l ಡಾ. ರೋಹಿತ್ ರಘುನಾಥ್ ರಾನಡೆ
ಸೀನಿಯರ್ ಕನ್ಸಲ್ಟೆಂಟ್ ಮತ್ತು ಕ್ಲಿನಿಕಲ್ ಲೀಡ್ - ಗೈನಕಾಲಜಿಕ್ ಆಂಕಾಲಜಿ, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು.
ಅಂಡಾಶಯದ ಕ್ಯಾನ್ಸರ್ (ovarian cancer) ಒಂದು ಕ್ರೂರ ಗುಣವನ್ನು ಹೊಂದಿದೆ. ಅದು ತಾನು ಬಂದಿರುವುದನ್ನು ದೊಡ್ಡ ಧ್ವನಿಯಲ್ಲಿ ಹೇಳುವುದಿಲ್ಲ. ಸದ್ದಿಲ್ಲದೆ ಆವರಿಸುತ್ತ ಹೋಗುತ್ತದೆ. ಹೊಟ್ಟೆಯ ಉಬ್ಬರ, ಬೆನ್ನು ನೋವು ಅಥವಾ ಏನೋ ಸರಿಯಿಲ್ಲ ಎಂಬ ಅಸ್ಪಷ್ಟ ಭಾವಗಳ ಮೂಲಕ ತಾನು ಇರುವುದಾಗಿ ಮೌನವಾಗಿ ಪಿಸುಗುಟ್ಟುತ್ತಿರುತ್ತದೆ. ಆದರೆ ಈ ಲಕ್ಷಣಗಳು ಅಷ್ಟು ತೀವ್ರವಾಗಿಲ್ಲದ ಕಾರಣ ಜನರು ಇವುಗಳನ್ನು ನಿರ್ಲಕ್ಷಿಸುತ್ತಾರೆ. ಬಹುತೇಕ ಮಹಿಳೆಯರಲ್ಲಿ ಈ ಕಾಯಿಲೆ ಪತ್ತೆಯಾಗುವ ಹೊತ್ತಿಗೆ, ಅದು ದೇಹದಾದ್ಯಂತ ವ್ಯಾಪಿಸಿ ಗಂಭೀರ ಹಂತ ತಲುಪಿರುತ್ತದೆ.
ಪ್ರತೀ ವರ್ಷ ಮೇ 8ರಂದು ವಿಶ್ವ ಅಂಡಾಶಯದ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. 2013ರಲ್ಲಿ ಪ್ರಾರಂಭವಾದ ಈ ದಿನಾಚರಣೆಯು ಇಂದು ಜಾಗತಿಕ ಚಳುವಳಿಯಾಗಿ ಬೆಳೆದಿದೆ. ಯಾವ ಮಹಿಳೆಯನ್ನೂ ಹಿಂದುಳಿಯಲು ಬಿಡಬೇಡಿ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ಅತ್ಯಂತ ಮಹತ್ವದ ಘೋಷವಾಕ್ಯವಾಗಿದೆ. ಏಕೆಂದರೆ, ತಡವಾಗಿ ಪತ್ತೆಯಾಗುವ ಕಾಯಿಲೆ, ಸಂಶೋಧನೆಗೆ ಸಿಗುತ್ತಿರುವ ಕಡಿಮೆ ಅನುದಾನ ಮತ್ತು ಸಾಕಷ್ಟು ಸಮಯದಿಂದ ಈ ಕಾಯಿಲೆಗೆ ಸಿಗಬೇಕಾದಷ್ಟು ಗಮನ ನೀಡದ ಆರೋಗ್ಯ ವ್ಯವಸ್ಥೆಗಳಿಂದಾಗಿ ಇಂದಿಗೂ ಅನೇಕ ಮಹಿಳೆಯರು ಈ ಹೋರಾಟದಲ್ಲಿ ಹಿಂದೆ ಉಳಿಯುತ್ತಿದ್ದಾರೆ ಎಂಬುದು ಕಹಿ ಸತ್ಯ.
ನಾವು ಗಮನಹರಿಸಲೇಬೇಕಾದ ಅಂಕಿ-ಅಂಶಗಳು
ಪ್ರಪಂಚದಾದ್ಯಂತ ಪ್ರತೀ ವರ್ಷ ಸರಿಸುಮಾರು 2,50,000 ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ಇವರಲ್ಲಿ ಅಂದಾಜು 1,40,000 ಮಹಿಳೆಯರು ಈ ಕ್ಯಾನ್ಸರ್ ತೀವ್ರಗೊಂಡು ಸಾವನ್ನಪ್ಪುತ್ತಿದ್ದಾರೆ. ಕೆಲವು ಅಂಕಿಅಂಶಗಳ ಪ್ರಕಾರ, ಇದು ಸ್ತ್ರೀರೋಗ ಸಂಬಂಧಿತ ಕ್ಯಾನ್ಸರ್ ಗಳಲ್ಲಿಯೇ ಅತಿ ಭೀಕರವಾದುದಾಗಿದೆ. ಆದರೂ, ಸ್ತನ ಕ್ಯಾನ್ಸರ್‌ಗೆ ನೀಡಲಾಗುವ ಸಾರ್ವಜನಿಕ ಗಮನದಲ್ಲಿ ಒಂದು ಸಣ್ಣ ಭಾಗ ಮಾತ್ರ ಇದಕ್ಕೆ ಸಿಗುತ್ತಿದೆ.
ಮಾಧುರಿ ದೀಕ್ಷಿತ್ ಅವರೊಂದಿಗೆ ಎಂಎಸ್‌ಡಿ ಇಂಡಿಯಾದಿಂದ ದೇಶವ್ಯಾಪಿ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭ
ಈ ಎರಡರ ನಡುವಿನ ಹೋಲಿಕೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಸ್ತನ ಕ್ಯಾನ್ಸರ್ ಪತ್ತೆಯಾದ ರೋಗಿಗಳಲ್ಲಿ ಸರಿಸುಮಾರು ಶೇ. 89 ರಷ್ಟು ಜನರು ಐದು ವರ್ಷಗಳ ನಂತರವೂ ಬದುಕುಳಿಯುತ್ತಾರೆ. ಆದರೆ ಅಂಡಾಶಯದ ಕ್ಯಾನ್ಸರ್ ವಿಷಯಕ್ಕೆ ಬಂದರೆ ಈ ಪ್ರಮಾಣವು ಕೇವಲ ಶೇ. 45ರಷ್ಟು ಮಾತ್ರ. ಅಂದರೆ ಅರ್ಧಕ್ಕಿಂತಲೂ ಕಡಿಮೆ! ಈ ದೊಡ್ಡ ವ್ಯತ್ಯಾಸಕ್ಕೆ ಮುಖ್ಯ ಕಾರಣ ಅಂಡಾಶಯದ ಕ್ಯಾನ್ಸರ್‌ಗೆ ಚಿಕಿತ್ಸೆಯೇ ಇಲ್ಲ ಎಂದಲ್ಲ, ಬದಲಾಗಿ ಈ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಪತ್ತೆಯಾಗುವುದೇ ಇಲ್ಲ ಎಂಬುದು.
ಕ್ಯಾನ್ಸರ್ ಅಂಡಾಶಯವನ್ನು ಮೀರಿ ಹರಡುವ ಮೊದಲು, ಅಂದರೆ ಮೊದಲನೇ ಹಂತದಲ್ಲಿ ಪತ್ತೆಯಾದಾಗ ಬದುಕುಳಿಯುವ ಸಾಧ್ಯತೆಗಳು ಶೇ. 90 ಕ್ಕಿಂತ ಹೆಚ್ಚಿರುತ್ತವೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಆದರೆ ಸಮಸ್ಯೆ ಏನೆಂದರೆ, ಕೇವಲ ಶೇ. 20 ರಷ್ಟು ಪ್ರಕರಣಗಳು ಮಾತ್ರ ಈ ಹಂತದಲ್ಲಿ ಪತ್ತೆಯಾಗುತ್ತಿವೆ. ಉಳಿದವು ಮೂರು ಅಥವಾ ನಾಲ್ಕನೇ ಹಂತದಲ್ಲಿ ಪತ್ತೆಯಾಗುತ್ತಿವೆ, ಅಂದರೆ ಆ ಹೊತ್ತಿಗೆ ಕ್ಯಾನ್ಸರ್ ಹೊಟ್ಟೆ, ದುಗ್ಧರಸ ಗ್ರಂಥಿಗಳು ಅಥವಾ ಅದನ್ನೂ ಮೀರಿ ಹರಡಿರುತ್ತದೆ.
ಈ ಕ್ಯಾನ್ಸರ್ ಪತ್ತೆ ಹಚ್ಚಲಾಗದಿರುವುದು ಯಾಕೆ?
ಅಂಡಾಶಯದ ಕ್ಯಾನ್ಸರ್‌ನ ಲಕ್ಷಣಗಳನ್ನು ಹೇಳಿ ಎಂದು ಹೆಚ್ಚಿನ ಜನರಿಗೆ ಹೇಳಿದರೆ, ಬಹುಶಃ ಅವರಿಂದ ಯಾವುದೇ ಉತ್ತರ ಬರುವುದಿಲ್ಲ. ಇದೇ ಅಸಲಿ ಸಮಸ್ಯೆಯ ಒಂದು ಭಾಗ. ಸ್ತನ ಕ್ಯಾನ್ಸರ್‌ನಲ್ಲಿ ಕಂಡುಬರುವ ಗಡ್ಡೆಯಂತೆ ಅಥವಾ ಗರ್ಭಕಂಠ ಮತ್ತು ಗರ್ಭಾಶಯದ ಕ್ಯಾನ್ಸರ್‌ನಲ್ಲಿ ಕಂಡುಬರುವ ಅನಿಯಮಿತ ರಕ್ತಸ್ರಾವದಂತೆ, ಅಂಡಾಶಯದ ಕ್ಯಾನ್ಸರ್ ಯಾವುದೇ ಒಂದು ಸ್ಪಷ್ಟ ಅಥವಾ ಸುಲಭವಾಗಿ ಗುರುತಿಸಬಹುದಾದ ಲಕ್ಷಣವನ್ನು ತೋರಿಸುವುದಿಲ್ಲ. ಬದಲಾಗಿ, ಇದು ನಾವೆಲ್ಲರೂ ಸಾಧಾರಣವೆಂದು ನಿರ್ಲಕ್ಷಿಸುವಂತಹ ಲಕ್ಷಣಗಳನ್ನು ತೋರುತ್ತದೆ. ನಿರಂತರ ಹೊಟ್ಟೆ ಉಬ್ಬರ, ಊಟ ಮಾಡುವಾಗ ಬೇಗನೆ ಹೊಟ್ಟೆ ತುಂಬಿದಂತಾಗುವುದು, ಸೊಂಟ ಅಥವಾ ಕಿಬ್ಬೊಟ್ಟೆಯ ನೋವು, ಪದೇ ಪದೇ ಅಥವಾ ತುರ್ತಾಗಿ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು, ವಿವರಿಸಲಾಗದ ಸುಸ್ತು ಮತ್ತು ಮಲವಿಸರ್ಜನೆಯ ಅಭ್ಯಾಸಗಳಲ್ಲಿ ಬದಲಾವಣೆ ಅಂಡಾಶಯದ ಕ್ಯಾನ್ಸರ್‌ನ ಲಕ್ಷಣಗಳು.
ಈ ಪ್ರತಿಯೊಂದು ಲಕ್ಷಣಗಳನ್ನು ಪ್ರತ್ಯೇಕವಾಗಿ ನೋಡಿದಾಗ, ಅವುಗಳು ಇರಿಟೇಬಲ್ ಬೋವೆಲ್ ಸಿಂಡ್ರೋಮ್ (ಐಬಿಎಸ್), ಹೊಟ್ಟೆಯ ಸೋಂಕು, ಮಾನಸಿಕ ಒತ್ತಡ, ಆಹಾರ ಪದ್ಧತಿಯಲ್ಲಿನ ಬದಲಾವಣೆ ಅಥವಾ ವಯಸ್ಸಾಗುವಿಕೆಯಂತಹ ಇತರ ಸಾಮಾನ್ಯ ಕಾರಣಗಳಿರಬಹುದು ಎಂದು ಭಾವಿಸಲಾಗುತ್ತದೆ. ಇದೇ ಕಾರಣಕ್ಕೆ ಈ ಕಾಯಿಲೆ ಅತ್ಯಂತ ಅಪಾಯಕಾರಿ ಎನಿಸಿಕೊಂಡಿದೆ. ಮಹಿಳೆಯರು ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಕೆಲವೊಮ್ಮೆ ವೈದ್ಯರೂ ಸಹ ಇದನ್ನು ಸಾಧಾರಣ ಸಮಸ್ಯೆ ಎಂದು ಭಾವಿಸುವ ಸಾಧ್ಯತೆಯಿರುತ್ತದೆ.
ಹಾಗಂತ ಇದು ಯಾರನ್ನೂ ದೂಷಿಸುವ ವಿಚಾರವಲ್ಲ. ಕಾಯಿಲೆಯನ್ನು ಸರಿಯಾಗಿ ಗುರುತಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ವೈದ್ಯಕೀಯ ಕ್ಷೇತ್ರವು ಅಂಡಾಶಯದ ಕ್ಯಾನ್ಸರ್ ಕುರಿತು ಅರ್ಥಮಾಡಿಕೊಳ್ಳುವಲ್ಲಿ ನಿಜವಾದ ಪ್ರಗತಿಯನ್ನು ಸಾಧಿಸಿದೆಯಾದರೂ ಸ್ತನ ಕ್ಯಾನ್ಸರ್ ಗೆ ಇರುವ ಮ್ಯಾಮೊಗ್ರಾಮ್ ಅಥವಾ ಗರ್ಭಕಂಠದ ಕ್ಯಾನ್ಸರ್ ಪತ್ತೆಗೆ ಇರುವ ಪ್ಯಾಪ್ ಸ್ಮಿಯರ್ ಪರೀಕ್ಷೆಗಳಂತೆ ಅಂಡಾಶಯದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಯಾವುದೇ ವಿಶ್ವಾಸಾರ್ಹ ಸ್ಕ್ರೀನಿಂಗ್ ಪರೀಕ್ಷೆಗಳು ಸದ್ಯಕ್ಕೆ ಲಭ್ಯವಿಲ್ಲ. ಆದ್ದರಿಂದ, ವ್ಯಾಪಕವಾದ ಸಾರ್ವಜನಿಕ ಜಾಗೃತಿಯೇ ಈ ಕಾಯಿಲೆಯ ವಿರುದ್ಧದ ಮೊದಲ ಹಂತದ ರಕ್ಷಣಾ ಕವಚವಾಗಿದೆ.
ಯಾವ ಮಹಿಳೆಯನ್ನೂ ಹಿಂದುಳಿಯಲು ಬಿಡಬೇಡಿ: ಒಂದು ಜಾಗತಿಕ ಅವಲೋಕನ
2026ರ ಈ ಘೋಷವಾಕ್ಯವು ಕೇವಲ ಒಂದು ಘೋಷಣೆಯಲ್ಲ, ಬದಲಿಗೆ ಸದ್ಯದ ಸವಾಲಾಗಿದೆ. ಒಬ್ಬ ಮಹಿಳೆಯ ವಾಸಸ್ಥಳ, ದೇಶ ಅಥವಾ ಆರ್ಥಿಕ ಪರಿಸ್ಥಿತಿಯು ಆಕೆಯ ಬದುಕನ್ನು ನಿರ್ಧರಿಸಬಾರದು ಎಂಬುದೇ ಇದರ ಮೂಲ ಆಶಯವಾಗಿದೆ.
ಹೆಚ್ಚಿನ ಆದಾಯ ಹೊಂದಿರುವ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿಯ ಸೌಲಭ್ಯಗಳು, ಪರಿಪೂರ್ಣವಲ್ಲದಿದ್ದರೂ ವ್ಯಾಪಕವಾಗಿ ಲಭ್ಯವಿವೆ. ಹೊಸ ರೀತಿಯ ಚಿಕಿತ್ಸೆಗಳು ಮುಂದುವರಿದ ಹಂತದ ಕಾಯಿಲೆ ಇರುವ ಮಹಿಳೆಯರ ಬದುಕಿನ ಅವಧಿಯನ್ನು ಹೆಚ್ಚಿಸಲು ಪ್ರಾರಂಭಿಸಿವೆ. ಭವಿಷ್ಯದಲ್ಲಿ ಕಾಯಿಲೆಯನ್ನು ಮೊದಲೇ ಪತ್ತೆಹಚ್ಚಲು ನೆರವಾಗುವ ಬಯೋಮಾರ್ಕರ್ ಗಳ ಸಂಶೋಧನೆಯೂ ಪ್ರಗತಿಯಲ್ಲಿದೆ.
ಆದರೆ ಕಡಿಮೆ ಆದಾಯವಿರುವ ದೇಶಗಳಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಇಲ್ಲಿ ಮಹಿಳೆಯರಲ್ಲಿ ಕಾಯಿಲೆ ತಡವಾಗಿ ಪತ್ತೆಯಾಗುತ್ತಿದೆ. ಚಿಕಿತ್ಸೆ ಅಷ್ಟು ಪರಿಣಾಮಕಾರಿಯಾಗಿಲ್ಲ ಮತ್ತು ಅವರಿಗೆ ಸಿಗುವ ಬೆಂಬಲವೂ ಉತ್ತಮವಾಗಿರುವುದಿಲ್ಲ. ಅಂಡಾಶಯದ ಕ್ಯಾನ್ಸರ್ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಕಂಡುಬರುವ ಈ ಬದುಕುಳಿಯುವಿಕೆಯ ಅಂತರವು ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಅದು ಸಾಮಾಜಿಕ ನ್ಯಾಯದ ಸಮಸ್ಯೆಯೂ ಹೌದು.
ಯಾವ ಮಹಿಳೆಯನ್ನೂ ಹಿಂದುಳಿಯಲು ಬಿಡಬೇಡಿ ಎಂಬ ಘೋಷವಾಕ್ಯವು ಈ ಕಟು ಸತ್ಯವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ನಮಗೆ ಕರೆ ನೀಡುತ್ತದೆ. ಕೇವಲ ಸೌಲಭ್ಯವಂತರಿಗೆ ಮಾತ್ರ ತಲುಪುವ ಪ್ರಗತಿಯು ನಿಜವಾದ ಪ್ರಗತಿಯಲ್ಲ ಎಂಬುದನ್ನು ಸೂಚಿಸುತ್ತದೆ.
ಬೆಂಗಳೂರಿನ ಆಹಾರದ ಬದಲಾವಣೆಯು ಪ್ರೊಸ್ಟೇಟ್ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣ
ಮಹಿಳೆಯರು ಈಗಿನಿಂದಲೇ ಏನು ಮಾಡಬಹುದು?
ವಿಶ್ವಾಸಾರ್ಹವಾದ ತಪಾಸಣಾ ಪರೀಕ್ಷೆಗಳು ಇಲ್ಲದೇ ಇರುವ ಸಂದರ್ಭದಲ್ಲಿ ವೈಯಕ್ತಿಕ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಕೇವಲ ಮೇ 8 ರಂದು ಮಾತ್ರವಲ್ಲದೆ, ವರ್ಷಪೂರ್ತಿ ಪ್ರತಿಯೊಬ್ಬ ಮಹಿಳೆಯೂ ಪಾಲಿಸಬಹುದಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:
ನಿಮ್ಮ ದೇಹದ ಬಗ್ಗೆ ತಿಳಿಯಿರಿ: ನಿಮ್ಮ ದೇಹವನ್ನು ಅರಿಯಿರಿ ಎಂಬ ಮಾತು ಕೇಳಲು ಸರಳವಾಗಿ ಎನಿಸಬಹುದು, ಆದರೆ ಇಲ್ಲಿ ಇದು ಬಹಳ ಮುಖ್ಯ. ನಿಮ್ಮಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದರೆ ಅದರಲ್ಲೂ ವಿಶೇಷವಾಗಿ ಅವು ಹೊಸದಾಗಿದ್ದರೆ, ನಿರಂತರವಾಗಿದ್ದರೆ ಮತ್ತು ತಿಂಗಳಿಗೆ 12ಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತಿದ್ದರೆ ಅವುಗಳನ್ನು ನಿರ್ಲಕ್ಷಿಸಬೇಡಿ. ಅವುಗಳನ್ನು ಗಮನಿಸಿ ಮತ್ತು ಗಂಭೀರವಾಗಿ ಪರಿಗಣಿಸಿ.
ಕುಟುಂಬದ ಹಿನ್ನೆಲೆಯನ್ನು ತಿಳಿದುಕೊಳ್ಳಿ: ಅಂಡಾಶಯದ ಕ್ಯಾನ್ಸರ್‌ನಲ್ಲಿ ಆನುವಂಶಿಕ ಅಂಶಗಳ ಪಾತ್ರ ದೊಡ್ಡದಿದೆ. BRCA1 ಮತ್ತು BRCA2 ಜೀನ್‌ಗಳಲ್ಲಿನ ರೂಪಾಂತರಗಳು ಒಬ್ಬ ಮಹಿಳೆಯ ಜೀವಿತಾವಧಿಯಲ್ಲಿ ಕ್ಯಾನ್ಸರ್ ಬರುವ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅಂಡಾಶಯ ಅಥವಾ ಸ್ತನ ಕ್ಯಾನ್ಸರ್ ಇದ್ದ ಇತಿಹಾಸವಿದ್ದರೆ, ನಿಮಗೆ ಆನುವಂಶಿಕ ಪರೀಕ್ಷೆಯ ಅಗತ್ಯವಿದೆಯೇ ಎಂಬ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ. ನೆನಪಿಡಿ, ಸರಿಯಾದ ಮಾಹಿತಿ ಹೊಂದುವುದು ಭಯಪಡುವುದಕ್ಕೆ ಅಲ್ಲ, ಅದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.
ನಿಮಗಾಗಿ ಧ್ವನಿ ಎತ್ತಿ: ಇದನ್ನು ಹೇಳುವುದು ಕಷ್ಟವಾದರೂ ಇದು ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಇತಿಹಾಸದುದ್ದಕ್ಕೂ ಮಹಿಳೆಯರ ಅನಾರೋಗ್ಯದ ಲಕ್ಷಣಗಳನ್ನು ಕೇವಲ ಆತಂಕ, ಹಾರ್ಮೋನುಗಳ ಏರುಪೇರು ಅಥವಾ ಮಾನಸಿಕ ಒತ್ತಡ ಎಂದು ನಿರ್ಲಕ್ಷಿಸುತ್ತಾ ಬರಲಾಗಿದೆ. ನಿಮಗೆ ಏನೋ ಸರಿಯಿಲ್ಲ ಎನಿಸಿದರೆ, ಮತ್ತೆ ವೈದ್ಯರ ಬಳಿ ಹೋಗಿ, ಪ್ರಶ್ನಿಸಿ. ತಜ್ಞ ವೈದ್ಯರ ಸಲಹೆಗಾಗಿ ಪಟ್ಟು ಹಿಡಿಯಿರಿ. ನಿಮ್ಮ ಆರೋಗ್ಯದ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಕೇಳುವ ಪೂರ್ಣ ಹಕ್ಕು ನಿಮಗಿದೆ.
ಈ ಕುರಿತು ಮಾತನಾಡಿ: ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಬಹುದಾದ ಅತ್ಯಂತ ಶಕ್ತಿಯುತವಾದ ಕೆಲಸವೆಂದರೆ ಸಂವಾದ ನಡೆಸುವುದು. ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ, ಕಚೇರಿಗಳಲ್ಲಿ ಮತ್ತು ಸಮುದಾಯದ ಸ್ಥಳಗಳಲ್ಲಿ ಈ ಬಗ್ಗೆ ಚರ್ಚಿಸುವುದು. ಅಂಡಾಶಯದ ಕ್ಯಾನ್ಸರ್ ಬಗ್ಗೆ ಎಷ್ಟು ಹೆಚ್ಚು ಜನರು ಮಾತನಾಡುತ್ತಾರೋ, ಅಷ್ಟು ಹೆಚ್ಚು ಮಹಿಳೆಯರು ಅದರ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಎಷ್ಟು ಬೇಗ ಲಕ್ಷಣಗಳು ಪತ್ತೆಯಾಗುತ್ತವೆಯೋ, ಅಷ್ಟು ಹೆಚ್ಚು ಜೀವಗಳನ್ನು ಉಳಿಸಬಹುದು.
ಸಾಮೂಹಿಕ ಹೋರಾಟದ ಅದ್ಭುತ ಶಕ್ತಿ
2013ರಿಂದ, ವಿಶ್ವ ಅಂಡಾಶಯದ ಕ್ಯಾನ್ಸರ್ ದಿನವು ಒಂದು ಬೃಹತ್ ಚಳವಳಿಯಾಗಿ ಬೆಳೆದಿದೆ. ಇಂದು ಇದು ವಿಶ್ವದ ಶೇ. 80ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತಿದ್ದು, ಜಾಗತಿಕವಾಗಿ 200ಕ್ಕೂ ಹೆಚ್ಚು ಸಂಸ್ಥೆಗಳ ಬೆಂಬಲವನ್ನು ಹೊಂದಿದೆ. ಇದು ಅಸಾಧಾರಣವಾದ ಸಾಧನೆ. ನಿರಂತರವಾದ ಸಾಮೂಹಿಕ ಗಮನವು ಹೇಗೆ ಜಾಗೃತಿಯನ್ನು ಮೂಡಿಸಬಲ್ಲದು, ನೀತಿಗಳ ಮೇಲೆ ಪ್ರಭಾವ ಬೀರಬಲ್ಲದು ಮತ್ತು ಅಂತಿಮವಾಗಿ ಉತ್ತಮ ಫಲಿತಾಂಶ ಹೊಂದಲು ನೆರವಾಗಬಲ್ಲದು ಎಂಬುದಕ್ಕೆ ಇದೇ ಸಾಕ್ಷಿ.
ಜಾಗೃತಿ ಮೂಡಿಸುವ ಯೋಜನೆಗಳು ಯಶಸ್ವಿಯಾಗುವುದು ಜಾಗೃತಿ ಎಂಬುದು ಕೇವಲ ಆ ದಿನಕ್ಕೆ ಸೀಮಿತವಾಗದಿದ್ದರೆ ಮಾತ್ರ. ನಾವು ಧರಿಸುವ ಟೀಲ್ ಬಣ್ಣದ ರಿಬ್ಬನ್‌ಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಕೇವಲ ಸಾಂಕೇತಿಕವಲ್ಲ; ಬದಲಾಗಿ ಪ್ರತಿಯೊಂದು ಸಣ್ಣ ಪ್ರಯತ್ನವೂ ಆ ಮಾಹಿತಿಯ ಅಗತ್ಯವಿರುವ ಮಹಿಳೆಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಎರಡು ತಿಂಗಳಿಂದ ಹೊಟ್ಟೆ ಉಬ್ಬರದಿಂದ ಬಳಲುತ್ತಿರುವ ಮಹಿಳೆ ಅಥವಾ ತನ್ನ ತಾಯಿಗೆ ಸ್ತನ ಕ್ಯಾನ್ಸರ್ ಇದ್ದರೂ ತನಗೂ ಅಪಾಯವಿರಬಹುದೇ ಎಂದು ಎಂದಿಗೂ ಯೋಚಿಸದ ಮಹಿಳೆಗೆ ಈ ಮಾಹಿತಿ ತಲುಪಬೇಕಿದೆ. ಅಂದರೆ, ಈ ಬಗ್ಗೆ ಅರಿವೇ ಇಲ್ಲದವರಿಗೆ ತಿಳುವಳಿಕೆ ನೀಡಬೇಕಿದೆ.
ಆದ್ದರಿಂದ, ಈ ದಿನದಂದು ಸಮಾನತೆ ಎಂದರೆ ವಿಭಿನ್ನವಾದ ವಿಷಯಗಳನ್ನು ಒಂದೇ ರೀತಿ ಕಾಣುವುದಲ್ಲ, ಬದಲಾಗಿ ವಿಭಿನ್ನ ಅಗತ್ಯಗಳನ್ನು ಅರ್ಥಮಾಡಿಕೊಂಡು, ಯಾರನ್ನೂ ಹಿಂದೆ ಉಳಿಯಲು ಬಿಡದೆ ಎಲ್ಲರನ್ನೂ ಒಳಗೊಳ್ಳುವುದೇ ನಿಜವಾದ ಸಮಾನತೆ ಎಂಬ ಜಾಗೃತಿಯನ್ನು ಸಾರೋಣ.