ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೂಕ ಕಡಿಮೆ ಇದೆ ಏನು ಮಾಡುವುದು? ಆಹಾರ ಕ್ರಮದಿಂದ ಪರಿಹಾರ ಸಾಧ್ಯ

ತೂಕ ಅಧಿಕವಾಗುವ ಸಮಸ್ಯೆ ಒಂದೆಡೆಯಾದರೆ ಎಷ್ಟೋ ಜನರಲ್ಲಿ ತೂಕ ಏರದೇ ಇರುವ ಸಮಸ್ಯೆ ಕೂಡ ಇದೆ. ಅಧಿಕ ತೂಕಕ್ಕೆ ವ್ಯಾಯಾಮ, ಡೈಯಟ್‌, ಉಪವಾಸ ಹೀಗೆ ಅನೇಕ ಉಪಾಯಗಳ ಮೂಲಕ ತೂಕ ನಿಯಂತ್ರಿಸಬಹುದು, ಆದರೆ ಕಡಿಮೆ ಬಿಎಮ್‌ಐ ಅಥವಾ ಕಡಿಮೆ ತೂಕ ಇರುವವರು ತಮ್ಮ ತೂಕ ಹೆಚ್ಚಿಸಲು ಏನು ಮಾಡಬೇಕು ಎಂದು ಅನೇಕರು ಕೇಳುತ್ತಾರೆ.

ಕಾರ್ತಿಕ್‌ ಎನ್‌ ಕಾಮತ್

ನ್ಯೂಟ್ರೀಶಿಯನ್‌ ಮತ್ತು ಡಯಟೀಶಿಯನ್‌

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ

ತೂಕ ಅಧಿಕವಾಗುವ ಸಮಸ್ಯೆ ಒಂದೆಡೆಯಾದರೆ ಎಷ್ಟೋ ಜನರಲ್ಲಿ ತೂಕ ಏರದೇ ಇರುವ ಸಮಸ್ಯೆ ಕೂಡ ಇದೆ. ಅಧಿಕ ತೂಕಕ್ಕೆ ವ್ಯಾಯಾಮ, ಡೈಯಟ್‌, ಉಪವಾಸ ಹೀಗೆ ಅನೇಕ ಉಪಾಯಗಳ ಮೂಲಕ ತೂಕ ನಿಯಂತ್ರಿಸಬಹುದು, ಆದರೆ ಕಡಿಮೆ ಬಿಎಮ್‌ಐ ಅಥವಾ ಕಡಿಮೆ ತೂಕ ಇರುವವರು ತಮ್ಮ ತೂಕ ಹೆಚ್ಚಿಸಲು ಏನು ಮಾಡಬೇಕು ಎಂದು ಅನೇಕರು ಕೇಳುತ್ತಾರೆ.

ಕಡಿಮೆ ತೂಕವಿರಲು ವಿವಿಧ ಕಾರಣಗಳು:

ಅನುವಂಶಿಕತೆ: ಕೆಲವರು ಅನುವಂಶಿಕವಾಗಿ ಅಂದರೆ ಕುಟುಂಬದಲ್ಲಿ ಕಡಿಮೆ ತೂಕವನ್ನು ಹೊಂದಿರುವವರು ಇದ್ದರೆ ಅದೇ ಸಮಸ್ಯೆ ಮುಂದುವರೆಯುತ್ತದೆ, ದೇಹ ಆರೋಗ್ಯವಾಗಿದ್ದರೂ ತೂಕದಲ್ಲಿ ಏರಿಕೆ ಕಂಡುಬರುವುದಿಲ್ಲ. ಜೊತೆಗೆ ದೇಹದಿಂದ ಹೆಚ್ಚು ಶಕ್ತಿಯನ್ನು ವ್ಯಯಿಸುವು ದರಿಂದಲೂ ತೂಕ ಏರಿಕೆ ಕಷ್ಟವಾಗುತ್ತದೆ.

ಆರೋಗ್ಯ ಸಮಸ್ಯೆಗಳು: ದೊಡ್ಡ ಕರುಳಿನ ಉರಿಯೂತ, ಹೈಪರ್‌ ಥೈರಾಯ್ಡಿಸಮ್‌ (ಅತಿ ಕ್ರಿಯಾ ಶೀಲ ಥೈರಾಯ್ಡ್‌ ಗ್ರಂಥಿ), ಕೆಲವೊಂದು ಸೋಂಕುಗಳು ಆಹಾರದಲ್ಲಿನ ಸತ್ವ ದೇಹಕ್ಕೆ ಹೀರಲು ತಡೆ ಉಂಟು ಮಾಡಬಹುದು ಹಾಗೂ ಚಯಾಪಚಯ ಕ್ರಿಯೆಯನ್ನು (ಮೆಟಾಬೋಲಿಸಂ) ಹೆಚ್ಚಿಸಿ, ಸ್ವಲ್ಪ ಸಮಯದಲ್ಲಿ ಹೆಚ್ಚು ತೂಕ ಕಡಿಮೆ ಆಗುವಂತೆ ಮಾಡಬಹುದು.

ಇದನ್ನೂ ಓದಿ: Health Tips: ಸೂಕ್ಷ್ಮ ಚರ್ಮವೇ? ನಿಮ್ಮ ಆರೈಕೆ ಹೀಗಿರಲಿ!

ಹೆಚ್ಚು ಶ್ರಮ ಇರುವಂತಹ ಕೆಲಸ ಮಾಡುವವರಲ್ಲಿ: ದೈಹಿಕ ಶ್ರಮ ಬೇಡುವ ಕೆಲಸ ಮಾಡುವವರು, ಅತಿಯಾದ ವ್ಯಾಯಾಮ ಮಾಡುವವರು, ಕೆಲಸಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿದಲ್ಲಿ ತೂಕ ಇಳಿಕೆ ಆಗಬಹುದು.

ಮಾನಸಿಕ ಕಾಯಿಲೆಗಳು: ಮಾನಸಿಕ ಒತ್ತಡ, ಖಿನ್ನತೆ ಹಾಗೂ ಆತಂಕಗಳು, ಅನೋರೆಕ್ಸಿಯಾ ನರ್ವೋಸಾ, ಬುಲಿಮಿಯಾ ನರ್ವೋಸಾ ಗಳಂತಹ ತಿನ್ನುವ ಅಸ್ವಸ್ಥತೆಗಳು (eating disorders) ಸಹ ತೂಕ ಇಳಿಕೆ ಆಗುವಂತೆ ಮಾಡುತ್ತದೆ.

ಕೆಲವೊಂದು ಚಿಕಿತ್ಸೆಗಳು: ಖೀಮೋ ಥೆರಪಿಗಳಂತಹ ಕೆಲವು ಚಿಕಿತ್ಸೆಗಳು ನಡೆಯುವ ಸಮಯ ದಲ್ಲಿ, ಬಾಯಿ ರುಚಿ, ಹಸಿವೆ ಕಡಿಮೆಯಾಗಿ ಅಥವಾ ವಾಕರಿಕೆ, ಭೇದಿಯಂತಹ ಅಡ್ಡ ಪರಿಣಾಮ ಗಳಿಂದ ತೂಕ ಇಳಿಕೆ ಆಗಬಹುದು.

ಅತಿಯಾದ ತೂಕ ಇಳಿಕೆಯ ಅಡ್ಡ ಪರಿಣಾಮಗಳು:

  • ಪೌಷ್ಟಿಕಾಂಶಗಳ ಕೊರತೆ ಹಾಗೂ ರಕ್ತ ಹೀನತೆ.
  • ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಹಲವಾರು ಸೋಂಕು ತಗುಲುವ ಸಾಧ್ಯತೆ ಇರುತ್ತದೆ.
  • ಮೂಳೆ ಸವೆತ.
  • ಮಾಂಸ ಖಂಡಗಳ ಶಕ್ತಿ ಹೀನತೆ, ತಲೆ ತಿರುಗುವಿಕೆ.
  • ಅನಿಯಮಿತ ಋತುಚಕ್ರ ಇತ್ಯಾದಿಗಳು

ಆರೋಗ್ಯಕರ ತೂಕ ಹೆಚ್ಚಳಕ್ಕೆ ಅನುಸರಿಸಬೇಕಾದ ಕ್ರಮಗಳು:

  1. ಕ್ಯಾಲೋರಿ ಹಾಗೂ ಪ್ರೊಟೀನ್‌ ಅನ್ನು ಹೆಚ್ಚಿಸಿ:

ಉದಾಹರಣೆಗೆ ಒಬ್ಬ ಮನುಷ್ಯ ದಿನದಲ್ಲಿ 1500 ಕ್ಯಾಲೋರಿಗಳಷ್ಟು ಶಕ್ತಿ ವ್ಯಯಿಸುತ್ತಿದ್ದರೆ, 300 ರಿಂದ 500 ಹಚ್ಚುವರಿ ಕ್ಯಾಲೋರಿಗಳನ್ನು ಸೇವಿಸುವುದು.

ಒಂದು ಕೆಜಿ ದೇಹದ ತೂಕಕ್ಕೆ 1.2 ರಿಂದ 2 ಗ್ರಾಂ ಪ್ರೊಟೀನ್‌ ಸೇವಿಸುವುದು ಮಾಂಸ ಖಂಡಗಳ ಬೆಳವಣೆಗೆಗೆ ಸಹಕಾರಿ. ಅಂದರೆ, ಒಬ್ಬ 35 ಕೆಜಿ ತೂಕದ ಮನುಷ್ಯ 42 ರಿಂದ 70 ಗ್ರಾಂ ಪ್ರೊಟೀನ್‌ ಸೇವಿಸಬಹುದು. ಇದು ಸಂಪೂರ್ಣವಾಗಿ ಅವರ ಜೀವನಶೈಲಿ, ದೈಹಿಕ ಚಟುವಟಿಕೆ, ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ನುರಿತ ಡೈಯಟೀಶಿಯನ್ ಅಥವಾ ನುಟ್ರಿಶಿಯನಿಸ್ಟ್‌ ನೊಂದಿಗೆ ಮಾತನಾಡಿ ನಿಮ್ಮ ಸರಾಸರಿ ಚಯಾಪಚಯ ದರವನ್ನು ತಿಳಿದುಕೊಂಡು ಏನೇ ಬದಲಾವಣೆಗಳನ್ನು ಮಾಡಿಕೊಳ್ಳಿ.

ಆರೋಗ್ಯಕರ ಕೊಬ್ಬು ಹಾಗೂ ಪಿಷ್ಟಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು. 1 ಗ್ರಾಂ ಕೊಬ್ಬಿನಿಂದ 9 ಕ್ಯಾಲೋರಿಗಳಷ್ಟು ಶಕ್ತಿ ಸಿಗುವುದರಿಂದ ಕಡಿಮೆ ಪ್ರಮಾಣ ಸೇವಿಸಿದರೂ ಬೇಗ ತೂಕ ಹೆಚ್ಚಳಕ್ಕೆ ಸಹಕಾರಿ. ತುಪ್ಪ, ಹಾಲು, ಚೀಸ್‌, ಎಣ್ಣೆ ಬೀಜಗಳಾದ ಎಳ್ಳು, ಶೇಂಗ, ಬಾದಾಮಿ, ಗೋಡಂಬಿ, ಕೊಬ್ಬರಿ ಎಣ್ಣೆ, ಪೀನಟ್‌ ಬಟರ್‌ ಇತ್ಯಾದಿಗಳನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ನಿತ್ಯದ ಆಹಾರದೊಂದಿಗೆ ಸೇರಿಸಿಕೊಳ್ಳುವುದು ಹೊಟ್ಟೆ ಬಿರಿಯದೆ ತೂಕ ಹೆಚ್ಚಳಕ್ಕೆ ಸಹಕಾರಿ. ಇದರೊಂದಿಗೆ ಒಣ ದ್ರಾಕ್ಷಿ, ಕರ್ಜೂರಗಳನ್ನು ಸೇರಿಸಬಹುದು.

ಸಣ್ಣ ಪ್ರಮಾಣದಲ್ಲಿ ಹೆಚ್ಚು ಬಾರಿ ಆಹಾರ ಸೇವನೆ:*

ಒಮ್ಮೆಲೇ ಹೆಚ್ಚು ಆಹಾರ ಸೇವಿಸಲು ಕಷ್ಟವೆಂದೆನಿಸಿದಲ್ಲಿ 3 ಬಾರಿಯ ಬದಲು, ದಿನಕ್ಕೆ 4-5 ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಬಹುದು.

ಮೂರು ಊಟದ ಮಧ್ಯದಲ್ಲಿ ಎರಡು ಲಘು ಉಪಹಾರದಲ್ಲಿ ಹಣ್ಣುಗಳು, ಬಾದಾಮಿ, ಗೋಡಂಬಿ, ಬ್ರೆಡ್‌ ನೊಂದಿಗೆ ಪೀನಟ್‌ಬಟರ್‌, ಬೇಯಿಸಿದ ಮೊಟ್ಟೆ, ಗೆಣಸು ಇತ್ಯಾದಿಗಳನ್ನು ಸೇವಿಸಬಹುದು.

ವ್ಯಾಯಾಮಗಳು:

ಭಾರ ಎತ್ತುವಂತಹ ವ್ಯಾಯಾಮಗಳು, ಯೋಗ ಇತ್ಯಾದಿಗಳು ಮಾಂಸಖಂಡಗಳ ಬೆಳವಣಿಗೆಗೆ ಸಹಕಾರಿ.

ಆಹಾರದ ಕಡೆ ಧನಾತ್ಮಕ ಭಾವನೆ ಬೆಳೆಸುವುದು:

ಕೆಲವರಲ್ಲಿ ಕೆಲವು ಆಹಾರ ಗುಂಪುಗಳ ಮೇಲೆ ನಕಾರಾತ್ಮಕ ಭಾವನೆ ಇರುತ್ತದೆ. ಅಂದರೆ, ಕೆಲವು ಆಹಾರ ಪದಾರ್ಥಗಳನ್ನು ತಿಂದರೆ ಅಗತ್ಯಕ್ಕಿಂತ ಹೆಚ್ಚು ದಪ್ಪ ಆಗಬಹುದು, ಸಮಾಜ ಅವರನ್ನು ನೋಡುವ ರೀತಿ ಬದಲಾಗಬಹುದು ಎಂಬ ಅಂಜಿಕೆ ಇರುತ್ತದೆ. ಇಂತಹವರಿಗೆ ಮನೋವೈದ್ಯರ ಹಾಗೂ ಆಹಾರತಜ್ಞರೊಂದಿಗೆ ಸಮಾಲೋಚನೆ ನಡೆಸಿ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.