Doodling: ಡೂಡಲ್ ಮಾಡುತ್ತೀರೇ? ಒಳ್ಳೆಯದು!
Benefits of Doodling: ಎಲ್ಲೆಂದರಲ್ಲಿ ಗೀಚುವ ಅಥವಾ ಡೂಡ್ಲಿಂಗ್ ಎಂದು ಕರೆಯಲಾಗುವ ಈ ಕ್ರಿಯೆಯ ಬಗ್ಗೆ ದೀರ್ಘ ಕಾಲದವರೆಗೆ ಅಸಡ್ಡೆಯೇ ಇದ್ದಿತ್ತು, ತಜ್ಞರಲ್ಲೂ. ಆದರೀಗ ಹೊರಗೆ ಬರುತ್ತಿರುವ ಹೊಸ ಸಂಶೋಧನೆಗಳ ಪ್ರಕಾರ, ಡೂಡ್ಲಿಂಗ್ ಅಥವಾ ಅನ್ಯಮನಸ್ಕತೆಯಲ್ಲಿ ಗೀಚುವುದು ಒಳ್ಳೆಯದೇ! ನಮಗೇ ಅರಿವಿಲ್ಲದಂತೆ ನಮ್ಮ ಸುಪ್ತ ಮನಸ್ಸಿನ ಎಷ್ಟೋ ವಿಷಯಗಳು ಡೂಡ್ಲಿಂಗ್ ಮೂಲಕ ಅಭಿವ್ಯಕ್ತಿ ಗೊಳ್ಳುತ್ತವೆಯಂತೆ.

doodling -

ನವದೆಹಲಿ: ಯಾರೊಂದಿಗೋ ದೂರವಾಣಿಯಲ್ಲಿ ಮಾತಾಡುತ್ತಿರುತ್ತೀರಿ. ನಿಮ್ಮ ಕೈ ನಿಮಗರಿ ವಿಲ್ಲದ ಹಾಗೆ ಯಾವುದೋ ದಿನಪತ್ರಿಕೆಯ ಮೂಲೆಯಲ್ಲಿ ಏನೋ ಗೀಚುತ್ತಿರುತ್ತದೆ. ಯಾವುದೋ ಮೀಟಿಂಗಲ್ಲಿ ಕುಳಿತಿರುವಾಗಲೂ ನಿಮ್ಮ ಬೆರಳುಗಳು ಏನನ್ನೋ ಗೀಚುತ್ತಿರುತ್ತವೆ. ಮಕ್ಕಳಿರುವ ಮನೆಗಳಿಗೆ ಹೋದರೆ, ಗೋಡೆಯ ಮೇಲೆಲ್ಲ ಚಿತ್ತಾರ. ಆ ಮಕ್ಕಳ ಕೈಗೆಟಕುವ ಪ್ರತಿಯೊಂದು ಗೋಡೆ, ಬಾಗಿಲು, ಸೋಫಾ, ಮಂಚ- ಎಲ್ಲೆಂದರಲ್ಲಿ ಅವರ ಪ್ರತಿಭೆಯ ಅನಾವರಣವಾಗಿರುತ್ತದೆ. ಹೀಗೆ ಎಲ್ಲೆಂದರಲ್ಲಿ ಗೀಚುವ ಅಥವಾ ಡೂಡ್ಲಿಂಗ್ (Doodling) ಎಂದು ಕರೆಯಲಾಗುವ ಈ ಕ್ರಿಯೆಯ ಬಗ್ಗೆ ದೀರ್ಘ ಕಾಲದವರೆಗೆ ಅಸಡ್ಡೆಯೇ ಇದ್ದಿತ್ತು, ತಜ್ಞರಲ್ಲೂ. ಆದರೀಗ ಹೊರಗೆ ಬರುತ್ತಿರುವ ಹೊಸ ಸಂಶೋಧನೆಗಳ ಪ್ರಕಾರ, ಡೂಡ್ಲಿಂಗ್ ಅಥವಾ ಅನ್ಯಮನಸ್ಕತೆಯಲ್ಲಿ ಗೀಚುವುದು ಒಳ್ಳೆಯದೇ!
ನಮಗೇ ಅರಿವಿಲ್ಲದಂತೆ ನಮ್ಮ ಸುಪ್ತ ಮನಸ್ಸಿನ ಎಷ್ಟೋ ವಿಷಯಗಳು ಡೂಡ್ಲಿಂಗ್ ಮೂಲಕ ಅಭಿವ್ಯಕ್ತಿಗೊಳ್ಳುತ್ತವೆಯಂತೆ. ನಮ್ಮ ಶಾಲೆಯ ದಿನಗಳಲ್ಲಿ ರಫ್‌ನೋಟ್ ಬುಕ್ ಅಥವಾ ಕಚ್ಚಾ ಪುಸ್ತಕದ ಕೊನೆಯ ಒಂದೆರಡು ಹಾಳೆಗಳು ಸಹ ಅರ್ಥವಾಗದ ಏನೇನೋ ರೇಖೆ, ಅಕ್ಷರ, ಮುಖ ಮತ್ತು ವಿನ್ಯಾಸಗಳ ಕ್ಯಾನ್ವಾಸ್‌ನಂತೆ ಇರುತ್ತಿದ್ದವಲ್ಲ.
ಅರ್ಥವಿದೆಯೇ?
ವಿಚಿತ್ರ ಮುಖಗಳು, ಏನೇನೋ ವಿನ್ಯಾಸಗಳು, ಓರೆ-ಕೋರೆಯ ರೇಖೆಗಳು, ಸಣ್ಣ-ದೊಡ್ಡ ವ್ಯಾಸಗಳು, ಚೌಕಗಳು, ಮದರಂಗಿಯಲ್ಲಿ ಬಿಡಿಸಿದಂಥ ಏನೇನೋ ಚಿತ್ರಗಳು- ಇವುಗಳಿಗೆಲ್ಲ ಅರ್ಥ ಹುಡುಕುವುದು ಮೇಲ್ನೋಟಕ್ಕೆ ಸಾಧ್ಯವಿಲ್ಲ. ಮಾತ್ರವಲ್ಲ, ಬರೆದವರಿಗೂ ಅದೇನೆಂದು ಕಂಡುಹಿಡಿಯುವುದು, ಹೀಗೆ ಗೀಚಿದ್ದೇಕೆಂದು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಆದರೆ ಗ್ರಾಫಾಲಜಿಸ್ಟ್‌ಗಳು ಇವಕ್ಕೆಲ್ಲ ಅರ್ಥ ಇವೆ ಎನ್ನುತ್ತಾರೆ. ಸುಪ್ತ ಮನದಲ್ಲಿ ಇರುವಂಥ ವಿಷಯಗಳು ನಮ್ಮ ಎಚ್ಚೆತ್ತ ಮನಸ್ಸಿಗೆ ತಿಳಿಯದಂತೆ ಹೊರ ಬರುವುದಕ್ಕೆ ತಮ್ಮದೇ ದಾರಿ ಕಂಡುಕೊಳ್ಳುತ್ತವೆ. ಅದರಲ್ಲಿ ಡೂಡಲಿಂಗ್ ಸಹ ಒಂದು. ಹಾಗಾಗಿ ಗೀಚುವುದರಲ್ಲಿ ತಪ್ಪಿಲ್ಲ, ಒಳ್ಳೆಯದೇ ಇದೆ ಎನ್ನುವುದು ಅವರ ಅಭಿಪ್ರಾಯ.
ಲಾಭವೇನು?
ನಿತ್ಯದ ಬಹಳಷ್ಟು ಕೆಲಸಗಳನ್ನು ಮಾಡುವಾಗ ಒಂದಿಷ್ಟು ಸೂಕ್ಷ್ಮ ಕೌಶಲಗಳ ಅಗತ್ಯವಿರುತ್ತದೆ. ಅದನ್ನೇ ಫೈನ್ ಮೋಟರ್ ಸ್ಕಿಲ್ಸ್ ಎನ್ನುತ್ತೇವೆ. ಇಂಥವುಗಳ ವೃದ್ಧಿಗೆ ಗೀಚುವುದು ನೆರವಾಗುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಲು, ಸ್ವಾಸ್ಥ್ಯ ವೃದ್ಧಿಸಲು, ಗಮನ ಕೇಂದ್ರೀಕರಿಸಲು, ಸೃಜನಶೀಲತೆ ಹೆಚ್ಚಲು, ಅಭಿವ್ಯಕ್ತಿ ಸಾಮರ್ಥ್ಯ ತಂತಾನೇ ರೂಪುಗೊಳ್ಳಲು- ಹೀಗೆ ಬಹಳಷ್ಟು ಲಾಭಗಳಿವೆ ಗೀಚುವುದರಿಂದ. ದೈಹಿಕ ಲಾಭಗಳಿಗಿಂತ ಇದರಲ್ಲಿ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಲಾಭಗಳಿವೆ.
ಗೀಚಲಿ ಮಕ್ಕಳು
ನಮ್ಮ ಆಲೋಚನೆಗಳನ್ನು ಸುಲಭಕ್ಕೆ ಅರ್ಥವಾಗದ ರೀತಿಯಲ್ಲಿ ಹೀಗೆ ಗೀಚುವುದರಿಂದ ಬುದ್ಧಿಮತ್ತೆಯ ಬೆಳವಣಿಗೆಯನ್ನೂ ಸಾಧಿಸಬಹುದಂತೆ. ಹಾಗಾಗಿ ಮಕ್ಕಳು ಬೇಕಾಬಿಟ್ಟಿ ಗೀಚುತ್ತಿದ್ದರೆ, ಅವರಿಗೆ ಬೈದು, ಗದರಿಸಿ ಅದನ್ನು ನಿಲ್ಲಿಸಬೇಡಿ. ಅವರಿಗೆ ಗೀಚಲು ಬಿಡಿ ಎನ್ನುವುದು ಪರಿಣಿತರ ಸಲಹೆ. ʻಸುಮ್ನೆ ಏನೋ ಗೀಚ್ತಾಳೆ, ಪಾಠದ ಬಗ್ಗೆ ಗಮನವೇ ಇರಲ್ಲʼ ಎಂಬ ತರಕಾರೂ ನಿಜವಲ್ಲ. ಈ ವಕ್ರರೇಖೆಗಳಿಂದಲೇ ಬುದ್ಧಿ ನೇರವಾಗುತ್ತದೆ, ಮೊನಚಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಎಂಬುದು ಅಧ್ಯಯನಗಳಲ್ಲಿ ಸಾಬೀತಾಗಿದೆ.
ಇದನ್ನು ಓದಿ:Kidney Health: ಸಕ್ಕರೆ-ಉಪ್ಪು: ಕಿಡ್ನಿಗೆ ಯಾವುದು ಹಿತಕರ?
ಚಿಕಿತ್ಸಕ ಗುಣವಿದೆ
ನಮ್ಮ ಮೆದುಳು ಮತ್ತು ಶರೀರ ತಮ್ಮಷ್ಟಕ್ಕೇ ತಾವು ಮಾಡುವ ಕೆಲಸವಿದು. ಅಂದರೆ ನಮ್ಮ ಜಾಗೃತ ಮನಸ್ಸಿನ ಪರಿಧಿಯ ಹೊರಗಿನದು. ಒಂದು ರೀತಿಯಲ್ಲಿ ಹಗಲುಗನಸು ಕಾಣುವಂತೆ, ನಮಗರಿವಿಲ್ಲದೆಯೇ ನಡೆಯುವ ಕ್ರಿಯೆ. ಹಾಗಾಗಿಯೇ ಇದಕ್ಕೆ ಚಿಕಿತ್ಸಕ ಗುಣವಿದೆ ಎನ್ನುತ್ತಾರೆ ತಜ್ಞರು. ಅಂದರೆ ನೆನಪು ವೃದ್ಧಿಸಿಕೊಳ್ಳಲು ಅಥವಾ ಮಡುಗಟ್ಟಿರುವ ಭಾವನೆಗಳು ಹೊರಹೋಗಿ ಮನಸ್ಸು ಹಗುರಾಗಲು- ಇಂಥ ಕೆಲವು ಪ್ರಯೋಜನಗಳು ಗೀಚುವುದರಲ್ಲಿ ಇವೆಯಂತೆ. ಕೆಲವು ಕ್ಲಿಷ್ಟ ಮಾನಸಿಕ ಸಮಸ್ಯೆಗಳನ್ನು ಡೂಡ್ಲಿಂಗ್ ಮೂಲಕ ಬಗೆಹರಿಸಿರುವ ಉದಾಹರಣೆಗಳೂ ಇವೆ. ಅದರಲ್ಲೂ ಯಾವುದೋ ಜ್ಞಾನದಲ್ಲಿ, ಕಾಗದದ ಮೇಲೆ ಇಟ್ಟ ಪೆನ್ನು ಎತ್ತದಂತೆ ಎಷ್ಟೋ ಹೊತ್ತು ಗೀಚುತ್ತಿರುವುದಂತೂ ಒಂಥರಾ ಧ್ಯಾನ ಮಾಡಿದ ಫಲಿತಾಂಶ ಕೊಡಬಲ್ಲದು ಎನ್ನುವುದು ಗ್ರಾಫಾಲಜಿಸ್ಟ್‌ಗಳ ಅಭಿಮತ.