ಬೆಂಗಳೂರು: ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಹಾಗೂ ನಾವು ಬೆಳೆಸಿಕೊಂಡಿರುವ ದೈನಂದಿನ ಅಭ್ಯಾಸಗಳು ಪ್ರಮುಖವಾಗುತ್ತವೆ. ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆತುರದ ಊಟದಿಂದ ಹಿಡಿದು ನಿರಂತರವಾಗಿ ತಿಂಡಿ ತಿನ್ನುವವರೆಗೆ, ಈ ಸಣ್ಣ ಅಭ್ಯಾಸಗಳು ಅನಾರೋಗ್ಯ ತಂದಿಡುತ್ತದೆ. ಇದೀಗ ತಜ್ಞರೊಬ್ಬರು ಕರುಳಿನ (Stomach Health) ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಟ್ಟ ಅಭ್ಯಾಸಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮೊಬೈಲ್ ಸ್ಕ್ರೋಲ್ ಮಾಡುತ್ತಾ ತಿನ್ನುವುದು
ತಿನ್ನುವ ಸಮಯದಲ್ಲಿ ಫೋನ್ ಅಥವಾ ಟಿವಿ ನೋಡುವುದರಿಂದ ಊಟದ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು. ಹಾಗಾಗಿ ತಿನ್ನುವಾಗ ಫೋನ್ ಹಾಗೂ ಟಿವಿಯಿಂದ ದೂರವಿರಲು ಪ್ರಯತ್ನಿಸಿ.
ಉಪಹಾರವನ್ನು ಬಿಟ್ಟುಬಿಡುವುದು
ಕೆಲವೊಮ್ಮೆ ಏನೇನೋ ಕಾರಣದಿಂದ ಉಪಹಾರ ಬಿಟ್ಟು ಬಿಡುವುದು ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು. ಒಮ್ಮಲೆ ಉಪಾಹಾರವನ್ನು ಬಿಟ್ಟುಬಿಡುವುದು ಒತ್ತಡದ ಮಟ್ಟ ಮತ್ತು ಕರುಳಿನ ಚಲನೆಯ ಮೇಲೆ ಪರಿಣಾಮ ಬೀರಬಹುದು.
ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಊಟದ ನಂತರ ಸಿಹಿ ತಿನ್ನುವ ಅಭ್ಯಾಸ
ಕೆಲವರಿಗೆ ಊಟದ ನಂತರ ಸಿಹಿ ತಿನ್ನುವ ಅಭ್ಯಾಸ ಇದೆ. ಪ್ರತಿ ಬಾರಿ ಊಟ ಮುಗಿದ ತಕ್ಷಣವೇ ಸಿಹಿ ಸೇವಿಸುವುದು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲನವನ್ನು ತಪ್ಪಿಸುತ್ತದೆ.
ಸಣ್ಣ ತಲೆನೋವಿಗೂ ಮಾತ್ರೆ ತೆಗೆದುಕೊಳ್ಳುವುದು
ತಲೆನೋವು ಅಥವಾ ಸಣ್ಣ ಶೀತಕ್ಕೆ ಇಬುಪ್ರೊಫೇನ್‌ನಂತಹ ನೋವು ನಿವಾರಕಗಳನ್ನು ತೆಗೆದುಕೊಳ್ಳುವುದರಿಂದ, ಅವು ಹೊಟ್ಟೆ ಮತ್ತು ಕರುಳನ್ನು ಹಾನಿಗೊಳಿಸುತ್ತವೆ.
ರಾತ್ರಿ ಹೆಚ್ಚಿನ ನೀರನ್ನು ಕುಡಿಯುವುದು
ದಿನವಿಡೀ ಬಹಳ ಕಡಿಮೆ ನೀರು ಕುಡಿದು ನಂತರ ರಾತ್ರಿಯಲ್ಲಿ ಹೆಚ್ಚಿನ ನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ಮೇಲೆ ಒತ್ತಡ ಉಂಟಾಗಬಹುದು.
ಸದಾ ಏನನ್ನಾದರೂ ತಿನ್ನುತ್ತಿರುವುದು
ಊಟದಿಂದ ಕನಿಷ್ಠ 3ರಿಂದ 4 ಗಂಟೆಗಳ ಕಾಲಾವಕಾಶ ನೀಡಬೇಕು. ಸದಾ ಏನನ್ನಾದರೂ ತಿನ್ನುತ್ತಿದ್ದರೆ ಅಜೀರ್ಣ ಸಮಸ್ಯೆ ಕಾಡಬಹುದು.
ಮಲಗುವ ಕ್ಷಣಕ್ಕೆ ಊಟ ಮಾಡುವುದು
ತಡರಾತ್ರಿಯ ಊಟವು ಜೀರ್ಣಕ್ರಿಯೆ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಊಟ ಮತ್ತು ಮಲಗುವ ಸಮಯದ ನಡುವೆ ನಿಮ್ಮ ದೇಹಕ್ಕೆ ಸ್ವಲ್ಪ ಸಮಯವನ್ನು ನೀಡಿದರೆ ಉತ್ತಮ.