ಹೈದರಾಬಾದ್, ಅ.24: ಆಂಧ್ರಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಇಂದು ಶುಕ್ರವಾರ ಮುಂಜಾನೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ (Kurnool Bus Fire) ಹೊತ್ತಿಕೊಂಡು ಕನಿಷ್ಠ 12 ಜನರು ಸಜೀವವಾಗಿ ದಹಿಸಿಹೋಗಿದ್ದಾರೆ. ಬಸ್ಸಿನಲ್ಲಿ 42 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (pm narendra modi) ಅವರು ಅಪಘಾತದ ಸಂತ್ರಸ್ತರಿಗೆ ಸಂತಾಪ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ (Kurnool Bus accident) ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಕರ್ನೂಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರ ಚಿನ್ನತೇಕೂರು ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು, ಖಾಸಗಿ ಟ್ರಾವೆಲ್ ಬಸ್ ಬೆಂಕಿಗೆ ಆಹುತಿಯಾಗಿ ಹಲವರು ಗಾಯಗೊಂಡಿದ್ದಾರೆ. ಬೆಂಕಿ ಹತ್ತಿಕೊಂಡಾಗ ತುರ್ತು ನಿರ್ಗಮನ ಮತ್ತು ಕಿಟಕಿ ಗಾಜುಗಳನ್ನು ಒಡೆದು 12 ಪ್ರಯಾಣಿಕರು ಹೊರಜಿಗಿದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರು. ಆದರೆ ಬೆಂಕಿಯು ತ್ವರಿತವಾಗಿ ವ್ಯಾಪಿಸಿದ್ದರಿಂದ ಹಲವರು ಒಳಗೇ ಸಿಲುಕಿಕೊಂಡು ಬೆಂದಹೋದರು.
ಕಾವೇರಿ ಟ್ರಾವೆಲ್ಸ್ ನಿರ್ವಹಿಸುತ್ತಿದ್ದ ನೋಂದಣಿ ಸಂಖ್ಯೆ DD09 N9490 ನ್ನು ಹೊಂದಿರುವ ಈ ಹತಭಾಗ್ಯ ಬಸ್ ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಇಂದು ನಸುಕಿನ ಜಾವ 3:30 ರ ಸುಮಾರಿಗೆ ಚಿನ್ನತೇಕೂರು ಗ್ರಾಮದ ಬಳಿ ದ್ವಿಚಕ್ರ ವಾಹನವೊಂದು ಹಿಂದಿನಿಂದ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಬೈಕ್ ವಾಹನದ ಕೆಳಗೆ ಸಿಲುಕಿಕೊಂಡಿತು. ಇದರ ಅರಿವಿಲ್ಲದೆ ಬೈಕನ್ನು ಬಸ್ಸು ದರದರ ಒಂದಿಷ್ಟು ದೂರ ಎಳೆದೊಯ್ದಿದೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಇಡೀ ಬಸ್ಸನ್ನು ವ್ಯಾಪಿಸಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಯಿತು. ಬೈಕ್ ಸವಾರ ಕೂಡ ಅಪಘಾತದಲ್ಲಿ ಪ್ರಾಣ ತೆತ್ತಿದ್ದಾನೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ: Fire Accident: ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ; 10 ಕ್ಕೂ ಅಧಿಕ ಮಂದಿ ಸಜೀವ ದಹನದ ಶಂಕೆ
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಪ್ರದೇಶದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯಾಯಿತು. ಅಪಘಾತದ ನಂತರ ಬಸ್ ಚಾಲಕ ಸೇರಿದಂತೆ ಬಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡವು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಧಾನಿ, ರಾಷ್ಟ್ರಪತಿ ಸಂತಾಪ, ಪರಿಹಾರ ಘೋಷಣೆ
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 20 ಮಂದಿ ಸಜೀವ ದಹನವಾಗಿದ್ದು, ದುರ್ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ಬಸ್ ಅಗ್ನಿ ಅಪಘಾತದಲ್ಲಿ ಜೀವಹಾನಿ ಸಂಭವಿಸಿರುವುದು ಅತ್ಯಂತ ದುರದೃಷ್ಟಕರ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಿಂದ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಜನರು ಮತ್ತು ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.
ಪ್ರಸ್ತುತ ದುಬೈಗೆ ಅಧಿಕೃತ ಭೇಟಿಯಲ್ಲಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ, ಅವರು ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿದರು. ಉನ್ನತ ಆಡಳಿತ ಸಿಬ್ಬಂದಿಗೆ ಅಪಘಾತ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳನ್ನು ನೋಡಿಕೊಳ್ಳಲು ನಿರ್ದೇಶನ ನೀಡಿದ್ದಾರೆ.