Snake bite: ಹಾವು ಕಡಿದು 5 ವರ್ಷದ ಅಂಗನವಾಡಿ ಬಾಲಕಿ ಸಾವು
Snake bite: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಅಂಗನವಾಡಿ ಆವರಣದಲ್ಲಿ ಘಟನೆ ನಡೆದಿದೆ. ಮೂತ್ರ ವಿಸರ್ಜನೆಗೆಂದು ಹೋಗಿದ್ದಾಗ ಬಾಲಕಿಗೆ ಹಾವು ಕಡಿದಿದೆ.
Prabhakara R
December 31, 2024
ಮುಂಡಗೋಡ: ಹಾವು ಕಡಿದು ಅಂಗನವಾಡಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ (Snake bite) ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮಯೂರಿ ಸುರೇಶ ಕುಂಬಳಪ್ಪನವರ (5) ಮೃತ ಬಾಲಕಿ.
ಮಯೂರಿ ಎಂದಿನಂತೆ ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂಬದಿ ತೆರಳಿದಾಗ ಹಾವು ಕಡಿದಿದೆ. ಬಾಲಕಿ ತಕ್ಷಣ, ಕಾಲಿಗೆ ಹಾವು ಕಡಿದಿದೆ ಎಂದು ಅಳುತ್ತಾ ಓಡಿ ಬಂದಿದ್ದಾಳೆ. ಈ ವೇಳೆ ಸ್ಥಳೀಯರು ಆಟೋದಲ್ಲಿ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.
ಸುರೇಶ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಮೃತ ಮಯೂರಿ ಕಿರಿಯವಳು. ಬಾಲಕಿಗೆ ಹಾವು ಕಡಿದು ಮೃತಪಟ್ಟಿದ್ದಾಳೆ ಎಂಬ ಸುದ್ದಿ ಕೇಳಿ ಕುಟುಂಬವರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಅಂಗನವಾಡಿ ಕೇಂದ್ರಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಭೇಟಿ ನೀಡಿ ಕಾರ್ಯಕರ್ತೆ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಮೃತ ಬಾಲಕಿಯ ಮನೆಗೆ ಭೇಟಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಿಕಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Cylinder Blast: ಸಿಲಿಂಡರ್ ಸ್ಫೋಟದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಶರಾವತಿ ಸೇತುವೆ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಮೂವರ ಸಾವು
ಹೊನ್ನಾವರ : ಇಂದು ಮುಂಜಾನೆ ಉತ್ತರ ಕನ್ನಡ (uttara kannada news) ಜಿಲ್ಲೆಯ ಹೊನ್ನಾವರ (Honnavara) ಪಟ್ಟಣದ ಶರಾವತಿ ಸೇತುವೆ ಮೇಲೆ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸವಾರರು ಮೃತಪಟ್ಟಿದ್ದಾರೆ. ತಾಲ್ಲೂಕಿನ ಮಾವಿನಕುರ್ವದ ರಾಘವೇಂದ್ರ ಸೋಮಯ್ಯ ಗೌಡ (34), ಸಂಶಿಯ ಗೌರೀಶ ನಾಯ್ಕ ( 25), ಖರ್ವಾದ ರಮೇಶ ನಾಯ್ಕ (22) ಮೃತ ದುರ್ದೈವಿಗಳು.
ವಿಜಯಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾದ ಪರಿಣಾಮ ದುರ್ಘಟನೆ ಸಂಭವಿಸಿದೆ. ಬೈಕ್‌ನಲ್ಲಿದ್ದವರು ಮಂಕಿ ಕಡೆಯಿಂದ ಹೊನ್ನಾವರ ಪಟ್ಟಣಕ್ಕೆ ಹೊರಟಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.