ನವದೆಹಲಿ: ಅರವತ್ತಕ್ಕೆ ಅರುಳು-ಮರುಳು ಎಂಬ ಮಾತಿದೆ. ಆದರೆ ಹಾಗೇನು ಆಗಲೇಬೇಕೆಂದು ನಿಯಮವಿಲ್ಲ. ಎಂಬತ್ತರಲ್ಲೂ ನೆನಪು ಚುರುಕಾಗಿರುವವರು ಎಷ್ಟೋ ಮಂದಿ ಇದ್ದಾರಲ್ಲವೇ? ಯಾವುದನ್ನು ನಾವು ಸರಿಯಾಗಿ ಬಳಸುವುದಿಲ್ಲವೋ ಅವೆಲ್ಲವೂ ಜಡವಾಗಿ, ನಶಿಸುವುದು ಸೃಷ್ಟಿಯ ನಿಯಮ. ಹಾಗೆಯೇ ಮೆದುಳಿನ ಉಪಯೋಗವೂ ಸರಿಯಾಗಿ ಆಗದಿದ್ದರೆ ಅರುಳು ಮರುಳು ಸಾಮಾನ್ಯ. ಏನು ಉಪಯೋಗವೆಂದರೆ? ಸದಾ ಯೋಚನೆ, ಚಿಂತೆ, ಒತ್ತಡದಲ್ಲಿ ಒದ್ದಾಡುವುದು ಅಥವಾ ಇನ್ನೇನೋ ಮಾಡುವುದೆಂದೇ? ನಮ್ಮ ದೇಹಕ್ಕೆ ವಯಸ್ಸಾಗಿ ಕ್ಷಮತೆ ಕುಗ್ಗಿದಂತೆ ಮೆದು ಳಿಗೂ ವಯಸ್ಸಾಗುತ್ತದಲ್ಲ, ಏನು ಮಾಡುವುದು? ವಿಶ್ವ ಮೆದುಳು ದಿನ (World Brain Day) ಎಂದು ಜುಲೈ 22 ಅನ್ನು ಗುರುತಿಸಲಾಗಿದ್ದರೂ, ನಾವು ಬದುಕಿರುವಷ್ಟು ದಿನವೂ ಮೆದುಳು ದಿನವೇ! ಆದರೂ ದೇಹದ ಈ ಮಹತ್ವದ ಅಂಗದ ದೇಖರೇಖಿ ಸರಿಯಾಗಿ ಮಾಡಿ ಎಂದು ನೆನಪಿಸಲು ನೆಪಕ್ಕೊಂದು ದಿನ.
ನಮಗೆ ವಯಸ್ಸಾದಂತೆ ಮೆದುಳಿನ ಗಾತ್ರ ಕುಗ್ಗುವುದು ನಿಜ. ಇರುವಷ್ಟರಲ್ಲೇ ಅದಕ್ಕೆ ಸರಿಯಾಗಿ ಕೆಲಸ ಕೊಡದಿದ್ದರೆ ಡಿಮೆನ್ಶಿಯಾ ಇಲ್ಲವೇ ಅಲ್‌ಜೈಮರ್ಸ್‌ನಂಥ ಹಲವು ರೀತಿಯ ರೋಗಗಳು ಅಮರಿಕೊಳ್ಳುತ್ತವೆ. ಮೆದುಳಿನ ಕ್ಷಮತೆ ಕುಗ್ಗಿದಂತೆ ದೇಹ ಇನ್ನಷ್ಟು ಕ್ಷಯಿಸುತ್ತದೆ. ಹಾಗಾಗಿ ಮೆದುಳನ್ನು ಪೋಷಿಸುವ ಆಹಾರಗಳ ಮೂಲಕ, ವ್ಯಾಯಾಮ, ಹೊಸದನ್ನು ಕಲಿಯುವುದು, ಸ್ನೇಹಿತರ ಸಂಪರ್ಕ ಮತ್ತು ಕ್ರಿಯಾಶೀಲವಾದ ಬದುಕಿನ ಮೂಲಕ ನಮ್ಮನ್ನು ನಾವು ಆರೋಗ್ಯ ಪೂರ್ಣವಾಗಿ ಇರಿಸಿಕೊಳ್ಳಲು ಸಾಧ್ಯವಿದೆ. ಹಾಗಾದರೆ ಏನು ಮಾಡಬಹುದು?
ವ್ಯಾಯಾಮ: ನೆನಪು ಮತ್ತು ಆಲೋಚನೆಗಳನ್ನು ನಿರ್ವಹಿಸುವ ಮೆದುಳಿನ ಭಾಗವು ಕುಗ್ಗದಂತೆ ಕಾಪಾಡಿಕೊಳ್ಳಲು ವ್ಯಾಯಾಮಗಳಿಂದ ಸಾಧ್ಯವಿದೆ ಎನ್ನುತ್ತಾರೆ ತಜ್ಞರು. ಈಜು, ಸೈಕಲ್ ಹೊಡೆ ಯುವುದು, ಜಾಗಿಂಗ್, ನೃತ್ಯದಂಥ ಏರೋಬಿಕ್ ಚಟುವಟಿಕೆಗಳು ಮೆದುಳಿಗೆ ಮರೆವಿನ ತೆರೆ ಮುಚ್ಚದಂತೆ ಕಾಪಾಡುತ್ತವೆ. ಮಾತ್ರವಲ್ಲ ಈ ವ್ಯಾಯಾಮಗಳಿಂದ ಒತ್ತಡ, ಖಿನ್ನತೆಗಳನ್ನು ಯಾವುದೇ ಔಷಧಿಗಳ ನೆರವಿಲ್ಲದೆಯೇ ಕ್ರಮೇಣ ದೂರ ಮಾಡಬಹುದು. ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ವ್ಯಾಯಾಮದ ಮೂಲಕ ನಿಯಂತ್ರಿಸಲು ಸಾಧ್ಯವಿದ್ದು, ಇದರಿಂದ ಮೆದುಳಿನ ಆರೋಗ್ಯವೂ ಹೆಚ್ಚುತ್ತದೆ. ಜತೆಗೆ ಶರೀರದ ಚೈತನ್ಯವೂ ಹೆಚ್ಚಿ, ನಿದ್ದೆ ಸುಸೂತ್ರವಾಗಿ ದೇಹ ಮತ್ತು ಮನಸ್ಸುಗಳ ಒಟ್ಟಾರೆ ಸ್ವಾಸ್ಥ್ಯ ವೃದ್ಧಿಸುತ್ತದೆ.
ಆಹಾರ: ಮೆದುಳಿಗೆಂದೇ ಪ್ರತ್ಯೇಕ ಆಹಾರಗಳಿಗೆ ಎಂದು ಹೇಳುತ್ತಿಲ್ಲ. ಆದರೆ ಕೆಲವು ಆಹಾರಗಳು ಮೆದುಳಿಗೆ ಹೆಚ್ಚಿನ ಗ್ರಾಸವನ್ನು ಒದಗಿಸುತ್ತವೆ. ಒಮೇಗಾ 3 ಕೊಬ್ಬಿನಾಮ್ಲವಿರುವ ಆಹಾರಗಳು ಮೆದುಳಿಗೆ ಅಗತ್ಯವಾಗಿ ಬೇಕು. ಇದಲ್ಲದೆ ಅಹಾರದಲ್ಲಿ ಸಾಕಷ್ಟು ಪ್ರೊಟೀನ್, ನಾರು ಮತ್ತು ಉತ್ಕರ್ಷಣ ನಿರೋಧಕಗಳು ಇರಬೇಕು. ಹಾಗಾಗಿ ಹಸಿರು ತರಕಾರಿಗಳು, ಇಡೀ ಧಾನ್ಯಗಳು, ಡೈರಿ ಉತ್ಪನ್ನಗಳು, ಒಣ ಹಣ್ಣು, ಬಾದಾಮಿ, ವಾಲ್‌ನಟ್, ಬೆಣ್ಣೆಹಣ್ಣು, ಮೊಟ್ಟೆ ಮತ್ತು ಕೊಬ್ಬಿನ ಮೀನುಗಳು ಆಹಾರದ ಭಾಗವಾದಷ್ಟೂ ಮೆದುಳಿಗೆ ಗ್ರಾಸ ಚೆನ್ನಾಗಿ ದೊರೆಯುತ್ತದೆ.
ಮೆದುಳಿಗೆ ಕಸರತ್ತು: ದೇಹಕ್ಕೆ ಮಾಡುವ ಕಸರತ್ತಿನಲ್ಲೇ ಮೆದುಳಿಗೂ ಸಾಕಷ್ಟು ರಕ್ತ ಸಂಚಾರ ಹೆಚ್ಚುತ್ತದೆ ಎನ್ನುವುದು ನಿಜ. ಜತೆಗೆ ಮೆದುಳಿಗೇ ಇನ್ನಷ್ಟು ವ್ಯಾಯಾಮ ಬೇಕು. ಮಾನಸಿಕ ಚುರುಕುತನವನ್ನು ಪರೀಕ್ಷಿಸುವಂಥ ಕಸರತ್ತುಗಳು ಅಗತ್ಯ. ಅಂದರೆ ಒಗಟು ಅಥವಾ ಪಝಲ್ ಬಿಡಿಸುವುದು, ನೆನಪಿನ ಶಕ್ತಿಯ ಆಟ, ತರ್ಕದ ಕಸರತ್ತುಗಳಲ್ಲಿ ಆಗಾಗ ತೊಡಗಿಸಿಕೊಳ್ಳುವುದು ಅಗತ್ಯ.
ಇದನ್ನು ಓದಿ: Health Tips: ವಯಸ್ಕರಲ್ಲಿ ಮೊಡವೆ: ಪರಿಹಾರವೇನು?
ಕೆಲವು ಆಟಗಳು ಬ್ರೈನ್ ಟ್ರೇನರ್‌ಗಳೆಂದೇ ಪ್ರಸಿದ್ಧ. ಉದಾ, ಚದುರಂಗ ಆಡುವುದು, ಸುಡೊಕು, ಪದಬಂಧ ಬಿಡಿಸುವುದು- ಇಂಥವು. ಯಾವುದೇ ರೀತಿಯ ತರ್ಕಬದ್ಧ ಆಟಗಳು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ನಮ್ಮ ಸಾಧ್ಯತೆಯನ್ನು ಹೆಚ್ಚಾಗಿ ಸವಾಲಿಗೆ ಒಡ್ಡಿಕೊಂಡಷ್ಟೂ ಸಾಮರ್ಥ್ಯ ಹಿಗ್ಗುತ್ತದೆ ಎಂಬುದು ಗಮನದಲ್ಲಿರಲಿ.
ಮನೋಚಿತ್ರೀಕರಣ: ಇದನ್ನು ಸಾಮಾನ್ಯವಾಗಿ ವಿಶುವಲೈಸೇಷನ್ ಎಂದು ಕರೆಯಲಾಗುತ್ತದೆ. ಇಲ್ಲದಿರುವ ಯಾವುದಾದರೊಂದು ಸನ್ನಿವೇಶವನ್ನು ಕಲ್ಪಿಸಿಕೊಂಡು ಮೆದುಳಿಗೆ ವ್ಯಾಯಾಮ ಮಾಡಿಸುವುದು. ಧ್ಯಾನದಂಥ ಕ್ರಿಯೆಗಳ ಪ್ರಮುಖ ಭಾಗವಾಗಿ ಇದನ್ನು ಗುರುತಿಸಲಾಗುತ್ತದೆ. ಇದರಿಂದ ಎಷ್ಟೋ ಮಾನಸಿಕ ಸಮಸ್ಯೆಗಳಿಗೆ ಸಮಾಧಾನವನ್ನೂ ಕಲ್ಪಿಸಬಹುದು.
ಹೊಸದನ್ನು ಕಲಿಯುವುದು: ʻಇನ್ನೇಕು ಕಲಿಯುವುದು? ಎಲ್ಲ ಮುಗೀತು!ʼ ಎಂಬ ಮನೋಸ್ಥಿತಿಗೆ ಬಂದಿರೋ- ನಿಜಕ್ಕೂ ಎಲ್ಲವೂ ಮುಗಿದಂತೆ! ಹೊಸದು ಇಂಥದ್ದೇ ಆಗಬೇಕೆಂದಿಲ್ಲ- ಹೊಸ ಹಾಡು, ಅಡುಗೆ, ಆಟ, ಕಲೆ, ಭಾಷೆ… ಹೀಗೆ ಏನನ್ನೂ ಕಲಿಯಬಹುದು. ಅಂತೂ ಮೆದುಳಿಗೊಂದು ಹೊಸ ಚಟುವಟಿಕೆ ಬೇಕು. ಇದರಿಂದ ಹೊಸದಾಗಿ ನರಗಳ ಸಂವಹನ ಏರ್ಪಡುತ್ತಲೇ ಇರುತ್ತದೆ. ಇದರಿಂದಾಗುವ ಪ್ರಯೋಜನ ಬಹುದೊಡ್ಡದು.
ಗೆಳೆಯರಿರಲಿ: ಹೌದು, ಮೋರಿ ಕಟ್ಟೆಯ ಮೇಲೆ ಕುಳಿತ ಅಜ್ಜಂದಿರನ್ನು ನೋಡಿ ಎಂದಿಗೂ ನಗಬೇಡಿ! ಇದು ಅವರ ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿದ್ದು. ಕುಟುಂಬದಲ್ಲೇ ಸಾಕಷ್ಟು ಹೇಳಿ-ಕೇಳಿ ಮಾಡುವವರಿದ್ದಾರೆ ಎನ್ನುವುದು ಇಂದಿನ ದಿನಗಳಲ್ಲಿ ಅಪರೂಪ. ಹಾಗಿರುವಾಗ ಮನಸ್ಸಿನ ಭಾರವನ್ನು ಹಗುರ ಮಾಡುವುದೆಂತು? ಹಾಗಾಗಿ ಸಾಮಾಜಿಕ ಸಂಪರ್ಕಗಳು ಇರಬೇಕು. ಇದು ಸಹ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.