ನವದೆಹಲಿ, ಫೆ. 23: ಬ್ರಾಹ್ಮಿ ಎಲೆ (Brahmi leaves) ಅಥವಾ ಒಂದೆಲಗ ಎಂದು ಕರೆಯಲ್ಪಡುವ ಸೊಪ್ಪಿನ ಬಗ್ಗೆ ನೀವು ಕೇಳಿರಬಹುದು. ಇದೊಂದು ಪ್ರಸಿದ್ಧ ಆಯುರ್ವೇದ ಗಿಡ ಮೂಲಿಕೆಯಾಗಿದ್ದು ಪೂರ್ವಜರ ಕಾಲದಿಂದಲೂ ಇದರ ಬಳಕೆ ಇದೆ. ಹಳ್ಳಿಗಳಲ್ಲಿ ಮನೆ ಮುಂದೆ ಅಥವಾ ಗದ್ದೆಯ ಹತ್ತಿರ ಹೇರಳವಾಗಿ ದೊರೆಯುವ ಇದರಲ್ಲಿ ಹಲವು ಆರೋಗ್ಯ ಲಾಭಗಳಿವೆ. ಬ್ರಾಹ್ಮಿ ಎಲೆ ಆರೋಗ್ಯ ಸುಧಾರಣೆ ಜತೆಗೆ ನೆನಪಿನ ಶಕ್ತಿ ಹೆಚ್ಚಿಸಲು, ಮೆದುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಪೌಷ್ಟಿಕ ತಜ್ಞರು ಬ್ರಾಹ್ಮಿಯ ಅದ್ಭುತ ಪ್ರಯೋಜನಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.
ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಳ
ಸಂಶೋಧನೆಯ ಪ್ರಕಾರ ಬ್ರಾಹ್ಮಿ ಎಲೆಯಲ್ಲಿ ಬ್ಯಾಕೋಸೈಡ್‌ಗಳು ಎಂಬ ಸಕ್ರಿಯ ಸಂಯುಕ್ತಗಳಿವೆ. ಇವು ನರಕೋಶಗಳ ನಡುವಿನ ಸಂವಹನವನ್ನು ಸಕ್ರಿಯಗೊಳಿಸಲು ಮತ್ತು ಮೆದುಳಿನ ಕೋಶಗಳನ್ನು ಆ್ಯಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಯಾವುದೇ ವಿಷಯಗಳನ್ನು ಬೇಗನೆ ಗ್ರಹಿಸಲು ಮತ್ತು ದೀರ್ಘಕಾಲ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ನೈಸರ್ಗಿಕ ಒತ್ತಡ ನಿವಾರಣೆ
ಬ್ರಾಹ್ಮಿ ಅಡಾಪ್ಟೋಜೆನಿಕ್ ಗುಣಲಕ್ಷಣ ಹೊಂದಿದ್ದು ಒತ್ತಡ ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಮೂಲಿಕೆಯು ದೇಹದ ಪ್ರಾಥಮಿಕ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಅದೇ ರೀತಿ ಸಿರೊಟೋನಿನ್ ಮತ್ತು ಡೋಪ ಮೈನ್‌ನಂತಹ ಮನಸ್ಥಿತಿ, ನೆನಪು ಶಕ್ತಿ ಮತ್ತು ಕಲಿಕೆಗೆ ಸಹಾಯ ಮಾಡುತ್ತದೆ.
ತೂಕ ಇಳಿಸುವುದಕ್ಕೆ ನುಗ್ಗೆ ನೆರವಾಗುವುದೇ? ಯಾವ ರೀತಿ ಬಳಸಿದರೆ ಉತ್ತಮ?
ಭಾವನಾತ್ಮಕ ಸಮತೋಲನ ಕಾಪಾಡುತ್ತದೆ
ಬ್ರಾಹ್ಮಿ ಮನಸ್ಥಿತಿ ನಿಯಂತ್ರಣ ಮತ್ತು ಭಾವನಾತ್ಮಕ ಸ್ಥಿತಿಸ್ಥಾಪಕತ್ವವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನಲ್ಲಿರುವ ನರಗಳನ್ನು ಸಮತೋಲನಗೊಳಿಸಿ, ಧನಾತ್ಮಕ ಚಿಂತನೆ ಹೆಚ್ಚಿಸಿ ಉತ್ತಮ ಮೂಡ್ ಬರಲು ಪ್ರೇರೇಪಿಸುತ್ತದೆ.
ಆಕರ್ಷಕ ಚರ್ಮ
ಚರ್ಮವು ಆಕರ್ಷಕವಾಗಿ ಹೊಳೆಯಲು ಬ್ರಾಹ್ಮಿ ಉಪಯುಕ್ತವ. ಬ್ರಾಹ್ಮಿ ಎಲೆಯನ್ನು ನೀವು ಸೌಂದರ್ಯ ವರ್ಧಕವಾಗಿ ಬಳಸಿದರೆ ತ್ವಚೆಯು ಯಾವುದೇ ಅಡ್ಡ ಪರಿಣಾಮವಿಲ್ಲದೆ ಹೊಳೆಯುತ್ತದೆ.
ಬ್ರಾಹ್ಮಿಯನ್ನು ಹೇಗೆ ಬಳಸಬಹುದು?
- ಕ್ಯಾಪ್ಸುಲ್ ಅಥವಾ ಟಾನಿಕ್ ರೂಪದಲ್ಲಿ ಇದನ್ನು ಸೇವಿಸಬಹುದು.
- ಒಂದು ಕಪ್ ಬ್ರಾಹ್ಮಿ ಚಹಾ ಕುಡಿಯುವುದು ಮನಸ್ಸಿಗೆ ಹಿತ ನೀಡುತ್ತದೆ.
- ಬ್ರಾಹ್ಮಿ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
- ಒಂದೆಲಗದ ಚಟ್ನಿ, ತಂಬುಳಿ ಮಾಡಿಯೂ ಸೇವಿಸಬಹುದು.