Health Tips: ಖಾಸಗಿ ಅಂಗಗಳ ಕೂದಲು ತೆಗೆಯಬಹುದೇ? ತಜ್ಞರು ಹೇಳುವುದೇನು?
ನಮ್ಮ ದೇಹದ ವಿವಿಧ ಭಾಗಗಳಲ್ಲಿ ಬೆಳೆಯುವ ಕೂದಲು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡಿದರೆ ಇನ್ನು ಕೆಲವೊಮ್ಮೆ ಈ ಕೂದಲುಗಳು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದುಕೊಳ್ಳುವವರು ಇದ್ದಾರೆ. ಹೀಗಾಗಿ ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಕೆಲವರು ಇದನ್ನು ಪೂರ್ತಿಯಾಗಿ ಕ್ಷೌರ ಮಾಡುತ್ತಾರೆ. ಆದರೆ ಇದು ಸರಿಯೇ? ಈ ಬಗ್ಗೆ ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.


ಬೆಂಗಳೂರು: ಸೌಂದರ್ಯ, ಆರೋಗ್ಯ (Health Tips) ಕಾಳಜಿ ಎಂದುಕೊಂಡು ನಾವು ಮಾಡುವ ಕೆಲವೊಂದು ಕಾರ್ಯಗಳು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತವೆ. ಇವುಗಳಲ್ಲಿ ಖಾಸಗಿ ಅಂಗಗಳ ಕ್ಷೌರ (private part hair shave ) ಮಾಡುವುದು ಕೂಡ ಸೇರಿದೆ. ಇದರ ಕೂದಲನ್ನು (hair) ಕತ್ತರಿಸುವುದು ಜೀವಕ್ಕೆ ಅಪಾಯಕಾರಿಯಾಗಬಹುದು ಎನ್ನುತ್ತಾರೆ ಸ್ತ್ರೀರೋಗ ತಜ್ಞರಾದ ಜೆನಿಫರ್ ಗ್ರಿಫನ್ ಮಿಲ್ಲರ್. ಖಾಸಗಿ ಅಂಗದ ಕೂದಲನ್ನು ಕ್ಷೌರ ಮಾಡುವುದು ವಿವಿಧ ರೀತಿಯ ಸೋಂಕುಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ. ಅಪಾಯಕಾರಿ ಬ್ಯಾಕ್ಟೀರಿಯಾಗಳು ಜನನಾಂಗದೊಳಗೆ ಪ್ರವೇಶಕ್ಕೆ ಅನುಮತಿ ನೀಡಿದಂತಾಗುತ್ತದೆ ಎನ್ನುತ್ತಾರೆ ಅವರು.
ದೇಹದ ಅತ್ಯಂತ ಸೂಕ್ಷ್ಮ ಭಾಗವಾಗಿರುವ ಖಾಸಗಿ ಅಂಗದ ಕೂದಲನ್ನು ಕ್ಷೌರ ಮಾಡಲೇಬಾರದು. ಯಾಕೆಂದರೆ ಇದು ದದ್ದುಗಳು ಮತ್ತು ತುರಿಕೆಗೆ ಕಾರಣವಾಗುತ್ತದೆ. ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುವುದು. ಖಾಸಗಿ ಅಂಗದ ಮೇಲಿರುವ ಕೂದಲು ಬ್ಯಾಕ್ಟೀರಿಯಾದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಅವುಗಳು ರೋಗಕಾರಕ ಬ್ಯಾಕ್ಟೀರಿಯಾ ಮತ್ತು ಧೂಳು ಒಳಗೆ ಬರದಂತೆ ತಡೆಯುತ್ತದೆ. ಹೀಗಾಗಿ ಅವುಗಳನ್ನು ತೆಗೆಯದೇ ಇರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಖಾಸಗಿ ಅಂಗದ ಕೂದಲನ್ನು ತೆಗೆದಾಗ ಮೃದು ಮತ್ತು ಸ್ವಚ್ಛವಾದ ಭಾವನೆ ಬರುತ್ತದೆ. ಆದರೆ ಕೆಲವೇ ದಿನಗಳಲ್ಲಿ ಕೂದಲು ಬೆಳೆಯಲು ಪ್ರಾರಂಭಿಸಿದಾಗ ಕಿರಿಕಿರಿ ಕೊಡಲಾರಂಭಿಸುತ್ತದೆ. ಸಾಮಾನ್ಯವಾಗಿ ವ್ಯಾಕ್ಸ್ ಅಥವಾ ಶೇವಿಂಗ್ ಮಾಡುವುದರಿಂದ ಚರ್ಮದಲ್ಲಿ ಕೂದಲು ಹೆಚ್ಚಾಗಿ ಬೆಳೆಯುತ್ತದೆ. ಅವುಗಳನ್ನು ತೆಗೆಯುವುದು ಕಷ್ಟ. ವಿಶೇಷವಾಗಿ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಇದು ಹೆಚ್ಚಿನ ತೊಂದರೆಯನ್ನು ಉಂಟು ಮಾಡುತ್ತದೆ. ವಿವಿಧ ರೀತಿಯ ಚರ್ಮದ ಸಮಸ್ಯೆಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ. ಅವುಗಳನ್ನು ನೈಸರ್ಗಿಕ ಸ್ಥಿತಿಯಲ್ಲಿ ಇಡುವುದು ಒಳ್ಳೆಯದು.
ದೇಹದ ಇತರ ಭಾಗಗಳಂತೆ ಖಾಸಗಿ ಅಂಗದ ಪ್ರದೇಶದಲ್ಲೂ ಬೆವರು ಬರುತ್ತದೆ. ಇಲ್ಲಿರುವ ಕೂದಲುಗಳು ಬೆವರು ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತವೆ ಮತ್ತು ಯೋನಿಯ ತಾಪಮಾನವನ್ನು ಕಾಪಾಡುತ್ತದೆ. ಅನಗತ್ಯ ತೇವಾಂಶ ಉಂಟಾಗುವುದನ್ನು ನಿಯಂತ್ರಿಸುತ್ತದೆ. ಖಾಸಗಿ ಅಂಗದ ಕೂದಲು ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾ ಮತ್ತು ಇತರ ಹಾನಿಕಾರಕ ಸೋಂಕುಗಳು ನೇರವಾಗಿ ಚರ್ಮದೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸುತ್ತದೆ.
ಓದಿ: Tamannaah Bhatia: ಮೊಡವೆಗೆ ಎಂಜಲೇ ರಾಮಬಾಣವಂತೆ! ತಮನ್ನಾ ಬ್ಯೂಟಿ ಸಿಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಿ
ಆದ್ದರಿಂದ ಖಾಸಗಿ ಅಂಗದ ಕೂದಲು ತೆಗೆಯುವುದಕ್ಕಿಂತ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಳ್ಳೆಯದು. ಇದು ಅನೇಕ ರೀತಿಯ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸ್ತ್ರೀರೋಗ ತಜ್ಞರು.