ನವದೆಹಲಿ,ಜು.9: ಪ್ರತಿಯೊಬ್ಬರ ದೇಹಕ್ಕೂ ಕಬ್ಬಿಣಾಂಶ ಅನ್ನೋದು ಅಗತ್ಯವಾಗಿ ಬೇಕು. ನಿಮ್ಮ ದೇಹದಲ್ಲಿ ಇದರ ಮಟ್ಟ ಕಡಿಮೆಯಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಹೆಚ್ಚಿನವರು ಕಬ್ಬಿಣ ಪ್ರಮಾಣ (Iron Food) ಹೆಚ್ಚಿಸಲು ಪಾಲಕ್ ಸೊಪ್ಪು ಸೇವನೆಗೆ ಆಧ್ಯತೆ ನೀಡುತ್ತಾರೆ. ಆದರೆ ಆರೋಗ್ಯ ತಜ್ಞರು ಕೇವಲ ಪಾಲಕ್ ಸೊಪ್ಪಿನ ಬದಲು ಇನ್ನು ಕೆಲವು ಆಹಾರ ಬಳಕೆಯ ಬಗ್ಗೆ ಸಲಹೆ ನೀಡಿದ್ದಾರೆ. ಪಾಲಕ್ ಆಕ್ಸಲೇಟ್‌ಗಳನ್ನು ಹೆಚ್ಚಾಗಿ ಹೊಂದಿರುತ್ತದೆ, ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ನೈಸರ್ಗಿಕ ಸಂಯುಕ್ತ ಆಗಿದ್ದು, ಅಂದರೆ ನಿಮ್ಮ ದೇಹವು ನೀವು ಭಾವಿಸುವಷ್ಟು ಖನಿಜವನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಇರಬಹುದು ಎಂದು ಸೂಚಿಸಿದ್ದಾರೆ.
ಯಾವ ಆಹಾರಗಳ ಸೇವನೆ ಮಾಡಬೇಕು?
ಆಳಿವಿ ಬೀಜ ಅಥವಾ ಗಾರ್ಡನ್ ಕ್ರೆಸ್ ಸೀಡ್ಸ್:
ಇದು ಕಬ್ಬಿಣದಂಶದ ಆಗರವಾಗಿದ್ದು ಪ್ರತಿ 100 ಗ್ರಾಂ ಬೀಜಗಳಲ್ಲಿ ಬರೋಬ್ಬರಿ 100 ಮಿಗ್ರಾಂ ಕಬ್ಬಿಣದ ಪ್ರಮಾಣ ಇರುತ್ತದೆ. ಒಂದು ಚಮಚ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮುಂಜಾನೆಯ ಸಮಯದಲ್ಲಿ ನಿಂಬೆ ರಸದೊಂದಿಗೆ ನೀವು ಸೇವನೆ ಮಾಡಬಹುದು.
ಮೊರಿಂಗಾ ಎಲೆಗಳು:
ಮೊರಿಂಗಾ ಎಲೆಗಳು ಕಬ್ಬಿಣದ ಉತ್ತಮ ಮೂಲವಾಗಿದ್ದು ಆರೋಗ್ಯಕ್ಕೂ ಬಹಳಷ್ಟು ಒಳಿತು. ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇದರಲ್ಲಿದ್ದು ತಾಜಾ ಎಲೆಗಳಲ್ಲಿ 100 ಗ್ರಾಂಗೆ ಸುಮಾರು 4 ಮಿಗ್ರಾಂ ಕಬ್ಬಿಣ ಪ್ರಮಾಣ ಇರಬಹುದು. ನಿಮ್ಮ ಸಂಬಾರ್ ಅಥವಾ ಯಾವುದೇ ಸಲಾಡ್ ಗೆ ಬಳಕೆ ಮಾಡಬಹುದು.
ಎಳ್ಳು:
ಎಳ್ಳು ಬೀಜಗಳು 100 ಗ್ರಾಂಗೆ 14.6 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತವೆ. ಅದರಲ್ಲೂ ಬಿಳಿ ಎಳ್ಳುಗಿಂತ ಕಪ್ಪು ಎಳ್ಳಿನಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಪ್ರಮಾಣ ಅತ್ಯಂತ ಹೆಚ್ಚಾಗಿರುತ್ತದೆ. ಯಾವುದೇ ತಿಂಡಿ, ಅಥವಾ ಸಲಾಡ್ ಗಳಿಗೆ ಎಳ್ಳು ನೀವು ಬಳಕೆ ಮಾಡಬಹುದು.
Health Tips: ನೇರಳೆ ಹಣ್ಣು ತಿಂದ ತಕ್ಷಣ ಹಾಲು ಕುಡಿಯುತ್ತೀರಾ? ಹೊಟ್ಟೆ ಸಮಸ್ಯೆಗೆ ಕಾರಣವಾಗಬಹುದು!
ಹುರುಳಿ ಕಾಳು:
ಹುರುಳಿಕಾಳುಗಳನ್ನು ಸಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಕಬ್ಬಿಣ ದಿಂದ ಸಮೃದ್ಧವಾಗಿರುವ ದ್ವಿದಳ ಧಾನ್ಯ ಇದಾಗಿದ್ದು, ಇದು 100 ಗ್ರಾಂ ಬೀಜದಲ್ಲಿ 7 ಮಿಗ್ರಾಂ ವರೆಗೆ ಕಬ್ಬಿಣವನ್ನು ಒದಗಿಸುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.
ದಂಟು ಸೊಪ್ಪು:
ದಂಟು ಸೊಪ್ಪಿನಲ್ಲಿ ಕಬ್ಬಿಣದ ಪ್ರಮಾಣ ಅಧಿಕವಾಗಿದೆ. ಪ್ರತಿ 100 ಗ್ರಾಂಗೆ 3.9 ಮಿಗ್ರಾಂ ಕಬ್ಬಿಣದಂಶವಿರುತ್ತದೆ. ದಂಟು ಸೊಪ್ಪಿಗೆ ಯಾವುದೇ ತರಕಾರಿಯನ್ನು ಬಳಸಿ ಸೇವನೆ ಮಾಡಬಹುದು.
ಒಣಗಿದ ಅಂಜೂರ:
ಒಣಗಿದ ಅಂಜೂರಗಳು ಸಾಮಾನ್ಯವಾಗಿ 100 ಗ್ರಾಂಗೆ ಸುಮಾರು 3.2 ಮಿಗ್ರಾಂ ಕಬ್ಬಿಣವನ್ನು ಒದಗಿಸುತ್ತವೆ,.ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
ಮಖಾನ:
ಮಖಾನದಲ್ಲಿ ಪ್ರತಿ 100 ಗ್ರಾಂಗೆ 3.6 ಮಿಗ್ರಾಂ ಕಬ್ಬಿಣದಂಶವಿರುತ್ತದೆ. ಇದು ಆರೋಗ್ಯ ಕಾಪಾಡುವ ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ. ತುಪ್ಪದಲ್ಲಿ ಮಖಾನವನ್ನು ಹುರಿದು, ಸಂಜೆಯ ಸಮಯದಲ್ಲಿ ತಿನ್ನಬಹುದು.