ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಯಾನ್ಸನ್ ಗ್ರೂಪ್‌ಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ: ಎಚ್‌.ಡಿ. ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ್‌ ಪತ್ರ

MB Patil: ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಸ್ಯಾನ್ಸನ್ ಗ್ರೂಪ್‌ಗೆ ತನ್ನ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಮಂಡ್ಯದಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಉತ್ಸುಕ: ಎಂಬಿಪಿ

ಎಂ.ಬಿ. ಪಾಟೀಲ (ಸಂಗ್ರಹ ಚಿತ್ರ) -

Profile
Siddalinga Swamy Dec 24, 2025 8:15 PM

ಬೆಂಗಳೂರು, ಡಿ. 24: ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಸ್ಯಾನ್ಸನ್ ಗ್ರೂಪ್‌ಗೆ ತನ್ನ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಈ ಸಂಬಂಧವಾಗಿ ಆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎನ್ನುವುದು ನಮ್ಮ ಆಶಯ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಪತ್ರ ಬರೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಎಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಅಕ್ಟೋಬರ್‌ 31ರಂದು ನಮಗೆ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ನವೆಂಬರ್‌ 24ರಂದು ಪ್ರತ್ಯುತ್ತರ ಬರೆದಿದ್ದೆವು. ಈತನ್ಮಧ್ಯೆ ಪ್ರಸ್ತಾವಿನ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್ ಕೆ. ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಅವರ ಕಡೆಯಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ನೀರು, ವಿದ್ಯುತ್, ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿಯ ಕಾರ್ಯ ಸಾಧ್ಯತೆ ಜತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ಪರಿಗಣಿಸಿ, ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.‌

ಬೆಂಗಳೂರಿನಲ್ಲಿ 2ನೇ ಏರ್‌ಪೋರ್ಟ್‌; ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ ಎಂದ ಎಂ.ಬಿ. ಪಾಟೀಲ್‌

ಹೈಟೆಕ್ ಉದ್ಯಮಗಳನ್ನು ಬೆಳೆಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಉದ್ದೇಶಿತ ಹೂಡಿಕೆ ಯೋಜನೆ ರಾಜ್ಯದ ಕೈತಪ್ಪಬಾರದು ಎನ್ನುವುದು ನಮ್ಮ ಕಳಕಳಿಯಾಗಿದೆ. ಇದರಿಂದ ಬೆಂಗಳೂರಿನ ಹೊರಗಿನ ಭಾಗಗಳಲ್ಲಿ ಉದ್ಯೋಗಸೃಷ್ಟಿ ಮತ್ತು ಉದ್ದಿಮೆಗಳ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.