ಬೆಂಗಳೂರು: ಮನುಷ್ಯನ ಒಟ್ಟಾರೆ ಆರೋಗ್ಯದಲ್ಲಿ ಜೀರ್ಣಾಂಗವ್ಯೂಹದ ಪಾತ್ರ ಅತ್ಯಂತ ಪ್ರಮುಖವಾದದ್ದು. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಹ್ಯಾಪಿಯೆಸ್ಟ್ ಹೆಲ್ತ್' ಸಂಸ್ಥೆಯು ಬೆಂಗಳೂರಿನ ಜಯನಗರದಲ್ಲಿರುವ ಹ್ಯಾಪಿಯೆಸ್ಟ್ ಆಯುರ್ವೇದ ಕ್ಲಿನಿಕ್‌ನಲ್ಲಿ ‘ಆಯುರ್ವೇದ ಮತ್ತು ಗಟ್’ ಎಂಬ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಪ್ರಾಚೀನ ಆಯುರ್ವೇದ ತತ್ವಗಳು ಹಾಗೂ ಆಧುನಿಕ ವಿಜ್ಞಾನವನ್ನು ಜೊತೆಯಾಗಿ ಬಳಸಿಕೊಂಡು ರೋಗಗಳನ್ನು ತಡೆಯುವುದು ಮತ್ತು ಆರೋಗ್ಯಕರವಾಗಿ ವಯಸ್ಸಾಗುವ ಪ್ರಕ್ರಿಯೆಯ ಬಗ್ಗೆ ಈ ಕಾರ್ಯಕ್ರಮದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಆಯುರ್ವೇದ ತಜ್ಞರು, ಮೈಕ್ರೋಬಯೋಮ್ ಸಂಶೋಧಕರು, ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಪರಿಣಿತರು ಭಾಗವಹಿಸಿದ್ದರು.
ಈ ವಿಶೇಷ ಸಂವಾದದಲ್ಲಿ ಹ್ಯಾಪಿಯೆಸ್ಟ್ ಆಯುರ್ವೇದದ ವೈದ್ಯಕೀಯ ನಿರ್ದೇಶಕ ಡಾ. ಎಂ.ಎಸ್. ಮಹದೇವನ್, ಎಸ್‌ಕೆಎಎನ್ ರಿಸರ್ಚ್ ಟ್ರಸ್ಟ್‌ನ ನಿರ್ದೇಶಕ ಡಾ. ಯೋಗೇಶ್ ಶೌಚೆ ಹಾಗೂ ಟಿಡಿಯು ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಡಾ. ಸುಬ್ರಹ್ಮಣ್ಯ ಕುಮಾರ್ ಕೆ. ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವೆಲ್‌ನೆಸ್ ಪ್ರ್ಯಾಕ್ಟಿಸಸ್‌ನ ಚೀಫ್ ಸಕ್ಸಸ್ ಮ್ಯಾನೇಜರ್ ಶ್ಯಾರನ್ ಎಸ್. ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ: Health Tips: ನೇರಳೆ ಹಣ್ಣು ತಿಂದ ತಕ್ಷಣ ಹಾಲು ಕುಡಿಯುತ್ತೀರಾ? ಹೊಟ್ಟೆ ಸಮಸ್ಯೆಗೆ ಕಾರಣವಾಗಬಹುದು!
ಏನೇನು ಚರ್ಚೆ?
ಜೀರ್ಣಾಂಗದ ಆರೋಗ್ಯಕ್ಕೂ ಮನುಷ್ಯನ ರೋಗನಿರೋಧಕ ಶಕ್ತಿ, ಚಯಾಪಚಯ ಕ್ರಿಯೆ, ಮಾನಸಿಕ ಆರೋಗ್ಯ ಹಾಗೂ ದೀರ್ಘಕಾಲದ ಕಾಯಿಲೆಗಳಿಗೂ ಇರುವ ನೇರ ಸಂಬಂಧದ ಬಗ್ಗೆ ತಜ್ಞರು ವಿವರಿಸಿದರು.
ಆಯುರ್ವೇದದಲ್ಲಿ ಉಲ್ಲೇಖಿಸಿರುವ ಜೀರ್ಣಕ್ರಿಯೆಯ ವಿಚಾರಗಳೇ ಇಂದಿನ ಆಧುನಿಕ 'ಗಟ್ ಮೈಕ್ರೋಬಯೋಮ್' ವಿಜ್ಞಾನಕ್ಕೂ ಹೇಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು. ಜೊತೆಗೆ, ಉತ್ತಮ ಜೀರ್ಣಕ್ರಿಯೆಗಾಗಿ ದೈನಂದಿನ ಆಹಾರ ಮತ್ತು ಜೀವನ ಶೈಲಿ ಹೇಗಿರಬೇಕು ಎಂಬ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ನೀಡಿದರು.
ಇದೇ ವೇಳೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಹ್ಯಾಪಿಯೆಸ್ಟ್ ಆಯುರ್ವೇದ ಮತ್ತು ಫಿಸಿಯೋ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸುವ ಅವಕಾಶ ನೀಡಲಾಗಿತ್ತು. ಕುಳಿತು ಕೊಳ್ಳುವ ಭಂಗಿ, ದೈಹಿಕ ಚಲನೆ ಮತ್ತು ಜೀವನಶೈಲಿ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ತಜ್ಞರು ಮಾಹಿತಿ ನೀಡಿದರು.
"ಉತ್ತಮ ಆರೋಗ್ಯ ಉತ್ತಮ ಜೀರ್ಣಕ್ರಿಯೆಯಿಂದಲೇ ಶುರುವಾಗುತ್ತದೆ. ನಾರುಯುಕ್ತ (ಫೈಬರ್) ಆಹಾರ, ಹುದುಗಿಸಿದ (ಫರ್ಮೆಂಟೆಡ್) ಆಹಾರಗಳು ಹಾಗೂ ಸಾಂಬಾರ ಪದಾರ್ಥಗಳನ್ನು ಒಳಗೊಂಡ ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯ ಮಹತ್ವವನ್ನು ಇಂದಿನ ವಿಜ್ಞಾನ ವೂ ಒಪ್ಪುತ್ತಿದೆ,” ಎಂದು ಡಾ. ಎಂ.ಎಸ್. ಮಹದೇವನ್ ಹೇಳಿದರು.
"ಹೊಟ್ಟೆಯ ಒಳಗಿನ ಸೂಕ್ಷ್ಮಾಣು ಜೀವಿಗಳ (ಮೈಕ್ರೋಬಯೋಮ್) ಮೇಲೆ ನಮ್ಮ ಆಹಾರ ಮತ್ತು ಜೀವನಶೈಲಿ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಇದರಿಂದ ಪ್ರತಿಯೊಬ್ಬರಿಗೂ ಹೊಂದುವಂತಹ 'ವೈಯಕ್ತಿಕ ಆರೋಗ್ಯ ರಕ್ಷಣಾ ಪದ್ಧತಿ'ಯನ್ನು ರೂಪಿಸಬಹುದು,” ಎಂದು ಡಾ. ಯೋಗೇಶ್ ಶೌಚೆ ಅಭಿಪ್ರಾಯಪಟ್ಟರು.
"ದೊಡ್ಡ ಬದಲಾವಣೆಗಳಿಗಿಂತ ಸಣ್ಣ ಹಾಗೂ ನಿರಂತರವಾದ ಜೀವನಶೈಲಿಯ ಬದಲಾವಣೆಗಳು ಉತ್ತಮ ಆರೋಗ್ಯವನ್ನು ನೀಡುತ್ತವೆ. ನಾವು 'ಯಾವ ಸಮಯದಲ್ಲಿ' ಆಹಾರ ಸೇವಿಸುತ್ತೇವೆ ಎಂಬ ಸಣ್ಣ ಅಭ್ಯಾಸವೂ ನಮ್ಮ ದೇಹದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ,” ಎಂಬುದಾಗಿ ಡಾ. ಸುಬ್ರಹ್ಮಣ್ಯ ಕುಮಾರ್ ಕಿವಿಮಾತು ಹೇಳಿದರು.
ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ದೈನಂದಿನ ಜೀವನಕ್ಕೆ ಸುಲಭವಾದ ಪರಿಹಾರಗಳನ್ನು ಒದಗಿಸುವ ಮೂಲಕ ಆರೋಗ್ಯ ಮತ್ತು ದೀರ್ಘಾಯುಷ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸು ವುದೇ ನಮ್ಮ ಉದ್ದೇಶ ಎಂದು ಆಯೋಜಕರು ತಿಳಿಸಿದರು.