ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ಮಕ್ಕಳ ಮನಸ್ಸಿನಲ್ಲಿ ವಿಕ್ಷಿಪ್ತ ಅಲೆಗಳ ಸುನಾಮಿ ಎಬ್ಬಿಸುವ ವೆಬ್‌ ಸೀರೀಸ್‌: ಪೋಷಕರೇ.. ಎಚ್ಚರ ತಪ್ಪಿದರೆ ಅಪಾಯ!

ಕೈಲಿ ಮೊಬೈಲ್ ಹಿಡಿದಿರುವ ಮಕ್ಕಳು ಅದರಲ್ಲಿ ಏನು ನೋಡುತ್ತಿದ್ದಾರೆ ಎನ್ನುವ ಬಗ್ಗೆಯೂ ಪೋಷಕರಿಗೆ ತಿಳಿದಿರಬೇಕು. ವೆಬ್‌ ಸರಣಿಯೊಂದರ ಪ್ರಭಾವದಿಂದ ಬೆಂಗಳೂರಿನಲ್ಲಿ ಜೀವ ಕಳೆದುಕೊಂಡ ಹರೆಯದ ಹುಡುಗನ ದುರಂತವು ಎಲ್ಲ ಪೋಷಕರಿಗೂ ಪಾಠವಾಗಬೇಕಿದೆ. ಮನೆಯಲ್ಲಿ ಪೋಷಕರೊಂದಿಗೆ ಸುರಕ್ಷಿತವಾಗಿ, ಭವಿಷ್ಯದ ಕನಸುಗಳನ್ನು ಕಾಣುತ್ತಾ, ನಲಿದಾಡಬೇಕಾದ ವಯಸ್ಸಿನಲ್ಲಿ ಸ್ವತಃ ತಾವೇ ತಮ್ಮ ಬದುಕನ್ನು ಅಂತ್ಯಗೊಳಿಸಬೇಕೆನ್ನುವ ಆಲೋಚನೆ ಹೇಗೆ ಬರುತ್ತದೆ? ಅವರಿಗೆ ಅಂಥ ದೊಡ್ಜ ಸಮಸ್ಯೆ ಏನಿರಲು ಸಾಧ್ಯ?

ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಬಾಳಬೇಕಾದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದಾಗ ಎದೆ ಝಲ್ ಎನ್ನುವುದಲ್ಲದೇ ಚಿಂತೆಯೂ ಕಾಡುತ್ತದೆ. ಬದುಕಿ ಬಾಳಬೇಕಾದ ಪುಟ್ಟ ಮಕ್ಕಳು ಆತ್ಮಹತ್ಯೆಯಂತಹ ದೊಡ್ಡ ಹೆಜ್ಜೆಯಿಡುವುದಕ್ಕೆ ಹೇಗೆ ಸಾಧ್ಯವಾಯಿತು? ಅವರಿಗೆ ಆ ದಿಟ್ಟತನ ಬಂದದ್ದಾದರೂ ಹೇಗೆ? ಮನೆಯಲ್ಲಿ ಪೋಷಕರೊಂದಿಗೆ ಸುರಕ್ಷಿತವಾಗಿ, ಭವಿಷ್ಯದ ಕನಸುಗಳನ್ನು ಕಾಣುತ್ತಾ, ನಲಿದಾಡಬೇಕಾದ ವಯಸ್ಸಿನಲ್ಲಿ ಸ್ವತಃ ತಾವೇ ತಮ್ಮ ಬದುಕನ್ನು ಅಂತ್ಯಗೊಳಿಸಬೇಕೆನ್ನುವ ಆಲೋಚನೆ ಹೇಗೆ ಬರುತ್ತದೆ? ಅವರಿಗೆ ಅಂಥ ದೊಡ್ಜ ಸಮಸ್ಯೆ ಏನಿರಲು ಸಾಧ್ಯ? ಆ ಸಮಸ್ಯೆಗೆ ಆತ್ಮಹತ್ಯೆಯೇ ಸರಿಯಾದ ಪರಿಹಾರ ಎನ್ನುವ ನಿರ್ಧಾರಕ್ಕೆ ಹೇಗೆ ಬಂದರು? ಅವರಿಗೆ ಅಂಥ ಅನಿವಾರ್ಯತೆಯಾದರೂ ಏನಿದ್ದಿರಬಹುದು? ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತವೆ.

ನಾವು ಇವೆಲ್ಲ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳುವ ಅಗತ್ಯವಿದೆ ಮತ್ತು ಇದು ನಮ್ಮ ಕರ್ತವ್ಯವೂ ಕೂಡ ಹೌದು. ಪೋಷಕರು ಇವುಗಳನ್ನು ಗಮನವಿಟ್ಚು ತಿಳಿದುಕೊಳ್ಳಬೇಕು. ಏಕೆಂದರೆ, ಮಕ್ಕಳಿಗೆ ಈ ಜಗತ್ತಿನಲ್ಲಿ ತಮ್ಮ ಮನೆಗಿಂತಲೂ ಸುರಕ್ಷಿತವಾಗಿರುವ ಸ್ಥಳ ಮತ್ತೊಂದಿಲ್ಲ. ಅಂತಹ ಸುರಕ್ಷಿತವಾದ ಸ್ಥಳದಲ್ಲಿ ಮಕ್ಕಳ ಬದುಕೇ ಮುಗಿದು ಹೋದರೆ ಹೇಗೆ? ತಮ್ಮ ಮಕ್ಕಳನ್ನು ಸುರಕ್ಷಿತವಾಗಿಡುವುದು ಪೋಷಕರ ಜವಾಬ್ದಾರಿಯೂ ಆಗಿರುತ್ತದೆ. ಸುರಕ್ಷೆಯ ಜವಾಬ್ದಾರಿ ಸಾಮಾನ್ಯವಾಗಿ ಎಲ್ಲ ಪೋಷಕರಿಗೂ ಇರುತ್ತದೆ. ಆದರೂ ಕೂಡ ಮನೆಯಲ್ಲಿಯೇ ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯಂತಹ ಘೋರ ಕೃತ್ಯಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ.

ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ವರದಿಯಾದ ಸುದ್ದಿ. ಬೆಂಗಳೂರಿನ 13 ವಷ೯ದ ಬಾಲಕನ ಆತ್ಮಹತ್ಯೆ. ಈ ಘಟನೆ ನಡೆದದ್ದು ಬಾಲಕನ ಮನೆಯಲ್ಲಿಯೇ. ತಾಯಿ ಉದ್ಯೋಗದ ಕಾರಣಕ್ಕಾಗಿ ವಿದೇಶ ಪ್ರವಾಸದಲ್ಲಿದ್ದಾಗ, ತಂದೆ ಹಾಗೂ ಅಣ್ಣನ ಜೊತೆಗೆ ಬಾಲಕ ವಾಸಿಸುತ್ತಿದ್ದ. ಒಂದು ರಾತ್ರಿ ಊಟ ಮುಗಿಸಿ, ಎಲ್ಲರೂ ಮಲಗಿಕೊಂಡಾಗ ನೇಣಿಗೆ ಶರಣಾಗಿದ್ದಾನೆ. ಅಣ್ಣನು ಮುಂಜಾನೆ ತಮ್ಮನನ್ನು ಎಬ್ಬಿಸಲು ಹೋದಾಗ, ವಿಷಯ ತಿಳಿದಿದೆ.

ಪೊಲೀಸರ ವಿಚಾರಣೆಯಲ್ಲಿ ಬಾಲಕನ ಶಾಲೆಯಲ್ಲಾಗಲಿ, ಮನೆಯಲ್ಲಾಗಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ವರದಿಗಳ ಪ್ರಕಾರ, ಬಾಲಕನ ಆತ್ಮಹತ್ಯೆಗೆ ಕಾರಣ ಜಪಾನಿನ ಜನಪ್ರಿಯ ವೆಬ್‌ಸೀರೀಸ್ ಆದ ಅನಿಮೇ 'ಡೆತ್ ನೋಟ್' ಮೇಲಿನ ಗೀಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನು 'ಡೆತ್‌ ನೋಟ್‌'ನ ದೊಡ್ಡ ಅಭಿಮಾನಿಯಾಗಿದ್ದನು. ಅವನ ಕೋಣೆಯ ಗೋಡೆಗಳ ಮೇಲೆ ಈ ವೆಬ್ ಸರಣಿಯ ಒಂದು ಪಾತ್ರವನ್ನು ಸಹ ಚಿತ್ರಿಸಿದ್ದನು ಎಂದು ವರದಿ ಮಾಡಲಾಗಿದೆ.

ಏನಿದು 'ಡೆತ್‌ನೋಟ್' ವೆಬ್‌ ಸೀರೀಸ್?

'ಡೆತ್ ನೋಟ್' ಎನ್ನುವ ವೆಬ್ ಸರಣಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನಿಗೆ (ಲೈಟ್ ಯಾಗಮಿ) ಶಾಲೆಯಿಂದ ಮನೆಗೆ ಹೋಗುವಾಗ ಒಂದು ನಿಗೂಢ ಕಪ್ಪು ನೋಟ್‌ಬುಕ್ ಸಿಗುತ್ತದೆ. ಯಾರು ಈ 'ಡೆತ್ ನೋಟ್' ಪುಸ್ತಕವನ್ನು ನಿಯಂತ್ರಿಸುತಾರೋ (ನಿಯಂತ್ರಕ) ಆತನಿಗೆ/ಆಕೆಗೆ ವಿಶಿಷ್ಟವಾದ ಶಕ್ತಿ (power) ದೊರಕುತ್ತದೆ. ನಿಯಂತ್ರಕನು ಈ ಪುಸ್ತಕದ ಪುಟಗಳಲ್ಲಿ ತನಗೆ ಬೇಕಾದ ಯಾವುದೇ ವ್ಯಕ್ತಿಯ ಹೆಸರನ್ನು ಸರಳವಾಗಿ ಬರೆಯುವ ಮೂಲಕ, ಆ ವ್ಯಕ್ತಿಯನ್ನು ಕೊಲ್ಲುವ ಶಕ್ತಿಯನ್ನು ಹೊಂದಬಹುದೆಂದು ಆ ವಿದ್ಯಾಥಿ೯ಗೆ ತಿಳಿಯುತ್ತದೆ.

ಮೊದಲಿಗೆ, ಆ ಬಾಲಕ 'ಡೆತ್ ನೋಟ್' ಪುಸ್ತಕವನ್ನು ದುಷ್ಟರು, ಅಪರಾಧಿಗಳ ನಿರ್ಮೂಲನೆಗಾಗಿ ಬಳಸುತ್ತಾನೆ. ಇದರಿಂದ ಅವನು ಪರಿಪೂರ್ಣ, ಅಪರಾಧ-ಮುಕ್ತ ಜಗತ್ತನ್ನು ಸೃಷ್ಟಿಸಬಹುದೆಂದು ನಂಬುತ್ತಾನೆ. ಆದರೆ ಕ್ರಮೇಣ, ಈ ಬಾಲಕನು ಈ ಪುಸ್ತಕದ ಗೀಳಿಗೆ ಬಿದ್ದು, ತಂತ್ರಗಳನ್ನು ಉಪಯೋಗಿಸಿ ಜನರನ್ನು ಮೋಸ ಮಾಡಲು ಆರಂಭಿಸುತ್ತಾನೆ.

ಡೆತ್‌ನೋಟ್ ವಿವಾದಾತ್ಮಕವಾದುದು ಏಕೆ?

ಅಭಿಮಾನಿಯಾಗಿ ಸದಾ 'ಡೆತ್ ನೋಟ್' ನೋಡುತ್ತಿದ್ದ ಆ ಬಾಲಕನ ಆಲೋಚನೆಗಳ ಮೇಲೆ ಮತ್ತು ಕ್ರಿಯೆಗಳ ಮೇಲೆ ಈ ವೆಬ್ ಸರಣಿಯು ಪ್ರಭಾವ ಬೀರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಆತ್ಮಹತ್ಯೆ ಪ್ರಕರಣದಲ್ಲಿ ವೆಬ್‌ ಸರಣಿಯ ಸಂಬಂಧವನ್ನು ಆಳವಾಗಿ ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣವು ಪೋಷಕರು, ಶಿಕ್ಷಕರು ಮತ್ತು ಮಾನಸಿಕ ಆರೋಗ್ಯ ತಜ್ಞರಲ್ಲಿ ಕಳವಳ ಹುಟ್ಟುಹಾಕುತ್ತಿದೆ. 'ಡೆತ್ ನೋಟ್' ಎಂದರೇನು ಮತ್ತು ಅದು ಕೆಲವೇ ವರ್ಷಗಳಲ್ಲಿ ಪ್ರಶಂಸೆ ಮತ್ತು ವಿವಾದ ಎರಡಕ್ಕೂ ಏಕೆ ಕಾರಣವಾಯಿತು ಎನ್ನುವ ವಿವರ ಇಲ್ಲಿದೆ.

'ಡೆತ್ ನೋಟ್' ಒಂದು ಕಾಲ್ಪನಿಕ ಕೃತಿಯಾಗಿದ್ದರೂ, ಅದರ ಕರಾಳ ಮತ್ತು ಹಿಂಸಾತ್ಮಕ ವಿಷಯಗಳಿಂದಾಗಿ ಸಮಾಜದಲ್ಲಿ ಇದು ಕಳವಳವನ್ನು ಹುಟ್ಟುಹಾಕಿದೆ. ವಿವಿಧ ದೇಶಗಳಲ್ಲಿ ಶಾಲಾ ಮಕ್ಕಳು 'ನೋಟ್‌ ಬುಕ್‌'ನ ಪರಿಕಲ್ಪನೆಯನ್ನು ಅನುಕರಿಸುವ ಮೂಲಕ ಹೆಸರುಗಳ 'ಡೆತ್ ಲಿಸ್ಟ್' ರಚಿಸುತ್ತಿರುವ ಬಗ್ಗೆ ಹಲವು ವರದಿಗಳಿವೆ. ಕೆಲವು ಶಾಲೆಗಳು ಮತ್ತು ದೇಶಗಳು ಇಂಥ ಅನಿಮೆಶನ್‌ಗಳನ್ನು ನಿಷೇಧಿಸಿವೆ.

'ಡೆತ್ ನೋಟ್‌'ನ ಗಂಭೀರ ಮತ್ತು ಸಂಕೀರ್ಣ ವಿಷಯದ ಕಾರಣದಿಂದಾಗಿ ಇದನ್ನು 'ಮಕ್ಕಳು ನೋಡಲು ಸೂಕ್ತವಲ್ಲ' ಎಂದು ವರ್ಗೀಕರಿಸಲಾಗಿದೆ. ಸಾಮಾನ್ಯವಾಗಿ ವಯಸ್ಕರಿಗೆ ಇಂಥ ಸಿನಿಮಾಗಳನ್ನು ಶಿಫಾರಸು ಮಾಡಲಾಗುತ್ತದೆ.

ಮಕ್ಕಳ ಬದುಕು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು ಮತ್ತು ನಿರಂತರವಾದುದು. ಪೋಷಕರು ಮಕ್ಕಳ ಮನಃಸ್ಥಿತಿಯನ್ನು ಅಥ೯ಮಾಡಿಕೊಳ್ಳುವ ಜೊತೆಗೆ ಬದಲಾಗುತ್ತಿರುವ ಸಮಾಜ, ಸಾಮಾಜಿಕ ಜಾಲಾತಾಣಗಳು, ತಂತ್ರಜ್ಞಾನ, ಒಟಿಟಿ ವೇದಿಕೆಗಳಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆಯೂ ಸಾಕಷ್ಟು ಗಮನ ವಹಿಸಬೇಕು.

ಈ ಸುದ್ದಿಯನ್ನೂ ಓದಿ: Health Tips: ರುಚಿ, ಆರೋಗ್ಯದ ಗಣಿ ಪಾಲಕ್‌ ಸೊಪ್ಪು!

ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು

ಮಕ್ಕಳು ಯಾವ ರೀತಿಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ, ಎಂಥ ಆನ್‌ಲೈನ್ ಗೇಮ್‌ಗಳನ್ನು ಆಡುತ್ತಾರೆ ಎಂದು ತಿಳಿದುಕೊಳ್ಳಿ. ಆಗಾಗ್ಗೆ ಈ ವಿಷಯಗಳ ಕುರಿತು ಚರ್ಚಿಸಿ. ಅವರು ನೋಡುತ್ತಿರುವ ಕಾಯ೯ಕ್ರಮಗಳಿಗೆ ಸಂಬಂಧಿಸಿದಂತೆ ಮಕ್ಕಳ ಅಭಿಪ್ರಾಯವನ್ನೂ ತಿಳಿದುಕೊಳ್ಳಿ. ಮಕ್ಕಳ ಮನಸ್ಸಿನ ಮೇಲೆ ಈ ವೆಬ್‌ ಸರಣಿ ಅಥವಾ ಕಾರ್ಯಕ್ರಮದಿಂದ ಯಾವ ರೀತಿಯ ಪರಿಣಾಮ ಆಗಿದೆ ಎನ್ನುವುದನ್ನು ಗಮನಿಸಿ

ಯಾವುದೇ ಕಾರ್ಯಕ್ರಮವು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರಿದ್ದರೆ ಅದು ಅವರ ನಡವಳಿಕೆ, ಮಾತಿನಲ್ಲಿ ವ್ಯಕ್ತವಾಗುತ್ತದೆ. ಮಕ್ಕಳ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊಳ್ಳಬೇಕು.

ಎಲ್ಲ ಪೋಷಕರೂ ಈ ಹೊತ್ತಿನಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು

  1. ನನ್ನ ಮಗುವನ್ನು ನಾನು ಸಾಕಷ್ಟು ಅಥ೯ಮಾಡಿಕೊಂಡಿದ್ದೇನೆಯೇ ಮತ್ತು ನನ್ನ ಮಗು ಸಂತೋಷವಾಗಿದೆಯೇ?
  2. ನನ್ನ ಮಗು ಭಯಪಟ್ಟಿದ್ದೆಯೇ? ಅಥವಾ ಗೊಂದಲದಲ್ಲಿದೆಯೇ?
  3. ನನ್ನ ಮಗು ನನಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿದೆಯೇ? ಮಗುವಿಗೆ ನಾನು ನನ್ನ ಬಳಿ ಮಾತನಾಡಲು ಸಾಕಷ್ಚು ಕಾಲಾವಕಾಶ ನೀಡುತ್ತೇನೆಯೇ?
  4. ಶಾಲೆಯಲ್ಲಿ ನನ್ನ ಮಗು ಏನಾದರೂ ತೊಂದರೆ ಎದುರಿಸುತ್ತಿದೆಯೇ? ಮತ್ತು ನನ್ನ ಮಗುವಿಗೆ ಯಾವ ರೀತಿಯ ಸ್ನೇಹಿತರು ಇದ್ದಾರೆ? ಅವರು ಯಾವ ರೀತಿಯ ಸಂಭಾಷಣೆಗಳನ್ನು ನಡೆಸುತ್ತಿದ್ದಾರೆ?
  5. ನನ್ನ ಮಗುವಿಗೆ ತನ್ನ ಬಗ್ಗೆ ಏನು ಅನಿಸುತ್ತದೆ?
  6. ನನ್ನ ಮಗುವು ಸಂಕೋಚವಿಲ್ಲದೇ ನನ್ನೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತದೆಯೇ?
  7. ಎಮೋಜಿಗಳು, ಸಂಕೇತಗಳು (ಕೋಡ್‌) ಮತ್ತು ಭಾಷೆ, ಆನ್‌ಲೈನ್ ಸಮುದಾಯಗಳ ಬಗ್ಗೆ ನನಗೆ ಸಾಕಷ್ಟು ತಿಳಿದಿದೆಯೇ?
  8. ನನಗೆ ನನ್ನ ಮಗುವು ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ತೊಡಗಿಸಿಕೊಂಡಿದೆ ಮತ್ತು ಒಟಿಟಿಗಳಲ್ಲಿ ಯಾವ ರೀತಿಯ ಕಾಯ೯ಕ್ರಮಗಳನ್ನು ನೋಡುತ್ತಿದೆ ಎಂದು ತಿಳಿದೆದೆಯೇ?
  9. ನನ್ನ ಮಗುವಿನ ಮೌನದಲ್ಲಿರುವ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆಯೇ?
  10. ಬಾಡಿ ಶೇಮಿಂಗ್ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ನಾನು ಮಕ್ಕಳೊಂದಿಗೆ ಬಳಿ ಚರ್ಚೆ ಮಾಡಿದ್ದೇನೇಯೇ?

ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಿ

ಮಕ್ಕಳಿಗೆ ಶಿಕ್ಷಣ ಮತ್ತು ಇತರೆ ಸೌಲಭ್ಯಗಳು ಖಂಡಿತವಾಗಿಯೂ ಅಗತ್ಯವಿದೆ. ಪೋಷಕರು ಇವುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವುದು ಅತ್ಯಗತ್ಯ. ಆದರೆ ತಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಮಕ್ಕಳ ಮನದಾಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಕೂಡ ತಂದೆ ತಾಯಿಗಳ ಆದ್ಯತೆಯಾಗಬೇಕು.

ಪ್ರೀ ಟೀನೇಜ್ (10-14) ಮತ್ತು ಟೀನೇಜ್ (15-19) ಮಕ್ಕಳು ದೈಹಿಕ ಬೆಳವಣಿಗೆ ಮತ್ತು ಬದಲಾವಣೆಗಳಿಂದಾಗಿ ಬಹಳಷ್ಟು ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ದೇಹದ ಸೌಂದರ್ಯಕ್ಕೆ ಹೆಚ್ಚು ಗಮನವಿದ್ದು, ಮಾನಸಿಕ ಬೆಂಬಲದ ಅಗತ್ಯಗಳು ಇರುತ್ತವೆ. ನನ್ನನ್ನು ಪ್ರೀತಿಸಬೇಕು, ಪ್ರಶಂಸಿಸಬೇಕು, ಅಥ೯ಮಾಡಿಕೊಳ್ಳಬೇಕು ಎಂಬ ನಿರೀಕ್ಷೆಗಳು ಇರುತ್ತವೆ. ಪೋಷಕರು ಈ ಅಗತ್ಯಗಳನ್ನು ತಿಳಿದುಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ಮಾನಸಿಕ ಸ್ಥಿತಿಯನ್ನು ಭದ್ರಗೊಳಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು.

ಲೇಖಕರು: ಭವ್ಯಾ ವಿಶ್ವನಾಥ್

ವಿಳಾಸ: ಮೈಂಡ್ ಟಾನಿಕ್, ಇಶಾ ಟವರ್ಸ್, ನಂ 26, 2ನೇ ಮಹಡಿ, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಬೆಂಗಳೂರು 560 070. ಇಮೇಲ್: bhavya.dear@gmail.com, ವಾಟ್ಸ್‌‌ಆ್ಯಪ್ ಸಂಖ್ಯೆ: 99457 43542

ಡಿ. ಆರ್. ಭವ್ಯಾ ವಿಶ್ವನಾಥ್

View all posts by this author