ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಋತು ಬದಲಾವಣೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳೇನು?

Health Tips: ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಮಯ. ಇದೀಗ ಚಳಿಗಾಲ ಮುಗಿದಿದೆ, ಬೇಸಿಗೆಯಿನ್ನೂ ಬರುತ್ತಿದೆ. ಈ ದಿನಗಳಲ್ಲಿ ಈವರೆಗಿದ್ದ ಚಳಿಯ ವಾತಾವರಣಕ್ಕೆ ಹೊಂದಿ ಕೊಂಡಿದ್ದ ದೇಹವು ಇನ್ನು ಮೇಲೆ ಬರಲಿರುವ ಬಿಸಿಲಿನ ದಿನಗಳಿಗೆ ಹೊಂದಿಕೊಳ್ಳಬೇಕು. ಪರಿಸರ ದಲ್ಲಿದ್ದ ತಾಪಮಾನ, ಶುಷ್ಕತೆ, ಸೂರ್ಯನ ಬೆಳಕು ಮುಂತಾದ ಎಲ್ಲವೂ ಇನ್ನೀಗ ಪೂರ್ಣವಾಗಿ ಬದಲಾಗಲಿವೆ. ಇದಕ್ಕೆ ತಕ್ಕಂತೆ ನಮ್ಮ ದೇಹವೂ ಬದಲಾಗಬೇಕಲ್ಲವೇ? ಇಂಥ ಸಮಯದಲ್ಲಿ ಕಾಡುವಂಥ ಆರೋಗ್ಯ ಸಮಸ್ಯೆಗಳು ಯಾವುವು? ಅವುಗಳನ್ನು ಹೇಗೆ ನಿರ್ವಹಿಸಬೇಕು?

ಸಂಗ್ರಹ ಚಿತ್ರ

ಬೆಂಗಳೂರು: ಸಂಕ್ರಮಣವೆಂದರೆ ಕೇವಲ ಸಂಕ್ರಾಂತಿ ಹಬ್ಬದ ಕಾಲವೆಂದಲ್ಲ, ಅದೊಂದು ಬದಲಾವಣೆಯ ಕಾಲ. ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಮಯ. ಇದೀಗ ಚಳಿಗಾಲ ಮುಗಿದಿದೆ, ಬೇಸಿಗೆಯಿನ್ನೂ ಬರುತ್ತಿದೆ. ಈ ದಿನಗಳಲ್ಲಿ ಈವರೆಗಿದ್ದ ಚಳಿಯ ವಾತಾವರಣಕ್ಕೆ ಹೊಂದಿಕೊಂಡಿದ್ದ ದೇಹವು ಇನ್ನು ಮೇಲೆ ಬರಲಿರುವ ಬಿಸಿಲಿನ ದಿನಗಳಿಗೆ ಹೊಂದಿಕೊಳ್ಳಬೇಕು. ಪರಿಸರದಲ್ಲಿದ್ದ ತಾಪಮಾನ, ಶುಷ್ಕತೆ, ಸೂರ್ಯನ ಬೆಳಕು ಮುಂತಾದ ಎಲ್ಲವೂ ಇನ್ನೀಗ ಪೂರ್ಣವಾಗಿ ಬದಲಾಗಲಿವೆ. ಇದಕ್ಕೆ ತಕ್ಕಂತೆ ನಮ್ಮ ದೇಹವೂ ಬದಲಾಗ ಬೇಕಲ್ಲವೇ? ಇಂಥ ಸಮಯದಲ್ಲಿ ಕಾಡುವಂಥ ಆರೋಗ್ಯ ಸಮಸ್ಯೆಗಳು (Health Tips) ಯಾವುವು? ಅವುಗಳನ್ನು ಹೇಗೆ ನಿರ್ವಹಿಸಬೇಕು? ಇವೆಲ್ಲವನ್ನೂ ಮೀರಿ ನಮ್ಮ ದೇಹ ನಿರೋಗಿಯಾಗಿರುವಂತೆ ಕಾಪಾಡಿಕೊಳ್ಳುವುದು ಹೇಗೆ?

ಸಾಮಾನ್ಯವಾಗಿ ಈ ದಿನಗಳಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ಗಮನಿಸೋಣ. ಹೊಟ್ಟೆಯ ಆರೋಗ್ಯ ಏರುಪೇರಾಗುವುದು, ಮೂಡ್‌ ಬದಲಾವಣೆ, ನೆಗಡಿ-ಕೆಮ್ಮು, ನಿದ್ರಾಹೀನತೆ, ಚರ್ಮದ ತೊಂದರೆಗಳು, ಅಲರ್ಜಿಗಳು, ಪ್ರತಿರೋಧಕ ಶಕ್ತಿ ಕುಂಠಿತವಾಗುವುದು- ಇಂಥವೆಲ್ಲ ಋತು ಬದಲಾವಣೆಯ ದಿನಗಳಲ್ಲಿ ಸಾಮಾನ್ಯವಾಗಿ ಕಾಣುವಂಥವು.

ಅಲರ್ಜಿಗಳು: ಹೂ ಬಿಡುವ ಕಾಲದಲ್ಲಿ ಅಲರ್ಜಿಗಳ ಕಾಟ ಸಹಜವಾಗಿಯೇ ಹೆಚ್ಚು. ಎಲ್ಲೆಡೆ ಪರಾಗಗಳ ಸಾಂದ್ರತೆ ಹೆಚ್ಚುವುದರಿಂದ ಈ ಸಮಸ್ಯೆ ಎದುರಾಗುತ್ತದೆ. ಪುಟ್ಟ ಹುಲ್ಲು, ಗಿಡಗಳಿಂದ ಹಿಡಿದು ಮರ-ಬಳ್ಳಿಗಳವರೆಗೆ ಎಲ್ಲವೂ ಪರಾಗಗಳನ್ನು ವಾತಾವರಣಕ್ಕೆ ಸೇರಿಸುತ್ತಲೇ ಇರುತ್ತವೆ. ಇದರಿಂದ ನೆಗಡಿ, ಕೆಮ್ಮು, ಕಣ್ಣುರಿ, ಗಂಟಲುರಿ, ಮೂಗು ಕಟ್ಟುವುದು ಮುಂತಾದ ಹಲವು ರೀತಿಗಳಲ್ಲಿ ಅಲರ್ಜಿಯ ಲಕ್ಷಣಗಳು ಕಾಣುತ್ತವೆ.

ಶ್ವಾಸಕೋಶಗಳ ಸೋಂಕು: ಈ ಸಂದರ್ಭಗಳಲ್ಲಿ ತಾಪಮಾನದ ಏರುಪೇರು ಸಹ ಹಿಂದೆಂದೂ ಇಲ್ಲದಷ್ಟು ಕಂಡುಬರುತ್ತದೆ. ನಡುಮಧ್ಯಾಹ್ನಕ್ಕೆ ಸುಡು ಬಿಸಿಲಿನ ಅನುಭವವಾದರೆ ಬೆಳಗಿನ ಜಾವಕ್ಕೆ ಬೆಚ್ಚಗಿನ ಹೊದಿಕೆ ಬೇಕೆನಿಸಿದರೆ ಅಚ್ಚರಿಯಿಲ್ಲ. ವಾತಾವರಣ ಒಮ್ಮೆ ಶುಷ್ಕ ಎನಿಸಿದರೆ, ಇನ್ನೊಮ್ಮೆ ಪರಾಗಗಳ ಸಾಂದ್ರತೆ ತೀವ್ರ ಎನಿಸುತ್ತದೆ. ಇಂಥ ದಿನಗಳಲ್ಲಿ ಮೂಗಿನಿಂದ ಹಿಡಿದು ಶ್ವಾಸಕೋಶಗಳವರೆಗಿನ ಭಾಗಕ್ಕೆ ಸೋಂಕುಗಳ ಹಾವಳಿ ಹೆಚ್ಚಬಹುದು.

Health Tips: ಗರ್ಭಾವಸ್ಥೆಯಲ್ಲಿ ಬಿಪಿ-ಶುಗರ್ ಇದ್ದರೆ ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ರೈನೈಟಿಸ್:‌ ಅಲರ್ಜಿಯ ಸ್ವರೂಪಗಳು ಹಲವು. ಕಣ್ಣು-ಮೂಗಲ್ಲಿ ಒಂದೇ ಸಮನೆ ನೀರು ಸುರಿಯುವುದು, ಸತತವಾಗಿ ಸೀನು ಮುಂತಾದ ರೈನೈಟಿಸ್‌ ಲಕ್ಷಣಗಳು ಸಹ ಕಾಣಬಹುದು. ಮುಖ್ಯವಾಗಿ ವಾತಾವರಣದಲ್ಲಿರುವ ಧೂಳು ಮತ್ತಿತರ ಮಾಲಿನ್ಯಗಳು, ಶುಷ್ಕತೆ ಮತ್ತು ಪರಾಗಗಳಿಂದ ಇಂಥ ತೊಂದರೆಗಳು ತಲೆದೋರುತ್ತವೆ.

ಅಸ್ತಮಾ: ಋತು ಬದಲಾಗುವ ದಿನಗಳಲ್ಲಿ ಶ್ವಾಸಕೋಶದ ಉರಿಯೂತ ಬೆಂಬತ್ತುತ್ತದೆ. ಇದರಿಂದ ಉಸಿರಾಟಕ್ಕೆ ಕಷ್ಟವಾಗಿ, ಕೆಮ್ಮು-ದಮ್ಮುಗಳು ಗಂಟು ಬೀಳುತ್ತವೆ. ವಾಯು ಮಾಲಿನ್ಯ, ಒಣಹವೆ, ಪರಾಗಗಳೆಲ್ಲ ಇದಕ್ಕೆ ಮೂಲ ಕಾರಣಗಳು. ಒಮ್ಮೆ ಬಿಸಿಲು, ಇನ್ನೊಮ್ಮೆ ಚಳಿ, ಮತ್ತೆ ಮೋಡ- ಹೀಗೆ ವಾತಾವರಣದ ಏರಿಳಿತಗಳು ಆಸ್ತಮಾ ಲಕ್ಷಣಗಳನ್ನು ಹೆಚ್ಚಿಸುತ್ತವೆ. ಈ ಸಮಸ್ಯೆ ಇರುವವರು ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು, ಹೇಳಿದ ಔಷಧಿ-ಪಥ್ಯಗಳನ್ನು ಪಾಲಿಸುವುದು ಸೂಕ್ತ.

ಕಲುಷಿತ ಆಹಾರ: ಚಳಿಯ ದಿನಗಳಲ್ಲಿ ಆಹಾರ ಬೇಗ ಕೆಡುವುದಿಲ್ಲ. ಆದರೆ ವಾತಾವರಣದ ಉಷ್ಣತೆ ಏರುತ್ತಿದ್ದಂತೆ ಆಹಾರದಲ್ಲಿ ಬ್ಯಾಕ್ಟೀರಿಯಗಳ ಬೆಳವಣಿಗೆ ಬೇಗನೆ ಆಗುತ್ತದೆ. ಪರಿಣಾಮ ಆಹಾರ ಇಟ್ಟಲ್ಲೆ ಕೆಡುವುದು ಸಾಮಾನ್ಯ. ಇದರಿಂದಲೂ ಅನಾರೋಗ್ಯ ಬರಬಹುದು, ಹೊಟ್ಟೆ ಹಾಳಾಗಬಹುದು. ಹಾಗಾಗಿ ಆಹಾರವನ್ನು ಕೆಡದಂತೆ ಸಂರಕ್ಷಿಸಿಕೊಳ್ಳುವುದು ಅಗತ್ಯವಾಗುತ್ತದೆ.

ಚರ್ಮದ ಅಲರ್ಜಿಗಳು: ಚಳಿಗಾಲದಲ್ಲಿ ಒಣಗಿ ನಿಂತಿದ್ದ ಸಣ್ಣ-ದೊಡ್ಡ ಸಸ್ಯಾದಿಗಳೆಲ್ಲ ಚಿಗುರುವ ಸಮಯವಿದಲ್ಲವೇ. ಕೆಲವು ಚಿಗುರುಗಳು ಅಲರ್ಜಿ ಉಂಟು ಮಾಡಬಹುದು. ಕಾರಣ, ಸಣ್ಣ ಚಿಗುರೆಲೆಗಳು ಯಾವ ಗಿಡದ್ದು ಎಂಬುದನ್ನು ಗುರುತಿಸಲು ಕಷ್ಟವಾಗುತ್ತದೆ. ಹಾಗಾಗಿ ಮನೆಯ ಸುತ್ತಲಿನ ಜಾಗದಲ್ಲಿ ಕಳೆ ಹೆಚ್ಚಿದ್ದರೆ, ಅದನ್ನು ತೆಗೆಸಿ ಸ್ವಚ್ಛಗೊಳಿಸುವುದು ಅಗತ್ಯ.

ಏನು ಮಾಡಬಹುದು?: ಋತುಮಾನದ ಅಲರ್ಜಿಯಂಥ ಸಮಸ್ಯೆಗಳಿಂದ ನರಳುತ್ತಿರಬೇಕೆಂಬ ನಿಯಮವಿಲ್ಲವಲ್ಲ. ಮೊದಲಿಗೆ ಸತ್ವಭರಿತ ಆಹಾರ, ಸಾಕಷ್ಟು ನೀರು ಮತ್ತು ವಿಶ್ರಾಂತಿಯತ್ತ ಗಮನ ನೀಡಿ. ಆಹಾರದಲ್ಲಿ ವಿಟಮಿನ್‌ ಸಿ ಮತ್ತು ಡಿ ಕಡಿಮೆಯಾಗದಿರಲಿ. ಏಳೆಂಟು ತಾಸುಗಳ ನಿದ್ದೆಯೂ ತಪ್ಪದಿರಲಿ. ಇದಲ್ಲದೆ, ವಾತಾವರಣ ಶುಷ್ಕವಾಗಿದ್ದಾಗ ಮನೆಯಲ್ಲಿ ಹ್ಯುಮಿಡಿಫಯರ್‌ ಬಳಸಿ ತೇವಾಂಶ ಹೆಚ್ಚಿಸುವುದು ಸೂಕ್ತ. ಪರಾಗಗಳ ಸಾಂದ್ರತೆ ತೀವ್ರವಾದರೆ ಗಾಳಿ ಸ್ವಚ್ಛ ಮಾಡುವುದಕ್ಕೆ ಏರ್‌ ಪ್ಯೂರಿಫಯರ್‌ ಬಳಸಿ. ಗಾರ್ಗಲ್‌ ಮತ್ತು ನೇತಿಯಂಥ ಕ್ರಮಗಳು ಕ್ರಮವಾಗಿ ಗಂಟಲು, ಮೂಗು ಸ್ವಚ್ಛಗೊಳಿಸಿ, ಅಲರ್ಜಿ ಕಣಗಳು ದೇಹ ಪ್ರವೇಶಿಸುವುದನ್ನು ಮಿತಗೊಳಿಸುತ್ತವೆ. ಪರಾಗಗಳ ಸಾಂದ್ರತೆ ತೀವ್ರವಾಗಿದ್ದ ದಿನಗಳಲ್ಲಿ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು ಒಳಿತು. ಅಪರಿಚಿತ ಜಾಗಗಳಿಗೆ ಅಡ್ಡಾಡಲು ಹೋಗುವಾಗ ತುಂಬು ವಸ್ತ್ರಗಳನ್ನು ಧರಿಸುವುದರಿಂದ ಸೊಳ್ಳೆ, ಉಣ್ಣಿಯಂಥ ಕೀಟಗಳ ಕಡಿತದಿಂದ ಪಾರಾಗಬಹುದು. ಬಿಸಿಲಿನ ತಾಪಕ್ಕೆ ಸುಡುವುದರಿಂದಲೂ ತಪ್ಪಿಸಿಕೊಳ್ಳಬಹುದು. ಅಲರ್ಜಿ ಹೆಚ್ಚಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಕ್ಷೇಮ. ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ನೀಡಿದರೆ, ಸೋಂಕುಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.