ಮೈಸೂರು: ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು, 81 ವರ್ಷದ ವಯೋವೃದ್ಧ ರೋಗಿಗೆ ಒಂದೇ ಅರಿವಳಿಕೆ ನೀಡಿ ರೊಬೋಟ್ ನೆರವಿನ ಮೂರು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿ ಯಾಗಿ ನೆರವೇರಿಸಿ ವೈದ್ಯಕೀಯ ಶ್ರೇಷ್ಠತೆಯಲ್ಲಿ ವಿಶ್ವಮಟ್ಟದ ಮತ್ತೊಂದು ಸಾಧನೆ ಮಾಡಿದೆ.
ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ, ತೊಡೆಸಂದು (ಗ್ರೋಯಿನ್) ಹರ್ನಿಯಾ ಶಸ್ತ್ರಚಿಕಿತ್ಸೆ ಹಾಗೂ ಸುನ್ನತಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಜಾಗತಿಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲ್ಲುಗಲ್ಲು ಸ್ಥಾಪಿಸಿದೆ.
ತುಂಬ ಸಂಕೀರ್ಣಮಯವಾಗಿದ್ದ ಈ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಇದರಿಂದಾಗಿ 81 ವರ್ಷದ ರೋಗಿಯು ಮೂರು ಪ್ರತ್ಯೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾದ ಅನಿವಾರ್ಯತೆ ತಪ್ಪಿದೆ. ಶಸ್ತ್ರಚಿಕಿತ್ಸೆಯ ನೋವು, ದೀರ್ಘಕಾಲ ಆಸ್ಪತ್ರೆಯಲ್ಲಿ ಉಳಿಯುವ ಅವಶ್ಯಕತೆ, ಸೋಂಕಿನ ಸಾಧ್ಯತೆ ಹಾಗೂ ಚೇತರಿಕೆಯ ಅವಧಿ ಗಣನೀಯವಾಗಿ ಕಡಿಮೆಯಾಗಿದೆ.
ಇದನ್ನೂ ಓದಿ: Health Tips: ನಿದ್ದೆಯಲ್ಲಿ ಬಾಯಲ್ಲೇ ಉಸಿರಾಡುತ್ತೀರಾ? ಈ ಸಮಸ್ಯೆ ಎದುರಾಗಬಹುದು ಎಚ್ಚರ
ಈ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಹೃದಯದ ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಹಾಗೂ ರೊಬೋಟ್ ನೆರವಿನ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ಸುದರ್ಶನ ಜಿ.ಟಿ., ಜೀರ್ಣಾಂಗ, ಕನಿಷ್ಠ ನೋವಿನ ಮತ್ತು ಸ್ಥೂಲಕಾಯ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ಸೌರಭ್ ಮಿಶ್ರಾ ಹಾಗೂ ಮೂತ್ರರೋಗ ತಜ್ಞ ಡಾ. ಮಹೇಂದ್ರ ಜೈನ್ ಅವರು ಈ ಪರಿಣತ ಶಸ್ತ್ರಚಿಕಿತ್ಸಕರ ತಂಡದಲ್ಲಿ ಇದ್ದರು. ಆಸ್ಪತ್ರೆಯ ವಿವಿಧ ವೈದ್ಯಕೀಯ ವಿಭಾಗಗಳ ನಡುವಣ ಸಮನ್ವಯ ಹಾಗೂ ಅತ್ಯಾ ಧುನಿಕ ರೊಬೋಟ್ ಶಸ್ತ್ರಚಿಕಿತ್ಸೆಯಲ್ಲಿನ ಪರಿಣತಿಯನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ.
ಮೈಸೂರಿನ 81 ವರ್ಷದ ಈ ರೋಗಿ ಆರಂಭದಲ್ಲಿ ತೊಡೆಸಂದು ಹರ್ನಿಯಾದ ತೀವ್ರ ಸ್ವರೂಪದ ನೋವಿಗೆ ಚಿಕಿತ್ಸೆ ಪಡೆಯಲು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ದಾಖಲಾಗಿದ್ದರು. ಹರ್ನಿಯಾ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ, ತಮಗೆ ಎದೆನೋವು ಮತ್ತು ಉಸಿರಾಟದ ತೊಂದರೆ ಇರುವುದನ್ನು ಅವರು ವೈದ್ಯರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ, ಹೃದಯಕ್ಕೆ ರಕ್ತ ಪೂರೈಸುವ ಮೂರು ಪ್ರಮುಖ ಅಪಧಮನಿಗಳಲ್ಲಿ ತೀವ್ರ ಅಡಚಣೆ ಇರುವುದರಿಂದ ತುರ್ತು ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆ ಯ ಅಗತ್ಯ ಇರುವುದು ಕಂಡುಬಂದಿತ್ತು. ರೋಗಿಗೆ ಮೂತ್ರರೋಗದ ‘ಫೈಮೋಸಿಸ್’ ಸಮಸ್ಯೆಯೂ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಈ ಸಮಸ್ಯೆಯಿಂದ ಮೂತ್ರ ವಿಸರ್ಜನೆ ವೇಳೆ ನೋವು ಉಂಟಾಗುವುದರ ಜೊತೆಗೆ, ಮೂತ್ರನಾಳದ ಸೋಂಕು (ಫಿಮೊಸಿಸ್) ಕಾಣಿಸಿ ಕೊಳ್ಳುವ ಅಪಾಯವೂ ಹೆಚ್ಚಿಗೆ ಇರುವುರು ವೈದ್ಯರ ಗಮನಕ್ಕೆ ಬಂದಿತ್ತು.
ರೋಗಿಯ ವಯಸ್ಸಿನ ಹಾಗೂ ಮೂರು ವಿಭಿನ್ನ ಆರೋಗ್ಯ ಸಮಸ್ಯೆಗಳಿಗೆ ಪ್ರತ್ಯೇಕ ಶಸ್ತ್ರಚಿಕಿತ್ಸೆ ಗಳನ್ನು ನಡೆಸಬೇಕಾದ ಕಾರಣಕ್ಕೆ , ಒಂದೊಂದೇ ಶಸ್ತ್ರಚಿಕಿತ್ಸೆಯನ್ನು ಪ್ರತ್ಯೇಕವಾಗಿ ನಡೆಸಿದರೆ ಹಲವು ಬಾರಿ ಅರಿವಳಿಕೆ ನೀಡಬೇಕಾಗುತ್ತಿತ್ತು. ಇದರಿಂದ ಶಸ್ತ್ರಚಿಕಿತ್ಸೆಯ ನೋವು, ಚೇತರಿಕೆಗೆ ಹೆಚ್ಚಿನ ಸಮಯ ಹಾಗೂ ಆಸ್ಪತ್ರೆಯಲ್ಲಿ ಹೆಚ್ಚು ದಿನ ಉಳಿಯಬೇಕಾಗುತ್ತಿತ್ತು.
ಈ ಎಲ್ಲ ಸಂಗತಿಗಳ ಕಾರಣಕ್ಕೆ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಪರ್ಯಾಯ ಮಾರ್ಗೋ ಪಾಯಗಳನ್ನು ಚರ್ಚಿಸಿದರು. ರೋಗಿ ಮತ್ತು ಅವರ ಕುಟುಂಬದವರಿಗೆ ಮಾಹಿತಿ ನೀಡಿ ಒಪ್ಪಿಗೆ ಪಡೆದರು. ವೈದ್ಯಕೀಯವಾಗಿ ಸೂಕ್ತವೆನಿಸಿದ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ರೊಬೋಟ್ ನೆರವಿನ ತಂತ್ರಜ್ಞಾನ ಬಳಸಿ ಒಂದೇ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು.
ಶಸ್ತ್ರಚಿಕಿತ್ಸೆಯ ವೇಳೆ, ಹೃದಯದ ಕಡಿಮೆ ನೋವಿನ ಸುಲಭದ ಕೊರೊನರಿ ಆರ್ಟರಿ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಡಾ. ಸುದರ್ಶನ ಜಿ.ಟಿ. ಸುಮಾರು ಎರಡೂವರೆ ಗಂಟೆಗಳಲ್ಲಿ ರೊಬೋಟ್ ನೆರವಿನಿಂದ ಯಶಸ್ವಿಯಾಗಿ ನೆರವೇರಿಸಿದರು. ಇದಾದ ಬಳಿಕ, ಡಾ. ಸೌರಭ್ ಮಿಶ್ರಾ ಸುಮಾರು ಒಂದು ಗಂಟೆಯಲ್ಲಿ ರೊಬೋಟ್ ನೆರವಿನ ತೊಡೆಸಂದು ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಿದರು. ಕೊನೆಯದಾಗಿ, ಡಾ. ಮಹೇಂದ್ರ ಜೈನ್ ಅವರು ಸುಮಾರು 30 ನಿಮಿಷಗಳಲ್ಲಿ ಸುನ್ನತಿ ಹಾಗೂ ಸಣ್ಣ ಶಸ್ತ್ರಚಿಕಿತ್ಸೆ ಫ್ರೆನ್ಯುಲೊಪ್ಲ್ಯಾಸ್ಟಿ ನಡೆಸಿ, ಫೈಮೊಸಿಸ್ ಸಮಸ್ಯೆಗೆ ಶಾಶ್ವತ ಚಿಕಿತ್ಸೆ ನೀಡಿದರು.
ಈ ಮೂರೂ ಶಸ್ತ್ರಚಿಕಿತ್ಸೆಗಳನ್ನೂ ಒಂದೇ ಅರಿವಳಿಕೆಯಲ್ಲಿ ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಈ ಶಸ್ತ್ರಚಿಕಿತ್ಸೆಗಳ ಇನ್ನೊಂದು ವಿಶೇಷತೆ ಏನೆಂದರೆ, ಶಸ್ತ್ರಚಿಕಿತ್ಸೆಯ ವೇಳೆ ಅಥವಾ ನಂತರ ರೋಗಿಗೆ ರಕ್ತ ವರ್ಗಾವಣೆ ಮಾಡುವ ಅಗತ್ಯವೇ ಉಂಟಾಗ ಲಿಲ್ಲ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯನ್ನು 12 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಯಿತು. ನಂತರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದ ಕಾರಣ ಮೂರು ದಿನಗಳಲ್ಲೇ ಆಸ್ಪತ್ರೆಯಿಂದ ಮನೆಗೆ ಕಳಿಸಿಕೊಡಲಾಯಿತು. ಎರಡು ವಾರಗಳಲ್ಲಿ ಅವರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಲು ಸಾಧ್ಯವಾಯಿತು.
ಆಸ್ಪತ್ರೆಯ ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಹಾಗೂ ರೊಬೋಟ್ ನೆರವಿನ ಹೃದಯ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ಸುದರ್ಶನ ಜಿ.ಟಿ. ಅವರು ಮಾತನಾಡಿ, ʼ ಒಂದೇ ಅರಿವಳಿಕೆ ಯಲ್ಲಿ ಮೂರು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದರಿಂದ ರೋಗಿಗೆ ಮತ್ತೆ ಮತ್ತೆ ಶಸ್ತ್ರಚಿಕಿತ್ಸೆ ನಡೆಸಬೇಕಾದ ಅನಿವಾರ್ಯತೆ ತಪ್ಪಿತು. ವಿಶ್ವದಲ್ಲೇ ಮೊದಲ ಬಾರಿಗೆ ದಾಖಲಾಗಿ ರುವ ಈ ಪ್ರಕರಣವು, ಅತ್ಯಾಧುನಿಕ ರೊಬೋಟ್ ತಂತ್ರಜ್ಞಾನ ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರ ಸಮನ್ವಯದ ಮೂಲಕ, ಕಡಿಮೆ ನೋವಿನ ಸುಲಭದ ಹೃದಯ ಶಸ್ತ್ರಚಿಕಿತ್ಸೆಯ ವ್ಯಾಪ್ತಿಯನ್ನು ಸುರಕ್ಷಿತವಾಗಿ ಮತ್ತಷ್ಟು ವಿಸ್ತರಿಸಬಹುದಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳಿರುವ ರೋಗಿಗಳ ಚಿಕಿತ್ಸಾ ಫಲಿತಾಂಶವನ್ನು ಗಮನಾರ್ಹವಾಗಿ ಉತ್ತಮಗೊಳಿಸಲು ಈ ವಿಧಾನ ನೆರವಾಗುತ್ತದೆ" ಎಂದು ಹೇಳಿದ್ದಾರೆ.
ಆಸ್ಪತ್ರೆಯ ಜೀರ್ಣಾಂಗ, ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಹಾಗೂ ಬೊಜ್ಜು ನಿವಾರಣಾ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ಸೌರಭ್ ಮಿಶ್ರಾ ಅವರು ಮಾತನಾಡಿ, "ವಯೋವೃದ್ಧ ರೋಗಿಗೆ ಮೂರು ಪ್ರತ್ಯೇಕ ಶಸ್ತ್ರಚಿಕಿತ್ಸೆಗಳನ್ನು ನಡೆಸಿ, ಪ್ರತಿ ಬಾರಿ ಪ್ರತ್ಯೇಕ ಚೇತರಿಕೆ ಅವಧಿ ನೀಡುವ ಬದಲಿಗೆ, ಒಂದೇ ಶಸ್ತ್ರಚಿಕಿತ್ಸಾ ಅವಧಿಯಲ್ಲಿ ಅವರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.
ರೊಬೋಟ್ ನೆರವಿನ ಶಸ್ತ್ರಚಿಕಿತ್ಸೆಯಿಂದ ಹೆಚ್ಚಿನ ನಿಖರತೆ, ಸಣ್ಣ ಛೇದನ, ಕಡಿಮೆ ರಕ್ತಸ್ರಾವ, ಶಸ್ತ್ರಚಿಕಿತ್ಸೆಯ ಬಳಿಕ ಕಡಿಮೆ ನೋವು, ತ್ವರಿತ ಚೇತರಿಕೆ ಹಾಗೂ ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ಕಾಲ ಉಳಿಯುವಂತಹ ಅನೇಕ ಪ್ರಯೋಜನಗಳು ದೊರೆಯುತ್ತವೆ" ಎಂದು ಹೇಳಿದ್ದಾರೆ.
ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ. ಮಹೇಂದ್ರ ಜೈನ್ ಅವರು ಮಾತನಾಡಿ, "ಸುನ್ನತಿ ಹಾಗೂ ಫ್ರೆನ್ಯುಲೊಪ್ಲ್ಯಾಸ್ಟಿ ಸಾಮಾನ್ಯವಾಗಿ ಸರಳ ಶಸ್ತ್ರಚಿಕಿತ್ಸೆಗಳಾಗಿದ್ದರೂ, ವಿಳಂಬ ಮಾಡಿದರೆ ರೋಗಿಯ ಮೂತ್ರ ವಿಸರ್ಜನೆ ಸಮಸ್ಯೆ ಮುಂದುವರಿಯುವುದರ ಜೊತೆಗೆ ಅವರ ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿತ್ತು. ಈ ಶಸ್ತ್ರಚಿಕಿತ್ಸೆಯನ್ನು ಇನ್ನೆರಡು ಪ್ರಮುಖ ಶಸ್ತ್ರಚಿಕಿತ್ಸೆಗಳೊಂದಿಗೆ ಒಂದೇ ಅರಿವಳಿಕೆಯಲ್ಲಿ ಸುರಕ್ಷಿತವಾಗಿ ನಡೆಸುವುದರಿಂದ, ರೋಗಿಗೆ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗುವ ಅಥವಾ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭವೇ ಎದುರಾಗಲಿಲ್ಲ. ಈ ಪ್ರಕರಣವು ಆಸ್ಪತ್ರೆಯ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದ ಮೂಲಕ, ರೋಗಿ ಕೇಂದ್ರಿತ ಚಿಕಿತ್ಸೆಯನ್ನು ಒಂದೇ ಬಾರಿ ಸಮಗ್ರವಾಗಿ ಒದಗಿಸ ಬಹುದು ಎಂಬುದನ್ನು ಸಾಧ್ಯಮಾಡಿ ತೋರಿಸಿದೆ" ಎಂದು ಹೇಳಿದ್ದಾರೆ.
ಆಸ್ಪತ್ರೆಯ ಸೌಲಭ್ಯಗಳ ನಿರ್ದೇಶಕ ಗೌತಮ್ ಸಿ.ಬಿ. ಅವರು ಪ್ರತಿಕ್ರಿಯಿಸಿ, "ಈ ಐತಿಹಾಸಿಕ ಸಾಧನೆಯು ವೈದ್ಯಕೀಯ ಶ್ರೇಷ್ಠತೆ, ನಾವೀನ್ಯತೆ ಹಾಗೂ ರೋಗಿ ಕೇಂದ್ರಿತ ಚಿಕಿತ್ಸೆಯ ಮೇಲಿನ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಒಂದೇ ಅರಿವಳಿಕೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ರೊಬೋಟ್ ನೆರವಿನಿಂದ ಹೃದಯ ಬೈಪಾಸ್, ಹರ್ನಿಯಾ ಹಾಗೂ ಸುನ್ನತಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿರುವುದು, ನಮ್ಮ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರ ಸಮನ್ವಯ ಮತ್ತು ಅತ್ಯಾಧುನಿಕ ರೋಬೋಟ್ ಶಸ್ತ್ರಚಿಕಿತ್ಸೆಯಲ್ಲಿನ ಪರಿಣತಿಗೆ ಸಾಕ್ಷಿಯಾಗಿದೆ. ನಮ್ಮ ಆಸ್ಪತ್ರೆಯಲ್ಲಿ ನಾವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣತ ವೈದ್ಯಕೀಯ ತಂಡದ ಮೇಲೆ ನಿರಂತರ ಹೂಡಿಕೆ ಮಾಡುತ್ತಿದ್ದು, ವಿಶ್ವಮಟ್ಟದ ಚಿಕಿತ್ಸೆ, ಉತ್ತಮ ಚಿಕಿತ್ಸಾ ಫಲಿತಾಂಶ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಚೇತರಿಸಿಕೊಳ್ಳುವ ರೀತಿಯಲ್ಲಿ ಒದಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.