ಬೆಂಗಳೂರು: ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತಂದ ಆರೋಪದಲ್ಲಿ ಆರು ತಿಂಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದಾರೆ. ತಕ್ಷಣವೇ ಹೊರ ನಡೆಯುವಂತೆ ಸೂಚಿಸಿದರೂ ಸ್ಪೀಕರ್ ಆದೇಶ ಧಿಕ್ಕರಿಸಿ ಸದನದಲ್ಲೇ (Assembly session:) ಇದ್ದ 18 ಬಿಜೆಪಿಯ ಶಾಸಕರನ್ನು ಮಾರ್ಷಲ್‌ಗಳು ಸದನದಿಂದ ಹೊರ ಹಾಕಿದ್ದಾರೆ. ವಿಧಾನಸಭೆಯ ಕಲಾಪ ಶುಕ್ರವಾರ ಮಧ್ಯಾಹ್ನ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರಿಂದ ಗಲಾಟೆ, ಗದ್ದಲ ಆರಂಭವಾಯಿತು. ಈ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ.
ಅಮಾನತುಗೊಂಡ 18 ಬಿಜೆಪಿ ಶಾಸಕರ ಪಟ್ಟಿ
- ದೊಡ್ಡನಗೌಡ ಪಾಟೀಲ್
- ಡಾ.ಸಿ.ಎನ್. ಅಶ್ವತ್ಥನಾರಾಯಣ
- ಡಾ.ಭರತ್ ಶೆಟ್ಟಿ
- ಶರಣು ಸಲಗರ
- ಬಿ ಸುರೇಶ್ ಗೌಡ
- ಮುನಿರತ್ನ
- ಚನ್ನಬಸಪ್ಪ
- ಉಮಾನಾಥ್ ಕೋಟ್ಯಾನ್
- ಬಿ.ಪಿ ಹರೀಶ್
- ಧೀರಜ್ ಮುನಿರಾಜು
- ಯಶವಂತ
- ಬಸವರಾಜ ಮತ್ತಿಮೂಡ
- ಚಂದ್ರು ಲಮಾಣಿ
- ರಾಮಮೂರ್ತಿ
- ಯಶವತ್ ಸುವರ್ಣಾ
- ಶೈಲೇಂದ್ರ ಬೆಲ್ದಾಳೆ
- ಭೈರತಿ ಬಸವರಾಜ
- ಸಿ.ಕೆ.ರಾಮಮೂರ್ತಿ
ಸ್ಪೀಕರ್ ಪೀಠಕ್ಕೆ ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂಬುದಾಗಿ ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಆದೇಶದ ಸಂದರ್ಭದಲ್ಲಿ ಹೇಳಿದ್ದಾರೆ. ಇನ್ನು ಅಮಾನತಿನ ಅವಧಿಯಲ್ಲಿ ಶಾಸಕರ ಸೂಚನೆಗಳಿಗೆ ಮಾನ್ಯತೆ ಇರುವುದಿಲ್ಲ. ದಿನದ ಭತ್ಯೆಗೂ ಕೊಕ್ ಬೀಳಲಿದ್ದು, ಟಿಎ-ಡಿಎ ಸಿಗುವುದಿಲ್ಲ. ಸ್ಥಾಯಿ ಸಮಿತಿ ಸಭೆಗಳಿಗೆ ಅವಕಾಶವಿರುವುದಿಲ್ಲ ಹಾಗೂ ಆರು ತಿಂಗಳು ವಿಧಾನ ಸಭೆ ಪ್ರಾಂಗಣ ಪ್ರವೇಶಿಸುವಂತಿಲ್ಲ.
ಈ ಸುದ್ದಿಯನ್ನೂ ಓದಿ | Vishweshwar Bhat Column Impact: : ʼಹಕ್ಕಿ-ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಮಾಡಬೇಕುʼ ಅಂಕಣ ಪ್ರಸ್ತಾಪ
ಮತ್ತೊಂದೆಡೆ ರಾಜಭವನದ ಅಂಗಳಕ್ಕೆ ಶಾಸಕರ ಅಮಾನತು ವಿಚಾರ ತಲುಪಿದ್ದು, ರಾಜ್ಯಪಾಲರನ್ನು ಭೇಟಿ ಮಾಡಲು ಬಿಜೆಪಿ ಶಾಸಕರು ಮುಂದಾಗಿದ್ದಾರೆ.