Government job age limit: ರಾಜ್ಯ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ನೇರ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ
Job News: ಹಲವಾರು ಜನಪ್ರತಿನಿದಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ, ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವಂತೆ ಕೋರಿದ್ದವು. ಈ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿದೆ.

-

ಬೆಂಗಳೂರು: ರಾಜ್ಯ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. 2027ರ ಡಿ. 31ರವರೆಗೆ ನೇರ ನೇಮಕಾತಿ ಆಯ್ಕೆ ಪ್ರಕ್ರಿಯೆಗಳಲ್ಲಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 3 ವರ್ಷಗಳ ಸಡಿಲಿಕೆ (Government job age limit) ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು 28-10-2024 ರಿಂದ ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಸರ್ಕಾರ ಸೂಚಿಸಿತ್ತು.
ನಂತರ 2025ರ ಆ.25ರಂದು ಸರ್ಕಾರದ ಆದೇಶದಲ್ಲಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ ಪ್ರವರ್ಗ- ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶೇಕಡ 17 ರಷ್ಟು ಮೀಸಲಾತಿಯನ್ನು ಪ್ರವರ್ಗ- ಎ ರಲ್ಲಿನ ಸಮುದಾಯಗಳಿಗೆ ಶೇಕಡ 6 ರಷ್ಟು, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ರಷ್ಟು ಮತ್ತು ಪ್ರವರ್ಗ - ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5 ರಷ್ಟು ನಿಗದಿಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು.
ಅದಾದ ಬಳಿಕ ಸೆ.6ರಂದು ಹೊರಡಿಸಿದ ಆದೇಶದಲ್ಲಿ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 2 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿತ್ತು.
ಆದರೆ, ಕಳೆದ ಹಲವು ವರ್ಷಗಳಿಂದ ಅನೇಕ ಇಲಾಖೆಗಳ ನೇಮಕಾತಿ ನಡೆಯದ ಕಾರಣ ಅಭ್ಯರ್ಥಿಗಳು ವಯೋಮಿತಿ ಮೀರಿದ್ದಾರೆ. ನಾಲ್ಕೈದು ವರ್ಷಗಳಿಂದ ಕಾನ್‌ಸ್ಟೇಬಲ್, ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದೆ. ಏಳೆಂಟು ವರ್ಷಗಳಿಂದ ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ನೇಮಕಾತಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಇತ್ತೀಚೆಗೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದರು.
ಈ ಸುದ್ದಿಯನ್ನೂ ಓದಿ | SSC Recruitment 2025: ದ್ವಿತೀಯ ಪಿಯುಸಿ ಪಾಸಾದವರಿಗೆ ಗುಡ್‌ನ್ಯೂಸ್; 7,565 ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಹಲವಾರು ಜನಪ್ರತಿನಿದಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ, ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವಂತೆ ಕೋರಿದ್ದವು. ಈ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ (as a one-time measure) ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿದೆ.