ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

1,538 ಕ್ಲರ್ಕ್ ಹುದ್ದೆಗಳಿಗೆ ಎಸ್‌ಬಿಐಯಿಂದ ಅರ್ಜಿ ಆಹ್ವಾನ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ

Bank Jobs: ಎಸ್‌ಬಿಐ ಕ್ಲರ್ಕ್ ಹುದ್ದೆಗಳಿಗಾಗಿ ಕಾಯುತ್ತಿರುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಈ ಬಾರಿ ಸಾಮಾನ್ಯ ನೇಮಕಾತಿಗಿಂತ ಭಿನ್ನವಾದ ಅವಕಾಶವೊಂದು ಬಂದಿದೆ. ದೇಶಾದ್ಯಂತ ಒಟ್ಟು 1,538 ಹುದ್ದೆಗಳು ಪ್ರಕಟವಾಗಿದ್ದು, ಕರ್ನಾಟಕದಲ್ಲಿ 120 ಹುದ್ದೆಗಳಿವೆ. ಅವು ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲು.

ಸಾಂದರ್ಬಿಕ ಚಿತ್ರ. ಒಳಚಿತ್ರದಲ್ಲಿ ಲೇಖಕ ಆರ್.ಕೆ. ಬಾಲಚಂದ್ರ
  • ಆರ್.ಕೆ. ಬಾಲಚಂದ್ರ

ಬೆಂಗಳೂರು, ಆ. 13: ಎಸ್‌ಬಿಐ ಕ್ಲರ್ಕ್ ಹುದ್ದೆಗಳಿಗಾಗಿ ಕಾಯುತ್ತಿರುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಈ ಬಾರಿ ಸಾಮಾನ್ಯ ನೇಮಕಾತಿಗಿಂತ ಭಿನ್ನವಾದ ಅವಕಾಶವೊಂದು ಬಂದಿದೆ. ಆದರೆ ಇದು ಸಾಮಾನ್ಯ ನೇಮಕಾತಿ ಅಲ್ಲ ಎಂಬುದನ್ನು ಮೊದಲೇ ತಿಳಿದುಕೊಳ್ಳಬೇಕು. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2026ನೇ ಸಾಲಿನ ಜೂನಿಯರ್ ಅಸೋಸಿಯೇಟ್ (Customer Support & Sales) ಹುದ್ದೆಗಳ ವಿಶೇಷ ಬ್ಯಾಕ್‌ಲಾಗ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹಿಂದಿನ ನೇಮಕಾತಿಗಳಲ್ಲಿ ಭರ್ತಿಯಾಗದೆ ಉಳಿದ ಮೀಸಲು ಹುದ್ದೆಗಳನ್ನು ತುಂಬುವುದು ಈ ವಿಶೇಷ ನೇಮಕಾತಿ ಅಭಿಯಾನದ ಮುಖ್ಯ ಉದ್ದೇಶ. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಕೆಲವು ರಾಜ್ಯಗಳಲ್ಲಿ ಮಾತ್ರ ಇತರೆ ಹಿಂದುಳಿದ ವರ್ಗದ (OBC) ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ನಡೆಸಲಾಗುತ್ತಿದೆ. ದೇಶಾದ್ಯಂತ ಒಟ್ಟು 1,538 ಹುದ್ದೆಗಳು ಪ್ರಕಟವಾಗಿದ್ದು, ಕರ್ನಾಟಕದಲ್ಲಿ 120 ಹುದ್ದೆಗಳಿದ್ದು, ಅವು ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿವೆ.

ಎಸ್‌ಬಿಐ ಜೂನಿಯರ್ ಅಸೋಸಿಯೇಟ್ 2026ರ ಈ ವಿಶೇಷ ನೇಮಕಾತಿಗೆ ಅರ್ಜಿ ಸಲ್ಲಿಕೆ ಆಗಸ್ಟ್ 7 ರಿಂದ ಆಗಸ್ಟ್ 27, 2026 ರವರೆಗೆ ನಡೆಯಲಿದೆ. ಪ್ರಾಥಮಿಕ ಪರೀಕ್ಷೆಯನ್ನು ಸೆಪ್ಟೆಂಬರ್ 2026 ರಲ್ಲಿ, ಮುಖ್ಯ ಪರೀಕ್ಷೆಯನ್ನು ಅಕ್ಟೋಬರ್/ನವೆಂಬರ್ 2026 ರಲ್ಲಿ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ನೀಡಲಾಗಿದೆ. ನಿಖರ ಪರೀಕ್ಷಾ ದಿನಾಂಕವನ್ನು ಎಸ್‌ಬಿಐ ನಂತರ ಪ್ರಕಟಿಸಲಿದೆ.

ವಿದ್ಯಾರ್ಹತೆ: ಯಾವುದೇ ಪದವಿ ಸಾಕು

ಈ ಹುದ್ದೆಗೆ ಅರ್ಜಿ ಸಲ್ಲಿಸಲು 31 ಡಿಸೆಂಬರ್ 2026ರೊಳಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಕೇಂದ್ರ ಸರ್ಕಾರ ಮಾನ್ಯತೆ ನೀಡಿರುವ ಸಮಾನ ವಿದ್ಯಾರ್ಹತೆಯನ್ನೂ ಪರಿಗಣಿಸಲಾಗುತ್ತದೆ. Integrated Dual Degree (IDD) ಹೊಂದಿರುವ ಅಭ್ಯರ್ಥಿಗಳು ತಮ್ಮ IDD ಪದವಿ ಪೂರ್ಣಗೊಂಡ ದಿನಾಂಕ 31 ಡಿಸೆಂಬರ್ 2026 ಅಥವಾ ಅದಕ್ಕೂ ಮೊದಲು ಇರಬೇಕು.

ಅಂತಿಮ ವರ್ಷದ ಅಥವಾ ಅಂತಿಮ ಸೆಮಿಸ್ಟರ್‌ನಲ್ಲಿರುವ ಪದವಿ ವಿದ್ಯಾರ್ಥಿಗಳೂ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು. ಆದರೆ ಅವರು ಆಯ್ಕೆಯಾದರೆ, 2026ರ ಡಿಸೆಂಬರ್‌ 31ರೊಳಗೆ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆ ಸಲ್ಲಿಸಬೇಕು.

ಕೆಸೆಟ್-2026ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಶುಲ್ಕ ಎಷ್ಟು?

ಈ ವಿಶೇಷ ನೇಮಕಾತಿಯಲ್ಲಿ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಬಿಡಿ, ಮಾಜಿ ಸೈನಿಕರು ಮತ್ತು ವಿಶೇಷಚೇತನ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಒಬಿಸಿ ಅಭ್ಯರ್ಥಿಗಳಿಗೆ 750 ರುಪಾಯಿ ಅರ್ಜಿ ಶುಲ್ಕ ಹಾಗೂ ಮಾಹಿತಿ ಶುಲ್ಕ ನಿಗದಿಪಡಿಸಲಾಗಿದೆ. ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ. ಕರ್ನಾಟಕದಲ್ಲಿ ಪ್ರಕಟವಾಗಿರುವ 120 ಹುದ್ದೆಗಳು 85, ಎಸ್‌ಸಿ ಮತ್ತು 35 ಎಸ್‌ಟಿ ಹುದ್ದೆಗಳಾಗಿರುವುದರಿಂದ, ಕರ್ನಾಟಕದ ಅರ್ಹ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ಎಸ್‌ಬಿಐ ಅಪ್ರೆಂಟಿಸ್‌ಶಿಪ್ ಮಾಡಿದವರಿಗೆ 5 ಹೆಚ್ಚುವರಿ ಅಂಕ

ಎಸ್‌ಬಿಐಯಲ್ಲಿ ಅಪ್ರೆಂಟಿಸ್ ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಮುಖ್ಯಪರೀಕ್ಷೆಯ ಗರಿಷ್ಠ 200 ಅಂಕಗಳ ಶೇ. 2.5 ಅಂದರೆ 5 ಹೆಚ್ಚುವರಿ ಅಂಕ ನೀಡಲಾಗುತ್ತದೆ.

ಆದರೆ ಈ ಪ್ರಯೋಜನ ಎಲ್ಲ ಅಪ್ರೆಂಟಿಸ್ ಅಭ್ಯರ್ಥಿಗಳಿಗೂ ಸಿಗುವುದಿಲ್ಲ. 01.01.2022 ಅಥವಾ ಅದರ ನಂತರ ಅಪ್ರೆಂಟಿಸ್ ಶಿಪ್ ಆರಂಭಿಸಿರುವವರು, ಎಸ್‌ಬಿಐಯಲ್ಲಿ ನಿಗದಿಪಡಿಸಿರುವ ಒಂದು ವರ್ಷದ ಶಾಖಾ ಅನುಭವವನ್ನು 27.08.2026ರ ನೋಂದಣಿ ಕೊನೆಯ ದಿನಾಂಕದೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿರಬೇಕು. ತರಬೇತಿಯ ಸಂಪೂರ್ಣ ಅವಧಿಯಲ್ಲಿ ಅಭ್ಯರ್ಥಿಯ ನಡವಳಿಕೆ ಮತ್ತು ಕಾರ್ಯಕ್ಷಮತೆ ತೃಪ್ತಿಕರವಾಗಿರಬೇಕು.

ಇದರ ಜೊತೆಗೆ ಅಪ್ರೆಂಟಿಸ್ ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿರುವುದಕ್ಕೆ ಕೌಶಲ್ಯ ಮೌಲ್ಯಮಾಪನ ಪರೀಕ್ಷೆ (Skill Evaluation Test or Trade Test)ನಲ್ಲಿ ಉತ್ತೀರ್ಣರಾಗಿರಬೇಕು ಮತ್ತು SBI–NSDC/BFSI-SSC ಜಂಟಿಯಾಗಿ ನೀಡುವ ರಾಷ್ಟ್ರೀಯ ಶಿಷ್ಯವೃತ್ತಿ ಪ್ರಮಾಣಪತ್ರ (National Apprenticeship Certificate) ಪಡೆದಿರಬೇಕು.

PET: ಪರೀಕ್ಷೆಗೆ ಮುನ್ನ ತರಬೇತಿಯ ಅವಕಾಶ

ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕ್ ಪರೀಕ್ಷಾ ಪೂರ್ವ ತರಬೇತಿ (Pre-Examination Training) ವ್ಯವಸ್ಥೆ ಮಾಡಲಿದೆ. ಈ ತರಬೇತಿ ಆನ್‌ಲೈನ್ ಮೂಲಕ ನಡೆಯಲಿದೆ. ತರಬೇತಿ ಪಡೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಸಂಬಂಧಿತ ಕಾಲಂನಲ್ಲಿ ಆಯ್ಕೆ ಮಾಡಬೇಕು. ತರಬೇತಿಯ ವೇಳಾಪಟ್ಟಿಯನ್ನು ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳು ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಹಂತದ ಪರೀಕ್ಷೆಗೆ: ಕರ್ನಾಟಕದಲ್ಲಿ ಎಂಟು ನಗರಗಳು

ಎಸ್‌ಬಿಐ ಪ್ರಕಟಿಸಿರುವ ತಾತ್ಕಾಲಿಕ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ/ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರಗಳಾಗಿವೆ.

LLPT: ಸ್ಥಳೀಯ ಭಾಷೆ ಗೊತ್ತಿಲ್ಲದಿದ್ದರೆ ನೇಮಕಾತಿ ಕೈ ತಪ್ಪಬಹುದು?

ಈ ನೇಮಕಾತಿಯಲ್ಲಿ ಸ್ಥಳೀಯ ಭಾಷಾ ಪ್ರಾವೀಣ್ಯತಾ ಪರೀಕ್ಷೆ (Local Language Proficiency Test) ಅತ್ಯಂತ ಪ್ರಮುಖ ಹಂತವಾಗಿದೆ. ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನ್ನಡ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಸಮರ್ಥರಾಗಿರಬೇಕು.

ಆದರೆ 10ನೇ ಅಥವಾ 12ನೇ ತರಗತಿಯಲ್ಲಿ ಕನ್ನಡವನ್ನು ಓದಿರುವುದನ್ನು ಸಾಬೀತುಪಡಿಸುವ ಅಂಕಪಟ್ಟಿ ಅಥವಾ ಪ್ರಮಾಣಪತ್ರವನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತ್ಯೇಕ ಭಾಷಾ ಪರೀಕ್ಷೆ ಇರುವುದಿಲ್ಲ. ಅಂತಹ ದಾಖಲೆ ಇಲ್ಲದಿದ್ದರೆ, ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ನೇಮಕಾತಿಗೆ ಮುನ್ನ ಭಾಷಾ ಪ್ರಾವೀಣ್ಯತಾ ಪರೀಕ್ಷೆ (LLPT) ಬರೆಯಬೇಕು. ಅದರಲ್ಲಿ ಅನುತ್ತೀರ್ಣರಾದರೆ ನೇಮಕಾತಿ ನೀಡಲಾಗುವುದಿಲ್ಲ.

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯಿಂದ 11,403 ‘ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

LLPT ಹೇಗಿರುತ್ತದೆ?

ಈ ಪರೀಕ್ಷೆಯ ಮಾದರಿಯನ್ನು SBI ಅಧಿಸೂಚನೆಯಲ್ಲಿ ಈ ಕೆಳಗಿನಂತೆ ನೀಡಿದೆ:

ಪರೀಕ್ಷೆಯ ಮಾದರಿ

ಪರೀಕ್ಷೆಯ ಭಾಗ ಮಾದರಿ Passages ಪ್ರಶ್ನೆಗಳು ಗರಿಷ್ಠ ಅಂಕ
Non-Verbal Test Objective 3 15 15
Non-Verbal Test Subjective 3 15 15
Verbal Test 20

ಅಭ್ಯರ್ಥಿಗಳು ಪ್ರತಿಯೊಂದು ಪರೀಕ್ಷೆಯಲ್ಲೂ ಬ್ಯಾಂಕ್ ನಿಗದಿಪಡಿಸುವ ಕನಿಷ್ಠ ಅರ್ಹತಾ ಅಂಕ ಗಳಿಸಬೇಕು.

ಪರೀಕ್ಷೆ ಕನ್ನಡದಲ್ಲೂ ಬರೆಯಬಹುದು

ಕರ್ನಾಟಕದ ಅಭ್ಯರ್ಥಿಗಳಿಗೆ ಮತ್ತೊಂದು ಅನುಕೂಲವೆಂದರೆ, ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ ಅಥವಾ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶವಿದೆ. ಆದ್ದರಿಂದ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳು ಭಾಷೆಯ ಕಾರಣದಿಂದ ಹಿಂದೆ ಸರಿಯಬೇಕಾಗಿಲ್ಲ. ಆದರೆ ಇಂಗ್ಲಿಷ್ ಭಾಷೆ ವಿಭಾಗಕ್ಕೆ ಈ ಆಯ್ಕೆ ಅನ್ವಯಿಸುವುದಿಲ್ಲ; ಆ ವಿಭಾಗದ ಪ್ರಶ್ನೆಗಳು ಇಂಗ್ಲಿಷ್‌ನಲ್ಲಿಯೇ ಇರುತ್ತವೆ.

ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಹಂತದ ಪರೀಕ್ಷೆ: ಈ ಬಾರಿ ಪರೀಕ್ಷಾ ಮಾದರಿ ಹೇಗಿದೆ?

ಎಸ್‌ಬಿಐ ಕ್ಲರ್ಕ್ 2026ರ ಈ ವಿಶೇಷ ನೇಮಕಾತಿಯಲ್ಲಿ ಆಯ್ಕೆಯ ಮೊದಲ ಹಂತ ಪೂರ್ವಭಾವಿ ಪರೀಕ್ಷೆ (Preliminary Examination). ಇದರಲ್ಲಿ ಉತ್ತಮ ಅಂಕ ಗಳಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬೇಕು. ಆದರೆ ಇಲ್ಲಿ ಒಂದು ಪ್ರಮುಖ ವಿಷಯವನ್ನು ಅಭ್ಯರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಪೂರ್ವಭಾವಿ ಪರೀಕ್ಷೆ ಅಂಕಗಳನ್ನು ಅಂತಿಮ ಮೆರಿಟ್ ಪಟ್ಟಿಗೆ ಸೇರಿಸಲಾಗುವುದಿಲ್ಲ. ಅಂತಿಮ ಮೆರಿಟ್‌ಗೆ ಮುಖ್ಯ ಪರೀಕ್ಷೆಯ ಅಂಕಗಳೇ ಪರಿಗಣನೆಯಾಗುತ್ತವೆ.

ಪೂರ್ವಭಾವಿ ಪರೀಕ್ಷೆ: 100 ಪ್ರಶ್ನೆ, 100 ಅಂಕ, ಒಂದು ಗಂಟೆ ಅವಧಿ

ಪ್ರಾಥಮಿಕ ಪರೀಕ್ಷೆ ಆನ್‌ಲೈನ್‌ನಲ್ಲಿ ನಡೆಯಲಿ ದ್ದು, ಒಟ್ಟು 100 ಪ್ರಶ್ನೆಗಳಿಗೆ 100 ಅಂಕಗಳು ಇರುತ್ತವೆ. ಪರೀಕ್ಷೆಯ ಒಟ್ಟು ಅವಧಿ ಒಂದು ಗಂಟೆ. ಆದರೆ ಮೂರು ವಿಭಾಗಗಳಿಗೂ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ.

ಪರೀಕ್ಷೆಯ ಅವಧಿ

ವಿಭಾಗ ಪ್ರಶ್ನೆಗಳು ಅಂಕಗಳು ಸಮಯ
English Language 30 30 20 ನಿಮಿಷ
Numerical Ability 35 35 20 ನಿಮಿಷ
Reasoning Ability 35 35 20 ನಿಮಿಷ
ಒಟ್ಟು 100 100 60 ನಿಮಿಷ

ಪ್ರತಿ ವಿಭಾಗಕ್ಕೂ ಪ್ರತ್ಯೇಕ ಸಮಯ ಇರುವುದರಿಂದ, ಒಂದು ವಿಭಾಗದಲ್ಲಿ ಉಳಿದ ಸಮಯವನ್ನು ಮತ್ತೊಂದು ವಿಭಾಗಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ತಪ್ಪು ಉತ್ತರಕ್ಕೆ ¼ ಅಂಕದ ತಪ್ಪು ಉತ್ತರಗಳಿಗೆ ಅಂಕ ಕಡಿತ ಇದೆ. ವೈಯಕ್ತಿಕ ವಿಭಾಗಕ್ಕೂ ಅಥವಾ ಒಟ್ಟು ಅಂಕಗಳಿಗೂ ಕನಿಷ್ಠ ಅರ್ಹತಾ ಅಂಕಗಳು ನಿಗದಿಪಡಿಸಲಾಗಿಲ್ಲ. ಮುಖ್ಯವಾಗಿ ಸೆಕ್ಷನಲ್ ಕಟ್-ಆಫ್ ಇಲ್ಲ.

ಇಲ್ಲಿ ಅಭ್ಯರ್ಥಿಗಳ ಗುರಿ ಕೇವಲ ಹೆಚ್ಚು ಅಂಕ ಗಳಿಸುವುದಲ್ಲ; ಮುಖ್ಯಹಂತದ ಪರೀಕ್ಷೆ ಗೆ ಅರ್ಹತೆ ಪಡೆಯುವಷ್ಟು ಉತ್ತಮ ಒಟ್ಟು ಅಂಕಗಳು (aggregate marks) ಗಳಿಸುವುದು. ಬ್ಯಾಂಕ್ ಲಭ್ಯವಿರುವ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ, ಸಾಮಾನ್ಯವಾಗಿ ಸುಮಾರು ಹತ್ತು ಪಟ್ಟು ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಗೆ ಆಯ್ಕೆ ಮಾಡುವುದು (short-list) ಮಾಡುವುದಾಗಿ ಅಧಿಸೂಚನೆಯಲ್ಲಿ ತಿಳಿಸಿದೆ. ಪೂರ್ವಭಾವಿ ಪರೀಕ್ಷೆ ಅಂಕಗಳು ಅಂತಿಮ ಅರ್ಹತಾ ಪಟ್ಟಿ (final merit) ಗೆ ಸೇರುವುದಿಲ್ಲ. ಆದರೂ ಅದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ; ಮುಖ್ಯ ಪರೀಕ್ಷೆಗೆ ಹೋಗುವ ಬಾಗಿಲು ಅದೇ.

ಮುಖ್ಯ ಹಂತದ ಪರೀಕ್ಷೆ: ಇಲ್ಲಿದೆ ನಿಜವಾದ ಸ್ಪರ್ಧೆ

ಈ ನೇಮಕಾತಿಯ ಅತ್ಯಂತ ಪ್ರಮುಖ ಹಂತ ಮುಖ್ಯ ಪರೀಕ್ಷೆ (Main Examination). ಒಟ್ಟು 190 ಪ್ರಶ್ನೆಗಳಿಗೆ 200 ಅಂಕಗಳು ಮತ್ತು 2 ಗಂಟೆ 40 ನಿಮಿಷ ಸಮಯವಿದೆ.

ಮುಖ್ಯ ಹಂತದ ಪರೀಕ್ಷೆ

ವಿಭಾಗ ಪ್ರಶ್ನೆಗಳು ಅಂಕಗಳು ಸಮಯ
General / Financial Awareness 50 50 35 ನಿಮಿಷ
General English 40 40 35 ನಿಮಿಷ
Quantitative Aptitude 50 50 45 ನಿಮಿಷ
Reasoning Ability & Computer Aptitude 50 60 45 ನಿಮಿಷ
ಒಟ್ಟು 190 200 2 ಗಂಟೆ 40 ನಿಮಿಷ

ಪ್ರತಿ ವಿಭಾಗಕ್ಕೂ ಪ್ರತ್ಯೇಕ ಸಮಯವಿದೆ. ತಪ್ಪು ಉತ್ತರಕ್ಕೆ ¼ ಅಂಕದ ಋಣಾತ್ಮಕ ಮೌಲ್ಯಮಾಪನ ಮುಂದುವರಿಯುತ್ತದೆ. ಅಭ್ಯರ್ಥಿಯು ಒಟ್ಟು ಅಂಕಗಳಲ್ಲಿ ಬ್ಯಾಂಕ್ ನಿಗದಿಪಡಿಸುವ ಕನಿಷ್ಠ ಶೇಕಡಾವಾರು ಅಂಕಗಳನ್ನು ಗಳಿಸಬೇಕು. ಆದರೆ ಯಾವುದೇ ವೈಯಕ್ತಿಕ ವಿಷಯಕ್ಕೆ ಪ್ರತ್ಯೇಕ ಕನಿಷ್ಠ qualifying marks ನಿಗದಿಪಡಿಸಲಾಗಿಲ್ಲ.

ಹೀಗಾಗಿ ಈ Special Driveನಲ್ಲಿ ‘ಮೊದಲು Prelims, ನಂತರ Mains’ ಎಂಬ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವುದಕ್ಕಿಂತ, ಮೊದಲ ದಿನದಿಂದಲೇ ಎರಡೂ ಪರೀಕ್ಷೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಓದುವುದು ಉತ್ತಮ.

ಮುಂದೇನು?

Special Drive ಎಂದರೆ ಸಾಮಾನ್ಯ ನೇಮಕಾತಿಗಿಂತ ಕಡಿಮೆ ಮಹತ್ವದ ಅವಕಾಶ ಎಂದಲ್ಲ. ಬದಲಾಗಿ, ಅರ್ಹ SC/ST ಅಭ್ಯರ್ಥಿಗಳಿಗೆ ತಮ್ಮ ವಿಭಾಗದಲ್ಲಿ ಲಭ್ಯವಿರುವ ಬಾಕಿ ಉಳಿದ ಹುದ್ದೆಗಳು (backlog vacancies) ಗಾಗಿ ನಿರ್ದಿಷ್ಟವಾಗಿ ಸಿಕ್ಕಿರುವ ಅವಕಾಶ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವರ್ಗ, ವಯಸ್ಸು, ವಿದ್ಯಾರ್ಹತೆ, ಸ್ಥಳೀಯ ಭಾಷೆ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಅರ್ಜಿ ಹಾಕಿದ ನಂತರ ಪರೀಕ್ಷಾ ಸಿದ್ಧತೆಯನ್ನು ತಡಮಾಡದೆ ಆರಂಭಿಸಬೇಕು. ಅವಕಾಶ ಸೀಮಿತವಾಗಿರಬಹುದು; ಆದರೆ ಸಿದ್ಧತೆ ನಮ್ಮ ಕೈಯಲ್ಲಿದೆ.