ನವದೆಹಲಿ, ಡಿ. 2: ಮಳೆಗಾಲ ಮುಗಿಯುತ್ತಿದ್ದಂತೆ ಚಳಿಗಾಲ ಆರಂಭವಾಗಿದೆ. ಚಳಿಗಾಲದಲ್ಲಿ ದೇಹದ ಆರೋಗ್ಯದ ಕಡೆ ಎಷ್ಟು ಗಮನ ಹರಿಸಿದರು ಅದು ಕಡಿಮೆ ಎಂದು ಹೇಳಬಹುದು. ದೇಹವು ಸಮತೋಲನದಲ್ಲಿರಲು ನಮ್ಮ ಆಹಾರ ಕ್ರಮ ಪ್ರಧಾನ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಚಳಿಗಾಲಕ್ಕೆಂದೇ ನಾವು ಕೆಲವು ಆಹಾರ ಸೇವಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ಚರ್ಮದ ತುರಿಕೆ, ಅಲರ್ಜಿ, ಶುಷ್ಕ ತ್ವಚೆ ಹೀಗೆ ಅನೇಕ ಸಮಸ್ಯೆ ಕಂಡು ಬರುತ್ತದೆ. ಚಳಿಗಾಲದ ಥಂಡಿ ಗಾಳಿಯಿಂದಾಗಿ ಚರ್ಮದ ತೇವಾಂಶವನ್ನು (Skin Care Tips) ಕಸಿದುಕೊಳ್ಳುವ ಸಾಧ್ಯತೆ ಇದೆ. ನಾವು ಸೇವಿಸುವ ಆಹಾರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣವಿರಬೇಕು. ಆಗ ಯಾವುದೇ ಸಮಸ್ಯೆ ಬರಲಾರದು. ಚರ್ಮದ ಆರೋಗ್ಯಕ್ಕಾಗಿಯೇ ಕೆಲವೊಂದು ಆಹಾರವನ್ನು ನಾವು ಯಥೇಚ್ಛವಾಗಿ ಸೇವಿಸಿದರೆ ಚರ್ಮದ ಆರೋಗ್ಯಕ್ಕೆ ಉತ್ತಮ. ಹೀಗಾಗಿ ನೀವು ಚಳಿಗಾಲದಲ್ಲಿ ಸೇವಿಸಲೇ ಬೇಕಾದ ಆಹಾರ ಕ್ರಮಗಳ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿದೆ.
ಚಳಿಗಾಲದ ಸಮಯದಲ್ಲಿ ಸೂಕ್ಷ್ಮಾಣು ಜೀವಿಗಳು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ತುಂಬಾ ಇದೆ. ಕೆಲವು ವೈರಸ್‍ಗಳು ದೇಹದ ಒಳಗೆ ಪ್ರವೇಶಿಸಿ ಆರೋಗ್ಯ ಸಮಸ್ಯೆ, ಚರ್ಮರೋಗದ ಸಮಸ್ಯೆ ತಂದೊಡ್ಡಲಿವೆ. ಹಾಗಾಗಿ ಇಂತಹ ಅವಧಿಯಲ್ಲಿ ಕೆಲವು ಹಣ್ಣು, ತರಕಾರಿಗಳನ್ನು ಧಾರಾಳವಾಗಿ ಸೇವಿಸಬೇಕು. ಈ ಅವಧಿಯಲ್ಲಿ ಬಿಟ್ರೋಟ್, ಸಿಹಿ ಗೆಣಸು, ಕ್ಯಾರೆಟ್ ಅನ್ನು ಬಹಳ ಹೆಚ್ಚು ಸೇವಿಸಬೇಕು. ಅದರ ಜತೆಗೆ ಪಾಲಕ್ ಸೊಪ್ಪು, ಕಿತ್ತಳೆ ಹಣ್ಣು ಸೇರಿದಂತೆ ಇನ್ನು ಅನೇಕ ಆಹಾರ ಸೇವಿಸುವುದು ಬಹಳ ಉತ್ತಮ ಎನ್ನಬಹುದು.
ಹೇಗೆ ಪ್ರಯೋಜನಕಾರಿಯಾಗಲಿದೆ?
- ಸಿಹಿ ಗೆಣಸಿನಲ್ಲಿ (Sweet Potato) ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು ಇದನ್ನು ನಾವು ಸೇವಿಸುವುದರಿಂದ ಚರ್ಮವು ಶುಷ್ಕವಾಗಿ ಇರಲಾರದು. ಚರ್ಮ ಮೃದುವಾಗುತ್ತದೆ.
- ಬೀಟ್ರೂಟ್ (Beetroot) ನಾವು ಸೇವಿಸುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸಲು ಬಹಳ ಅನುಕೂಲವಾಗಲಿದೆ. ಇದರಿಂದಾಗಿ ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗಲಿದೆ. ಕ್ಯಾರೆಟ್ ಸೇವನೆ ಮಾಡುವುದರಿಂದ ಅದರಲ್ಲಿ ಹೆಚ್ಚಿನ ಬೀಟಾ-ಕ್ಯಾರೋಟಿನ್ ಅಂಶ ಇರುವ ಕಾರಣ ಚರ್ಮವನ್ನು ಶುಷ್ಕತೆಯಿಂದ ರಕ್ಷಿಸುತ್ತದೆ.
- ಚಳಿಗಾಲದಲ್ಲಿ ಕಿತ್ತಳೆ ಹಣ್ಣು (Oranges) ಸೇವಿಸಿದರೆ ಬಹಳ ಉತ್ತಮ. ಇದರಲ್ಲಿ ವಿಟಮಿನ್ ಸಿ ಅಧಿಕ ಇದ್ದು ಒಣ ತ್ವಚೆ ಸಮಸ್ಯೆಗೆ ಪರಿಹಾರವಾಗಲಿದೆ. ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸಲು ಕಿತ್ತಳೆ ಹಣ್ಣಿನ ಸೇವನೆ ಪ್ರಧಾನ ಪಾತ್ರ ವಹಿಸುತ್ತದೆ.
- ಕೆಲವು ಗಿಡಮೂಲಿಕೆಗಳನ್ನು ಸೇವಿಸುವ ಹವ್ಯಾಸ ಬೆಳೆಸಿಕೊಂಡರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುದೀನ, ತುಳಸಿ, ಕಾಳು ಮೆಣಸಿನ ಪುಡಿ ಇತ್ಯಾದಿಗಳನ್ನು ಕಷಾಯ ಮಾಡಿ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಚಳಿಗಾಲದ ಆರೋಗ್ಯಕ್ಕೆ ಗಿಡಮೂಲಿಕೆ ಚಹಾಗಳನ್ನು ಕುಡಿದ್ರೆ ಈ ಪ್ರಯೋಜನಗಳು ನಿಮ್ಮದಾಗಲಿದೆ!
- ಪಾಲಕ್ ಸೊಪ್ಪಿನ ಸೇವನೆ ಮಾಡುವುದರಿಂದ ಚರ್ಮದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ ಮತ್ತು ಫೋಲೇಟ್ ಅಂಶಗಳಿದ್ದು, ವಿಟಮಿನ್ ಇ ಹೊಂದಿದೆ. ಇದು ಇದು ಚಳಿಗಾಲದಲ್ಲಿ ಚರ್ಮದ ಹಾನಿಗೆ ಮಾಡುವ ಆಕ್ಸಿಡೇಟಿವ್ ವಿರುದ್ಧ ಹೋರಾಡುತ್ತದೆ.
- ಕ್ಯಾರೆಟ್, ಬಿಟ್ರೋಟ್ ಮತ್ತು ಪಾಲಕ್ ಸೊಪ್ಪನ್ನು ಮಿಶ್ರ ಮಾಡಿ ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ಆರೋಗ್ಯ ಪ್ರಯೋಜನೆ ಸಿಗಲಿದೆ.
ಒಟ್ಟಿನಲ್ಲಿ ಚರ್ಮದ ಆರೈಕೆ ಮಾಡಲು ಆಹಾರಗಳನ್ನು ಸೇವಿಸುವ ಜತೆಗೆ ಚರ್ಮದ ಶುಷ್ಕತೆ ಸಮಸ್ಯೆಗೆ ಕೆಲವು ಲೋಶನ್ ಕ್ರೀಂ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಒಣ ಹಣ್ಣುಗಳು, ವಿಟಮಿನ್ ಇ, ಸಿ ಇರುವ ಆಹಾರಗಳು ಚಳಿಗಾಲದ ಶುಷ್ಕ ವಾತಾವರಣದಲ್ಲಿಯೂ ಚರ್ಮ ಮತ್ತು ಕೂದಲಿನ ರಕ್ಷಣೆಯನ್ನು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.