ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World TB Day: ಕ್ಷಯ ರೋಗ ತಡೆಯುವ ನಿಟ್ಟಿನಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮ ಜಾರಿ: ದಿ‌ನೇಶ್ ಗುಂಡೂರಾವ್

World TB Day: ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬಿಸಿಜಿ ಲಸಿಕೆ ಕಾರ್ಯಕ್ರಮಕ್ಕೆ ಸಚಿವ ದಿ‌ನೇಶ್ ಗುಂಡೂರಾವ್ ಚಾಲನೆ

Profile Siddalinga Swamy Mar 25, 2025 4:58 PM

ಬೆಂಗಳೂರು: ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದರು. ವಿಶ್ವ ಕ್ಷಯರೋಗ ದಿನವಾದ (World TB Day) ಇಂದು ಬಿಸಿಜಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ 1060 ಗ್ರಾಮ ಪಂಚಾಯಿತಿಗಳನ್ನು ಕ್ಷಯ ರೋಗ ಮುಕ್ತ ಪಂಚಾಯಿತಿಗಳನ್ನಾಗಿ ರೂಪಿಸಲಾಗಿದೆ. ಅಲ್ಲದೇ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕ್ಷಯ ರೋಗಿಗಳಿಗೆ 98721 ಪೌಷ್ಠಿಕ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ. ಸಾರ್ವಜನಿಕರು ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದು ಹೇಳಿದರು.

ಬಿಸಿಜಿ ಲಸಿಕೆ ಸುರಕ್ಷಿತ ಲಸಿಕೆಯಾಗಿದ್ದು, ಸಾರ್ವಜನಿಕರು ಅಪನಂಬಿಕೆ ಪಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ಸ್ವತಃ ಆರೋಗ್ಯ ಇಲಾಖೆ ನಿರ್ದೇಶಕಿ ತ್ರಿವೇಣಿ ಅವರು ಸೇರಿದಂತೆ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಕಾರ್ಯಕ್ರಮದಲ್ಲಿ ಬಿಸಿಜಿ ಲಸಿಕೆ ಪಡೆದರು.

ಕರ್ನಾಟಕ ಕ್ಷಯ ಮುಕ್ತ ಕಾರ್ಯತಂತ್ರ ಭಾಗವಾಗಿ ಎಲ್ಲಾ ಕ್ಷಯರೋಗಿಗಳಿಗೆ ಸಾರ್ವತ್ರಿಕವಾಗಿ ಚಿಕಿತ್ಸೆ ದೊರಕಿಸುವುದು ಮತ್ತು ಶೂನ್ಯ ಕ್ಷಯ ಮರಣದ ಗುರಿ ಹಾಕಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯದಲ್ಲಿ 2024 ರ ಸಾಲಿನಲ್ಲಿ 20 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಕ್ಷಯರೋಗಿಗಳ ಕಫ ಪರೀಕ್ಷೆಗಳನ್ನು ಮಾಡಲಾಗಿದೆ ಹಾಗೂ ಖಾಸಗಿ ವಲಯದಿಂದ 28122 ಮತ್ತು ಸಾರ್ವಜನಿಕ ವಲಯದಿಂದ 49865 ಒಟ್ಟು 77987 ಕ್ಷಯರೋಗಿಗಳನ್ನು ದೃಢಪಡಿಸಿ ಪತ್ತೆ ಹಚ್ಚಲಾಗಿದೆ. ಈ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಮುಖ ವಾಗಿರುತ್ತದೆ. ಇವರಲ್ಲಿ ಶೇ.4.5 ರಷ್ಟು ಔಷಧ ನಿರೋಧಕ ಕ್ಷಯರೋಗಿಗಳಾಗಿರುತ್ತಾರೆ.

ಈ ಸುದ್ದಿಯನ್ನೂ ಓದಿ | Reserve Bank Of India: ಆರ್‌ಬಿಐ ಹೊಸ ನಿಯಮ ಜಾರಿ, ATM ಬಳಕೆ ಶುಲ್ಕ ಹೆಚ್ಚಳ ಮೇ 1 ರಿಂದ ಜಾರಿ!

ದೃಢಪಟ್ಟ ಎಲ್ಲಾ ಕ್ಷಯರೋಗಿಗಳಿಗೆ ಕನಿಷ್ಠ 6 ತಿಂಗಳ ಅವಧಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕ್ಷಯ ರೋಗದಿಂದ ಉಂಟಾಗುವ ಮರಣ ಧರವನ್ನು ಶೇ 8% ರಿಂದ 6% ಇಳಿಸಲಾಗಿದೆ. ಇದುವರೆಗೂ 4787 ನಿಕ್ಷಯ್ ಮಿತ್ರರಿಂದ 98721 ಪೌಷ್ಠಿಕ ಆಹಾರದ ಕಿಟ್‌ಗಳನ್ನು ಕ್ಷಯರೋಗಿಗಳಿಗೆ ವಿತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.