World Hepatitis Day: ಇಂದು ವಿಶ್ವ ಹೆಪಟೈಟಿಸ್ ದಿನ- ಯಕೃತ್‌ನ ಕಾಳಜಿ ಏಕೆ ಮಾಡಬೇಕು?
ಜುಲೈ ತಿಂಗಳ 28ನೇ ದಿನ ದಂದು, ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ. ಇಂದೇ ಈ ದಿನವನ್ನು ಗುರುತಿಸುವುದಕ್ಕೂ ಕಾರಣವಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಬರೂಕ್ ಬ್ಲೂಮ್‌ಬರ್ಗ್ ಅವರ ಜನ್ಮದಿನ. ಹೆಪಟೈಟಿಸ್ ಬಿ ವೈರಸ್ಸನ್ನು ಮೊದಲಿಗೆ ಪತ್ತೆ ಮಾಡಿ, ಈ ವೈರಸ್‌ಗೆ ಲಸಿಕೆಯನ್ನು ತಯಾರಿಸಿದವರಾತ ಆಗಿದ್ದಾರೆ.


ನವದೆಹಲಿ: ದೇಹದ ಪ್ರಮುಖ ಅಂಗವಾದ ಯಕೃತ್ತನ್ನು ಜೋಪಾನ ಮಾಡುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಇಂದು, ಅಂದರೆ ಜುಲೈ ತಿಂಗಳ 28ನೇ ದಿನ ದಂದು, ವಿಶ್ವ ಹೆಪಟೈಟಿಸ್ (World Hepatitis Day) ದಿನವನ್ನು ಆಚರಿಸಲಾಗುತ್ತದೆ. ಇಂದೇ ಈ ದಿನ ವನ್ನು ಗುರುತಿಸುವುದಕ್ಕೂ ಕಾರಣವಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಬರೂಕ್ ಬ್ಲೂಮ್‌ಬರ್ಗ್ ಅವರ ಜನ್ಮದಿನ. ಹೆಪಟೈಟಿಸ್ ಬಿ ವೈರಸ್ಸನ್ನು ಮೊದಲಿಗೆ ಪತ್ತೆ ಮಾಡಿ, ಈ ವೈರಸ್‌ಗೆ ಲಸಿಕೆಯನ್ನು ತಯಾರಿಸಿದವರಾತ.
ಏನಿದು ಹೆಪಟೈಟಿಸ್?: ಸರಳವಾಗಿ ಹೇಳುವುದಾದರೆ ಯಕೃತ್ತಿನ ಉರಿಯೂತ. ಇದರಿಂದಾಗಿ ತನ್ನ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಯಕೃತ್ತಿಗೆ ಸಾಧ್ಯವಾಗುವುದಿಲ್ಲ. ಕ್ಲುಪ್ತ ಸಮ ಯದಲ್ಲಿ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದರಾಯಿತು; ಇಲ್ಲದಿದ್ದರೆ ಜೀವಕ್ಕೂ ಆಪತ್ತು ಬರುವಷ್ಟು ಗಂಭೀರವಾಗಿ ಪರಿಣಮಿಸುತ್ತದೆ ಈ ಕಾಯಿಲೆ. ಅಂದರೆ ಯಕೃತ್ತಿನ ವೈಫಲ್ಯ ಅಥವಾ ಯಕೃತ್ ಕ್ಯಾನ್ಸರ್‌ಗೂ ಕಾರಣವಾಗಬಹುದು.
ಕಾರಣಗಳು: ಯಕೃತ್ತಿನ ಅವಸ್ಥೆ ಹೀಗಾಗುವುದಕ್ಕೆ ಹಲವಾರು ಕಾರಣಗಳಿರಬಹುದು. ವೈರಸ್ ಸೋಂಕು, ಮದ್ಯಪಾನ, ಕೆಲವು ಔಷಧಿಗಳು, ವಿಷಕಾರಿ ರಾಸಾಯನಿಕಗಳು, ಆಟೋಇಮ್ಯೂನ್ ರೋಗವಾಗಿ, ಕಲುಷಿತ ಆಹಾರದಂಥ ಯಾವುದೇ ಕಾರಣಗಳಿಂದ ಹೆಪಟೈಟಿಸ್ ಉಂಟಾಗ ಬಹುದು. ಆದರೆ ವೈರಸ್‌ಗಳಿಂದ ಬರುವ ಹೆಪಟೈಟಿಸ್‌ಗಳು ವ್ಯಾಪಕವಾಗಿವೆ.
ಲಕ್ಷಣಗಳೇನು?: ವೈರಲ್ ಹೆಪಟೈಟಿಸ್‌ನಲ್ಲೂ ಹಲವಾರು ರೀತಿಯಿದೆ. ಹೆಪಟೈಟಿಸ್ ಎ, ಬಿ, ಸಿ, ಡಿ, ಇ ಎಂದು ಅವುಗಳನ್ನು ಗುರುತಿಸಲಾಗಿದ್ದು, ಒಂದೊಂದೂ ಭಿನ್ನ ರೀತಿಯಲ್ಲಿ ಒಬ್ಬರಿಂದೊ ಬ್ಬರಿಗೆ ಹರಡುತ್ತದೆ. ಆದರೆ ಲಕ್ಷಣಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ಆಯಾಸ, ಸುಸ್ತು, ಚರ್ಮ ಮತ್ತು ಕಣ್ಣು ಹಳದಿಯಾಗುವುದು (ಕಾಮಾಲೆ), ಕಿಬ್ಬೊಟ್ಟೆಯಲ್ಲಿ ನೋವು, ಹೊಟ್ಟೆ ತೊಳೆಸುವುದು ಮತ್ತು ವಾಂತಿ, ಹಸಿವಿಲ್ಲದಿರುವುದು, ಗಾಢ ಬಣ್ಣದ ಮೂತ್ರ, ಕೀಲುಗಳಲ್ಲಿ ನೋವು ಮತ್ತು ಜ್ವರ ಸಾಮಾನ್ಯವಾಗಿ ಕಂಡುಬರುತ್ತವೆ. ಕ್ಲಿನಿಕಲ್ ತಪಾಸಣೆಗಳು ಮತ್ತು ರಕ್ತಮಾದರಿಯ ಪರೀಕ್ಷೆ ಯಿಂದ ಈ ಸಮಸ್ಯೆಯನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡಬಹುದು. ಆದರೆ ಸಮಸ್ಯೆ ತೀವ್ರವಾಗಿದ್ದಲ್ಲಿ, ಯಕೃತ್ತಿನ ಬಯಾಪ್ಸಿಯನ್ನು ಮಾಡಬೇಕಾಗಬಹುದು.
ಹೇಗೆ ಹರಡುತ್ತದೆ?: ಒಂದೊಂದು ಬಗೆಯ ಹೆಪಟೈಟಿಸ್ ರೋಗ ಹರಡುವ ಬಗೆ ಮತ್ತು ಅದಕ್ಕೆ ಚಿಕಿತ್ಸೆಯೂ ಭಿನ್ನವಾಗಿಯೇ ಇದೆ. ಯಾವುದು ಹೇಗೆ, ಏನು ಎಂಬುದನ್ನು ಚಿಟಿಕಾಗಿ ಗಮನಿಸೋಣ.
ಹೆಪಟೈಟಿಸ್ ಎ- ಇದು ಸಾಮಾನ್ಯವಾಗಿ ಬರುವುದು ಕಲುಷಿತ ನೀರು ಮತ್ತು ಆಹಾರದಿಂದ. ಜಾಂಡೀಸ್ ಹೆಸರಿನಲ್ಲಿ ಈ ಕಾಯಿಲೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ, ಆಹಾರ ಮತ್ತು ವಿಶ್ರಾಂತಿಯಿಂದ ಇದನ್ನು ಸಂಪೂರ್ಣ ಗುಣಪಡಿಸಿ ಕೊಳ್ಳಬಹುದು. ಇದಕ್ಕೆ ಲಸಿಕೆಯಿದೆ.
ಹೆಪಟೈಟಿಸ್ ಬಿ: ಇದು ಸಾಮಾನ್ಯವಾಗಿ ರಕ್ತ, ಎಂಜಲು, ವೀರ್ಯಗಳಂಥ ದೇಹದ ದ್ರವಗಳಿಂದ ಹರಡುವಂಥದ್ದು. ತೀವ್ರ ಉರಿಯೂತ ಉಂಟುಮಾಡುವ ಈ ರೋಗದ ವಿರುದ್ಧ ನವಜಾತ ಶಿಶುಗಳಿಗೆ ಲಸಿಕೆ ನೀಡಲಾಗುತ್ತದೆ.
ಹೆಪಟೈಟಿಸ್ ಸಿ: ವೈದ್ಯಕೀಯ ಬಳಕೆಯ ವಸ್ತುಗಳನ್ನು (ಸೂಜಿ, ಸಿರಿಂಜ್ ಇತ್ಯಾದಿ) ಸರಿಯಾಗಿ ಶುಚಿ ಮಾಡದಿದ್ದಾಗ, ಅಸುರಕ್ಷಿತ ಲೈಂಗಿಕ ಸಂಪರ್ಕ, ರಕ್ತಪೂರಣದ ಸಂದರ್ಭದಲ್ಲಿ, ತಾಯಿಯಿಂದ ನವಜಾತ ಶಿಶುವಿಗೆ ಈ ವೈರಸ್ ವರ್ಗಾವಣೆಯಾಗುತ್ತದೆ.
ಹೆಪಟೈಟಿಸ್ ಡಿ: ಈಗಾಗಲೇ ಹೆಪಟೈಟಿಸ್ ಬಿ ಸೋಂಕಿನಿಂದ ಬಳಲುತ್ತಿರುವವರಿಗೆ ಹೆಪಟೈಟಿಸ್ ಡಿ ಬಾಧೆ ಬರಬಹುದು. ಇದೂ ಸಹ ದೇಹದ ದ್ರವಗಳಿಂದಲೇ ಹರಡುವಂಥದ್ದು. ಇದಕ್ಕೆಂದೇ ಪ್ರತ್ಯೇಕ ಲಸಿಕೆ ಅಥವಾ ಚಿಕಿತ್ಸಾ ವಿಧಾನವಿಲ್ಲ. ಆದರೆ ದೀರ್ಘ ಕಾಲದವರೆಗೆ ಲಕ್ಷಣಾಧಾರಿತ ಚಿಕಿತ್ಸೆಯನ್ನು ವೈದ್ಯರು ನೀಡಬಹುದು
ಇದನ್ನು ಓದಿ:Health Tips: ಮಳೆಗಾಲದಲ್ಲಿ ಅಲರ್ಜಿ ನಿಯಂತ್ರಣ ಹೇಗೆ?
ಹೆಪಟೈಟಿಸ್ ಇ: ಇದಕ್ಕೂ ಪ್ರತ್ಯೇಕ ಲಸಿಕೆಯಿಲ್ಲ. ಕಲುಷಿತ ಆಹಾರ ಮತ್ತು ನೀರಿನಿಂದಲೇ ಈ ವೈರಸ್ ಹರಡುತ್ತದೆ. ಇದಕ್ಕೆ ಆಂಟಿವೈರಲ್ ಔಷಧಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಮುಂಜಾಗ್ರತೆ: ನೀರು ಮತ್ತು ಆಹಾರದ ಶುದ್ಧತೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಯಕೃತ್ತಿನ ಸ್ವಾಸ್ಥ್ಯ ರಕ್ಷಣೆಗೆ ಸೂಕ್ತವಾದ ಆಹಾರ ಮತ್ತು ವ್ಯಾಯಾಮದ ಬಗ್ಗೆ ಗಮನವಿರಲಿ. ಅಸುರಕ್ಷಿತ ಲೈಂಗಿಕ ಸಂಪರ್ಕ ಎಂದರೆ ಅಪಾಯಕ್ಕೆ ಆಹ್ವಾನವಿತ್ತಂತೆ. ಕ್ಷೌರದಂಗಡಿಗಳಲ್ಲಿ ಖಾಸಗಿ ವಸ್ತುಗಳನ್ನು ಬಳಸಿಕೊಳ್ಳಿ, ಅಂಗಡಿಯ ಸಾರ್ವಜನಿಕ ವಸ್ತುಗಳು ಬೇಡ. ಸೂಜಿ, ಸಿರಿಂಜ್ ಮುಂತಾದ ವೈದ್ಯಕೀಯ ವಸ್ತುಗಳನ್ನು ಸಂಪೂರ್ಣ ಸ್ಟೆರಿಲೈಜ್ ಮಾಡಿ ಅಥವಾ ಹೊಸದನ್ನೇ ಬಳಸಿ. ರಕ್ತದಾನ ಪಡೆಯಬೇಕಾದರೆ ನೋಂದಾಯಿತ ರಕ್ತನಿಧಿಗಳನ್ನೇ ಸಂಪ ರ್ಕಿಸಿ. ಯಾವುದೇ ವೈದ್ಯಕೀಯ ಪ್ರಕ್ರಿಯೆಗಳಿಗೆ ಒಳಗಾಗಬೇಕಾದರೆ ನೋಂದಾಯಿತ ವೈದ್ಯರು ಮತ್ತು ಆಸ್ಪತ್ರೆಗಳಿಗೇ ಭೇಟಿ ನೀಡಿ.