ನವದೆಹಲಿ:ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರಲು ತಿನ್ನುವ ಆಹಾರ (Health Tips) ಸತ್ವಯುತ ವಾಗಿರಬೇಕು ಎಂಬ ಗಿಳಿಪಾಠವನ್ನು ಹಲವಾರು ಬಾರಿ ಕೇಳಿದ್ದೇವೆ. ಅದರಲ್ಲೂ ಒಂದೇ ಬದುಕಿನಲ್ಲಿ ಹಲವು ಬಾರಿ ರೂಪಾಂತರಗೊಳ್ಳುವ ಮಹಿಳೆಯರ ದೇಹಕ್ಕೆ ಸದಾ ಕಾಲ ಸೂಕ್ತ ಪೋಷಕಾಂಶಗಳ ಒದಗುತ್ತಿರಬೇಕು. ಹಾಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶಗಳು ಯಾವುದು ಎಂಬುದರ ಅರಿವಿದ್ದರಷ್ಟೇ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.
ಕಬ್ಬಿಣ: ಮಹಿಳೆಯರ ಮಾಸಿಕ ಸ್ರಾವದ ಕಾರಣದಿಂದಾಗಿ ದೇಹಕ್ಕೆ ಮತ್ತೆಮತ್ತೆ ಮರುಪೂರಣ ಮಾಡುತ್ತಲೇ ಇರಬೇಕಾದ ಸತ್ವವಿದು. ದೇಹದ ಬೆಳವಣಿಗೆ, ಕೆಲವು ಚೋದಕಗಳ ಸ್ರವಿಸುವಿಕೆಗೆ ಮತ್ತು ಆಮ್ಲಜನಕವನ್ನು ದೇಹದೆಲ್ಲೆಡೆ ಪೂರೈಸುವುದಕ್ಕೆ ಅಗತ್ಯವಾದ ಕೆಂಪುರಕ್ತ ಕಣಗಳು ತಯಾರಿಕೆಗೆ ಕಬ್ಬಿಣ ಬೇಕೇಬೇಕು.
ಕೊರತೆಯ ಲಕ್ಷಣಗಳೇನು?: ಕಬ್ಬಿಣದ ಕೊರತೆ ಅಥವಾ ಅನೀಮಿಯದ ಲಕ್ಷಣಗಳ ಬಗ್ಗೆ ಅರಿವು ಅಗತ್ಯ. ವಿಪರೀತ ಸುಸ್ತು, ಆಯಾಸ, ಚರ್ಮ ಒಣಗುವುದು, ಎದೆನೋವು, ಉಸಿರಾಟದ ತೊಂದರೆ, ವೇಗವಾದ ಎದೆ ಬಡಿತ, ತಲೆನೋವು, ಉಗುರು ಮುರಿಯುವುದು ಇತ್ಯಾದಿ.
ಆಹಾರಗಳು: ಒಣಹಣ್ಣು ಮತ್ತು ಬೀಜಗಳು, ಮತ್ಸಾಹಾರ, ಹಸಿರು ಸೊಪ್ಪು ಮತ್ತು ತರಕಾರಿಗಳು, ಬಟಾಣಿ, ಹುರುಳಿಕಾಯಿ ಮತ್ತು ದ್ವಿದಳ ಧಾನ್ಯಗಳಲ್ಲಿ ಕಬ್ಬಿಣ ಅಂಶ ಸಾಂದ್ರಿತವಾಗಿದೆ.
ಫಾಲಿಕ್ ಆಮ್ಲ: ವಿಟಮಿನ್ ಬಿ ಮತ್ತು ಫಾಲಿಕ್ ಆಮ್ಲದ ಮಟ್ಟವನ್ನು ದೇಹದಲ್ಲಿ ಕಾಪಾಡಿ ಕೊಳ್ಳುವುದು ಪ್ರಮುಖವಾದದ್ದು. ದೇಹದಲ್ಲಿ ಹೊಸ ಕೋಶಗಳ ಸೃಷ್ಟಿಗೆ ಬಿ ಜೀವಸತ್ವ ಅಗತ್ಯವಾದರೆ, ನಮ್ಮ ನರಗಳು ಮತ್ತು ಬೆನ್ನುಹುರಿಯ ಆರೋಗ್ಯ ರಕ್ಷಣೆಗೆ ಫಾಲಿಕ್ ಆಮ್ಲ ಬೇಕು. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಇದು ಅತಿ ಅಗತ್ಯವಾದ ಸತ್ವ. ಗರ್ಭದಲ್ಲಿರುವ ಶಿಶುವಿನ ಮೆದುಳಿನ ಮತ್ತು ಬೆನ್ನು ಹುರಿಯ ಬೆಳವಣಿಗೆ ಕುಂಠಿತವಿಲ್ಲದೆ ಸಾಗಬೇಕಾದರೆ ಫಾಲಿಕ್ ಆಮ್ಲ ಇರಲೇಬೇಕು.
ಇದನ್ನು ಓದಿ:Spinal health: ಬೆನ್ನು ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಆಹಾರಗಳು: ಮೀನುಗಳು, ಅಗಸೆ ಬೀಜ, ಬಾದಾಮಿ, ವಾಲ್‌ನಟ್, ಪಾಲಕ್ ಸೊಪ್ಪು, ಕಿತ್ತಳೆ ಹಣ್ಣು.
ವಿಟಮಿನ್ ಡಿ: ಭಾರತೀಯ ಮಹಿಳೆಯಲ್ಲಿ ವಿಟಮಿನ್ ಡಿ ಕೊರತೆ ಸಾಮಾನ್ಯ ಎಂಬುದು ಆತಂಕ ಕಾರಿ ಅಂಶ. ಮೂಳೆಗಳ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳಲು, ಉರಿಯೂತ ಶಮನಕ್ಕೆ- ಹೀಗೆ ಹಲವಾರು ಕಾರಣಗಳಿಗೆ ಡಿ ಜೀವಸತ್ವ ಅಗತ್ಯ. ಆಸ್ಟಿಯೊಪೊರೊಸಿಸ್‌ನಂಥ ಸಮಸ್ಯೆಗಳು ಬಾರದಂತೆ ತಡೆಯಲು, ದೇಹವು ಕ್ಯಾಲ್ಶಿಯಂ ಹೀರಿಕೊಳ್ಳಲು ಸಹ ಈ ಪೋಷಕಾಂಶ ಮುಖ್ಯ ಪಾತ್ರ ವಹಿಸುತ್ತದೆ. ಸೂರ್ಯನ ಬಿಸಿಲಿನಲ್ಲಿ ಈ ಪೋಷಕಾಂಶ ನೈಸರ್ಗಿಕವಾಗಿಯೇ ದೊರೆಯುತ್ತದೆ. ಬಿಸಿಲಿಗೆ ಒಡ್ಡಿಕೊಳ್ಳುವಷ್ಟು ವ್ಯವಧಾನ ಇರುವುದು ಮುಖ್ಯ.
ಆಹಾರಗಳು: ಮೊಟ್ಟೆಯ ಹಳದಿ ಭಾಗ, ಚೀಸ್, ಮೀನು ಇತ್ಯಾದಿಗಳಿಂದ ವಿಟಮಿನ್ ಡಿ ಪಡೆಯಬಹುದು.
ಕ್ಯಾಲ್ಶಿಯಂ: ದೇಹದ ಹಂದರ ಗಟ್ಟಿಯಾಗಿರಬೇಕೆಂದರೆ ಕ್ಯಾಲ್ಶಿಯಂ ಇಲ್ಲದೆ ಮುಂದಿನ ಮಾತೇ ಇಲ್ಲ. ಈ ಸತ್ವ ಬದುಕಿನ ಎಲ್ಲಾ ಹಂತಗಳಲ್ಲೂ ಗುರುತರವಾದದ್ದು. ಎಳೆವೆಯಲ್ಲಿ ಬೆಳವಣಿಗೆಗೆ, ಹರೆಯದಲ್ಲಿ ತಾಯ್ತನಕ್ಕೆ, ನಡುವಯಸ್ಸಿನಲ್ಲಿ ಋತುಬಂಧವಾಗುವಾಗ, ವೃದ್ಧಾಪ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ- ಹೀಗೆ ಎಲ್ಲಾ ವಯೋಮಾನದಲೂ ಇದು ಅಗತ್ಯ.
ಕೊರತೆಯ ಲಕ್ಷಣಗಳು: ಈ ಪೌಷ್ಟಿಕಾಂಶದ ಕೊರತೆಯಾದರೆ ಹಲ್ಲಿನಲ್ಲಿ ಬದಲಾವಣೆ, ಕೂದಲು ಮತ್ತು ಉಗುರಿನ ಅನಾರೋಗ್ಯ, ಮೈ-ಕೈ ನೋವು, ಸ್ನಾಯು ಸೆಳೆತ, ಮೂಳೆಗಳು ಶಿಥಿಲವಾಗುವುದು, ಕೀಲುಗಳ ಸವೆತ, ಶಕ್ತಿಹೀನತೆ, ಸುಸ್ತು- ಆಲಸ್ಯ.
ಆಹಾರಗಳು: ಹಾಲು, ಮೊಸರು, ಚೀಸ್, ರಾಗಿ, ಬ್ರೊಕೊಲಿಯಲ್ಲಿ ಕ್ಯಾಲ್ಶಿಯಂ ಹೇರಳವಾಗಿದೆ.
ಮೆಗ್ನೀಶಿಯಂ: ರಕ್ತದೊತ್ತಡ ಮತ್ತು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ತೂಗಿಸಿಕೊಂಡು ಹೋಗಲು ಬಯಸುವಿರಾದರೆ ಮೆಗ್ನೀಶಿಯಂ ಸತ್ವವನ್ನು ಅಗತ್ಯವಾಗಿ ತಿನ್ನಿ. ತಾಯ್ತನ ಆರೋಗ್ಯಕರವಾಗಿ ಇರಬೇಕೆಂದರೂ ಈ ಪೌಷ್ಟಿಕಾಂಶ ದೇಹಕ್ಕೆ ದೊರೆಯಲೇಬೇಕು.
ಲಕ್ಷಣಗಳು: ಆಯಾಸ, ಖಿನ್ನತೆ, ಮಲಬದ್ಧತೆ, ತಲೆ ಸುತ್ತುವುದು, ವಾಂತಿ, ನಿದ್ರಾಹೀನತೆ, ಸ್ನಾಯುಸೆಳೆತ ಕಾಣಿಸಿಕೊಳ್ಳಬಹುದು.
ಆಹಾರ: ಬೀಜಗಳು, ಪಾಲಕ್ ಸೊಪ್ಪು, ಓಟ್, ಅವಕಾಡೊ, ಸೂರ್ಯಕಾಂತಿ ಬೀಜ, ಕುಂಬಳಕಾಯಿ ಬೀಜ, ಹಾಲು ಮುಂತಾದವುಗಳಿಂದ ಮೆಗ್ನೀಶಿಯಂ ದೊರೆಯುತ್ತದೆ