- ಡಿ.ಆರ್. ಭವ್ಯಾ ವಿಶ್ವನಾಥ್
ಅಸಾಹಾಯಕ, ನಿರಾಶಾದಾಯಕ, ನಿಷ್ಪ್ರಯೋಜಕ ಮನಸ್ಥಿತಿ-ಈ 3 ಅಂಶಗಳನ್ನು ಆತ್ಮಹತ್ಯೆ ಯತ್ನದಲ್ಲಿರುವ ವ್ಯಕ್ತಿಯ ನಡತೆ ಮತ್ತು ಮನಸ್ಥಿತಿಯಲ್ಲಿ ನಾವು ಕಾಣಬಹುದು. ಈ ಕಾರಣಗಳಿಂದಾಗಿ ವ್ಯಕ್ತಿಯು ಉದ್ರೇಕಗೊಂಡು ಸಾಮಾಜಿಕವಾಗಿ ಪ್ರತ್ಯೇಕತೆ ಅಥವಾ ಒಂಟಿತನ ಅನುಭವಿಸಿ ಕೊನೆ ಹಂತದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಆತ್ಮಹತ್ಯೆಯ ಯತ್ನದಲ್ಲಿರುವ ವ್ಯಕ್ತಿಗಳು ಕೆಲವು ಸೂಚನೆಗಳನ್ನು ಕೊಡುತ್ತಾರೆ (Mana Santwana). ಈ ಸೂಚನೆಗಳನ್ನು ಸುತ್ತಮುತ್ತಲಿರುವವರು ಸೂಕ್ಷ್ಮವಾಗಿ ಗಮನಿಸಿ ತಿಳಿದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬಹುದು. ನೀವು ಹೀಗೆ ಮಾಡಿದ್ದೆ ಆದರೆ, ನಿಜವಾಗಿಯೂ ಒಂದು ಜೀವ ಉಳಿಸಿದಂತಾಗುತ್ತದೆ!
ಆತ್ಮಹತ್ಯೆಯ ಕಾರಣಗಳನ್ನು ತಿಳಿದುಕೊಳ್ಳಿ
ಆತ್ಮಹತ್ಯೆಯ ಆಲೋಚನೆಗಳು ಹಲವು ಕಾರಣಗಳನ್ನು ಹೊಂದಿರುತ್ತವೆ. ಹೆಚ್ಚಾಗಿ, ನೀವು ಜೀವನದಲ್ಲಿ ಅಗಾಧವಾದ ಪರಿಸ್ಥಿತಿಯನ್ನು ಎದುರಿಸಿದಾಗ ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬ ಭಾವನೆಯ ಪರಿಣಾಮವೇ ಆತ್ಮಹತ್ಯಾ ಆಲೋಚನೆಗಳು. ಭವಿಷ್ಯದ ಬಗ್ಗೆ ನಿಮಗೆ ಭರವಸೆ ಇಲ್ಲದಿದ್ದರೆ, ಆತ್ಮಹತ್ಯೆಯೇ ಏಕೈಕ ಪರಿಹಾರ ಎಂದು ನೀವು ಭಾವಿಸಬಹುದು. ಆತ್ಮಹತ್ಯೆಗೆ ಆನುವಂಶಿಕ ಸಂಬಂಧವೂ ಇರಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ಜನರು ಅಥವಾ ಆತ್ಮಹತ್ಯಾ ಆಲೋಚನೆಗಳು ಅಥವಾ ನಡವಳಿಕೆಯನ್ನು ಹೊಂದಿರುವ ಜನರು ಆತ್ಮಹತ್ಯೆಯ ಕೌಟುಂಬಿಕ ಇತಿಹಾಸವನ್ನು ಹೊಂದಿರುವ ಸಾಧ್ಯತೆ ಹೆಚ್ಚು.
ಸಾಮಾನ್ಯವಾಗಿ ಖಿನ್ನತೆ, ಶಿಕ್ಷಣದ ಒತ್ತಡ, ಮಾನಸಿಕ ಒತ್ತಡ, ದೈಹಿಕ ಆನಾರೋಗ್ಯ, ಆರ್ಥಿಕ ಸಮಸ್ಯೆ, ಪ್ರೀತಿ ಮತ್ತು ಕೆಲವು ಕಾರ್ಯಗಳ ವೈಫಲ್ಯಗಳ ಕಾರಣಗಳಿಂದ ಕೂಡ ಕೆಲವರು ಆತ್ಮಹತ್ಯೆಯ ಯತ್ನಮಾಡುತ್ತಾರೆ. ಬಹುಶಃ ಈ ಸಮಸ್ಯೆಗಳನ್ನು ನೇರವಾಗಿ ಸುತ್ತಮುತ್ತಲಿರುವವರು ಬಗೆಹರಿಸಕ್ಕಾಗದೇ ಇದ್ದರೂ, ಖಂಡಿತವಾಗಿಯೂ ಇವುಗಳ ಹಿಂದಿರುವ ವ್ಯಕ್ತಿಯ ಅಸಾಯಕತನ, ಹತಾಶೆ ಮತ್ತು ನಿಷ್ಪ್ರಯೋಜಕತೆಯನ್ನು ಸಮಪರ್ಕವಾಗಿ ಅರ್ಥ ಮಾಡಿಕೊಳ್ಳಬಲ್ಲರು.
ಕೆಲವು ಸಮಸ್ಯೆಗಳಿಗೆ ಪರಿಹಾರವಿರುತ್ತದೆ. ಆದರೆ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಕರೋನ ವೈರಸ್, ಕ್ಯಾನ್ಸರ್‌ನಂತಹ ತೀವ್ರವಾದ ದೈಹಿಕ ಕಾಯಿಲೆಗಳು, ಅಂಗವಿಕಲತೆ, ಕೆಲವು ವೈಫಲ್ಯಗಳು, ಆತ್ಮೀಯರ ಸಾವು ಮುಂತಾದ ಸಮಸ್ಯೆಗಳಿಗೆ ಪರಿಹಾರವಿಲ್ಲ. ಆದರೆ ಈ ಸಮಸ್ಯೆಗಳನ್ನು ಒಪ್ಪಿಕೊಂಡು , ಇದರಿಂದಾಗುವ ತೀವ್ರವಾದ ನೋವನ್ನು ನಿಭಾಯಿಸಿಕೊಂಡು ಬದುಕುವುದೇ ನಿಜವಾದ ಕಲೆ. ಆದರೆ ಈ ಕಲೆಯನ್ನು ಎಲ್ಲರಲ್ಲೂ ಕಾಣಲು ಸಾಧ್ಯವಾಗುವುದಿಲ್ಲ. ಕೆಲವರು ಸಮಸ್ಯೆಯಿಂದ ಬಳಲುತ್ತಿದ್ದಾಗ, ಪರಿಹಾರ ಸಿಗದೇ, ಮುಂದಿನ ದಾರಿ ತೋಚದೆ ತನ್ನ ಸಮಸ್ಯೆಗೆ ಪರಿಹಾರವೇ ಇಲ್ಲ, ಯಾರೂ ಕೂಡ ತನಗೆ ಸಹಾಯ ಮಾಡಲಾರರು, ತನ್ನ ಸಂಕಟವನ್ನು ಯಾರು ಅರ್ಥ ಮಾಡಿಕೊಳ್ಳಲಾರರು, ತಾನು ಈ ಜಗತ್ತಿನ್ನಲ್ಲಿ ಒಂಟಿಯಾಗಿದ್ದೇನೆ ಎಂಬ ಮನಸ್ಥಿತಿ ತಲುಪಿ, “ನಾನು ಬದುಕುವುದೇ ವ್ಯರ್ಥ, ನಾನು ಬದುಕುವುದಕ್ಕೆ ಅರ್ಹನಲ್ಲ” ಎಂಬ ತೀರ್ಮಾನಕ್ಕೆ ಬಂದು ಆತ್ಮಹತ್ಯೆಗೆ ಶರಣಾಗುತ್ತಾರೆ.
ಗಂಭೀರ ಹಾಗೂ ಸೂಕ್ಷ್ಮವಾದ ಮನಸ್ಥಿತಿ ಇವರದ್ದಾಗಿರುತ್ತದೆ. ಯಾವುದೇ ಒಂದು ಸಣ್ಣ ಕೊಂಕು, ಅಪವಾದ, ವ್ಯಂಗ್ಯ, ನಿಂದನೆ, ನಕಾರಾತ್ಮಕ ನಿರ್ಣಯ ನಡತೆ ಅಥವ ಹೇಳಿಕೆಗಳನ್ನು ಸಹಿಸುವ ಶಕ್ತಿ ಇವರಲ್ಲಿ ಇರುವುದಿಲ್ಲ.
ಈ ಸುದ್ದಿಯನ್ನೂ ಓದಿ: Mana Santwana: ನಮ್ಮ ಬದುಕೇ ಹಬ್ಬ; ನಿತ್ಯವೂ ನಿತ್ಯೋತ್ಸವ
ಕೆಲವರಿಗೆ ಆತ್ಮಹತ್ಯೆ ಆಲೋಚನೆಗಳು ಬರಬಹುದು. ಈ ಆಲೋಚನೆಗಳು ಬಂದಾಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಖಚಿತವಾಗಿ ಹೇಳುವುದಾಕ್ಕಾಗುವುದಿಲ್ಲ. ಇವು ಬರಿಯಾ ಆಲೋಚನೆಗಳಾಗಿರಬಹುದು ಹೊರತು ಯಾವುದೇ ಯೋಜನೆಗಳಿರುವುದಿಲ್ಲ. ಆದರೆ ಮತ್ತೆ ಕೆಲವರು ಆತ್ಮಹತ್ಯೆಯ ಯೋಜನೆ (Plan) ಯನ್ನು ಬಹಳ ನಿಖರವಾಗಿಮಾಡಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಇಂಥವರು, ತಮ್ಮ ಸಮಸ್ಯೆ ಅಥವ ಬಿಕ್ಕಟ್ಟಿನ ಪರಿಸ್ಥಿತಿಗೆ ಆತ್ಮಹತ್ಯೆಯೇ ಪರಿಹಾರವೆಂದು ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂಥವರು ತಮಗೆ ಗೊತ್ತೋ ಅಥವ ಗೊತ್ತಿಲದೆಯೋ ಆತ್ಮಹತ್ಯೆಯ ಸೂಚನೆಗಳನ್ನು ಕೊಡುತ್ತಿರುತ್ತಾರೆ. ಈ ಸುಳಿವುಗಳನ್ನು ಸುತ್ತಮುತ್ತಲಿರುವ ಜನಗಳು ಸೂಕ್ಷ್ಮವಾಗಿ ಗಮನಿಸಿದರೆ ಮುಂದಾಗುವ ದೊಡ್ಡ ಅಪಾಯವನ್ನು ತಪ್ಪಿಸಬಹುದು.
ಆತ್ಮಹತ್ಯೆ ಎಚ್ಚರಿಕೆ ಚಿಹ್ನೆಗಳು ಅಥವಾ ಆತ್ಮಹತ್ಯಾ ಆಲೋಚನೆಗಳು ಹೀಗಿರುತ್ತವೆ:
ಸಾವು ಮತ್ತು ಬದುಕು ಕುರಿತಾಗಿ ಹೆಚ್ಚು ಆಲೋಚನೆಗಳನ್ಮು ಹೊಂದಿದ್ದು ಇದರ ಕುರಿತಾಗಿಯೂ ಕೂಡ ಹೆಚ್ಚು ಮಾತಾನಾಡುತ್ತಿರುತ್ತಾರೆ.
- ಆತ್ಮಹತ್ಯೆಯ ಬಗ್ಗೆ ಮಾತನಾಡುವುದು - ತನಗೆ ಸಾಯುವ ಬಯಕೆ ಇದೇ ಎಂದು ತಮ್ಮ ಮಾತಿನಲ್ಲಿ ಹೇಳಬಹುದು. ಉದಾಹರಣೆಗೆ, "ನನ್ನ ಬದುಕನ್ನು ಮುಗಿಸಬೇಕೆನಿಸುತ್ತದೆ”, "ನಾನು ಸತ್ತರೆ ಸಮಸ್ಯೆಯೇ ಇರುವುದಿಲ್ಲ" ಅಥವಾ "ನಾನು ಹುಟ್ಟದೇ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂಬಂತಹ ಹೇಳಿಕೆಗಳನ್ನು ನೀಡುವ ಸಾಧ್ಯತೆಯಿರುತ್ತದೆ.
- ತಾನು ದೊಡ್ಡ ಅಪರಾಧಿ, ಜೀವಿಸುವುದಕ್ಕೆ ಅಹ೯ನಲ್ಲ, ಸ್ವಯಂ ಪಾಪಪ್ರಜ್ಞೆ ಅಥವಾ ನಾಚಿಕೆ ಅವಮಾನ ಮನಸ್ಥಿತಿಯನ್ನು ಹೊಂದಿರುವ ಸಾಧ್ಯತೆ ಹೆಚ್ಚು.
- ತಾನು ಇತರರಿಗೆ ಹೊರೆಯಾಗಿದ್ದೇನೆಂದು ತಮ್ಮ ಮಾತು ಅಥವ ನಡುವಳಿಕೆಯಲ್ಲಿ ತೋರಿಸಬಹುದು.
- ತಮ್ಮ ಪ್ರಾಣವನ್ನು ತೆಗೆದುಕೊಳ್ಳಲು ಸಾಧನಗಳನ್ನು ಸಂಗ್ರಹಿಸುವುದು, ಉದಾಹರಣೆಗೆ ಬಂದೂಕು, ಮಾತ್ರೆಗಳು, ಹಗ್ಗ, ಕೆಮಿಕಲ್ಸ್ ಇತ್ಯಾದಿಗಳನ್ನು ಖರೀದಿಸಬಹುದು.
ಭಾವನಾತ್ಮಕ
- ಶೂನ್ಯತೆ, ಹತಾಶೆ, ಬಲೆಗೆ ಸಿಕ್ಕಿದ ಹಾಗೆ ಅಥವಾ ಬದುಕಲು ಅಥ೯ವನ್ನು ಕಳೆದುಕೊಂಡ ಮನಸ್ಥಿತಿಯನ್ನು ಕಾಣಬಹುದು
- ಅತ್ಯಂತ ದುಃಖ, ಹೆಚ್ಚು ಆತಂಕ, ಉದ್ರೇಕ ಅಥವಾ ಕೋಪದಿಂದ ತುಂಬಿರುತ್ತಾರೆ
- ವಿಪರೀತವಾದ ಮಾನಸಿಕ ನೋವನ್ನು ವ್ಯಕ್ತಪಡಿಸುತ್ತಾರೆ
ವ್ಯಕ್ತಿಯ ದಿನಚರಿ ಹಾಗೂ ನಡುವಳಿಕೆಯಲ್ಲಿ ಕಂಡುಬರುವಂತಹ ಬದಲಾವಣೆಗಳು:
ಆಹಾರ ಸೇವನೆ ಮಾಡದೇ ಇರುವುದು ಅಥವಾ ಅತಿಯಾಗಿ ಸೇವಿಸುವುದು, ರಾತ್ರಿ ನಿದ್ರೆ ಮಾಡದೇ ದಿನದಲ್ಲಿ ಸದಾ ಮಲಗಿರುವುದು, ದೈಹಿಕ ಆಲಸ್ಯ ಮತ್ತು ನಿರಾಸಕ್ತಿ (ದಿನಚರಿ ಮತ್ತು ಚಟುವಟಿಕೆಗಳಲ್ಲಿ), ಸ್ವಚ್ಛ ಉಡುಪು ಧರಿಸದೇ, ಸ್ವಯಂ ಕಾಲಜಿ, ಶಿಸ್ತುನ್ನು ಪಾಲಿಸದೇ ಇರುವುದು, ಧೂಮಪಾನ / ಮಾದಕ ದ್ರವ್ಯಗಳನ್ನು ಸೇವಿಸುವುದು, ನಿರಂತರವಾಗಿ ಫೋನ್/ಟಿವಿ/ಸಾಮಾಜಿಕ ಜಾಲಾತಾಣಗಳಲ್ಲಿ ತೊಡಗಿರುವುದು. ಅತಿಯಾದ ಕೋಪ ಮತ್ತು ಭಯ ವ್ಯಕ್ತ ಪಡಿಸುವುದು, ಹಿಂಸಾತ್ಮಕ ಅಥವ ದೌರ್ಜನ್ಯ ಪ್ರವೃತ್ತಿ ತೋರಿಸುವುದು, ಅತಿಯಾಗಿ ಮೌನದಿಂದಿರುವುದು ಮತ್ತು ಮಂಕಾಗಿರುವುದು ಇತ್ಯಾದಿ.
ದೀಢೀರ್ ಬದಲಾವಣೆಗಳು
- ಹೆಚ್ಚು ಒಂಟಿತನವನ್ನು ಬಯಸುವುದು ಮತ್ತು ಸಾಮಾಜಿಕ ಸಂಪರ್ಕದಿಂದ ಹಿಂದೆ ಸರಿಯುವುದು ಸಾಮಾನ್ಯವಾಗಿ ಕಂಡುಬರುವಂತಹ ಲಕ್ಷಣಗಳಲ್ಲಿ ಒಂದು.
- ಸ್ನೇಹಿತರಿಂದ ದೂರವಾಗುವುದು, ಮತ್ತೆ ಜನಗಳು ಸಿಗುವುದೇ ಇಲ್ಲವೆಂದು ವಿದಾಯ ಹೇಳುವುದು (ಗುಡ್ ಬೈ)
- ನೆಗೆಟೀವ್ ಮತ್ತು ಅತೀಯಾದ ವೈರಾಗ್ಯದ ಮಾತುಗಳನ್ನು ಆಡುವುದು ( ನೇರವಾಗಿ ಅಥವ ಸಾವಿನ ಬಗ್ಗೆ ಹೇಳಿಕೆ ನೀಡುವುದು)
- ಒಂದು ದಿನ ಭಾವನಾತ್ಮಕವಾಗಿ ಉನ್ಮಾದಗೊಂಡು, ಮರುದಿನ ತೀವ್ರವಾಗಿ ನಿರುತ್ಸಾಹಗೊಂಡಂತಹ ಮನಸ್ಥಿತಿಯಲ್ಲಿ ಬದಲಾವಣೆಗಳು
- ಸಾವು ಅಥವಾ ಹಿಂಸೆಯ ಬಗ್ಗೆ ನಿರಂತರವಾಗಿ ಚಿಂತಿಸುವುದು.
- ಹಳೆ ಹವ್ಯಾಸಗಳು / ಚಟುವಟಿಕೆಗಳನ್ನು ದೀಢೀರೆಂದು ಬಿಟ್ಟು ಬಿಡುವುದು.
- ತಮಗೆ ಬೇಕಾದ ವಸ್ತುಗಳನ್ನು ಬೇರೆಯವರಿಗೆ ಕಾರಣವಿಲ್ಲದೇ ನೀಡುವುದು.
- ಸ್ವಯಂ ಹೀಯಾಳಿಕೆ ಮತ್ತು ವ್ಯಂಗ್ಯವನ್ನು ಮಾಡಿ ಆತ್ಮ ಗೌರವಕ್ಕೆ ಹಾನಿ ಮಾಡಿಕೊಳ್ಳುವುದು.
- ಸಾಯುವ ಮಾರ್ಗಗಳ ಬಗ್ಗೆ ಪ್ಲಾನ್ ಅಥವಾ ಸಂಶೋಧನೆ ಮಾಡುವುದು.
- ಅತ್ಯಂತ ವೇಗವಾಗಿ ವಾಹನ ಚಲಾಯಿಸುವಂತಹ ಅಪಾಯಕಾರಿ ಅಪಾಯಗಳನ್ನು ತೆಗೆದುಕೊಳ್ಳುವುದು.
- ಇಂತಹವರಲ್ಲಿ ಆತ್ಮ ವಿಶ್ವಾಸದ ಕೊರತೆಯನ್ನು ಹೆಚ್ಚಾಗಿ ಕಾಣಬಹುದು ಮತ್ತು ಸುತ್ತಮುತ್ತಲಿನ ಜನಗಳನ್ನು ಸಂಶಯಾತ್ಮಕ ದೃಷ್ಟಿಯಿಂದ ನೋಡುವುದು ಮತ್ತು ಅವಿಶ್ವಾಸವನ್ನು ಹೊಂದಿರುತ್ತಾರೆ.
ಈ ಎಚ್ಚರಿಕೆ ಚಿಹ್ನೆಗಳು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ ಮತ್ತು ಅವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕೆಲವರು ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದರೆ, ಇನ್ನು ಕೆಲವರು ಆತ್ಮಹತ್ಯಾ ಆಲೋಚನೆಗಳು ಮತ್ತು ಭಾವನೆಗಳನ್ನು ರಹಸ್ಯವಾಗಿಡುತ್ತಾರೆ.
ಈ ಎಚ್ಚರಿಕೆ ಚಿಹ್ನೆಗಳು ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಅನ್ವಯಿಸಿದರೆ, ನಿರ್ಲಕ್ಷ್ಯ ಮಾಡದೇ ಸಾಧ್ಯವಾದಷ್ಟು ಬೇಗ ಆಪ್ತಸಲಹೆಗಾರರ ಅಥವ ಮನಶಾಸ್ತ್ರಜ್ಞರನ್ನು ಸಂಪರ್ಕಿಸಿ.
ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಮಾರ್ಗವಿಲ್ಲ ಮತ್ತು ನೋವನ್ನು ಕೊನೆಗೊಳಿಸಲು ಆತ್ಮಹತ್ಯೆಯೊಂದೇ ಏಕೈಕ ಮಾರ್ಗ ಎಂದು ನಿಮಗೆ ಅನಿಸಬಹುದು. ಆದರೆ ನಿಮ್ಮ ವೇದನೆಯನ್ನು ಅರ್ಥ ಮಾಡಿಕೊಂಡು, ನಿಮ್ಮ ಬಗ್ಗೆ ನಿರ್ಣಾಯದಾಯಕ ಮಾತುಗಳನ್ನು ಆಡದೇ, ಸೂಕ್ತ ಮಾರ್ಗದರ್ಶನ ನೀಡಿ, ನಿಮ್ಮ ಸಮಸ್ಯೆಯನ್ನು ನಿಭಾಯಿಸಲು, ನೆರವು ನೀಡಲು ಅನೇಕ ಆಪ್ತಸಲಹೆಗಾರರು ಮತ್ತು ಮನಶಾಸ್ತ್ರಜ್ಞರು ಸಿದ್ಧರಿದ್ದಾರೆ.
ಬದುಕಲು ಇಷ್ಟವಿಲ್ಲ ಎಂಬ ಆಲೋಚನೆಗಳು ನಿಮ್ಮನ್ನು ಆವರಿಸುತ್ತಿದ್ದರೆ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವ ಹಂಬಲವನ್ನು ಹೊಂದಿದ್ದರೆ, ಈಗಲೇ ಸಹಾಯ ಪಡೆಯಿರಿ. ಮತ್ತೆ ನಿಮ್ಮ ಜೀವನವನ್ನು ಆನಂದಿಸಲು ಪ್ರಾರಂಭಿಸಬಹುದು.
(ಲೇಖಕರು ಮನಃಶಾಸ್ತ್ರಜ್ಞರು, ಆಪ್ತ ಸಮಾಲೋಚಕರು)