುತ್ತವೆ. ಆದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದ ಈ ಸಿಕೆಡಿಯು ಶೇ.16ರಷ್ಟು ಪ್ರಕರಣಗಳಿಗೆ ಕಾರಣವಾಗಿದ್ದು, ಇದು ಹೆಚ್ಚಾಗಿ ಕಡಿಮೆ ಆದಾಯ ಹೊಂದಿರುವ ಕಿರಿಯ ವಯಸ್ಸಿನ ಕೃಷಿ ಕಾರ್ಮಿಕರನ್ನೇ ಬಲಿಪಡೆಯುತ್ತಿದೆ.
ಸಾಧ್ಯವಿರುವ ಕಾರಣಗಳೇನು?: ನಿರಂತರ ಬಿಸಿಲಿನ ತಾಪಮಾನಕ್ಕೆ ಒಳಗಾಗುವುದು, ದೇಹದಲ್ಲಿ ಪದೇ ಪದೆ ನೀರಿನಂಶ ಕಡಿಮೆಯಾಗುವುದು, ಕೀಟನಾಶಕಗಳ ಬಳಕೆ, ಕಲುಷಿತ ಕುಡಿಯುವ ನೀರು ಹಾಗೂ ಭಾರ ಲೋಹಗಳ ಮಾಲಿನ್ಯದ ಕುರಿತು ವೈಜ್ಞಾನಿಕ ತನಿಖೆ ನಡೆಸಬೇಕಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ವಾಯುಗುಣ ವೈಪರೀತ್ಯಕ್ಕೂ ಮತ್ತು ಸಿಕೆಡಿಯು ರೋಗಕ್ಕೂ ಇರುವ ಸಂಬಂಧವನ್ನು ಪರಿಶೀಲಿಸಬೇಕಿದೆ.
ಡಾ.ಝಾ ಅವರು ವಿವರಿಸುವಂತೆ, ಆರಂಭದಲ್ಲಿ ಕಬ್ಬು ಕೊಯ್ಲಿನ ನಂತರ ಉಳಿಯುವ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದಾಗ ಉಂಟಾಗುವ ತೀವ್ರ ಶಾಖವೇ ಇದಕ್ಕೆ ಮೂಲ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. ಆಂಧ್ರಪ್ರದೇಶದಲ್ಲಿ ಕಲುಷಿತ ಕುಡಿಯುವ ನೀರೇ ಕಾರಣವಿರಬಹುದು ಎಂದು ಶಂಕಿಸಿ, ಸರಕಾರವು ಗ್ರಾಮಗಳಿಗೆ ಆರ್‌ಒ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಮೇಲೆಯೂ ಪ್ರಕರಣಗಳು ಕಡಿಮೆಯಾಗಲಿಲ್ಲ.
ಶ್ರೀಲಂಕಾದಲ್ಲಿ ಕೀಟನಾಶಕಗಳೇ ಕಾರಣವೆಂಬ ಸಿದ್ಧಾಂತ ಮುನ್ನೆಲೆಗೆ ಬಂದು, ಅಲ್ಲಿನ ಸರಕಾರ ನಿರ್ದಿಷ್ಟ ಕೀಟನಾಶಕವನ್ನು ನಿಷೇಧಿಸಿತು. ಆದರೂ ರೋಗದ ಉಲ್ಬಣ ನಿಲ್ಲದಿದ್ದಾಗ ಸರಕಾರ ನಿಷೇಧವನ್ನು ಹಿಂಪಡೆಯಿತು. ಒಟ್ಟಾರೆಯಾಗಿ ಹೇಳುವುದಾದರೆ, ಈ ರೋಗದ ಹುಟ್ಟಿನ ಕುರಿತು ಯಾವುದೇ ನಿರ್ದಿಷ್ಟ ವೈಜ್ಞಾನಿಕ ಆಧಾರಗಳು ಇದುವರೆಗೆ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
೦
ಭಾರತದ ಸುಮಾರು 15 ರಾಜ್ಯಗಳಲ್ಲಿ ಸಿಕೆಡಿಯು ಇರುವುದು ಸಂಶೋಧನೆಯಿಂದ ಪತ್ತೆಯಾಗಿದೆ
ಆಂಧ್ರ, ಒಡಿಶಾ, ಕರ್ನಾಟಕದ ಕೆಲವು ಪ್ರದೇಶದ ಕೃಷಿಕರು, ಕಾರ್ಮಿಕರಿಗೆ ರೋಗದ ಭೀತಿ
ರೋಗದ ಹುಟ್ಟಿನ ಕುರಿತು ಯಾವುದೇ ನಿರ್ದಿಷ್ಟ ವೈಜ್ಞಾನಿಕ ಆಧಾರಗಳು ಇದುವರೆಗೆ ಸಿಕ್ಕಿಲ್ಲ
![]()
ದೇಶದಲ್ಲಿ ಕಿಡ್ನಿ ಸಮಸ್ಯೆಗೆ ಅತಿಯಾದ ರಕ್ತದೊತ್ತಡ, ನೋವು ನಿವಾರಕ ಮಾತ್ರೆಗಳ ಸೇವನೆ ಕಾರಣವಾಗಿದೆ. ಜತೆಗೆ ಧೂಮ ಪಾನ, ಮದ್ಯಪಾನದಿಂದಲೂ ಕಿಡ್ನಿಗೆ ಹಾನಿಯಾಗಲಿದೆ. ಆರಂಭದಲ್ಲೇ ಮೂತ್ರಪಿಂಡ ಹಾನಿ ಮತ್ತು ವೈ-ಲ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಸರಕಾರಿ ನೆಪ್ರೋ ಯುರಾಲಜಿ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಗೆ ವಿಶ್ವದರ್ಜೆಯ ಚಿಕಿತ್ಸೆ ನೀಡಲಾಗುತ್ತಿದೆ.
-ಡಾ.ಎಂ.ಶಿವಲಿಂಗಯ್ಯ, ನಿರ್ದೇಶಕರು, ನೆಪ್ರೋ ಯುರಾಲಜಿ ಆಸ್ಪತ್ರೆ