ಬೆಂಗಳೂರು: ದೀಪಾವಳಿ (Diwali) ಹಬ್ಬದ ಸಡಗರ ದೇಶಾದ್ಯಂತ ಜೋರಾಗಿದೆ. ಇಂದು ನರಕ ಚತುರ್ದಶಿಯನ್ನು ( Naraka Chaturdashi) ಆಚರಿಸಲಾಗುತ್ತದೆ. ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ನಂತರ, ಅವನ ರಕ್ತದ ಕಲೆಗಳನ್ನು ತೊಳೆಯಲು ಮುಂಜಾನೆ ಎಣ್ಣೆ ಹಚ್ಚಿ ಸ್ನಾನ ಮಾಡಿದನೆಂಬ ಪ್ರತೀತಿಯಿದೆ. ಇದರ ನೆನಪಿಗಾಗಿ ದೀಪಾವಳಿಯ ಆರಂಭವಾಗಿ ಈ ಆಚರಣೆ ನಡೆಯುತ್ತದೆ. ಈ ವಿಶೇಷ ದಿನದಂದು ಎಣ್ಣೆಯಲ್ಲಿ ಮಹಾಲಕ್ಷ್ಮಿಯು ಮತ್ತು ಬಿಸಿನೀರಿನಲ್ಲಿ ಗಂಗಾದೇವಿಯು ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ. ಈ ಆಚರಣೆಗೆ ಅತ್ಯಂತ ಮಹತ್ವದ ಧಾರ್ಮಿಕ ಮತ್ತು ಆರೋಗ್ಯಕರ ಹಿನ್ನೆಲೆಯಿದೆ.
ಅಭ್ಯಂಗ ಸ್ನಾನ ಮಾಡುವುದು ಹೇಗೆ?
ನರಕ ಚತುರ್ದಶಿಯಂದು ಮುಂಜಾನೆ ಬೇಗ ಎದ್ದು, ಉಗುರುಬೆಚ್ಚಗಿನ ಎಳ್ಳೆಣ್ಣೆಯನ್ನು ತಲೆ ಮತ್ತು ಇಡೀ ದೇಹಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಎಣ್ಣೆ ಹಚ್ಚಿದ ನಂತರ ಕಡಲೆಹಿಟ್ಟು, ಅರಿಶಿನ, ಶ್ರೀಗಂಧದ ಲೇಪನ ಮಾಡಿಕೊಂಡರೆ ಒಳ್ಳೆಯದು. ಎಣ್ಣೆ ದೇಹಕ್ಕೆ ಚೆನ್ನಾಗಿ ಹಿರಿಕೊಳ್ಳುವಂತೆ 15 ರಿಂದ 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು.
ಬಳಿಕ ಅತಿಯಾದ ಬಿಸಿನೀರನ್ನು ಬಳಸದೆ, ಹಿತವಾದ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಶರೀರವನ್ನು ಸ್ವಚ್ಛಗೊಳಿಸಬೇಕು. ನಂತರ ಹೊಸ ಬಟ್ಟೆಗಳನ್ನು ಧರಿಸಬೇಕು.
ಅಭ್ಯಂಗ ಸ್ನಾನ ಎಂದರೆ ಕೇವಲ ಬಾಹ್ಯ ದೇಹವನ್ನು ಸ್ವಚ್ಛಗೊಳಿಸುವುದಷ್ಟೇ ಅಲ್ಲ, ಹಿಂದಿನ ವರ್ಷದ ಕೋಪ, ಅಹಂಕಾರ ಮತ್ತು ಕೆಟ್ಟ ಆಲೋಚನೆಗಳನ್ನು ತೊರೆದು, ಹೊಸ ಬೆಳಕಿನೊಂದಿಗೆ ಜೀವನವನ್ನು ಆರಂಭಿಸಲು ಈ ಆಚರಣೆ ನಡೆಸಲಾಗುತ್ತದೆ.
ಆರೋಗ್ಯಕ್ಕೆ ಏನು ಪ್ರಯೋಜನ?
ಆಯುರ್ವೇದದ ಪ್ರಕಾರ, ಚಳಿಗಾಲದ ಆರಂಭದಲ್ಲಿ ಬರುವ ದೀಪಾವಳಿ ಸಮಯದಲ್ಲಿ ವಾತ ದೋಷವು ಹೆಚ್ಚಾಗಿರುತ್ತದೆ. ಮುಂಜಾನೆ ಉಗುರುಬೆಚ್ಚಗಿನ ಎಣ್ಣೆಯಿಂದ ಇಡೀ ದೇಹಕ್ಕೆ ಮಸಾಜ್ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ.
- ಚಳಿಗಾಲದಲ್ಲಿ ತ್ವಚೆ ಒಣಗುವುದು ಮತ್ತು ಬಿರುಕು ಬಿಡುವುದು ಸಾಮಾನ್ಯ. ಎಣ್ಣೆ ಮಸಾಜ್ ಚರ್ಮಕ್ಕೆ ಆಳವಾದ ತೇವಾಂಶವನ್ನು ನೀಡುತ್ತದೆ.
- ದೇಹಕ್ಕೆ ಎಣ್ಣೆ ಹಚ್ಚಿ ಹಿತವಾಗಿ ಮಸಾಜ್ ಮಾಡುವುದರಿಂದ ದೇಹದ ಮೂಲೆ ಮೂಲೆಗೂ ರಕ್ತಸಂಚಲನ ಉತ್ತಮಗೊಳ್ಳುತ್ತದೆ.
- ತಲೆ ಮತ್ತು ಇಡೀ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಮಾನಸಿಕ ಒತ್ತಡ ಹಾಗೂ ಆತಂಕ ಗಣನೀಯವಾಗಿ ಕಡಿಮೆಯಾಗುತ್ತದೆ.
- ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯ ಮಸಾಜ್ ದೇಹದಲ್ಲಿನ ವಾತವನ್ನು ಶಾಂತಗೊಳಿಸಿ, ದೈಹಿಕ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.