Gauribidanur News: ನಗರದ ಎಂ.ಜಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಸಿದ್ದತೆ
ಎಂ.ಜಿ. ರಸ್ತೆ ಅಂದರೆ ನಗರದ ಉತ್ತರ ಪಿನಾಕಿನಿ ಸೇತುವೆಯ ತುದಿಯಿಂದ ಗಾಂಧಿ ವೃತ್ತ, ಕೃಷ್ಣ ಭವನ ಹೋಟೆಲ್ ರಸ್ತೆ ಮೂಲಕ ಮಧುಗಿರಿ ರಸ್ತೆಯ ರೈಲ್ವೆ ಮೇಲು ಸೇತುವೆವರೆಗೂ ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ ನಲವತ್ತು ಅಡಿಗಳ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಅಳತೆ ಮಾಡಿ ಮಾರ್ಕಿಂಗ್ ಮಾಡ ಲಾಗಿದೆ.
-
Ashok Nayak
Oct 27, 2025 12:25 AM
ಗೌರಿಬಿದನೂರು: ನಗರದ ಮಧುಗಿರಿ ರಸ್ತೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರಸ್ತುತ ಇರುವ ರಸ್ತೆಯನ್ನು ಶನಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಂಬತ್ತು ಅಡಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಮಾರ್ಕಿಂಗ್ ಕಾರ್ಯಕ್ಕೆ ಮುಂದಾಗಿದ್ದಾರೆ.
ಪ್ರಸ್ತುತ ಇರುವ ರಸ್ತೆಯ ಮಧ್ಯ ಭಾಗದಿಂದ ಎರಡೂ ಕಡೆಯೂ ನಲವತ್ತು ಅಡಿಗಳ ರಸ್ತೆಯನ್ನು ಅಗಲೀಕರಣ ಮಾಡಲು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ಅಳತೆ ಮಾಡಿ, ತೆರುವ ಮಾಡಬೇಕಾಗಿರುವ ಕಟ್ಟಡದ ಗೋಡೆ ಮೇಲೆ ಕೆಂಪು ಬಣ್ಣದಿಂದ ಗುರುತು ಮಾಡುತ್ತಿರುವುದು, ಅಂಗಡಿ ಮತ್ತು ಮುಗ್ಗಟ್ಟುಗಳ ಮಾಲೀಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಕೆಲವು ಕಡೆ ಕಟ್ಟಡದ ಮಾಲೀಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಡುವೆ ರಸ್ತೆ ಅಳತೆ ವಿಚಾರ ವಾಗಿ ಮಾತಿನ ಚಕಮಕಿ ಕೂಡ ನಡೆದು ಹೋದವು.
ಎಂ.ಜಿ. ರಸ್ತೆ ಅಂದರೆ ನಗರದ ಉತ್ತರ ಪಿನಾಕಿನಿ ಸೇತುವೆಯ ತುದಿಯಿಂದ ಗಾಂಧಿ ವೃತ್ತ, ಕೃಷ್ಣ ಭವನ ಹೋಟೆಲ್ ರಸ್ತೆ ಮೂಲಕ ಮಧುಗಿರಿ ರಸ್ತೆಯ ರೈಲ್ವೆ ಮೇಲು ಸೇತುವೆವರೆಗೂ ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ ನಲವತ್ತು ಅಡಿಗಳ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಅಳತೆ ಮಾಡಿ ಮಾರ್ಕಿಂಗ್ ಮಾಡಲಾಗಿದೆ.
ಇದನ್ನೂ ಓದಿ: Gauribidanur News: ಶಾಸಕರ ಬೆಂಬಲಿಗರ ತೆಕ್ಕೆಗೆ ಕಲ್ಲೂಡಿ ಡೈರಿ
ಕೆಲವು ತಾಂತ್ರಿಕ ಕಾರಣಗಳಿಂದ ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರವಾಗಿ ರಸ್ತೆ ಮಧ್ಯ ಭಾಗದಿಂದ 40+40 ಅಡಿ ಗುರುತಿಸಿ, 80 ಅಡಿಗಳ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಈಗಾಗಲೇ ಕಟ್ಟಡ ಮಾಲೀಕರಿಗೆ ರಸ್ತೆ ಅಭಿವೃದ್ಧಿ ಬಗ್ಗೆ ಸೂಚಿಸಲಾಗಿದೆ. ಅವರಾಗಿಯೇ ಕಟ್ಟಡಗಳನ್ನು ತೆರುವುಗೊಳಿಸಿಕೊಳ್ಳುವುದು ಸೂಕ್ತ, ಇದಕ್ಕಾಗಿ ಒಂದು ವಾರ ಕಾಲಾವಕಾಶವನ್ನು ನೀಡಲಾಗಿದೆ. ಅವಧಿ ಮೀರಿದ ನಂತರ ನಾವೇ ಕಟ್ಟಡಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ಆರಂಭಿಸುತ್ತೇವೆ.
ರಸ್ತೆ ಅಭಿವೃದ್ಧಿ ದೃಷ್ಟಿಯಿಂದ ಕಟ್ಟಡ ಮಾಲೀಕರು ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು ಎಂದು ತಿಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ರಾಜಾರೆಡ್ಡಿ, ಹೆದ್ದಾರಿ-69 ಅಗಿದ್ದು, ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಹಾಗೂ ರಾಷ್ಟ್ರೀಯ ಹೆದ್ದಾರಿ ನಿಯಮಾನುಸಾರ ನಗರದ ಉತ್ತರ ಪಿನಾಕಿನಿ ನದಿ ಸೇತುವೆಯಿಂದ ಎಂ.ಜಿ. ರಸ್ತೆಯ ರೈಲ್ವೆ ಮೇಲು ಸೇತುವೆವರೆಗೂ 80 ಅಡಿಗಳ ರಸ್ತೆಯನ್ನು ನಿರ್ಮಿಸಲಾಗುವುದು ಜೊತೆಗೆ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಹಾಗೂ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.