ನವದೆಹಲಿ,ಡಿ.19: ಚಳಿಗಾಲದಲ್ಲಿ ಹಳೆಯ ಎಲೆಗಳನ್ನೆಲ್ಲ ಉದುರಿಸಿ, ಹೊಸತು ಬೆಳೆಸಿ ಕೊಳ್ಳು ವುದು ಗಿಡ-ಮರಗಳ ಸ್ವಭಾವ. ಇವುಗಳಲ್ಲಿ ಒಂದರ್ಧ ನಮಗೂ ಇದೆ… ಹಳೆಯ ತಲೆಯ ಕೂದಲು (Hair Health in Winter) ಗಳು ಉದುರುವುದು. ಆದರೆ ಹೊಸತು ಹುಟ್ಟುವ ಮಾತು ಬಂದಾಗ ಮರಗಳಂತೆ ಭರ್ತಿಯಾಗಿ ತುಂಬುವುದಿಲ್ಲ ನಮ್ಮ ತಲೆ. ಹಾಗಾದರೆ ಉದುರಿದ ಕೂದಲು ಗಳು ಚೆನ್ನಾಗಿ ಹುಟ್ಟುವಂತೆ, ʻತಲೆ ಖಾಲಿʼ ಆಗದಂತೆ ಮಾಡುವಲ್ಲಿ ನಮ್ಮ ಪಾತ್ರವೇನಾದರೂ ಇದೆಯೇ? ನಾವೇನಾದರೂ ಆರೈಕೆ ಮಾಡಬಹುದೇ?
ಮುಖ್ಯವಾಗಿ ವಾತಾವರಣದಲ್ಲಿ ಹೆಚ್ಚುವ ಶುಷ್ಕತೆಯು ತಲೆ ಕೂದಲುಗಳ ಮೇಲೂ ಪರಿಣಾಮ ಬೀರುತ್ತದೆ. ಕೂದಲಿನ ಬುಡಕ್ಕೆ ಹಾನಿಯಾಗುತ್ತದೆ. ಇದರಿಂದ ಹೊಟ್ಟಿನಂಥ ಸಮಸ್ಯೆಗಳು ವಕ್ಕರಿಸಿ ಕೊಂಡು, ಕೂದಲು ಉದುರುವುದು ಹೆಚ್ಚಾಗುತ್ತದೆ. ಇದನ್ನು ತಡೆಯುವುದಕ್ಕೆ ಮಾರುಕಟ್ಟೆ ಯಲ್ಲಿರುವ ದುಬಾರಿ ಬೆಲೆಯ ಕೇಶಾರೈಕೆಯ ವಸ್ತುಗಳನ್ನು ತಂದು ಬಳಸಿದರೂ ನಿರೀಕ್ಷಿಸಿದ ಫಲ ದೊರೆಯದೆ ಇರಬಹುದು. ಇವೆಲ್ಲವುಗಳ ಜೊತೆಗೆ ಚಳಿಗಾಲದಲ್ಲಿ ಹೆಚ್ಚಾಗುವ ಮಾಲಿನ್ಯ, ಸೋಂಕುಗಳು, ಅನಾರೋಗ್ಯ ಮುಂತಾದವೆಲ್ಲ ಸೇರಿ ಕೂದಲಿನ ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಇದಕ್ಕಾಗಿ ಹಿಂದಿನಿಂದ ಇಂದಿನವರೆಗೂ ಚಾಲ್ತಿಯಲ್ಲಿರುವ ಕೆಲವು ಕ್ರಮಗಳು ಉತ್ತಮ ಪರಿಹಾರವನ್ನು ಒದಗಿಸಬಲ್ಲವು.
Healthy Breakfast: ಉತ್ತಮ ಜೀರ್ಣಕ್ರಿಯೆಗಾಗಿ ವೈದ್ಯರು ಸೂಚಿಸಿದ ಆಹಾರಗಳಿವು; ದಿನಚರಿಯಲ್ಲಿ ಇಂದೇ ಅಳವಡಿಸಿಕೊಳ್ಳಿ
ಭೃಂಗರಾಜ: ಪ್ರೊಟೀನ್, ವಿಟಮಿನ್ ಇ ಮತ್ತು ಇತರ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧ ವಾಗಿರುವ ಈ ಮೂಲಿಕೆಯು ಕೂದಲುಗಳ ಆರೈಕೆಯಲ್ಲಿ ಅಗ್ರಗಣ್ಯ. ಇದು ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದ ಕೂದಲಿನ ಬುಡ ದೃಢವಾಗಿ, ಉದುರುವುದು ಕಡಿಮೆಯಾಗುತ್ತದೆ. ತಲೆಹೊಟ್ಟು, ಸೋಂಕುಗಳು ದೂರವಾಗುತ್ತವೆ. ಭೃಂಗರಾಜದ ತೈಲವನ್ನು ಲಘುವಾಗಿ ಕೂದಲಿನ ಬುಡಕ್ಕೆ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಈ ಭಾಗಕ್ಕೆ ರಕ್ತ ಸಂಚಾರ ಹೆಚ್ಚುತ್ತದೆ, ಕೂದಲು ಸೊಂಪಾಗಿ ಬೆಳೆಯುತ್ತದೆ.
ನೆಲ್ಲಿಕಾಯಿ: ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾರೊಟಿನ್‌ಗಳಿಂದ ಕೂಡಿರುವ ನೆಲ್ಲಿಕಾಯಿ ಸಹ ಕೂದಲಿನ ಸಮಸ್ಯೆಗೆ ಅತ್ತ್ಯುತ್ತಮ ಪರಿಹಾರ ಒದಗಿಸಬಲ್ಲದು. ತಲೆಯ ಚರ್ಮದ ಆರೋಗ್ಯ ವೃದ್ಧಿಸಿ, ಕೂದಲು ಉದುರುವುದನ್ನು ಮತ್ತು ತುಂಡಾಗುವುದನ್ನು ತಡೆಯುತ್ತದೆ. ಜೊತೆಗೆ ಬೆಟ್ಟದ ನೆಲ್ಲಿ ಕಾಯಿಗೆ ಫಂಗಸ್ ಸೋಂಕು ಗುಣಪಡಿಸುವ ಶಕ್ತಿ ಇರುವುದರಿಂದ ತಲೆಯಲ್ಲಿ ಹೊಟ್ಟಾ ಗುವುದನ್ನು ತಡೆದು, ನವೆಯನ್ನು ನಿವಾರಿಸುತ್ತದೆ. ಉತ್ಕರ್ಷಣ ನಿರೋಧಕಗಳು ಇದರಲ್ಲಿ ತುಂಬಿರುವುದರಿಂದ ತಲೆಕೂದಲು ಬೆಳ್ಳಗಾಗುವುದನ್ನು ಇದು ತಡೆಯುತ್ತದೆ.
ಕೆಂಪು ಈರುಳ್ಳಿ: ಕೂದಲಿನ ಬೆಳವಣಿಗೆಗೆ ಅಗತ್ಯವಾದ ಸಲ್ಫರ್ ಅಂಶ ಈರುಳ್ಳಿಯಲ್ಲಿ ಯಥೇಚ್ಛವಾಗಿದೆ. ಹಾಗಾಗಿ ಉದ್ದ ಕೂದಲಿನ ಕನಸಿರುವವರಿಗೆ ಈರುಳ್ಳಿ ಒಳ್ಳೆಯ ಉಪಾಯ. ಇದನ್ನು ರುಬ್ಬಿ ರಸ ತೆಗೆದು ಇರುವಂತೆಯೇ ಹೇರ್‌ಪ್ಯಾಕ್ ಮಾಡುವವರಿದ್ದಾರೆ. ಇದನ್ನು ಎಣ್ಣೆಯಂತೆ ಮಾಡಿ ಬಳಸಿದರೂ ಫಲಿತಾಂಶ ಒಳ್ಳೆಯದೇ ಬಂದೀತು. ಇದರಲ್ಲಿರುವ ಹಲವು ರೀತಿಯ ಅಮೈನೊ ಆಮ್ಲಗಳು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಜೊತೆಗೆ, ಕೂದಲು ತುಂಡಾಗದಂತೆಯೂ ಕಾಪಾಡುತ್ತವೆ.
ತುಳಸಿ: ತಲೆಯ ಚರ್ಮದಲ್ಲಿನ ರಕ್ತ ಸಂಚಾರವನ್ನು ತುಳಸಿ ಹೆಚ್ಚಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಇದರಿಂದಾಗಿ ಕೂದಲು ಉದುರುವುದು, ತೆಳ್ಳಗಾಗುವುದು ಮುಂತಾದ ಸಮಸ್ಯೆಗಳು ದೂರಾಗುತ್ತವೆ. ಅಲೋಪೇಶಿಯದಂಥ ಸಮಸ್ಯೆಗಳಲ್ಲಿ ತುಳಸಿಯ ಎಣ್ಣೆಯನ್ನು ಕೂದಲುಗಳಿಗೆ ಬಳಸುವುದು ಲಾಭದಾಯಕ ಎನ್ನುತ್ತವೆ ಸಂಶೋಧನೆಗಳು
ದಾಸವಾಳ: ಇದನ್ನು ಸಾಮಾನ್ಯವಾಗಿ ಕಂಡೀಶನರ್ ಮಾದರಿಯಲ್ಲಿ ಬಳಸಲಾಗುತ್ತದೆ. ಇಂಥ ನೈಸರ್ಗಿಕ ಕಂಡೀಶನರ್‌ಗಳು ಕೂದಲಿನಲ್ಲಿ ಕೆರಾಟಿನ್ ಉತ್ಪಾದನೆಗೆ ನೆರವಾಗಿ ಕೇಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಜೊತೆಗೆ ರಕ್ತ ಸಂಚಾರವನ್ನು ವೃದ್ಧಿಸುವ ಅಮೈನೊ ಆಮ್ಲಗಳು ಸಹ ದಾಸವಾಳದಲ್ಲಿವೆ. ಇದರ ಎಲೆಗಳನ್ನು ಪೇಸ್ಟ್ ಮಾಡಿ ಕಂಡೀಶನರ್ ಮಾದರಿಯಲ್ಲಿ ಕೂದಲಿಗೆ ಬಳಸಿದರೆ, ಹೂವುಗಳ ರಸ ತೆಗೆದು ಎಣ್ಣೆ ಮಾಡಲಾಗುತ್ತದೆ.