ಇತ್ತೀಚೆಗೆ ದೀರ್ಘಾಯುಷ್ಯ ಎನ್ನುವ ಪದವನ್ನು ನಾವು ಪದೆ ಪದೇ ಕೇಳುತ್ತಿದ್ದೇವೆ. ಎಲ್ಲರೂ ತಾವು ದೀರ್ಘಾಯುಷ್ಯವನ್ನು ಪಡೆದುಕೊಳ್ಳಲು ಒಂದಲ್ಲ ಒಂದು ದಾರಿಯನ್ನು ಹುಡುಕುವವರೆ ಆಗಿದ್ದಾರೆ. ವಯಸ್ಥಾಪನ ಮತ್ತು ಆಯುಸ್ಥಾಪನ ವೆನ್ನುವ ಪದಗಳು ಶಾಸ್ತ್ರಗಳಲ್ಲಿ ಉಲ್ಲೇಖಿಸ ಲ್ಪಟ್ಟಿದ್ದು ದೀರ್ಘಾಯುಷ್ಯದ ವ್ಯಾಖ್ಯಾನಕ್ಕೆ ಬುನಾದಿಯಾಗಿದೆ.
ದೀರ್ಘಾಯುಷ್ಯ ಎಂದರೆ ಹೆಚ್ಚು ವರ್ಷ ಬದುಕುವುದು ಎನ್ನುವುದಕ್ಕಿಂತ ಚೈತನ್ಯದಿಂದ, ಆರೋಗ್ಯಕರವಾಗಿ ಬದುಕುವುದು ಎಂದೇ ಹೇಳಬಹುದು. ಆದರೆ ಆರೋಗ್ಯಯುತವಾಗಿ ಜೀವನ ನೆಡೆಸಲು ಉತ್ತಮ ಆಹಾರ, ಉತ್ತಮ ನಿದ್ರೆ, ಉತ್ತಮ ಪರಿಸರ, ವ್ಯಾಯಾಮ, ಯೋಗ, ದೈಹಿಕ ಚಟುವಟಿಕೆ ಇವೆಲ್ಲವೂ ಹೇಗೆ ಮುಖ್ಯವಾಗು ತ್ತದೆಯೋ, ಮನಸ್ಸು ಮತ್ತು ದೇಹದ ನಡುವಿನ ನಿಕಟ ಸಂಬಂಧವು ಅಷ್ಟೇ ಮುಖ್ಯವಾಗುತ್ತದೆ.
"ಪ್ರಸನ್ನಾತ್ಮೇಂದ್ರಿಯಮನಃ ಸ್ವಸ್ಥ ಇತ್ಯಭಿಧೀಯತೇ" ಎನ್ನುವ ವಾಕ್ಯದಂತೆ ಕೇವಲ ದೇಹವಲ್ಲ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿದ್ದಾಗ ಮಾತ್ರ ನಾವು ಆರೋಗ್ಯಯುತವಾಗಿ ಇರಲು ಸಾಧ್ಯ. ಮನಸ್ಸು ಮತ್ತು ದೇಹದ ನಡುವಿನ ಗಾಢ ಸಂಬಂಧ ದೀರ್ಘಾಯುಷ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ಮನಸ್ಸು ಅಶಾಂತವಾದರೆ ದೇಹವೂ ಅಸ್ವಸ್ಥವಾಗುತ್ತದೆ.
ಮನಸ್ಸು ಸಮತೋಲನದಲ್ಲಿದ್ದರೆ ದೇಹವೂ ಸಮತೋಲನದಲ್ಲಿರುತ್ತದೆ. ನಾವು ಒತ್ತಡಕ್ಕೆ ಒಳಗಾದಷ್ಟು ನಮ್ಮ ಆರೋಗ್ಯವೂ ಹದಗೆಡುತ್ತಾ ಹೋಗುತ್ತದೆ. ಮನಸ್ಸಿನಲ್ಲಿ ಉಂಟಾಗುವ ಪ್ರತಿಯೊಂದು ಭಾವನೆಯೂ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯ ಯುತವಾಗಿ ದೀರ್ಘಾಯುಷ್ಯವನ್ನು ಹೊಂದಲು ಮನಸ್ಸು ಮತ್ತು ದೇಹದ ಸಂಪರ್ಕ ಅತಿ ಮುಖ್ಯ.
ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ
ಒತ್ತಡದ ನಿಯಂತ್ರಣ: ಮನಸ್ಸು ಮತ್ತು ದೇಹ ಒಂದಕ್ಕೊAದು ನಿಕಟವಾದ ಸಂಬಂಧ ಹೊಂದಿರುವುದರಿಂದ ನಮ್ಮ ಮನಸ್ಸಿನ ಮೇಲೆ ಉಂಟಾಗುವ ಒತ್ತಡ ಮತ್ತು ಆತಂಕ ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದ ರಕ್ತದೊತ್ತಡ, ಹೃದಯ ಸಂಬAಧಿ ರೋಗ, ಮಧುಮೇಹ, ಉರಿಯೂತದಂತಹ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಅಲ್ಲದೇ, ದೇಹದ ಕೋಶಗಳು ಬೇಗ ಮುಪ್ಪಾಗುತ್ತವೆ, ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲ ಗೊಳ್ಳುತ್ತದೆ ಮತ್ತು ವೃದ್ದಾಪ್ಯ ವೇಗವಾಗಿ ಆವರಿಸಿಕೊಳ್ಳುತ್ತದೆ.
ಹಾಗಾಗಿ ನಾವು ಧ್ಯಾನ, ಪ್ರಾಣಾಯಾಮ, ಯೋಗ, ಕ್ರಮಬದ್ಧವಾದ ಉಸಿರಾಟ ಕ್ರಿಯೆ ಮತ್ತು ಉತ್ತಮ ಹವ್ಯಾಸಗಳನ್ನು ತನ್ಮೂಲಕ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆದಷ್ಟು ಸಕರಾತ್ಮಕ ಚಿಂತನೆಗಳಿಗೆ ಒತ್ತು ನೀಡಬೇಕು. ಈ ರೀತಿ ಮಾಡುವು ದರಿಂದ ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ತಗ್ಗಿಸಲು, ಒತ್ತಡವನ್ನು ಕಡಿಮೆ ಮಾಡಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮತ್ತು ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಣೆ ಪಡೆಯಲು ನೆರವಾಗುತ್ತದೆ.
ಹಾರ್ಮೋನಲ್ ಸಮತೋಲನ ಕಾಯ್ದುಕೊಳ್ಳುವಿಕೆ: ನಮ್ಮಲ್ಲಿ ಉಂಟಾಗುವ ಕೋಪ, ಭಯ, ಆತಂಕ, ಅಸೂಯೆ ಇವು ಹಾರ್ಮೋನಲ್ ಅಸಮತೋಲನಕ್ಕೆ ಕಾರಣವಾಗುತ್ತವೆ. ಹಾಗಾಗಿ ನಮ್ಮ ಮನಸ್ಸನ್ನು ಆದಷ್ಟು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಆಚಾರ ರಸಾಯನವೆನ್ನುವ ವಿಶಿಷ್ಠ ಅಭ್ಯಾಸ ಮನಸ್ಸನ್ನು ಶಾಂತವಾಗಿಟ್ಟು ಎಂಡೋರ್ಫಿನ್, ಸೆರೊಟೋನಿನ್ ನಮ್ಮ ದೇಹ ದಲ್ಲಿ ಹೆಚ್ಚಿನ ಮಟ್ಟದಲ್ಲಿ ಪುನರುತ್ಪಾದನೆ ಪ್ರಕ್ರಿಯೆಯನ್ನು ಉತ್ತಮಗೊಳಿಸವಲ್ಲಿ ಸಹಕಾರಿ ಯಾಗುತ್ತದೆ. ಇದು ನಾವು ದೀರ್ಘಾಯುಷ್ಯವನ್ನು ಹೊಂದುವಲ್ಲಿ ಸಹಾಯ ಮಾಡುತ್ತದೆ.
ಉತ್ತಮ ಜೀರ್ಣಕ್ರಿಯೆ: ನಾವು ಸೇವಿಸುವ ಆಹಾರ ಸಮರ್ಪಕವಾಗಿ ಜೀರ್ಣವಾಗುವಲ್ಲಿ ಮನಸ್ಸಿನ ಪಾತ್ರ ಮಹತ್ತರವಾಗಿದೆ. ತನ್ಮನಾ ಆಹಾರ ಸೇವಿಸಬೇಕೆನ್ನುವ ಹಿರಿಯರ ವಾಣಿ ಬಹಳ ಪ್ರಶಸ್ತ. ಮನಸ್ಸು ಚಿಂತಿತವಾಗಿದ್ದರೆ ನಾವು ಸೇವಿಸುವ ಆಹಾರದ ಪ್ರಮಾಣ, ವಿಧಾನದಲ್ಲಿ ಬದಲಾವಣೆ ಯಾಗುವುದರಿಂದ ನಮ್ಮ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ಇದರಿಂದ ವಿಷ ಪದಾರ್ಥಗಳು (ಆಮ) ದೇಹದಲ್ಲಿ ಶೇಖರಣೆಯಾಗುತ್ತದೆ. ಶಾಂತ ಮನಸ್ಸು ಜೀರ್ಣಕ್ರಿಯೆ ಯನ್ನು ಸುಧಾರಿಸಿ ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತದೆ. ದೇಹದ ಕೋಶಗಳು ಆರೋಗ್ಯಕರ ವಾಗಿರುವಂತೆ ನೋಡಿಕೊಳ್ಳುತ್ತದೆ.
ಟೆಲೋಮಿಯರ್ ರಕ್ಷಣೆ: ನಮ್ಮ ಡಿಎನ್‌ಎ ತುದಿಗಳಲ್ಲಿರುವ ಟೆಲೋಮಿಯರ್‌ಗಳು ಆಯಸ್ಸಿನ ಸೂಚಕಗಳಾಗಿವೆ. ಮಾನಸಿಕ ಶಾಂತಿ ಮತ್ತು ಯೋಗಾಭ್ಯಾಸವು ಈ ಟೆಲೋಮಿಯರ್‌ಗಳು ಕುಗ್ಗುದಂತೆ ರಕ್ಷಿಸುತ್ತದೆ. ಇದು ಜೀವಕೋಶದ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಜೈವಿಕವಾಗಿ ವಯಸ್ಸಾಗುವುಕೆಯಿಂದ ನಮ್ಮನ್ನು ರಕ್ಷಿಸುತ್ತದೆ.
ಓಜಸ್ಸು ಮತ್ತು ರೋಗನಿರೋಧಕ ಶಕ್ತಿ: ಮನಸ್ಸು ಸಂತೋಷವಾಗಿದ್ದಾಗ ಮಾತ್ರ ದೇಹದಲ್ಲಿ ಓಜಸ್ಸು ವೃದ್ದಿಯಾಗುತ್ತದೆ. ಓಜಸ್ಸು ನಮ್ಮ ದೇಹದ ವ್ಯವಸ್ಥಿತವಾದ ಸಂರಕ್ಷಣೆ, ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸನ್ನು ಸಮತೋಲನದಲ್ಲಿರಿಸುವ ಎಲ್ಲ ಪ್ರವೃತ್ತಿಗಳನ್ನು ನಾವು ಪಾಲಿಸುವುದರಿಂದ ಓಜಸ್ಸಿನ ಪರಿಪಾಲನೆ ಯಾಗಿ ನಮ್ಮ ನರಮಂಡಲಗಳ ಕಾರ್ಯಗಳನ್ನು ಸಮತೋಲನದಲ್ಲಿರಿಸಿ, ಹಾರ್ಮೋನ್‌ಗಳ ಸಮನ್ವಯವನ್ನು ಕಾಪಾಡುತ್ತವೆ. ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಸೋಂಕುಗಳು ಮತ್ತು ದೀರ್ಘಕಾಲಿಕ ರೋಗಗಳಿಂದ ಮುಕ್ತಿಯನ್ನು ಪಡೆಯಬಹು ದಾಗಿದೆ. ಶಾಂತ ಮನಸ್ಸು ದೇಹದ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಹಾಗಾಗಿ ಮನಸ್ಸು ಮತ್ತು ದೇಹದ ಸಂಪರ್ಕವು ದೀರ್ಘಾಯುಷ್ಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರ ಸಮನ್ವಯ ದೇಹದ ಪ್ರತಿಯೊಂದು ವ್ಯವಸ್ಥೆಯನ್ನು ಸಮತೋಲನದಲ್ಲಿರಿಸಿ, ವೃದ್ದಾಪ್ಯವನ್ನು ನಿಧಾನಗೊಳಿಸಿ, ಆರೋಗ್ಯಕರ ದೀರ್ಘಾಯುಷ್ಯವನ್ನು ಸಾಧ್ಯಮಾಡುತ್ತದೆ. ದಿನನಿತ್ಯ ವ್ಯಾಯಾಮ, ಸಕಾರಾತ್ಮಕ ಚಿಂತನೆ, ಧ್ಯಾನ, ಯೋಗ ಮತ್ತು ಸಾತ್ವಿಕ ಆಹಾರದ ಸೇವನೆಯನ್ನು ಜೀವನದಲ್ಲಿ ರೂಢಿಸಿಕೊಳ್ಳುವುದರಿಂದ ಆರೋಗ್ಯಕರ ದೀರ್ಘ ಜೀವನ ನಮ್ಮದಾಗುತ್ತದೆ.
ಡಾ. ಯೋಗೀಶ ಆಚಾರ್ಯ, ಸಹ ಪ್ರಾಧ್ಯಾಪಕರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗ ಕುತ್ಪಾಡಿ ಉಡುಪಿ