ದೆಹಲಿ, ಮೇ 7: ವಿವಿಧ ಆರೋಗ್ಯ ಯೋಜನೆ, ಕಾರ್ಯಕ್ರಮಗಳನ್ನು ಒಂದೇ ವ್ಯವಸ್ಥೆಯಡಿ ತರುವ ಉದ್ದೇಶದಿಂದ ಹೊಸ ಡಿಜಿಟಲ್ ಪೋರ್ಟಲ್ ತೆರೆಯಲಾಗಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (Ayushman Bharat Digital Mission) ಭಾಗವಾಗಿರುವ ಈ ಪೋರ್ಟಲ್ ಮಾಹಿತಿ ನಕಲು ಮಾಡುವುದನ್ನು ತಡೆಯುವ, ದತ್ತಾಂಶಗಳನ್ನು ಸುರಕ್ಷಿತವಾಗಿ ವಿನಿಮಯಗೊಳಿಸುವ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ದೇಶಕ್ಕೆ ಒಂದೇ ಆರೋಗ್ಯ ಪೋರ್ಟಲ್ 'ಸ್ವಸ್ಥ್ ಭಾರತ್' (Swasth Bharat) ಅನ್ನು ಕೇಂದ್ರ ಸರ್ಕಾರ ಅನಾವರಣಗೊಳಿಸಿದ್ದು, ಇದು ಸುರಕ್ಷಿತ ಮತ್ತು ರೋಗಿ ಕೇಂದ್ರಿತ ಡಿಜಿಟಲ್ ಆರೋಗ್ಯ ವ್ಯವಸ್ಥೆ ಎನಿಸಿಕೊಂಡಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಐಡಿಗಳನ್ನು ಒಂದೆಡೆ ಸಂಗ್ರಹಿಸಲು ನಿರ್ಮಿಸಿರುವ ಸ್ವಸ್ಥ್ ಭಾರತ್ ಪೋರ್ಟಲ್ ಗೌಪ್ಯತೆ ಮತ್ತು ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ಆರೋಗ್ಯ ದತ್ತಾಂಶ ವಿನಿಮಯವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ ಎನ್ನುತ್ತಾರೆ ತಜ್ಞರು.
ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದ ಗ್ರೆಗರ್ ಮೆಂಡಲ್
ಹೇಗೆ ಕಾರ್ಯನಿರ್ವಹಿಸುತ್ತದೆ?
ಬಹು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವನ್ನು ಒಂದೆಡೆ ಸಂಯೋಜಿಸಲು ವಿನ್ಯಾಸಗೊಳಿಸಲಾಗಿರುವ ಸ್ವಸ್ಥ ಭಾರತ್ ಪೋರ್ಟಲ್ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್‌ಗಳ ವಿಭಿನ್ನ ಆರೋಗ್ಯ ಡೇಟಾಬೇಸ್‌ಗಳು ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
ಸ್ವಸ್ಥ ಭಾರತ್ ಪೋರ್ಟಲ್ ಬಹು ಆರೋಗ್ಯ ಕಾರ್ಯಕ್ರಮಗಳಿಗೆ ಒಂದೇ ಇಂಟರ್ಫೇಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಕಲಿ ಮಾಹಿತಿಗಳನ್ನು ತೆಗೆದು ಹಾಕಿ ವರದಿ ಮಾಡುವ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುತ್ತದೆ. ವೇಗವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ಒಂದೇ ಪೋರ್ಟಲ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಮಾಹಿತಿಗಳನ್ನು ದಾಖಲಿಸಬಹುದಾಗಿದೆ. ಈ ಪೋರ್ಟಲ್ ಆರೋಗ್ಯ ಕಾರ್ಯಕರ್ತರು ಮತ್ತು ನಿರ್ವಾಹಕರ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮಾಹಿತಿಗಳು ಪುನರಾವರ್ತನೆಯಾಗುವುದನ್ನು ತಡೆಯುತ್ತದೆ. ದೋಷಗಳನ್ನು ಕಡಿಮೆ ಮಾಡುತ್ತದೆ. ಮೇಲ್ವಿಚಾರಣೆ ವಿಳಂಬವನ್ನು ಕಡಿಮೆ ಮಾಡುತ್ತದೆ. ಒಟ್ಟಿನಲ್ಲಿ ಸ್ವಸ್ಥ ಭಾರತ್ ಪೋರ್ಟಲ್‌ನಲ್ಲಿ ಒಮ್ಮೆ ನಮೂದಿಸಿದ ಮಾಹಿತಿಯನ್ನು ಮರುಬಳಕೆ ಮಾಡಬಹುದಾಗಿದೆ.
ಏನು ಪ್ರಯೋಜನ?
ಇದು ಮೂಲಸೌಕರ್ಯ ಹೊರೆಯನ್ನು ಶೇಕಡ 20-30ರಷ್ಟು ಕಡಿಮೆ ಮಾಡುತ್ತದೆ. ಅಂಕಿ ಅಂಶ ದಾಖಲೆ, ನಕಲುಗಳಲ್ಲಿ ಶೇಕಡ 20- 40ರಷ್ಟು ಕಡಿಮೆ ಮಾಡುತ್ತದೆ. ರೋಗಿಗಳ ಆರೈಕೆ ಮತ್ತು ಸುಧಾರಿತ ಕಾರ್ಯಕ್ರಮದ ಅನುಷ್ಠಾನಕ್ಕೆ ಹೆಚ್ಚಿನ ಸಮಯ ವ್ಯಯವಾಗುವುದನ್ನು ತಡೆಯುತ್ತದೆ.
ರೋಗಿಯ ಆರೋಗ್ಯ ದಾಖಲೆಗಳಿಗೆ ತಡೆರಹಿತ ಪ್ರವೇಶವನ್ನು ನೀಡುವ ಇದು ಆರೈಕೆಯ ನಿರಂತರತೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ವೈದ್ಯಕೀಯ ಡೇಟಾದ ಸುರಕ್ಷಿತ ಹಂಚಿಕೆಯನ್ನು ಖಚಿತ ಪಡಿಸುತ್ತದೆ.
ಸದ್ದಿಲ್ಲದೆ ಆವರಿಸುವ ಕ್ಯಾನ್ಸರ್: ಅಂಡಾಶಯದ ಕ್ಯಾನ್ಸರ್ ಕುರಿತು ಹೆಚ್ಚಿನ ಜಾಗೃತಿ ಅಗತ್ಯ
ರೋಗ ಪ್ರವೃತ್ತಿಗಳ ಟ್ರ್ಯಾಕಿಂಗ್, ಸಂಪನ್ಮೂಲಗಳ ಸುಧಾರಿತ ಹಂಚಿಕೆ, ತುರ್ತು ಸಂದರ್ಭಗಳಲ್ಲಿ ವೇಗವಾದ ಪ್ರತಿಕ್ರಿಯೆ ನೀಡಲು ಇದು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಸ್ವಸ್ಥ ಭಾರತ್ ಪೋರ್ಟಲ್ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಒಂದು ಮಹತ್ವದ ಹೆಜ್ಜೆ ಎನಿಸಿಕೊಂಡಿದೆ.