ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನವೂ ಹಲ್ಲುಜ್ಜಿದರೂ ಹಲ್ಲುಗಳು ಹಳದಿಯಾಗಲು ಕಾರಣವೇನು? ಇಲ್ಲಿದೆ ದಂತ ತಜ್ಞರ ಮಹತ್ವದ ಸಲಹೆ

Health Tips: ಬಾಯಿಯನ್ನು ದೇಹದ ಆರೋಗ್ಯದ ಕೈಗನ್ನಡಿ ಎಂದು ಕರೆಯಲಾಗುತ್ತದೆ. ಹಲ್ಲುಗಳ ಬಣ್ಣ ಬದಲಾಗುವುದರ ಹಿಂದೆ ಕೇವಲ ಸ್ವಚ್ಛತೆಯ ಕೊರತೆ ಮಾತ್ರವಲ್ಲ, ಇನ್ನೂ ಹಲವು ಆಂತರಿಕ ಹಾಗೂ ಬಾಹ್ಯ ಕಾರಣಗಳಿರಬಹುದು ಎನ್ನುತ್ತಾರೆ ಬೆಂಗಳೂರಿನ ಹ್ಯಾಪಿಯೆಸ್ಟ್ ಪರ್ಲ್ಸ್‌ನ ಯುನಿಟ್ ಹೆಡ್ ಆಗಿರುವ ದಂತ ತಜ್ಞೆ ಡಾ. ಶ್ರದ್ಧಾ ಬಹಿರ್ವಾನಿ

ಸಂಗ್ರಹ ಚಿತ್ರ

ಬೆಂಗಳೂರು: ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬೆಳ್ಳಗಿನ ಮತ್ತು ಹೊಳೆಯುವ ಹಲ್ಲುಗಳ ಪಾತ್ರ ಬಹಳ ದೊಡ್ಡದು. ಆದರೆ, ಎಷ್ಟೇ ದುಬಾರಿ ಪೇಸ್ಟ್ ಬಳಸಿ ದಿನವೂ ಹಲ್ಲುಜ್ಜಿದರೂ ಹಲ್ಲುಗಳು ಹಳದಿಯಾಗುತ್ತಿವೆಯೇ? ಹಾಗಾದರೆ ನೀವು ಗಮನಿಸಲೇಬೇಕಾದ ಕೆಲವು ಅಂಶಗಳಿವೆ. ಬಾಯಿಯನ್ನು ದೇಹದ ಆರೋಗ್ಯದ ಕೈಗನ್ನಡಿ ಎಂದು ಕರೆಯಲಾಗುತ್ತದೆ. ಹಲ್ಲುಗಳ ಬಣ್ಣ (Teeth cleaning) ಬದಲಾಗುವುದರ ಹಿಂದೆ ಕೇವಲ ಸ್ವಚ್ಛತೆಯ ಕೊರತೆ ಮಾತ್ರವಲ್ಲ, ಇನ್ನೂ ಹಲವು ಆಂತರಿಕ ಹಾಗೂ ಬಾಹ್ಯ ಕಾರಣಗಳಿರಬಹುದು ಎನ್ನುತ್ತಾರೆ ಬೆಂಗಳೂರಿನ ಹ್ಯಾಪಿಯೆಸ್ಟ್ ಪರ್ಲ್ಸ್‌ನ ಯುನಿಟ್ ಹೆಡ್ ಆಗಿರುವ ದಂತ ತಜ್ಞೆ ಡಾ. ಶ್ರದ್ಧಾ ಬಹಿರ್ವಾನಿ

ಹಲ್ಲುಗಳು ಹಳದಿಯಾಗಲು ಪ್ರಮುಖ ಕಾರಣಗಳೇನು?

ಹಲ್ಲುಗಳ ನೈಸರ್ಗಿಕ ಬಣ್ಣ ಮಾಸಲು ವಯಸ್ಸು, ಅನುವಂಶೀಯತೆ, ನಾವು ಸೇವಿಸುವ ಆಹಾರ ಹಾಗೂ ಜೀವನಶೈಲಿ ನೇರ ಕಾರಣವಾಗುತ್ತದೆ.

ಅನುವಂಶೀಯತೆ ಮತ್ತು ವಯಸ್ಸು: ಕೆಲವರಿಗೆ ಜನ್ಮತಃ ಹಲ್ಲಿನ ಹೊರಪದರ (ಎನಾಮಲ್‌) ತೆಳುವಾಗಿರುತ್ತದೆ. ವಯಸ್ಸಾ ದಂತೆಯೂ ಈ ಪದರ ಸವೆಯುತ್ತದೆ. ಆಗ ಹಲ್ಲಿನ ಒಳಭಾಗದಲ್ಲಿರುವ 'ಡೆಂಟಿನ್' ಎಂಬ ಹಳದಿ ಪದರ ಎದ್ದು ಕಾಣುತ್ತದೆ. ಇದರಿಂದ ಹಲ್ಲುಗಳು ಸಹಜವಾಗಿಯೇ ಹಳದಿಯಾಗಿ ಕಾಣುತ್ತವೆ.

ಆಹಾರ ಪದ್ಧತಿ: ಅತಿಯಾಗಿ ಟೀ, ಕಾಫಿ, ವೈನ್ ಕುಡಿಯುವ ಅಭ್ಯಾಸ, ತಂಪು ಪಾನೀಯಗಳು ಹಾಗೂ ಕೃತಕ ಬಣ್ಣವಿರುವ ಆಹಾರಗಳ ಸೇವನೆಯಿಂದ ಹಲ್ಲುಗಳ ಮೇಲೆ ಕಲೆಗಳು ಉಂಟಾಗುತ್ತವೆ. ದೀರ್ಘಕಾಲದವರೆಗೆ ಇದು ಮುಂದುವರಿದರೆ ಕಲೆಗಳು ಹಲ್ಲಿನ ಆಳಕ್ಕೆ ಇಳಿದುಬಿಡುತ್ತವೆ.

ಜೀವನಶೈಲಿ ಮತ್ತು ದುಶ್ಚಟಗಳು: ಧೂಮಪಾನ, ಇ-ಸಿಗರೇಟ್ ಹಾಗೂ ತಂಬಾಕು ಸೇವನೆಯಿಂದ ಅದರಲ್ಲಿರುವ ನಿಕೋಟಿನ್ ಅಂಶ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ. ಇದು ಎಷ್ಟೇ ಬ್ರಷ್ ಮಾಡಿದರೂ ಹೋಗದಂತಹ ಕಲೆಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಹಲ್ಲಿನ ಮೇಲೆ 'ಟಾರ್ಟರ್' ಎಂಬ ಗಟ್ಟಿ ಪದರ ಕೂಡ ಹಲ್ಲುಗಳ ಅಂದ ಕೆಡಿಸುತ್ತದೆ.

ನೀರಿನಲ್ಲಿರುವ ಫ್ಲೋರೈಡ್ (ಫ್ಲೋರೋಸಿಸ್): ಬಾಲ್ಯದಲ್ಲಿ ಕುಡಿಯುವ ನೀರಿನಲ್ಲಿ, ಅದರಲ್ಲೂ ವಿಶೇಷವಾಗಿ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದರೆ ಹಲ್ಲಿನ ಬಣ್ಣ ಬದಲಾಗುತ್ತದೆ. ಇದನ್ನು 'ಫ್ಲೋರೋಸಿಸ್' ಎನ್ನಲಾಗುತ್ತದೆ.

ಔಷಧಿಗಳು ಮತ್ತು ಹಲ್ಲಿನ ಮೇಲೆ ಬಿದ್ದ ಏಟು: ಟೆಟ್ರಾಸೈಕ್ಲಿನ್‌ನಂತಹ ಕೆಲವು ಔಷಧಿಗಳು ಹಾಗೂ ಐರನ್ ಮಾತ್ರೆಗಳ ಸೇವನೆಯೂ ಹಲ್ಲುಗಳ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಅಪಘಾತ ಅಥವಾ ಇತರೆ ಕಾರಣಗಳಿಂದ ಹಲ್ಲಿಗೆ ಪೆಟ್ಟಾದರೂ ಹಲ್ಲು ಕಪ್ಪಾಗುವ ಅಥವಾ ಹಳದಿಯಾಗುವ ಸಾಧ್ಯತೆ ಇರುತ್ತದೆ.

ಇದಕ್ಕಿರುವ ವೈದ್ಯಕೀಯ ಪರಿಹಾರಗಳೇನು?

ಹಲ್ಲು ಹಳದಿಯಾಗಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ದಂತ ವೈದ್ಯರು ಚಿಕಿತ್ಸೆ ನೀಡುತ್ತಾರೆ:

ಮೇಲ್ಮೈ ಕಲೆಗಳನ್ನು ಹೋಗಲಾಡಿಸಲು ಮತ್ತು ಟಾರ್ಟರ್ ನಿವಾರಿಸಲು 'ಪ್ರೊಫೆಷನಲ್ ಕ್ಲೀನಿಂಗ್' ಮತ್ತು ಹಲ್ಲುಗಳನ್ನು ಬೆಳ್ಳಗಾಗಿಸಲು 'ಬ್ಲೀಚಿಂಗ್' ಮಾಡಲಾಗುತ್ತದೆ.

ಫ್ಲೋರೋಸಿಸ್ ಅಥವಾ ಅತಿಯಾದ ಕಲೆಗಳಿಂದ ಹಲ್ಲುಗಳು ಆಂತರಿಕವಾಗಿ ಹಾಳಾಗಿದ್ದರೆ, ಅಂತವರಿಗೆ ಕಾಸ್ಮೆಟಿಕ್ ಚಿಕಿತ್ಸೆಗಳಾದ 'ವೆನೀರ್ಸ್', 'ಲ್ಯಾಮಿನೇಟ್ಸ್' ಅಥವಾ ʼ'ಸೆರಾಮಿಕ್ ಕ್ರೌನ್‌ʼಗಳನ್ನು ಶಿಫಾರಸು ಮಾಡಲಾಗುತ್ತದೆ.

ಹಲ್ಲಿಗೆ ಪೆಟ್ಟಾಗಿ ನರಗಳಿಗೆ ಹಾನಿಯಾಗಿದ್ದರೆ, ರೂಟ್ ಕೆನಾಲ್ ಚಿಕಿತ್ಸೆಯ ಅಗತ್ಯವಿರುತ್ತದೆ.

Health Tips: ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?

ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಏನು?

*ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ದಿನನಿತ್ಯದ ಅಭ್ಯಾಸಗಳಲ್ಲೇ ಅಡಗಿದೆ.

  • ದಿನಕ್ಕೆ ಕಡ್ಡಾಯವಾಗಿ ಎರಡು ಬಾರಿ ಬ್ರಷ್ ಮಾಡಿ
  • ಏನಾದರೂ ತಿಂದ ನಂತರ ಅಥವಾ ಊಟವಾದ ತಕ್ಷಣ ಕಡ್ಡಾಯವಾಗಿ ಬಾಯಿ ಮುಕ್ಕಳಿಸುವ ಅಭ್ಯಾಸ ರೂಢಿಸಿಕೊಳ್ಳಿ
  • ಹಲ್ಲಿಗೆ ಕಲೆಗಳನ್ನು ಉಂಟುಮಾಡುವ ಪಾನೀಯಗಳು ಹಾಗೂ ಆಹಾರವನ್ನು ಮಿತವಾಗಿ ಸೇವಿಸಿ
  • ಸಾಕಷ್ಟು ನೀರು ಕುಡಿಯುವುದು ಬಾಯಿಯ ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ದಂತ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಿ. ಅಗತ್ಯವಿದ್ದರೆ ತಜ್ಞರ ಸಲಹೆಯಂತೆ ಪ್ರೊಫೆಷನಲ್ ವೈಟನಿಂಗ್ ಚಿಕಿತ್ಸೆ ಪಡೆಯಬಹುದು.

"ಆರೋಗ್ಯವಂತ ಬಾಯಿ, ಆರೋಗ್ಯವಂತ ದೇಹದ ಅಡಿಪಾಯವಿದ್ದಂತೆ. ಹಲ್ಲುಗಳ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಕಾಳಜಿ ಮತ್ತು ಸಕಾಲದಲ್ಲಿ ತಜ್ಞರ ಮಾರ್ಗ ದರ್ಶನ ಪಡೆಯುವುದು ಬಹಳ ಮುಖ್ಯ" ಎನ್ನುತ್ತಾರೆ ಹ್ಯಾಪಿಯೆಸ್ಟ್ ಪರ್ಲ್ಸ್‌ನ ದಂತ ವೈದ್ಯೆ ಡಾ. ಶ್ರದ್ಧಾ ಬಹಿರ್ವಾನಿ.