Corona Virus: ಬೆಳಗಾವಿಯಲ್ಲಿ ಕೋವಿಡ್ಗೆ ಹಿರಿಯ ನಾಗರಿಕ ಬಲಿ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರಿಗೆ ಚಿಕಿತ್ಸೆಗೆಂದು ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ನಿನ್ನೆ ರಾತ್ರಿ ಕೋವಿಡ್ ಪಾಸಿಟಿವ್ (Corona Virus) ಎಂದು ತಪಾಸಣೆಯಲ್ಲಿ ಕಂಡು ಬಂದಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವೃದ್ಧರು ಮೃತಪಟ್ಟಿದ್ದಾರೆ.


ಬೆಳಗಾವಿ: ರಾಜ್ಯದಲ್ಲಿ ಕೊರೊನಾ ವೈರಸ್ (Corona Virus) ರೂಪಾಂತರಿ ತಳಿ ತನ್ನ ಪ್ರಭಾವ ತೋರಲಾರಂಭಿಸಿದೆ. ಈಗಾಗಲೇ ಬೆಂಗಳೂರಿನಲ್ಲಿ ಕೊರೊನಾ (Covid 19) ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದೆ. ಬೆಂಗಳೂರಿನಲ್ಲಿ 85 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದು, ಇದೀಗ ಬೆಳಗಾವಿಯಲ್ಲಿ (Belagavi) ಕೂಡ ಕೊರೊನಾ ಸೋಂಕಿಗೆ ಮತ್ತೋರ್ವ ವೃದ್ಧರು (Senior Citezen) ಬಲಿಯಾಗಿದ್ದಾರೆ. ಇವರು ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರಿಗೆ ಚಿಕಿತ್ಸೆಗೆಂದು ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ನಿನ್ನೆ ರಾತ್ರಿ ಕೋವಿಡ್ ಪಾಸಿಟಿವ್ ಎಂದು ತಪಾಸಣೆಯಲ್ಲಿ ಕಂಡು ಬಂದಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವೃದ್ಧರು ಮೃತಪಟ್ಟಿದ್ದಾರೆ. ಕೋವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್ ಎಂದು ಗೊತ್ತಾದ ತಕ್ಷಣವೇ ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಿಸದ ಕಾರಣ 70 ವರ್ಷದ ವೃದ್ಧರು ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾವಳಿ ಪ್ರಕಾರವೇ ರಾತ್ರಿಯೇ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಕಡ್ಡಾಯ ಕೋವಿಡ್ ಟೆಸ್ಟ್
ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತೆ ಸದ್ದು ಮಾಡುತ್ತಿರುವುದರಿಂದ ಉಸಿರಾಟದ ಸಮಸ್ಯೆ ಹಾಗೂ ಹೃದಯಸಂಬಂಧಿ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಕೋವಿಡ್ -19 ತಪಾಸಣಾ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಪರೀಕ್ಷಾ ಮಾದರಿಗಳನ್ನು ನಿಗದಿಪಡಿಸಿದ ಪ್ರಯೋಗಶಾಲೆಗಳಿಗೆ ಪರೀಕ್ಷೆಗಾಗಿ ಸಲ್ಲಿಸುವ ಕುರಿತು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.
RT-PCR ಮತ್ತು RAT ಕೋವಿಡ್-19 ರ ಪರೀಕ್ಷೆ ನಡೆಸಲು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯದಂತೆ ದಿನ ನಿತ್ಯ 150 ರಿಂದ 200 ಪರೀಕ್ಷೆಗೆ ನಿಗದಿಪಡಿಸಲಾಗಿದ್ದು, ಎಲ್ಲಾ SARI ಪ್ರಕರಣಗಳಿಗೆ ಕೋವಿಡ್ ಸೋಂಕನ್ನು ಧೃಡ ಪಡಿಸಿಕೊಳ್ಳಲು RT-PCR ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸುವುದು. ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸುವುದು ಹಾಗೂ ಲಭ್ಯವಿರುವ ಕೋವಿಡ್-19ರ ಪರೀಕ್ಷಾ ಕಿಟ್ಗಳನ್ನು FIFO (First In First Out) ಮಾದರಿಯಲ್ಲಿ ಉಪಯೋಗಿಸಿ ಕೋವಿಡ್-19 ರ ಕಿಟ್ / ಪರಿಕರಗಳು ಅನುಪಯುಕ್ತವಾಗದಂತೆ ಕೋವಿಡ್-19ರ ಪರೀಕ್ಷೆಯನ್ನು ಈ ಕೆಳಕಂಡಂತೆ ಕ್ರಮವಹಿಸುವುದು.
ಎಲ್ಲಾ SARI ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು. ವಯೋವೃದ್ಧರಲ್ಲಿ ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು. ಅನುಬಂಧ-1ರಂತೆ ಕೋವಿಡ್-19ರ ಪರೀಕ್ಷಾ ಮಾದರಿಯನ್ನು ಪ್ರಯೋಗಶಾಲೆಗಳಿಗೆ ಅದೇ ದಿನ ತಲುಪುವಂತೆ ಕ್ರಮವಹಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: Corona Virus: ಸರಕಾರ ಹೈ ಅಲರ್ಟ್, ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಹೆಚ್ಚಳ, ಆರೋಗ್ಯ ಸಿಬ್ಬಂದಿ ರಜೆ ರದ್ದು