ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IBPS: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 5,208 ಹುದ್ದೆಗಳಿಗೆ ನೇಮಕಾತಿ ಪರ್ವ; ಐಬಿಪಿಎಸ್‌ನಿಂದ ಅರ್ಜಿ ಆಹ್ವಾನ

Bank Jobs: ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ 5,208 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ,ಮೊದಲ ಬಾರಿಗೆ ವ್ಯಕ್ತಿತ್ವ ಪರೀಕ್ಷೆಯ ಜತೆಯಲ್ಲಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 5,208 ಹುದ್ದೆಗಳಿಗೆ ನೇಮಕಾತಿ ಪರ್ವ

Profile Ramesh B Jul 11, 2025 4:25 PM

-ಆರ್.ಕೆ.ಬಾಲಚಂದ್ರ

ಬೆಂಗಳೂರು: ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ (IBPS) ಖಾಲಿಯಿರುವ 5,208 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ,ಮೊದಲ ಬಾರಿಗೆ ವ್ಯಕ್ತಿತ್ವ ಪರೀಕ್ಷೆಯ ಜತೆಯಲ್ಲಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ (Job Guide). ಅರ್ಜಿ ಸಲ್ಲಿಕೆ ಮತ್ತಿತರ ವಿವರಗಳು ಇಲ್ಲಿವೆ.

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ಈ ವರ್ಷದಲ್ಲಿ ಇಲ್ಲಿಯವರೆಗೆ 11,516ಕ್ಕೂ ಹೆಚ್ಚಿನ ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಂತಾಗಿದೆ (ಎಸ್‌ಬಿಐ ಹಾಗೂ ಲೋಕಲ್ ಬ್ಯಾಂಕ್‌ ಆಫೀಸರ್/ ಇಂಟರ್ನ್‌ಶಿಪ್‌ ಹೊರತುಪಡಿಸಿ). ಪದವೀಧರ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕಾಗಿದೆ .ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ವಿವಿಧ ಬ್ಯಾಂಕ್‌ಗಳು ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೂ ನೇಮಕಾತಿ ನಡೆಸುತ್ತಿವೆ. ಈ ಮೂಲಕ ಒಟ್ಟಾರೆ, 50,000ಕ್ಕೂ ಅಧಿಕ ಸಿಬ್ಬಂದಿ ಬ್ಯಾಂಕ್ ಉದ್ಯೋಗಕ್ಕೆ ಪ್ರವೇಶಿಸಲಿದ್ದಾರೆ.

ಬ್ಯಾಂಕ್‌ಗಳಲ್ಲಿ ಅಪ್ರೆಂಟಿಸ್‌ಶಿಪ್

ಇತ್ತೀಚಿನ ವರ್ಷಗಳಲ್ಲಿ ಪಿಎಮ್ ಇಂಟರ್ನ ಷಿಪ್ ಯೋಜನೆಯಡಿ ಪದವೀಧರರಿಗೆ ತರಬೇತಿ ನೀಡಲು ಬ್ಯಾಂಕ್‌ಗಳು ಸ್ಟೈಪೆಂಡ್ ಸಹಿತ ಅಪ್ರೆಂಟಿಸ್‌ಷಿಪ್ ನೀಡಲು ಅರ್ಜಿ ಆಹ್ವಾನಿಸುತ್ತಿವೆ.

ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ

ಪ್ರಾದೇಶಿಕ ಭಾಷೆ ಬಲ್ಲವರನ್ನು ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಮೂಲಕ ಆಯಾ ರಾಜ್ಯಗಳ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಸ್ಥಳೀಯರಿಗೆ ಆದ್ಯತೆ ಜತೆಗೆ, ರಾಜ್ಯದ ಯುವ ಪದವೀಧರರಿಗೆ ರಾಜ್ಯದಲ್ಲಿಯೇ ಅವಕಾಶ ನೀಡಿದಂತಾಗುತ್ತದೆ.

ಎಂದಿನಂತೆ, ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಒಟ್ಟು ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 783, ಪರಿಶಿಷ್ಟ ಪಂಗಡಕ್ಕೆ 365, ಹಿಂದುಳಿದ ವರ್ಗದವರಿಗೆ 1337, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 520 ಹಾಗೂ ಸಾಮಾನ್ಯ ವರ್ಗ ದವರಿಗೆ 2,204 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ 2025ರ ಜುಲೈ 21 ಕೊನೆ ದಿನ.

ಯಾವ ಬ್ಯಾಂಕ್, ಎಷ್ಟು ಹುದ್ದೆಗಳು?

ಕೆನರಾ ಬ್ಯಾಂಕ್ 1,000, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ 358, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 500, ಬ್ಯಾಂಕ್ ಆಫ್ ಇಂಡಿಯಾ 700, ಪಂಜಾಬ್ ನ್ಯಾಷನಲ್ ಬ್ಯಾಂಕ್ 200, ಇಂಡಿಯನ್ ಒವರಸೀಸ್ ಬ್ಯಾಂಕ್ 450, ಬ್ಯಾಂಕ್ ಆಫ್ ಮಹಾರಾಷ್ಟ್ರ 1,000, ಬ್ಯಾಂಕ್ ಆಫ್ ಬರೋಡಾ 1,000 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

ನೆನಪಿಡಿ: ಮುಖ್ಯವಾಗಿ ಯುಕೋ/ ಯೂನಿಯನ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ಈ ವರ್ಷದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಇನ್ನು ತಿಳಿಸಿಲ್ಲ. ಇನ್ನು ಹಲವು ಬ್ಯಾಂಕ್‌ಗಳು ಬ್ಯಾಕಲಾಗ್ ಹುದ್ದೆಗಳನ್ನು ನಂತರದ ದಿನದಲ್ಲಿ ಸೇರಿಸಬಹುದು. ಈ ಕಾರಣದಿಂದ ಅಪ್ಲೈ

ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗೆ ಲಿಂಕ್‌ಗಳು:

www.ibps.in ಅಧಿಕೃತ ವೆಬ್‌ಸೈಟ್

ibps.in/wp-content/uploads/Detailed-Notification_CRP-PO-XV.pdf ಜಾಲತಾಣ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು https://ibpsreg.ibps.in/crppoxvjun25/

ಶೈಕ್ಷಣಿಕ ಅರ್ಹತೆ (21/07/2025ಕ್ಕೆ ಅನ್ವಯಿಸುವಂತೆ)

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.

ವಯೋಮಿತಿ

01.07.2025ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 02.07.1995ಕ್ಕಿಂತ ಮುಂಚಿತವಾಗಿ ಮತ್ತು 01.07.2005ರ ನಂತರ ಜನಿಸಿರಬಾರದು. ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿ ಹಾಗೂ ಇತರೆ ಅಭ್ಯರ್ಥಿಗಳಿಗೆ: 850 ರೂ. ಪ.ಜಾ., ಪ.ಪಂ. ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ 175 ರೂ. ನೋಂದಣಿ ನಂತರ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ಶುಲ್ಕ ಪಾವತಿ

ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ನೆನಪಿಡಿ

ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗ ಸೂಚಿಗಳ ಪ್ರಕಾರ ಕೆನೆಪದರಹಿತ (ನಾನ್ ಕ್ರಿಮಿ ಲೇಯರ್) ಷರತ್ತಿನೊಂದಿಗೆ ಒಬಿಸಿ ಪ್ರಮಾಣಪತ್ರವನ್ನು ಹೊಂದಿರಬೇಕು.

ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ(ಇಡಬ್ಲ್ಯುಎಸ್)

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಅಸ್ತಿತ್ವದಲ್ಲಿರುವ ಮೀಸಲಾತಿ ಯೋಜನೆಯಡಿಯಲ್ಲಿ ಒಳಗೊಳ್ಳದ ವ್ಯಕ್ತಿಗಳು ಅವರ ಕುಟುಂಬದ ಒಟ್ಟು ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ (ಎಂಟು ಲಕ್ಷ ರೂಪಾಯಿಗಳು ಮಾತ್ರ) ಹೊಂದಿರುವವರು ಮೀಸಲಾತಿಯ ಪ್ರಯೋಜನಕ್ಕಾಗಿ ಇಡಬ್ಲ್ಯುಎಸ್ ಎಂದು ಗುರುತಿಸಬೇಕು. ಆದಾಯ ಎಂದರೆ ಎಲ್ಲಾ ಮೂಲಗಳಿಂದ ಬರುವ ಆದಾಯವನ್ನು ಒಳಗೊಂಡಿರುತ್ತದೆ ಅಂದರೆ ಸಂಬಳ, ಕೃಷಿ, ವ್ಯವಹಾರ, ವೃತ್ತಿ ಇತ್ಯಾದಿ ಮತ್ತು ಅದು ಅರ್ಜಿ ಸಲ್ಲಿಸುವ ವರ್ಷದ ಹಿಂದಿನ ಹಣಕಾಸು ವರ್ಷದ ಆದಾಯವಾಗಿರುತ್ತದೆ.

ಪರೀಕ್ಷಾ ಪ್ರಕ್ರಿಯೆ

ಇದೇ ಅಗಸ್ಟ್ ನಲ್ಲಿ ಪೂರ್ವ ಭಾವಿ ಪರೀಕ್ಷೆ, ಅಕ್ಟೋಬರ್‌ ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ಎರಡೂ ಪರೀಕ್ಷೆಗಳು ಆನ್‌ಲೈನ್ ನಲ್ಲಿ ನಡೆಯುಲಿವೆ. ವ್ಯಕ್ತಿತ್ವ ಪರೀಕ್ಷೆ (ಹೊಸದಾಗಿ ಸೇರ್ಪಡೆ) ನವೆಂಬರ/ಡಿಸೆಂಬರ್‌ನಲ್ಲೂ, ಸಂದರ್ಶನ 2025ರ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಯುವ ಸಾಧ್ಯತೆ ಇದೆ.

ಪರೀಕ್ಷಾ ಕೇಂದ್ರಗಳು

ರಾಜ್ಯದ 9 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವ ಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಯಲಿದೆ.

ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ನಡೆಯುವ ಕೇಂದ್ರ

ಬೆಂಗಳೂರು,ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ- ಧಾರವಾಡ,ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಪರೀಕ್ಷಾ ಪೂರ್ವ ತರಬೇತಿ

ಐಬಿಪಿಎಸ್ ವತಿಯಿಂದ ಎಸ್.ಸಿ/ಎಸ್.ಟಿ/ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳು, ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ತರಬೇತಿ ಯನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಕೋರಿಕೆ ಸಲ್ಲಿಸಬೇಕು.

ಕ್ರೆಡಿಟ್ ಇತಿಹಾಸ

(i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆರೋಗ್ಯಕರ ಕ್ರೆಡಿಟ್ ಇತಿಹಾಸ ಹೊಂದಿರಬೇಕು. ಬ್ಯಾಂಕ್ ಗೆ ಸೇರುವ ಸಮಯದಲ್ಲಿ ಕನಿಷ್ಠ ಸಿಬಿಲ್ ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್‌ಗಳ ನೀತಿಯ ಪ್ರಕಾರ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ.

(ii) ಹುದ್ದೆಗೆ ಸೇರ್ಪಡೆಗೊಳ್ಳುವ ದಿನಾಂಕದ ಮೊದಲು ಸಿಬಿಲ್ ಸ್ಥಿತಿ ನವೀಕರಿಸಬೇಕು ಅಥವಾ ಸಿಬಿಲ್ ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ ನಿರಾಪೇಕ್ಷಣಾ ಪತ್ರ ವನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ /ರದ್ದುಗೊಳಿಸಲಾಗುತ್ತದೆ.

ಗಮನಿಸಿ

ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು ಸಿಬಿಲ್ ಸ್ಥಿತಿಯನ್ನು ಒದಗಿಸುವ ಅಗತ್ಯವಿಲ್ಲ.

ಆಫೀಸರ್ ಆಯ್ಕೆಗೆ ನಾಲ್ಕು ಹಂತಗಳ ಪರೀಕ್ಷೆ

ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ,ಮೊದಲ ಬಾರಿಗೆ ವ್ಯಕ್ತಿತ್ವ ಪರೀಕ್ಷೆಯ ಜೊತೆಯಲ್ಲಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು

  • ಅಭ್ಯರ್ಥಿ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ಬ್ಯಾಂಕ್ ಆದ್ಯತೆಯ ಆದೇಶವನ್ನು ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.
  • ಯಾವ್ಯಾವ ಬ್ಯಾಂಕ್‌ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ.
  • ಒಮ್ಮೆ ನೀವು ಆಯ್ಕೆಯಾದರೆ ನಂತರದ ದಿನಗಳಲ್ಲಿ ಬ್ಯಾಂಕ್/ಸ್ಥಳ ಬದಲಾವಣೆಗಾಗಿ ಸಲ್ಲಿಸುವ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ.
  • ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್ಮೆಂಟ್ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯ ನ್ನು ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿಸಲ್ಲಿಸುವಾಗ ಬಹಳ ಎಚ್ಚರಿಕೆ ವಹಿಸುವುದು ಒಳಿತು.
  • ಅಭ್ಯರ್ಥಿಯ ಹೆಸರು, ವರ್ಗ, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಪರೀಕ್ಷಾ ಕೇಂದ್ರ, ಭಾಗವಹಿಸುವ ಬ್ಯಾಂಕ್ಗಳಿಗೆ ಆದ್ಯತೆಗಳ ನೋಂದಣಿ ಇತ್ಯಾದಿ ಸೇರಿದಂತೆ ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ನಮೂದಿಸಲಾದ ಎಲ್ಲಾ ವಿವರಗಳನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ ಮತ್ತು ಆನ್ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಿದ ನಂತರ ಯಾವುದೇ ಬದಲಾವಣೆ/ಮಾರ್ಪಾಡುಗಳನ್ನು ಅನುಮತಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
  • ವಿವರಗಳ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಪತ್ರವ್ಯವಹಾರವನ್ನುಪರಿಗಣಿಸಲಾಗುವುದಿಲ್ಲವಾದ್ದರಿಂದ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ನಮೂನೆಯನ್ನು ಅತ್ಯಂತ ಎಚ್ಚರಿಕೆಯಿಂದ ಭರ್ತಿ ಮಾಡಲು ಸೂಚಿಸಲಾಗಿದೆ.
  • ಅರ್ಜಿ ನಮೂನೆಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಕಾಮನ್ ರಿಕ್ರೂಟ್‌ಮೆಂಟ್‌ ಪ್ರೋಸೆಸ್ ಮುಗಿಯುವವರೆಗೆ ಅಭ್ಯರ್ಥಿಯು ಸಕ್ರಿಯವಾಗಿರಿಸಿಕೊಳ್ಳಬೇಕು.

ಈ ಸುದ್ದಿಯನ್ನೂ ಓದಿ: IBPS SO 2025: ರಾಷ್ಟ್ರೀಕೃತ ಬ್ಯಾಂಕ್‌ಗಳ 1,007 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಐಬಿಪಿಎಸ್‌ನಿಂದ ಅರ್ಜಿ ಆಹ್ವಾನ

ನೇಮಕಾತಿ ಪ್ರಕ್ರಿಯೆ

ಆಫೀಸರ್ ಆಯ್ಕೆಗೆ ನಾಲ್ಕು ಹಂತಗಳ ಪರೀಕ್ಷೆ

ಪೂರ್ವ ಭಾವಿ ಪರೀಕ್ಷೆ: ಪೂರ್ವ ಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಗಳಿಸಬೇಕು. ಆದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ. ಪೂರ್ವ ಭಾವಿ ಪರೀಕ್ಷೆ ಒಂದು ಗಂಟೆ ಅವಧಿಯದ್ದು (ಪ್ರತಿ ಪತ್ರಿಕೆಗೂ 20 ನಿಮಿಷಗಳು). 100 ಅಂಕಗಳಿರುತ್ತವೆ (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿ) ಇದರಲ್ಲಿ ಇಂಗ್ಲಿಷ್ ಭಾಷಾ ಪತ್ರಿಕೆಗೆ 30ಪ್ರಶ್ನೆ/30 ಅಂಕ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಪ್ರಶ್ನೆ/30 ಅಂಕ (ಈ ಸಲ 5 ಅಂಕ ಕಡಿಮೆ ಮಾಡಲಾಗಿದೆ) ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆ 40 ಅಂಕಗಳಿರಲಿವೆ. (5 ಅಂಕ ಹೆಚ್ಚಿಸಲಾಗಿದೆ)ಇಲ್ಲಿ ಗಮನಿಸಬೆಕಾಗಿದ್ದು ಪ್ರಶ್ನೆಗಳ ಸಂಖ್ಯೆ ಕಳೆದ ವರ್ಷದಷ್ಟೆ ಇದ್ದು ರೀಸನಿಂಗ್ ನಲ್ಲಿ ಅಂಕ ಹೆಚ್ಚಿಸಲಾಗಿದೆ. ಸಿಟ್ಟಿಂಗ್ ಅರೇಂಜ್‌ಮೆಂಟ್ ಮತ್ತು ಪಝಲ್ಸ್ ಡಾಟಾ ಸಫೀಶೀಯನ್ಸಿ, ಮಶೀನ್ ಇನ್ ಪುಟ್, ಹೆಚ್ಚು ಅಂಕ ಗಳಿಸಲು ಸಹಕಾರಿಯಾಗಬಹುದು. ಪ್ರತಿ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.

ಇಂಗ್ಲಿಷ್‌ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತವೆ. ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯದ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕ ವನ್ನು ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಗೆ ಉತ್ತರ ಗುರುತಿಸಲಾಗಿಲ್ಲದಿದ್ದರೆ ಅಂಕ ಕಳೆಯುವುದಿಲ್ಲ.

ಮುಖ್ಯ ಪರೀಕ್ಷೆ ಮುಗಿಯುತ್ತಿದ್ದಂತೆ ಇಂಗ್ಲಿಷ್ ಭಾಷೆಗೆ (Letter Writing & Essay- with two questions) ಸಂಬಂಧಿಸಿದಂತೆ 25 ಅಂಕಗಳಿಗೆ ಡಿಸ್ಸ್ಕ್ರಿಟಿವ್ ಟೆಸ್ಟ್ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರ ಬರೆಯಬೇಕು. ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯಕ್ಕೆ ಸಂಬಂಧಿಸಿದಂತೆ ವೈಶಿಷ್ಟಗಳನ್ನು ಗುರುತಿಸುವುದು ಇದರ ಕಾರ್ಯ ವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯವನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.

ಮುಖ್ಯ ಪರೀಕ್ಷೆಯಲ್ಲಾದ ಬಹು ದೊಡ್ಡ ಬದಲಾವಣೆಯನ್ನು ಗಮನಿಸೋಣ. ರೀಸನಿಂಗ್ ಪೇಪರ್‌ನ ಜತೆಯಲ್ಲಿದ್ದ ಕಂಪ್ಯೂಟರ್ ಅಪ್ಟಿಟ್ಯೂಡ್ ಅನ್ನು ಕೈ ಬಿಡಲಾಗಿದೆ.ಹಿಂದೆ ಕಂಪ್ಯೂಟರ್ ಮೇಲೆ ಪ್ರಶ್ನೆಗಳು ಕೇಳಿದ್ದು ಕಡಿಮೆ. 5 ಪ್ರಶ್ನೆಗಳು ಕಡಿತವಾಗಿದ್ದು, ಸಮಯ ಕೂಡಾ 10 ನಿಮಿಷ ಕಡಿತಗೊಳಿಸಲಾಗಿದೆ. ಅಂಕಗಳು 60.

General/ Economy/ Banking Awareness 40 ಪ್ರಶ್ನೆ 40 ಅಂಕಗಳು 35 ನಿಮಿಷಗಳ ಬದಲಾಗಿ ನಿರ್ದಿಷ್ಟವಾಗಿ ಸಿಲೆಬಸ್ ನ್ನು ಜನರಲ್/ ಎಕಾನಮಿ/ ಬ್ಯಾಂಕಿಂಗ್ ಅವೇರ್ನೆಸ್ /ಡಿಜಿಟಲ್ ಫೈನಾನ್ಸ್ ಅವಾರ್ನೆಸ್/ಆರ್‌ಬಿಐ ಸುತ್ತೋಲೆ ಎಂದು ವಿಂಗಡಿಸಿ 35 ಪ್ರಶ್ನೆ / 50ಅಂಕ/ 25 ನಿಮಿಷಗಳ ಸಮಯವನ್ನು ನಿಡಲಾಗಿದೆ .ಅಂದರೆ ಪ್ರಶ್ನೆಗಳ ಸಂಖ್ಯೆ ಕಡಿಮೆಗೊಳಿಸಿ ಅಂಕ ಹೆಚ್ವಿಸಲಾಗಿದ್ದು , ಸಮಯ ಕಡಿತಗೊಳಿಸಲಾಗಿದೆ.ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಬದಲಾವಣೆ ಮಾಡಿಲ್ಲ. Data Analysis & Interpretation 35 ಪ್ರಶ್ನೆಗಳಲ್ಲಿ ಬದಲಾವಣೆ ಮಾಡದೆ 60 ಅಂಕಗಳನ್ನು 50ಕ್ಕೆ ಇಳಿಸಿದ್ದು ಸಮಯ 45 ನಿಮಿಷಗಳಲ್ಲಿ ಬದಲಾವಣೆ ಮಾಡಲಾಗಿಲ್ಲ.

ನೆನಪಿಡಿ: ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ.

ವ್ಯಕ್ತಿತ್ವ ಪರೀಕ್ಷೆ

ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತದ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗುತ್ತಾರೆ. ಈ ಮೊದಲು ಎಸ್ ಬಿ ಆಯ್ ಇದನ್ನು ಪರಿಚಯಿಸಿತ್ತು.ಇವಾಗ ಮೊದಲ ಬಾರಿಗೆ ಐಬಿಪಿಎಸ್ ಪರಿಚಯಿಸಿದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ (ಸ್ವಯಂ ವರದಿ) ಕರೆಯಲಾಗುವುದು. ಅಭ್ಯರ್ಥಿಗಳ ವ್ಯಕ್ತಿತ್ವ ಪ್ರೊಫೈಲ್ ಅನ್ನು ಸಂದರ್ಶನ ಸಮಿತಿಯ ಮುಂದೆ ಇಡಲಾಗುತ್ತದೆ. ವ್ಯಕ್ತಿತ್ವ ಪರೀಕ್ಷೆಯು ಅರ್ಹತಾ ಸ್ವಭಾವದ್ದಾಗಿರುವುದಿಲ್ಲ. ಆದಾಗ್ಯೂ, ಸಂದರ್ಶನ ಪ್ರಕ್ರಿಯೆಗೆ ಹಾಜರಾಗಲು ಅರ್ಹತೆ ಪಡೆಯಲು ವ್ಯಕ್ತಿತ್ವ ಪರೀಕ್ಷೆಯನ್ನು ಎದುರಿಸುವುದು ಕಡ್ಡಾಯ.

ಸಂದರ್ಶನ

ವ್ಯಕ್ತಿತ್ವ ಪರೀಕ್ಷೆಯಲ್ಲಿ ನಿಮ್ಮಿಂದ ಸಂಗ್ರಹಿಸಿದ ಮಾಹಿತಿಯನ್ನು ಸಂದರ್ಶನ ದ ಕಮಿಟಿ ಮುಂದೆ ಇಡಲಾಗುವುದು. ವ್ಯಕ್ತಿತ್ವ ಪರೀಕ್ಷೆ ಗೆ ಅಂಕಗಳಿಲ್ಲವಾದರೂ ಪ್ರತಿಯೊಬ್ಬ ಅಭ್ಯರ್ಥಿಯ ಹಾಜರಾತಿ ಖಡ್ಡಾಯವಾಗಿದೆ. ಒಬಿಸಿ ವರ್ಗದ ಅಭ್ಯರ್ಥಿಗಳು ಭಾರತ ಸರ್ಕಾರವು ನಿಗದಿಪಡಿಸಿದ 'ನಾನ್-ಕ್ರೀಮಿ ಲೇಯರ್' ಷರತ್ತನ್ನು ಹೊಂದಿರುವ, 01.04.2025 ಅಥವಾ ನಂತರ ನೀಡಲಾದ ನಮೂನೆಯಲ್ಲಿ ಒಬಿಸಿ ಪ್ರಮಾಣಪತ್ರವನ್ನು ಸಂದರ್ಶನದ ದಿನಾಂಕದವರೆಗೆ ಸಲ್ಲಿಸಬೇಕು. ಅಭ್ಯರ್ಥಿಯು ಸಂದರ್ಶನದ ದಿನಾಂಕದವರೆಗೆ ಸಲ್ಲಿಸಬೇಕು. ಅಭ್ಯರ್ಥಿಯು ಸಂದರ್ಶನದ ದಿನಾಂಕದಂದು / ಅಥವಾ ಅದಕ್ಕಿಂತ ಮೊದಲು ಮೀಸಲಾತಿ ಪಡೆಯುವ ಹಕ್ಕನ್ನು ಬೆಂಬಲಿಸಲು ನಿಗದಿತ ನಮೂನೆಯಲ್ಲಿ ಅಗತ್ಯವಾದ ಒಬಿಸಿ (ಎನ್‌ಸಿಎಲ್) ಪ್ರಮಾಣಪತ್ರವನ್ನು ಹೊಂದಿರಬೇಕು.

ಆಯ್ಕೆ ಪಟ್ಟಿ

ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-IV ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಸಂದರ್ಶನಕ್ಕೆ ನಿಗದಿ ಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು ಶೇ 40 (SC/ST/OBC/PWBD ಅಭ್ಯರ್ಥಿಗಳಿಗೆ ಶೇ 35).ಆನ್‌ಲೈನ್ ಮುಖ್ಯ ಪರೀಕ್ಷೆ ಮತು ಸಂದರ್ಶನದ ಅಂಕಗಳ ಅನುಪಾತ ಕ್ರಮವಾಗಿ 80:20 ಆಗಿರುತ್ತದೆ.

ಮೀಸಲು ಪಟ್ಟಿ

ಐಬಿಪಿಎಸ್ ಪ್ರತಿ ವರ್ಗದ ಖಾಲಿ ಹುದ್ದೆಗಳ ಸರಿ ಸುಮಾರು 20 ಪ್ರತಿ ಶತದಷ್ಟು ಮೀಸಲು ಪಟ್ಟಿಯನ್ನು ಅಭ್ಯರ್ಥಿಗಳ ಲಭ್ಯತೆಗೆ ಒಳಪಟ್ಟು ಇಟ್ಟುಕೊಳ್ಳಬಹುದು. ಇದು ಭಾಗವಹಿಸುವ ಬ್ಯಾಂಕ್‌ನಿಂದ ತಾತ್ಕಾಲಿಕ ಹಂಚಿಕೆ/ನೇಮಕಾತಿಯನ್ನು ಖಾತರಿಪಡಿಸುವುದಿಲ್ಲ. ಮೀಸಲು ಪಟ್ಟಿಯ ಮಾನ್ಯತೆಯ ಅವಧಿಯೊಳಗೆ, ವಿವಿಧ ಭಾಗವಹಿಸುವ ಬ್ಯಾಂಕ್‌ಗಳು ಮಧ್ಯಂತರಗಳಲ್ಲಿ ಮತ್ತಷ್ಟು ಖಾಲಿ ಹುದ್ದೆಗಳನ್ನು ಒದಗಿಸಿದರೆ, ಮೀಸಲು ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ಹಂಚಿಕೆಯನ್ನು ಮೂರರಿಂದ ನಾಲ್ಕು ಬಾರಿ ಕೈಗೊಳ್ಳಬಹುದು.

ನೆನಪಿಡಿ: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಮಹತ್ವದ ಹೆಜ್ಜೆಯಿಟ್ಟಿದೆ. ಮೊದಲ ಬಾರಿಗೆ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಾಗಿ ಅಭ್ಯರ್ಥಿಗಳು ಮಾನ್ಯವಾದ ಆಧಾ‌ರ್ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಐಬಿಪಿಎಸ್ನಲ್ಲಿ ಭಾಗವಹಿಸುವ ಬ್ಯಾಂಕ್‌ಗಳು ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳ ಆನ್‌ಲೈನ್‌ ಆಧಾ‌ರ್ ಪರಿಶೀಲನೆಯನ್ನು ಸಹ ನಡೆಸುತ್ತವೆ.