ಬೆಂಗಳೂರು: ಕರ್ನಾಟಕದಲ್ಲಿ (Karnataka) ಮತ್ತೆ ಕೊರೊನಾ ವೈರಸ್ (Corona virus) ಹಾವಳಿ ಹೆಚ್ಚಾಗತೊಡಗಿದೆ. ಹೆಚ್ಚಾಗುತ್ತಿರುವ ಕೊರೊನಾ ಕೇಸ್‌ಗಳು ಜನರಲ್ಲಿ ಆತಂಕ ತಂದಿಟ್ಟಿದೆ. ಕೊರೊನ ನಿನ್ನೆ (ಮೇ 30) ಒಬ್ಬರನ್ನು ಬಲಿ ಪಡೆದಿದೆ. ಮೈಸೂರಲ್ಲಿ 63 ವರ್ಷದ ಪುರುಷ ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ SARI ಗುಣಲಕ್ಷಣ ಹೊಂದಿರುವವರಿಗೆ ಕೋವಿಡ್ (Covid 19) ಟೆಸ್ಟ್ ಕಡ್ಡಾಯಗೊಳಿಸಿ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮುಂಗಾರಿನ ಆಗಮನ ಆಗಿರೋದರಿಂದ ಕೋವಿಡ್ ಸೋಂಕು ವೇಗವಾಗಿ ಹರಡಲು ಶುರುವಾಗಿದ್ದು ರಾಜ್ಯದ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 24 ರ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 114 ಕೊರೊನಾ ಪ್ರಕರಣಗಳೊಂದಿಗೆ 367ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲೂ ಕೊರೋನಾ ಸೋಂಕಿನ ಭೀತಿ ಹೆಚ್ಚಾಗುವ ಆತಂಕ ಎದುರಾಗಿದೆ.ನಿತ್ಯ ಕೋವಿಡ್ ಸೋಂಕಿನಲ್ಲಿ ಏರಿಕೆ ಕಾಣ್ತಿರೋದು ಸದ್ದಿಲ್ಲದೇ ತನ್ನ ಕಬಂಧಬಾಹು ಚಾಚುತ್ತಿರೋ ಕೊರೋನಾ ಕೇಸ್ಗಳ ಮೂಲಕ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದೆ.
ಮೈಸೂರಿನ 63 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಕಿಡ್ನಿ ವೈಫಲ್ಯವಾಗಿ ಮೇ 15ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೇ 25ರಂದು ಮೃತಪಟ್ಟಿದ್ದಾರೆ. ಬಳಿಕ ಮೃತಪಟ್ಟ ವ್ಯಕ್ತಿಯ ಕೋವಿಡ್ ರಿಪೋರ್ಟ್ ಪಾಸಿಟಿವ್ ಎಂಬ ವರದಿ ಬಂದಿದೆ.
ಕೋವಿಡ್ ಪ್ರಕರಣಗಳು ಹೆಚ್ಚಳ ಹಿನ್ನೆಲೆಯಲ್ಲಿ ಕೊವಿಡ್ ಪರೀಕ್ಷೆ ಕಡ್ಡಾಯಗೊಳಿಸಿ ಕೇಂದ್ರ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. SARI ಗುಣಲಕ್ಷಣ ಹೊಂದಿರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಸ್ವ್ಯಾಬ್ ಪಡೆದ ದಿನವೇ ಪ್ರಯೋಗಾಲಯಕ್ಕೆ ಕಳಿಸಬೇಕು ಎಂದು ಸೂಚಿಸಿದೆ. ಜೂನ್ ತಿಂಗಳಲ್ಲಿ ಮಳೆಗಾಲದ ಜತೆಗೆ ವಾತಾವರಣದ ಉಷ್ಣಾಂಶ ಕೂಡ ಕಡಿಮೆಯಾಗಿದ್ದು, ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಶಾಲೆಗಳು ಕೂಡ ಆರಂಭವಾಗಿದ್ದು, ಮಕ್ಕಳಿಗೆ ಸೋಂಕು ಹರಡದಂತೆ ಪೋಷಕರು ಎಚ್ಚರಿಕೆ ವಹಿಸಬೇಕಿದೆ.
ಇದನ್ನೂ ಓದಿ: Corona Virus: ಬೆಳಗಾವಿಯಲ್ಲಿ ಕೋವಿಡ್‌ಗೆ ಹಿರಿಯ ನಾಗರಿಕ ಬಲಿ