ಬೀದರ್/ ಬೆಳಗಾವಿ ಆ. 17: ನಾಗರ ಪಂಚಮಿ ಹಬ್ಬದಂದೇ ಘೋರ ದುರಂತ ಸಂಭವಿಸಿದ್ದು, ಪ್ರತ್ಯೇಕ ಘಟನೆಗಳಲ್ಲಿ ಹಾವು ಕಡಿದು ಓರ್ವ ವ್ಯಕ್ತಿ ಮತ್ತು ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಬೀದರ್ ಮತ್ತು ಬೆಳಗಾವಿಯಲ್ಲಿ ನಡೆದಿದೆ. ಮೃತರನ್ನು ಬೀದರ್‌ನ ಭೀಮ ಜಾಧವ (48) ಮತ್ತು ಬೆಳಗಾವಿಯ ಸತ್ಯವ್ವ ಶಿಂಗೆ (43) ಎಂದು ಗುರುತಿಸಲಾಗಿದೆ (Snake Bite). ಆ ಮೂಲಕ ಹಬ್ಬದ ದಿನದಂದೇ ವಿಷಾದ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೀದರ್ ದುರಂತ: ಗ್ರಾಮ ಪಂಚಾಯತ್ ವಾಟರ್ ಮ್ಯಾನ್ ಆಗಿದ್ದ ಹುಲಸೂರ ತಾಲೂಕಿನ ಸೋಲದಾಬಕಾ ಗ್ರಾಮದ ಭೀಮ ಜಾಧವ ಅವರಿಗೆ ಸೋಮವಾರ ಬೆಳಗ್ಗೆ ನಾಗರಹಾವು ಕಡಿದಿದೆ. ಹುಲಸೂರ ಗ್ರಾ.ಪಂ. ವ್ಯಾಪ್ತಿಯ ಹಾಲಹಳ್ಳಿ ರಸ್ತೆಯ ಬಳಿಯ ನೀರಿನ ಟ್ಯಾಂಕ್ ಸಮೀಪ ಭೀಮ್ ಅವರ ಕಾಲಿಗೆ ನಾಗರಹಾವು ಕಚ್ಚಿದ್ದು, ಸ್ಥಳದಲ್ಲೇ ಅವರು ಮೃತಟಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಲಸೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು.
ನೀರಿನ ಟ್ಯಾಂಕ್ ಸುತ್ತಮುತ್ತ ಹುಲ್ಲು ಬೆಳೆದು ಓಡಾಡಲು ತೊಂದರೆಯಾಗುತ್ತಿದೆ ಎಂದು 2 ತಿಂಗಳ ಹಿಂದೆಯೇ ಗ್ರಾಮ ಪಂಚಾಯತ್‌ಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಟ್ಯಾಂಕ್ ಸುತ್ತಮುತ್ತ ದಟ್ಟವಾಗಿ ಹುಲ್ಲು ಬೆಳೆದಿದ್ದರಿಂದ ಹಾವುಗಳು ವಾಸವಾಗಿದ್ದವು. ಹುಲ್ಲು ತೆರವುಗೊಳಿಸಿದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಹುಲಸೂರ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Snake bite: ಹಾವು ಕಡಿದು 5 ವರ್ಷದ ಅಂಗನವಾಡಿ ಬಾಲಕಿ ಸಾವು
ಬೆಳಗಾವಿ: ಇನ್ನು ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅತ್ಯಂತ ವಿಷಕಾರಿ ಕೊಳಕುಮಂಡಲ ಹಾವು ಕಚ್ಚಿ ಸತ್ಯವ್ವ ಶಿಂಗೆ ಪ್ರಾಣ ಕಳೆದುಕೊಂಡಿದ್ದಾರೆ. ಸತ್ಯವ್ವ ಜಮೀನಿನಲ್ಲಿ ಕಸ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾಗ ಅಡಗಿದ್ದ ವಿಷಕಾರಿ ಕೊಳಕುಮಂಡಲ ಹಾವು ಏಕಾಏಕಿ ಕಚ್ಚಿದೆ. ಹಾವಿನ ವಿಷ ದೇಹಕ್ಕೆ ವ್ಯಾಪಿಸಿ ತೀವ್ರವಾಗಿ ಅಸ್ವಸ್ಥಗೊಂಡ ಸತ್ಯವ್ವ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.