ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IBPS PO–2026: ಬ್ಯಾಂಕ್ ಅಧಿಕಾರಿಯಾಗುವ ಕನಸಿಗೆ ಇಲ್ಲಿದೆ ಸುವರ್ಣಾವಕಾಶ; ಪರೀಕ್ಷಾ ಮಾದರಿಯಲ್ಲಾದ ಮಹತ್ವದ ಬದಲಾವಣೆ ಗಮನಿಸಿ

IBPS Exam: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ 2026-27ನೇ ಸಾಲಿನ CRP-PO/MT-XVI ಅಧಿಸೂಚನೆಯನ್ನು ಪ್ರಕಟಿಸಿದೆ. ಪರೀಕ್ಷಾ ಮಾದರಿ ಕಳೆದ ವರ್ಷದಂತೆಯೇ ಕಂಡರೂ, ಆಳವಾಗಿ ಪರಿಶೀಲಿಸಿದರೆ ಹಲವು ಮಹತ್ವದ ಬದಲಾವಣೆಗಳು ಗೋಚರಿಸುತ್ತವೆ. ಪರೀಕ್ಷೆಗೆ ಯಾವ ರೀತಿ ತಯಾರಾಗಬೇಕು ಎನನುವ ವಿವರ ಇಲ್ಲಿದೆ.

ಸಂಗ್ರಹ ಚಿತ್ರ
  • ಆರ್.ಕೆ. ಬಾಲಚಂದ್ರ

ಬೆಂಗಳೂರು, ಜು. 7: ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಪ್ರೊಬೆಷನರಿ ಆಫೀಸರ್ (PO) ಹುದ್ದೆ ಯುವಜನರ ಬಹುದೊಡ್ಡ ಕನಸುಗಳಲ್ಲಿ ಒಂದು. ಆಕರ್ಷಕ ವೇತನ, ಉದ್ಯೋಗ ಭದ್ರತೆ, ವೇಗವಾದ ಬಡ್ತಿ ಅವಕಾಶಗಳು ಹಾಗೂ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅವಕಾಶ ಇರುವುದರಿಂದ ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (IBPS) 2026-27ನೇ ಸಾಲಿನ CRP-PO/MT-XVI ಅಧಿಸೂಚನೆಯನ್ನು ಪ್ರಕಟಿಸಿದೆ. ಮೊದಲ ನೋಟಕ್ಕೆ ಪರೀಕ್ಷಾ ಮಾದರಿ ಕಳೆದ ವರ್ಷದಂತೆಯೇ ಕಂಡರೂ, ಆಳವಾಗಿ ಪರಿಶೀಲಿಸಿದರೆ ಹಲವು ಮಹತ್ವದ ಬದಲಾವಣೆಗಳು ಗೋಚರಿಸುತ್ತವೆ.

ವಿಶೇಷವಾಗಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ವಿಷಯವಾರು ಅಂಕಗಳ ಹಂಚಿಕೆ, ಮುಖ್ಯ ಪರೀಕ್ಷೆಯಲ್ಲಿ ವಿಷಯಗಳಿಗೆ ನೀಡಿರುವ ಮಹತ್ವ, ಡಿಸ್ಕ್ರಿಪ್ಟಿವ್ ಪರೀಕ್ಷೆ, ಪರ್ಸನಾಲಿಟಿ ಟೆಸ್ಟ್ ಹಾಗೂ ಕೆಲವು ಬ್ಯಾಂಕುಗಳು ಇನ್ನೂ ಹುದ್ದೆಗಳನ್ನು ಪ್ರಕಟಿಸದಿರುವುದು ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು.

ಹುದ್ದೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಈ ಬಾರಿ ಒಟ್ಟು 6,715 ಹುದ್ದೆಗಳು ಪ್ರಕಟವಾಗಿವೆ. ಆದರೆ ಅಭ್ಯರ್ಥಿಗಳು ಗಮನಿಸಬೇಕಾಗಿದ್ದು, Indian Bank, UCO Bank ಹಾಗೂ Union Bank of India ತಮ್ಮ ಖಾಲಿ ಹುದ್ದೆಗಳ ಸಂಖ್ಯೆಯನ್ನು ಇನ್ನೂ "NR (Not Reported)" ಎಂದು ದಾಖಲಿಸಿವೆ. ಕಳೆದ ವರ್ಷಗಳ ಅನುಭವವನ್ನು ಗಮನಿಸಿದರೆ, ಈ ಬ್ಯಾಂಕುಗಳು ನಂತರ ತಮ್ಮ ಖಾಲಿ ಹುದ್ದೆಗಳನ್ನು ಸೇರಿಸುವ ಸಾಧ್ಯತೆ ಇದೆ. ಆದ್ದರಿಂದ ಒಟ್ಟು ಹುದ್ದೆಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಸ್ಪರ್ಧಾರ್ಥಿಗಳಿಗೆ ಆಶಾದಾಯಕ ಬೆಳವಣಿಗೆಯಾಗಿದ್ದು, ಕಡಿಮೆ ಹುದ್ದೆಗಳಿವೆ ಎಂದು ನಿರಾಶರಾಗದೆ ಅರ್ಜಿ ಸಲ್ಲಿಸುವುದು ಸೂಕ್ತ.

ಬ್ಯಾಂಕ್‌ವಾರು ಹಾಗೂ ವರ್ಗವಾರು ಹುದ್ದೆಗಳು

6,715 ಪ್ರೊಬೆಷನರಿ ಆಫೀಸರ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 1,009 ಹುದ್ದೆಗಳು, ಪರಿಶಿಷ್ಟ ಪಂಗಡದವರಿಗೆ 502 ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1,886 ಹುದ್ದೆಗಳು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 669 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2,719 ಹುದ್ದೆಗಳನ್ನು ಮೀಸಲಿಡಲಾಗಿದೆ. ಪ್ರೊಬೆಷನರಿ ಹುದ್ದೆಗಳ ಪೈಕಿ ಅತೀ ಹೆಚ್ಚು ಎಂದರೆ 1,900 ಬ್ಯಾಂಕ್ ಆಫ್ ಬರೋಡಾದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಂತರದ ಸ್ಥಾನದಲ್ಲಿ ಕೆನರಾ ಬ್ಯಾಂಕ್ 1,500 ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ 1,100 ಹುದ್ದೆಗಳಿಗೆ ನೇಮಿಸಿಕೊಳ್ಳುವುದಾಗಿ ತಿಳಿಸಿದೆ. ಅಭ್ಯರ್ಥಿಗಳು ಹುದ್ದೆಗಳ ಸಂಖ್ಯೆ ಹಾಗೂ ತಮ್ಮ ಅನುಕೂಲದ ರಾಜ್ಯಗಳನ್ನು ಪರಿಗಣಿಸಿ ಬ್ಯಾಂಕ್ ಆದ್ಯತೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ವಿದ್ಯಾರ್ಹತೆ

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯು ಪದವಿ ಪೂರ್ಣಗೊಳಿಸಿರಬೇಕು.

ಪದವೀಧರರೇ ಗಮನಿಸಿ; ಬ್ಯಾಂಕ್‌ ಆಫ್‌ ಇಂಡಿಯಾದ 779 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪರೀಕ್ಷಾಪೂರ್ವ ತರಬೇತಿ

SC, ST, ಅಲ್ಪಸಂಖ್ಯಾತರು ಹಾಗೂ ಇತರ ಅರ್ಹ ಅಭ್ಯರ್ಥಿಗಳಿಗೆ ಐಬಿಪಿಎಸ್ ಉಚಿತ ಪರೀಕ್ಷಾಪೂರ್ವ ತರಬೇತಿ (PET) ವ್ಯವಸ್ಥೆ ಕಲ್ಪಿಸಿದೆ

ಅರ್ಜಿ ಶುಲ್ಕ

SC/ST/PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹175 ಹಾಗೂ ಇತರ ಅಭ್ಯರ್ಥಿಗಳಿಗೆ ₹850 ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ವಯೋಮಿತಿ 20 ರಿಂದ 30 ವರ್ಷವಾಗಿದ್ದು, ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮಾನುಸಾರ ವಯೋಸಡಿಲಿಕೆ ಅನ್ವಯವಾಗುತ್ತದೆ

ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷಾ ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು,ಮೈಸೂರು,ಶಿವಮೊಗ್ಗ, ಉಡುಪಿ

ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: ಅಂಕಗಳ ಹಂಚಿಕೆ ಹೇಳುವುದೇನು?

ಮೊದಲ ನೋಟಕ್ಕೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಪ್ರಶ್ನೆಗಳ ಸಂಖ್ಯೆ ಅಂಕಗಳ ಹಂಚಿಕೆಯಲ್ಲಿ ಮಾಡಿದ ಬದಲಾವಣೆ ಕಳೆದ ವರ್ಷದಂತೆಯೇ ಕಂಡರೂ, ಅಭ್ಯರ್ಥಿಗಳ ಅಧ್ಯಯನ ತಂತ್ರವನ್ನೇ ಬದಲಾಯಿಸುವಷ್ಟು ಮಹತ್ವದ್ದಾಗಿದೆ.

ಪ್ರಿಲಿಮ್ಸ್‌ನ ಪ್ರಶ್ನೆಗಳ ಮಾದರಿ

ವಿಷಯ ಪ್ರಶ್ನೆಗಳು ಅಂಕಗಳು ಸಮಯ
ಇಂಗ್ಲಿಷ್ 30 30 20 ನಿಮಿಷ
ರೀಸನಿಂಗ್ 35 40 20 ನಿಮಿಷ
ಗಣಿತ 35 30 20 ನಿಮಿಷ
ಒಟ್ಟು 100 100 60 ನಿಮಿಷ

ಅಂದರೆ ರೀಸನಿಂಗ್ ವಿಭಾಗಕ್ಕೆ 35 ಪ್ರಶ್ನೆಗಳಿಗೆ 40 ಅಂಕಗಳನ್ನು ನಿಗದಿಪಡಿಸಲಾಗಿದೆ. "ರೀಸನಿಂಗ್ ವಿಭಾಗಕ್ಕೆ ಗಣಿತಕ್ಕಿಂತ ಹೆಚ್ಚಿನ ಅಂಕಗಳ ತೂಕ ನೀಡಿರುವುದು ಪ್ರಮುಖ ಬದಲಾವಣೆಯಾಗಿದೆ."

ಇದರ ಅರ್ಥವೇನು?

ಐಬಿಪಿಎಸ್ ಈಗ ಅಭ್ಯರ್ಥಿಯ ವೇಗ (Speed) ಮಾತ್ರವಲ್ಲ, ತಾರ್ಕಿಕ ಚಿಂತನೆ (Logical Ability) ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ (Decision Making) ಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಕಠಿಣ ಗಣಿತದ ಪ್ರಶ್ನೆಗಳಲ್ಲಿ ಹೆಚ್ಚು ಸಮಯ ವ್ಯಯಿಸುವ ಬದಲು, ರೀಸನಿಂಗ್‌ನಲ್ಲಿ ಹೆಚ್ಚು ನಿಖರತೆ ಸಾಧಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಮುನ್ನಡೆ ದೊರೆಯುವ ಸಾಧ್ಯತೆ ಹೆಚ್ಚಿದೆ.

ಸೆಕ್ಷನಲ್ ಸಮಯ:ನಿರ್ಲಕ್ಷಿಸಿದರೆ ಯಶಸ್ಸು ಕಷ್ಟ

ಪ್ರತಿ ವಿಭಾಗಕ್ಕೂ 20 ನಿಮಿಷಗಳ ಪ್ರತ್ಯೇಕ ಸಮಯ ನೀಡಲಾಗಿದೆ. ಒಂದು ವಿಭಾಗದ ಉಳಿದ ಸಮಯವನ್ನು ಮತ್ತೊಂದು ವಿಭಾಗಕ್ಕೆ ಬಳಸಲು ಅವಕಾಶವಿಲ್ಲ.ಹೀಗಾಗಿ ಅಭ್ಯರ್ಥಿಗಳು ಸಮಯ ನಿರ್ವಹಣೆ, ಪ್ರಶ್ನೆ ಆಯ್ಕೆ ಮಾಡುವ ಕೌಶಲ್ಯ, ಕಡಿಮೆ ಸಮಯದಲ್ಲಿ ಹೆಚ್ಚು ನಿಖರತೆ ಇವುಗಳನ್ನು ಈಗಿನಿಂದಲೇ ಅಭ್ಯಾಸ ಮಾಡಬೇಕು.

ಸೆಕ್ಷನಲ್ ಕಟ್-ಆಫ್ ಬಗ್ಗೆ ಗಮನ

ಐಬಿಪಿಎಸ್ ತನ್ನ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕನಿಷ್ಠ ಅರ್ಹತಾ ಅಂಕಗಳನ್ನು (Cut-off) ನಿಗದಿಪಡಿಸುತ್ತದೆ. ಆದ್ದರಿಂದ ಒಂದು ವಿಷಯದಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಮತ್ತೊಂದು ವಿಷಯವನ್ನು ನಿರ್ಲಕ್ಷಿಸುವುದು ಅಪಾಯಕಾರಿ. ಮೂರು ವಿಭಾಗಗಳಲ್ಲೂ ಸಮತೋಲನ ಸಾಧಿಸುವುದು ಸುರಕ್ಷಿತ ತಂತ್ರ.

ಮುಖ್ಯ ಪರೀಕ್ಷೆ: ಯಶಸ್ಸಿನ ನಿಜವಾದ ಹಂತ

ಪ್ರಿಲಿಮ್ಸ್ ಪರೀಕ್ಷೆ ಕೇವಲ ಅರ್ಹತಾ ಪರೀಕ್ಷೆ. ಅಂತಿಮ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಮುಖ್ಯ ಪರೀಕ್ಷೆ.ಈ ವರ್ಷದ ಪರೀಕ್ಷಾ ಮಾದರಿಯನ್ನು ಗಮನಿಸಿದರೆ, ಯಾವ ವಿಷಯಕ್ಕೆ ಐಬಿಪಿಎಸ್ ಹೆಚ್ಚು ಪ್ರಾಮುಖ್ಯತೆ ನೀಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಮೇನ್ಸ್‌ನ ಪ್ರಶ್ನೆಗಳ ಮಾದರಿ

ವಿಷಯ ಪ್ರಶ್ನೆಗಳು ಅಂಕಗಳು ಸಮಯ
Reasoning 40 60 45
General / Economy / Banking Awareness 50 60 35
English Language 40 20 35
Data Analysis & Interpretation 40 60 45
ಒಟ್ಟು 170 200 160 ನಿಮಿಷ

ಈ ಅಂಕಗಳ ಹಂಚಿಕೆ ಏನು ಸೂಚಿಸುತ್ತದೆ?

ಈ ಕೋಷ್ಟಕವನ್ನು ಗಮನಿಸಿದರೆ ಮೂರು ವಿಷಯಗಳಿಗೆ ಐಬಿಪಿಎಸ್ ವಿಶೇಷ ಆದ್ಯತೆ ನೀಡಿರುವುದು ಸ್ಪಷ್ಟ.ಬ್ಯಾಂಕಿಂಗ್ ಅರಿವು ಅತ್ಯಂತ ಪ್ರಮುಖ,50 ಪ್ರಶ್ನೆಗಳು ಈ ವಿಭಾಗಕ್ಕೆ ಮೀಸಲಾಗಿವೆ. ಇದು ಮುಖ್ಯ ಪರೀಕ್ಷೆಯಲ್ಲಿಯೇ ಅತಿ ಹೆಚ್ಚು ಪ್ರಶ್ನೆಗಳಿರುವ ವಿಭಾಗ. ಇದರಿಂದ ಅಭ್ಯರ್ಥಿಗಳು ಕೇವಲ Current Affairs ಓದಿದರೆ ಸಾಕಾಗುವುದಿಲ್ಲ. ಅವರು RBI ಪ್ರಕಟಣೆಗಳು, ಹಣಕಾಸು ನೀತಿಗಳು, ಡಿಜಿಟಲ್ ಬ್ಯಾಂಕಿಂಗ್, ಆರ್ಥಿಕ ಬೆಳವಣಿಗೆಗಳು, ಬ್ಯಾಂಕಿಂಗ್ ನಿಯಂತ್ರಣಗಳು ಇವುಗಳನ್ನು ಆಳವಾಗಿ ಅಧ್ಯಯನ ಮಾಡಬೇಕು.

ರೀಸನಿಂಗ್ ಇನ್ನಷ್ಟು ನಿರ್ಣಾಯಕ. 40 ಪ್ರಶ್ನೆಗಳಿಗೆ 60 ಅಂಕಗಳು. ಅಂದರೆ ಪ್ರತಿ ಪ್ರಶ್ನೆಗೆ 1.5 ಅಂಕಗಳು.ಇದು ಮುಖ್ಯ ಪರೀಕ್ಷೆಯ ಅತ್ಯಂತ ಹೆಚ್ಚಿನ ತೂಕದ ವಿಭಾಗಗಳಲ್ಲಿ ಒಂದಾಗಿದೆ.ಆದ್ದರಿಂದ Puzzle, Seating Arrangement, Critical Reasoning, Data Sufficiency ಮೊದಲಾದ ಅಧ್ಯಾಯಗಳನ್ನು ಪ್ರತಿದಿನ ಅಭ್ಯಾಸ ಮಾಡುವುದು ಅತ್ಯಗತ್ಯ.

Data Analysis ಕೂಡ ಸಮಾನ ಮಹತ್ವ.ಡೇಟಾ ಅನಾಲಿಸಿಸ್ ವಿಭಾಗಕ್ಕೂ 60 ಅಂಕಗಳು ನೀಡಲಾಗಿದೆ. ಹೀಗಾಗಿ ಗಣಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ.

ಸರಿಯಾದ ತಂತ್ರವೆಂದರೆ—ಪ್ರಿಲಿಮ್ಸ್‌ನಲ್ಲಿ ವೇಗ, ಮೇನ್ಸ್‌ನಲ್ಲಿ ವಿಶ್ಲೇಷಣಾ ಸಾಮರ್ಥ್ಯ.

ಗಮನಾರ್ಹ ಅಂಶ: ಈ ಬಾರಿ ಪ್ರತ್ಯೇಕ 'Computer Knowledge' ವಿಭಾಗವನ್ನು ಒಳಗೊಂಡಿಲ್ಲ; ಅದರ ಬದಲಿಗೆ ಹೊಸ ಪ್ರಶ್ನಾ ವಿನ್ಯಾಸಕ್ಕೆ ಅನುಗುಣವಾಗಿ ಒಟ್ಟು ಪ್ರಶ್ನೆಗಳು ಮತ್ತು ಸಮಯವನ್ನು ಮರುಹೊಂದಿಸಲಾಗಿದೆ.

ಎಸ್‌ಬಿಐಯಿಂದ 1,500 ಹುದ್ದೆಗಳಿಗೆ ನೇಮಕಾತಿ: ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಡಿಸ್ಕ್ರಿಪ್ಟಿವ್ ಪರೀಕ್ಷೆ: ಅನೇಕ ಅಭ್ಯರ್ಥಿಗಳು ಮಾಡುವ ದೊಡ್ಡ ತಪ್ಪು

ಮುಖ್ಯ ಪರೀಕ್ಷೆಯ ನಂತರ Essay ಮತ್ತು Comprehension ಒಳಗೊಂಡ 25 ಅಂಕಗಳ ಡಿಸ್ಕ್ರಿಪ್ಟಿವ್ ಪರೀಕ್ಷೆ ನಡೆಯುತ್ತದೆ.ಬಹುತೇಕ ಅಭ್ಯರ್ಥಿಗಳು ವಸ್ತುನಿಷ್ಠ ಪ್ರಶ್ನೆಗಳ ತಯಾರಿಯಲ್ಲೇ ಸಮಯ ಕಳೆಯುತ್ತಾರೆ. ಆದರೆ ಡಿಸ್ಕ್ರಿಪ್ಟಿವ್ ಪರೀಕ್ಷೆಯಲ್ಲಿ ಅಂಕ ಕಡಿಮೆಯಾದರೆ ಉತ್ತಮ ಶ್ರೇಯಾಂಕ ಪಡೆಯುವ ಅವಕಾಶ ಕಡಿಮೆಯಾಗಬಹುದು.ಆದ್ದರಿಂದ ಪ್ರತಿವಾರ ಕನಿಷ್ಠ ಎರಡು ಪ್ರಬಂಧಗಳು ಹಾಗೂ ಒಂದು Comprehension ಅಭ್ಯಾಸ ಮಾಡುವುದನ್ನು ಈಗಿನಿಂದಲೇ ಆರಂಭಿಸಬೇಕು.

ಇಂಗ್ಲಿಷ್‌ನ ಮಹತ್ವ ಕಡಿಮೆಯಾಗಿದೆಯೇ?

ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಭಾಗಕ್ಕೆ 40 ಪ್ರಶ್ನೆಗಳಿದ್ದರೂ 20 ಅಂಕಗಳನ್ನು ಮಾತ್ರ ನಿಗದಿಪಡಿಸಲಾಗಿದೆ. ಇದರಿಂದ ಅಂಕಗಳ ತೂಕ ಕಡಿಮೆಯಾದರೂ, ಸ್ಪರ್ಧಾತ್ಮಕ ಮಹತ್ವ ಕಡಿಮೆಯಾಗಿದೆ ಎಂದು ಅರ್ಥವಲ್ಲ. Reading Comprehension, Grammar ಮತ್ತು Vocabularyಯಲ್ಲಿ ಉತ್ತಮ ಸಾಧನೆ ಇನ್ನೂ ಉತ್ತಮ ಅಂತಿಮ ಶ್ರೇಯಾಂಕಕ್ಕೆ ನೆರವಾಗುತ್ತದೆ. ಆದ್ದರಿಂದ ಇಂಗ್ಲಿಷ್ ಅನ್ನು ನಿರ್ಲಕ್ಷಿಸದೆ, ರೀಸನಿಂಗ್ ಮತ್ತು ಬ್ಯಾಂಕಿಂಗ್ ಅರಿವಿನೊಂದಿಗೆ ಸಮತೋಲನದ ತಯಾರಿ ನಡೆಸಬೇಕು.

ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನ

ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು Personality Test ಹಾಗೂ Interviewಗೆ ಹಾಜರಾಗಬೇಕು.ಇವುಗಳಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ, ಸಂವಹನ ಕೌಶಲ್ಯ, ನಾಯಕತ್ವ ಗುಣ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಅರಿವನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಈ ಬದಲಾವಣೆ ಅಭ್ಯರ್ಥಿಗಳಿಗೆ ಏನು ಹೇಳುತ್ತದೆ?

ಐಬಿಪಿಎಸ್ ಈಗ ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಪರೀಕ್ಷಿಸುವುದಿಲ್ಲ. ಭವಿಷ್ಯದ ಬ್ಯಾಂಕ್ ಅಧಿಕಾರಿಯಲ್ಲಿ ಇರಬೇಕಾದ ವಿಶ್ಲೇಷಣಾತ್ಮಕ ಚಿಂತನೆ, ತಾರ್ಕಿಕ ನಿರ್ಧಾರ, ಬ್ಯಾಂಕಿಂಗ್ ಜ್ಞಾನ, ಡೇಟಾ ವಿಶ್ಲೇಷಣೆ ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಪರೀಕ್ಷಿಸುವತ್ತ ಹೆಚ್ಚಿನ ಒತ್ತು ನೀಡಿದೆ. ಅಂದರೆ ಕೇವಲ ಪ್ರಶ್ನೆಗಳನ್ನು ಕಂಠಪಾಠ ಮಾಡುವ ಅಭ್ಯರ್ಥಿಗಳಿಗಿಂತ, ವಿಷಯವನ್ನು ಅರ್ಥಮಾಡಿಕೊಂಡು ಅನ್ವಯಿಸುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ.

ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು

ಅಭ್ಯರ್ಥಿಗಳು ಮುಖ್ಯವಾಗಿ ಮೂರು ತಪ್ಪುಗಳನ್ನು ಮಾಡುತ್ತಾರೆ. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದದೆ ತಯಾರಿ ಆರಂಭಿಸುವುದು. ಬ್ಯಾಂಕಿಂಗ್ ಅರಿವು ಮತ್ತು ಡಿಸ್ಕ್ರಿಪ್ಟಿವ್ ಪರೀಕ್ಷೆಯನ್ನು ನಿರ್ಲಕ್ಷಿಸುವುದು. Mock Test ಬರೆದರೂ ತಪ್ಪುಗಳ ವಿಶ್ಲೇಷಣೆ ಮಾಡದೇ ಮುಂದುವರಿಯುವುದು.

ನೆನಪಿಡಿ

ʼಪ್ರಿಲಿಮ್ಸ್‌ನಲ್ಲಿ ಅಂಕಗಳ ಹಂಚಿಕೆಯಲ್ಲಿ ಬದಲಾವಣೆ – ಮುಖ್ಯ ಪರೀಕ್ಷೆಯಲ್ಲಿ ಬ್ಯಾಂಕಿಂಗ್ ಅರಿವು ಮತ್ತು ರೀಸನಿಂಗ್‌ಗೆ ಹೆಚ್ಚಿನ ಆದ್ಯತೆʼ. ಐಬಿಪಿಎಸ್ ಪಿಒ ನೇಮಕಾತಿ ಕೇವಲ ಉದ್ಯೋಗಾವಕಾಶವಲ್ಲ; ಈ ವರ್ಷದ ಅಧಿಸೂಚನೆ ಸ್ಪಷ್ಟ ಸಂದೇಶ ನೀಡಿದೆ. ಅಭ್ಯರ್ಥಿಗಳು ಹಳೆಯ ಅಧ್ಯಯನ ವಿಧಾನಗಳನ್ನು ಬದಿಗಿಟ್ಟು, ಹೊಸ ಪರೀಕ್ಷಾ ಮಾದರಿಗೆ ಅನುಗುಣವಾಗಿ ತಮ್ಮ ತಯಾರಿಯನ್ನು ಮರು ರೂಪಿಸಿಕೊಳ್ಳಬೇಕು. ಅಧಿಸೂಚನೆಯ ಬದಲಾವಣೆಗಳನ್ನು ಅರ್ಥಮಾಡಿಕೊಂಡು ಯೋಜಿತವಾಗಿ ಅಭ್ಯಾಸ ಮಾಡಿದರೆ ಯಶಸ್ಸಿನ ಸಾಧ್ಯತೆ ಗಮನಾರ್ಹವಾಗಿ ಹೆಚ್ಚುತ್ತದೆ.

ಇನ್ನಷ್ಟು ಉದ್ಯೋಗದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author