ಬೆಂಗಳೂರು, ಡಿ. 27: ನಮ್ಮ ದೇಹವು ಆರೋಗ್ಯದಿಂದಿದ್ದರೆ ನಾವು ಕೂಡ ಕ್ರಿಯಾಶೀಲರಾಗಿ ಲವಲವಿಕೆಯಿಂದ ಇರುತ್ತೇವೆ. ಹೀಗಾಗಿ ದೇಹವು ಸದಾ ಚಟುವಟಿಕೆಯಿಂದ ಇರಲು ರಕ್ತ ಸಂಚಾರ ಮತ್ತು ರಕ್ತದಲ್ಲಿರುವ ಹಿಮೋಗ್ಲೋಬಿನ್ ಅಂಶ ಬಹುಮುಖ್ಯ. ದೇಹದ ಆರೋಗ್ಯ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಹಿಮೋಗ್ಲೋಬಿನ್ ಅತೀ ಅಗತ್ಯವಾಗಿದ್ದು, ಇದು ಪ್ರತಿಯೊಂದು ಜೀವಕೋಶಕ್ಕೂ ಆಮ್ಲಜನಕವನ್ನು ತಲುಪಿಸುವ ಪ್ರಮುಖ ಪ್ರೋಟೀನ್. ಹಿಮೋಗ್ಲೋಬಿನ್ ಕೊರತೆಯಿಂದ ಮಹಿಳೆಯರಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಏನು? ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಸ್ತ್ರೀ ರೋಗ ತಜ್ಞೆ ಡಾ. ವಿದ್ಯಾ ಭಟ್ (Dr. Vidya Bhat) ತಿಳಿಸಿ ಕೊಟ್ಟಿದ್ದಾರೆ. ರಕ್ತದಲ್ಲಿ ಹಿಮೋಗ್ಲೋಬಿನ್‌ನ ಮಟ್ಟ ಮಹಿಳೆಯರಿಗೆ ಶೇ. 11 ಪ್ರಮಾಣದಲ್ಲಾದರೂ ಇರಬೇಕು, ಇದರಿಂದ ಮಹಿಳೆಯ ದೇಹದ ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಇದೆ ಎಂದು ಅವರು ತಿಳಿಸಿದ್ದಾರೆ.
ಹಿಮೋಗ್ಲೋಬಿನ್ ಮಟ್ಟವು ಶೇ. 9ಕ್ಕಿಂತ ಕಡಿಮೆ ಇದ್ದರೆ ಸುಸ್ತು, ಕೈಕಾಲು ನೋವು ಇತ್ಯಾದಿ ಕಂಡು ಬರುವ ಸಾಧ್ಯತೆ ಇದೆ. ಮಹಿಳೆಯರಿಗೆ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಲು ಮುಟ್ಟಿನಿಂದ ದೇಹದಲ್ಲಿನ ರಕ್ತದ ಪ್ರಮಾಣ ಅತಿ ಹೆಚ್ಚು ಹೊರ ಹೋಗುವುದುಅಥವಾ ಗರ್ಭಾವಸ್ಥೆಯಲ್ಲಿ ರಕ್ತ ಹೀನತೆ ಪ್ರಮುಖ ಕಾರಣ. ಆ ಸಮಸ್ಯೆಯನ್ನು ನಿವಾರಿಸಿಕೊಳ್ಳದಿದ್ದರೆ ಇದು ಬಹಳ ಗಂಭೀರ ಸಮಸ್ಯೆ ಆಗಲಿದೆ. ಹೀಗಾಗಿ ಅದಕ್ಕೆ ಮೊದಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ವಿಡಿಯೊ ನೋಡಿ:
ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದಾಗ ಅದಕ್ಕೆ ಅನೇಕ ಚಿಕಿತ್ಸಾ ವಿಧಾನ ಇದೆ. ಶೇ. 7ರಷ್ಟು ಇದ್ದಾಗ ಬ್ಲಡ್ ಟ್ರಾನ್ಸ್‌ಫರ್ಮೇಶನ್ ಮಾಡಲಾಗುತ್ತದೆ. ಅದರ ಹೊರತಾಗಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ಇಂಜೆಕ್ಷನ್ ಕೊಡಲಾಗುತ್ತದೆ. ವಿಟಮಿನ್ ಹಾಗೂ ಐರನ್ ಮಾತ್ರೆ ಕೂಡ ನೀಡಲಾಗುತ್ತದೆ. ಇವುಗಳ ಜತೆಗೆ ನೀವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಹಿಮೋಗ್ಲೋಬಿನ್ ಅಂಶ ಹೆಚ್ಚಿರುವ ಆಹಾರಕ್ಕೆ ಸೇವಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಆರೋಗ್ಯವಾಗಿರಲಿ ಚಳಿಗಾಲ; ತಿಳಿದಿರಲಿ ಮನೆ ಮದ್ದು
ಈ ಆಹಾರ ಸೇವಿಸಿ
- ಪಾಲಕ್ ಸೊಪ್ಪು, ಬ್ರೊಕೊಲಿ, ಬೀಟ್ರೂಟ್ ಮತ್ತು ನುಗ್ಗೆ ಸೊಪ್ಪುಗಳನ್ನು ಹೆಚ್ಚು ಸೇವಿಸಬೇಕು.
- ಧಾನ್ಯ ಮತ್ತು ಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಕಡಲೆಕಾಳು, ಹೆಸರು ಕಾಳು, ಸೋಯಾಬೀನ್ ಮತ್ತಿತರ ಧಾನ್ಯಗಳ ಸೇವನೆ ಕೂಡ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲಿದೆ.
- ಡ್ರೈ ಫ್ರುಟ್ ಸೇವಿಸಬೇಕು, ಖರ್ಜೂರ, ಒಣದ್ರಾಕ್ಷಿ ಮತ್ತು ಬಾದಾಮಿ, ಅಂಜುರ ಇವುಗಳನ್ನು ಸೇವಿಸುವ ಮೂಲಕ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಬಹುದು.
- ರಾಗಿ ಸೇವಿಸುವುದು ಕೂಡ ಉತ್ತಮ.
ಪ್ರಯೋಜನೆ ಏನು?
ಹಿಮೋಗ್ಲೋಬಿನ್ ಸರಿ ಪ್ರಮಾಣದಲ್ಲಿ ಇರುವುದರಿಂದ ಈ ಎಲ್ಲ ಆರೋಗ್ಯ ಪ್ರಯೋಜನೆ ನಿಮಗೆ ಸಿಗಲಿದೆ.
- ಹಿಮೋಗ್ಲೋಬಿನ್ ಸರಿಯಾಗಿದ್ದರೆ ರಕ್ತದ ಹರಿವು ಚೆನ್ನಾಗಿ ಇರಲಿದೆ.
- ಕೂದಲು ಉದುರುವ ಸಮಸ್ಯೆ ಕಂಡುಬರಲಾರದು.
- ಮುಖದಲ್ಲಿ ಸುಕ್ಕು ಕಂಡುಬರಲಾರದು.
- ಸುಸ್ತು, ತಲೆತಿರುಗುವಿಕೆ ಇತ್ಯಾದಿ ಸಮಸ್ಯೆ ಬರಲಾರದು.
- ಉಗುರುಗಳು ಬಿಳಿ ಬಣ್ಣವಾಗಲಾರದು.
- ಮುಖದ ಮೇಲೆ ಮೊಡವೆ, ಚುಕ್ಕೆ ಇತ್ಯಾದಿ ಬರಲಾರದು.
ಹಿಮೋಗ್ಲೋಬಿನ್ ಸಮಸ್ಯೆಯಿಂದ ರಕ್ತ ಹೀನತೆ ಸಮಸ್ಯೆ ಕಂಡು ಬರುತ್ತದೆ. ಆಹಾರದಲ್ಲಿ ಸರಿಯಾದ ಪ್ರಮಾಣದ ಕಬ್ಬಿಣಾಂಶ ಇಲ್ಲದಿದ್ದರೆ ಎನಿಮಿಯಾ (ರಕ್ತ ಹೀನತೆ) ಉಂಟಾಗುತ್ತದೆ. ವಿಟಮಿನ್ ಬಿ12 ಮತ್ತು ಫೋಲಿಕ್ ಆ್ಯಸಿಡ್ ಕೊರತೆಯಿಂದಲೂ ರಕ್ತಹೀನತೆ ಕಂಡು ಬರಬಹುದು. ಮಹಿಳೆಯರಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದರೆ ಸಿಟ್ಟು ಬೇಗ ಬರುತ್ತದೆ. ಸಣ್ಣ ಪುಟ್ಟ ವಿಚಾರಕ್ಕೂ ಮನಸು ಚಂಚಲವಾಗಲಿದೆ. ಹೀಗಾಗಿ ರಕ್ತ ಹೀನತೆ ಸಮಸ್ಯೆ ಬರದಂತೆ ತಡೆಯಬೇಕಾದರೆ ಮೊದಲು ಹಿಮೋಗ್ಲೋಬಿನ್ ಮಟ್ಟ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಆಗಾಗ ಹಿಮೋಗ್ಲೋಬಿನ್ ಮಟ್ಟವನ್ನು ಚೆಕ್ ಮಾಡುತ್ತಿರಬೇಕು. ಹಿಮೋಗ್ಲೋಬಿನ್ ಕಡಿಮೆ ಇರುವುದು ಖಾತರಿಯಾದರೆ ಅದನ್ನು ಹೆಚ್ಚು ಮಾಡುವ ಆಹಾರ ಸೇವಿಸಬೇಕು ಎಂದು ಹೇಳಿದ್ದಾರೆ.