ನವದೆಹಲಿ: ಫ್ಲೂ ಎಂದು ಕರೆಸಿಕೊಳ್ಳುವ ವೈರಸ್ ಸೋಂಕು ಚಳಿಯೊಂದಿಗೇ ಬಂದುಬಿಡುತ್ತದೆ. ಕೆಲವೊಮ್ಮೆ ಮಳೆಗಾಲದಲ್ಲೂ ಹಾಜರಿ ಹಾಕುತ್ತದೆ. ಈ ಬಾರಿ ಎಚ್೧ಎನ್೧ ಸೋಂಕು ಜೂನ್ ತಿಂಗಳಿನಿಂದಲೇ ದೇಶದ ಹಲವೆಡೆಗಳಲ್ಲಿ ಸದ್ದು ಮಾಡುತ್ತಿದೆ. ಈ ಬಾರಿಯ ಫ್ಲೂ ಋತು ಬರುವುದರೊಳಗೇ, ಶೇ. 75ಕ್ಕೂ ಹೆಚ್ಚಿನ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಪತ್ತೆಯಾಗಿರುವುದು ಎಚ್1ಎನ್1 ಸೋಂಕು ಎಂದು ಹೇಳಲಾಗುತ್ತಿದೆ. ಫ್ಲೂ ಲಸಿಕೆ ತೆಗೆದುಕೊಳ್ಳುವ ಉದ್ದೇಶವಿದ್ದರೆ, ಅದನ್ನು ಯಾವಾಗ ತೆಗೆದುಕೊಳ್ಳಬೇಕು? ಪ್ಲೂ ಲಸಿಕೆ ಎಲ್ಲರಿಗೂ ಅಗತ್ಯವೇ? ಮುಂತಾದ ಹಲವು ಪ್ರಶ್ನೆಗಳು ಮನದಲ್ಲಿದ್ದರೆ, ಅವೆಲ್ಲಕ್ಕೂ ಇಲ್ಲಿದೆ ಉತ್ತರ.
ಯಾವಾಗ?: ಫ್ಲೂ ಲಸಿಕೆ ಚುಚ್ಚಿಸಿಕೊಳ್ಳುವ ಉದ್ದೇಶವಿದ್ದರೆ ಅಥವಾ ನಿಮಗೆ ಅಗತ್ಯವೆಂದು ವೈದ್ಯರು ಹೇಳಿದ್ದರೆ, ಚಳಿಗಾಲ ಬರುವವರೆಗೆ ಕಾಯಬೇಕಿಲ್ಲ. ಸಾಮಾನ್ಯವಾಗಿ ಇಂಥ ಲಸಿಕೆಗಳು ತಮ್ಮ ಪರಿಣಾಮವನ್ನು ಬೀರುವುದು ಚುಚ್ಚಿದ 15 ದಿನಗಳ ನಂತರವೇ. ನಿಗದಿತ ವೈರಸ್ಗಳ ವಿರುದ್ಧ ಪ್ರತಿರೋಧಕ ಶಕ್ತಿ ಜಾಗೃತವಾಗಲು ಇದಿಷ್ಟು ಸಮಯ ಬೇಕೇಬೇಕು. ಹಾಗಾಗಿ ನವೆಂಬರ್, ಡಿಸೆಂಬರ್ನಲ್ಲಿ ದಾಂಗುಡಿ ಇಡುವ ಚಳಿಗಾಲಕ್ಕೆ ತಯಾರಿಯನ್ನು ಅಕ್ಟೋಬರ್ನಲ್ಲೇ ಮಾಡುವುದು ಸೂಕ್ತ.
ಇದೇ ಕಾಲವೆಂದಲ್ಲ: ಹಾಗೆಂದು ಅಕ್ಟೋಬರ್ ಮಾತ್ರವೇ ಲಸಿಕೆಗೆ ಸರಿಯಾದ ಸಮಯವೆಂದಲ್ಲ. ಈಗಾಗಲೇ ಫ್ಲೂ ವೈರಸ್ ಸಕ್ರಿಯವಾಗಿರುವ ಪ್ರದೇಶಗಳಿ ಸಾಕಷ್ಟಿವೆ. ಮಳೆಗಾಲದಲ್ಲೂ ಹಲವು ಬಗೆಯ ವೈರಸ್ಗಳು ಓಡಾಡುತ್ತವೆ. ಶಾಲೆಯಿಂದ ಬರುತ್ತಲೇ ಜ್ವರ ತೆಗೆದುಕೊಂಡು ಬರುವ ಮಕ್ಕಳ ಸಂಖ್ಯೆಯೂ ಸಾಕಷ್ಟಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಫ್ಲೂ ಕಾಟ ಹೆಚ್ಚಿರುವ ಪ್ರದೇಶಗಳಲ್ಲಿ ಜೂನ್ ತಿಂಗಳಲ್ಲೇ ಲಸಿಕೆಯನ್ನು ತೆಗೆದುಕೊಳ್ಳುವುದು ಸೂಕ್ತವಾದ್ದು. ಆದರೆ ಚಳಿಗಾಲದಲ್ಲಿ ಫ್ಲೂ ಉಪಟಳ ಹೆಚ್ಚುವ ಪ್ರದೇಶಗಳಲ್ಲಿ ಅಕ್ಟೋಬರ್ ತಿಂಗಳು ಲಸಿಕೆಗೆ ಸರಿಯಾದ ಸಮಯ.
Health Tips: ಬೆಲ್ಲ ತಿಂದರೆ ತೂಕ ಇಳಿಯುತ್ತಾ? ಸಕ್ಕರೆಗಿಂತ ಬೆಲ್ಲ ನಿಜಕ್ಕೂ ಉತ್ತಮವೇ? ಇಲ್ಲಿದೆ ಗೊಂದಲಗಳಿಗೆ ಉತ್ತರ
ಯಾರಿಗೆ ಅಗತ್ಯ?: ಇದು ಇನ್ನೊಂದು ಮುಖ್ಯವಾದ ಪ್ರಶ್ನೆ. ಕೆಲವೊಂದು ನಿಗದಿತ ಕಾರಣಗಳಿಗೆ ವೈದ್ಯರು ಬೇಡವೆಂದರೆ ಮಾತ್ರವೇ ಲಸಿಕೆಯನ್ನು ಹಾಕಿಸಬಾರದು. ಅದಿಲ್ಲದಿದ್ದರೆ, ಆರು ತಿಂಗಳಿಗಿಂತ ಹೆಚ್ಚಿರುವ ಶಿಶುಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಫ್ಲೂ ಲಸಿಕೆ ಹಾಕಿಸುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಅದರಲ್ಲೂ ಮುಖ್ಯವಾಗಿ, ಐದು ವರ್ಷದ ಒಳಗಿನ ಪುಟಾಣಿಗಳು, ಅಸ್ತಮಾ ಇಲ್ಲವೇ ಅಲರ್ಜಿಯಂಥ ತೊಂದರೆ ಇರುವವರು, 65 ವರ್ಷದ ಮೇಲಿನವರು, ರಕ್ತ ಒತ್ತಡ ಅಥವಾ ಮಧುಮೇಹದಂಥ ಸಮಸ್ಯೆ ಉಳ್ಳವರು, ಯಾವುದೇ ಕಾರಣಕ್ಕಾಗಿ ಪ್ರತಿರೋಧಕತೆ ಕುಂಠಿತಗೊಂಡವರು, ಯಾವುದೇ ಗಂಭೀರ ಕಾಯಿಲೆಗಳಿಂದ ನರಳುವವರು, ಗರ್ಭಿಣಿಯರು, ಆರೋಗ್ಯ ಕಾರ್ಯಕರ್ತರು, ಗಂಭೀರ ಕಾಯಿಲೆಗಳಿಂದ ನರಳುವವರ ಉಪಚಾರ ಮಾಡುವಂಥವರು ಫ್ಲೂ ಲಸಿಕೆ ತೆಗೆದುಕೊಳ್ಳುವುದು ಅಗತ್ಯ. ಈ ಎಲ್ಲಾ ಗುಂಪಿಗೆ ಸೇರಿದವರಿಗೆ ಫ್ಲೂ ಸೋಂಕು ಗಂಭೀರವಾಗಿ ತೊಂದರೆ ಕೊಡುವ ಸಾಧ್ಯತೆ ಹೆಚ್ಚಿದ್ದು, ಚಿಕಿತ್ಸೆ ಮತ್ತು ಗುಣವಾಗುವ ಪ್ರಕ್ರಿಯೆ ಕಷ್ಟವಾಗಬಹುದು.
ವ್ಯರ್ಥವೇ?: ಇಷ್ಟಾಗಿಯೂ ಫ್ಲೂ ಲಸಿಕೆ ತೆಗೆದುಕೊಳ್ಳುವುದು ತಡವಾದರೆ, ಡಿಸೆಂಬರ್ ಬಂದೇಬಿಟ್ಟಿದ್ದರೆ? ಲಸಿಕೆ ತೆಗೆದುಕೊಳ್ಳುವುದು ವ್ಯರ್ಥವೇ? ಖಂಡಿತ ಇಲ್ಲ, ನಂತರದ ದಿನಗಳಲ್ಲಿ ಬರುವ ಸೋಂಕುಗಳ ವಿರುದ್ಧ ಹೋರಾಡಲು ಈ ಲಸಿಕೆ ಉಪಯುಕ್ತವೇ. ಒಮ್ಮೆ ವಿಷಮ ಶೀತಜ್ವರಕ್ಕೆ ತುತ್ತಾದರೆ, ನಿಲ್ಲದ ಕೆಮ್ಮು, ಉಸಿರಾಟ ತೊಂದರೆ, ಕ್ಷೀಣಿಸುವ ಪ್ರತಿರೋಧಕತೆ, ನಿಶ್ಶಕ್ತಿ ಮುಂತಾದ ಹಲವು ಬಗೆಯ ಸಮಸ್ಯೆಗಳಿಂದ ಸುಧಾರಿಸಿಕೊಳ್ಳಲು ದೀರ್ಘಕಾಲ ತೆಗೆದು ಕೊಳ್ಳಬಹುದು. ಅಷ್ಟರಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಮಕ್ಕಳು ಮತ್ತು ವೃದ್ಧರಲ್ಲಿ ಅಧಿಕ. ಹಾಗಾಗಿ ತಡವಾದರೂ, ಫ್ಲೂ ಲಸಿಕೆ ಹಾಕಿಸಿಕೊಳ್ಳುವುದು ವ್ಯರ್ಥವಲ್ಲ.