ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಾಲಾ ತರಗತಿ ಕಿಟಕಿಯಲ್ಲಿ ಸಿಲುಕಿಕೊಂಡ 7 ವರ್ಷದ ವಿದ್ಯಾರ್ಥಿಯ ತಲೆ; ಗ್ರಾಮಸ್ಥರಿಂದ ರಕ್ಷಣೆ, ಇಲ್ಲಿದೆ ವಿಡಿಯೊ

Student's Rescue: ಏಳು ವರ್ಷದ ವಿದ್ಯಾರ್ಥಿಯೊಬ್ಬನ ತಲೆ ಶಾಲಾ ತರಗತಿಯ ಕಿಟಕಿಯಲ್ಲಿ ಸಿಲುಕಿಕೊಂಡಿರುವುದರ ಆಘಾತಕಾರಿ ವಿಡಿಯೊ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಕಳವಳವನ್ನುಂಟು ಮಾಡಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮತ್ತು ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ.

ಶಾಲಾ ತರಗತಿ ಕಿಟಕಿಯಲ್ಲಿ ಸಿಲುಕಿಕೊಂಡ 7 ವರ್ಷದ ವಿದ್ಯಾರ್ಥಿಯ ತಲೆ

Priyanka P Priyanka P Jul 30, 2025 8:13 PM

ಕತಿಹಾರ್: ಏಳು ವರ್ಷದ ವಿದ್ಯಾರ್ಥಿಯೊಬ್ಬನ ತಲೆ ಶಾಲಾ ತರಗತಿಯ ಕಿಟಕಿಯಲ್ಲಿ ಸಿಲುಕಿಕೊಂಡಿರುವುದರ ಆಘಾತಕಾರಿ ವಿಡಿಯೊ ವೈರಲ್ (Viral Video) ಆಗಿದ್ದು, ಸಾರ್ವಜನಿಕರಲ್ಲಿ ಕಳವಳವನ್ನುಂಟು ಮಾಡಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರು ಶಾಲೆಯ ಸಮಯ ಮುಗಿದ ನಂತರ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಲಾಕ್ ಮಾಡಿ ಹೋಗಿದ್ದರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮತ್ತು ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ದೀರ್ಘ ಪ್ರಯತ್ನದ ನಂತರ ಕಿಟಕಿಯ ಸರಳುಗಳಿಂದ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಈ ಘಟನೆಯು ಶಾಲಾ ಅಧಿಕಾರಿಗಳ ನಿರ್ಲಕ್ಷ್ಯದ ಮೇಲೆ ಬೆಳಕು ಚೆಲ್ಲಿದೆ. ಏಕೆಂದರೆ ವಿದ್ಯಾರ್ಥಿ ಮಲಗಿದ್ದಾಗ ಶಿಕ್ಷಕರು ಮತ್ತು ಸಿಬ್ಬಂದಿ ಆತನನ್ನು ತರಗತಿಯಲ್ಲೇ ಬಿಟ್ಟು ಗೇಟ್‌ಗಳನ್ನು ಲಾಕ್ ಮಾಡಿದ್ದಾರೆ.

ಈ ಘಟನೆಯು ತಾಜ್‌ಗಂಜ್ ಫಾಸಿಯಾ ವಾರ್ಡ್ ಸಂಖ್ಯೆ 45ರ ಕತಿಹಾರ್‌ನ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮೂರನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ವಿದ್ಯಾರ್ಥಿ ಗೌರವ್ ಕುಮಾರ್, ತರಗತಿ ಮುಚ್ಚಿದ್ದರಿಂದ ಕಿಟಕಿಯ ಮೂಲಕ ಹೊರಬರಲು ಪ್ರಯತ್ನಿಸಿದ್ದಾನೆ. ಪರಿಣಾಮ ಆತನ ತಲೆ ಕಿಟಕಿಯಲ್ಲಿ ಸಿಲುಕಿಕೊಂಡಿದೆ.

ಮಾಹಿತಿಯ ಪ್ರಕಾರ, ಮಂಗಳವಾರ ಸಂಜೆ 4 ಗಂಟೆಗೆ ಶಾಲೆ ಮುಚ್ಚಿತು. ಎಂದಿನಂತೆ ಎಲ್ಲ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಮತ್ತು ಶಾಲೆಯ ಪ್ರಾಂಶುಪಾಲರು ಶಾಲೆಯ ಗೇಟ್‌ಗಳನ್ನು ಲಾಕ್ ಮಾಡಿ ಹೊರಟುಹೋದರು. ಆದರೆ ಗೌರವ್ ತನ್ನ ತರಗತಿಯಲ್ಲಿ ನಿದ್ದೆ ಮಾಡುತ್ತಿದ್ದ.

ವಿದ್ಯಾರ್ಥಿ ಎಚ್ಚರವಾದ ತಕ್ಷಣ, ತರಗತಿಯ ಬಾಗಿಲು ಲಾಕ್ ಆಗಿರುವುದನ್ನು ನೋಡಿದ್ದಾನೆ. ಅವನು ಕಿಟಕಿಯ ಮೂಲಕ ತರಗತಿಯಿಂದ ಹೊರಬರಲು ಪ್ರಯತ್ನಿಸಿದನು. ಅವನ ಕುತ್ತಿಗೆ ಕಿಟಕಿಯಲ್ಲಿ ಸಿಲುಕಿಕೊಂಡಿತ್ತು. ವರದಿಯ ಪ್ರಕಾರ, ಬಾಲಕ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದನು.

ರಕ್ಷಣೆಗೆ ಬಂದ ಗ್ರಾಮಸ್ಥರು

ಅದೃಷ್ಟವಶಾತ್‌ ಶಾಲೆಯ ಬಳಿ ಕ್ರಿಕೆಟ್ ಆಡುತ್ತಿದ್ದ ಕೆಲವು ಮಕ್ಕಳು ಗೌರವ್‌ನ ಕಿರುಚಾಟ ಕೇಳಿ ಶಾಲಾ ಆವರಣದೊಳಗೆ ಬಂದು ನೋಡಿದರು. ಅವರು ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದರು. ಶಾಲೆಯ ಬಳಿ ಜಮಾಯಿಸಿದ ಕೆಲವು ಗ್ರಾಮಸ್ಥರು ಮುಖ್ಯ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿದರು. ನಂತರ ಮಗುವನ್ನು ರಕ್ಷಿಸಲಾಯಿತು.

ಇಲ್ಲಿದೆ ವಿಡಿಯೊ:



ಈ ಘಟನೆಯು ವಿದ್ಯಾರ್ಥಿಗಳ ಬಗ್ಗೆ ಶಾಲಾ ಸಿಬ್ಬಂದಿಗಿರುವ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ಅವರು ಬಾಲಕನನ್ನು ನೋಡದೆ, ಆತನೊಬ್ಬನನ್ನೇ ಬಿಟ್ಟು ಎಲ್ಲ ಬಾಗಿಲುಗಳನ್ನು ಸಹ ಮುಚ್ಚಿದರು. ವಿದ್ಯಾರ್ಥಿಯು ತರಗತಿಯಲ್ಲಿ ನಿದ್ರಿಸುತ್ತಿದ್ದರೂ ಸಹ, ಅವನನ್ನು ಶಾಲೆಯಿಂದ ಹೊರಗೆ ಕರೆತಂದು ಸುರಕ್ಷಿತವಾಗಿ ಮನೆಗೆ ಕಳುಹಿಸುವುದು ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಯ ಜವಾಬ್ದಾರಿ.