ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇಶಾದ್ಯಂತ ಇ-ಬಸ್‌, ಇ-ಟ್ರಕ್‌ ಬಳಕೆಗೆ ವೇಗ; ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ

HD Kumaraswamy: ಭಾರತದಲ್ಲಿ ಪ್ರಯಾಣಿಕ ಸಾರಿಗೆ ವಲಯದ ಭವಿಷ್ಯದ ಬೆನ್ನೆಲುಬಾಗಲು ಎಲೆಕ್ಟ್ರಿಕ್ ಬಸ್‌ಗಳು ಸಜ್ಜಾಗಿವೆ. ಆದರೆ, ಸುಸ್ಥಿರ ಸಾಗಣೆ ಮತ್ತು ಸರಕು ಸಾಗಣೆಯ ಭವಿಷ್ಯವನ್ನು ರೂಪಿಸುವಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳು ಪರಿವರ್ತನಾತ್ಮಕ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ).

ನವದೆಹಲಿ, ಮೇ 20: ಭಾರತದ ಸರಕು ಸಾಗಣೆ ಕ್ಷೇತ್ರದಲ್ಲಿ ಮಾಲಿನ್ಯ ಮುಕ್ತ ಸ್ವಚ್ಚ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಬ್ಯಾಂಕರುಗಳು ಹಾಗೂ ಖಾಸಗಿ ವಲಯದ ವಾಣಿಜ್ಯ ವಾಹನಗಳ ಆಪರೇಟರ್‌ಗಳ ಜತೆ ಉನ್ನತ ಮಟ್ಟದ ಮಾತುಕತೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ʼಪಿಎಂ ಇ ಡ್ರೈವ್‌ʼ ಯೋಜನೆಯ ಮೂಲಕ ಎಲೆಕ್ಟ್ರಿಕ್ ಸರಕು ಸಾಗಣೆ ಹಾಗೂ ಪ್ರಯಾಣಿಕರ ವಾಹನಗಳ ಬಳಕೆಯನ್ನು ಉತ್ತೇಜಿಸಿ, ಆ ಮೂಲಕ ಭಾರತದ ಸ್ವಚ್ಛ ಚಲನಶೀಲತೆ ಪರಿವರ್ತನೆಯನ್ನು ವೇಗಗೊಳಿಸುವ ಮಹತ್ವದ ಹೆಜ್ಜೆಯಾಗಿ ಸಚಿವರು ಮಹತ್ವದ ಸಮಾಲೋಚನೆ ನಡೆಸಿದರು.

ದೇಶಾದ್ಯಂತ ಎಲೆಕ್ಟ್ರಿಕ್‌ ಬಸ್‌ಗಳು ಮತ್ತು ಎಲೆಕ್ಟ್ರಿಕ್‌ ಟ್ರಕ್‌ಗಳ ವ್ಯಾಪಕ ಅಳವಡಿಕೆ ಮತ್ತು ನಿಯೋಜನೆಯನ್ನು ಉತ್ತೇಜಿಸಲು ಕೇಂದ್ರ ಸಚಿವರು, ಪ್ರಮುಖವಾಗಿ ಬ್ಯಾಂಕರುಗಳು ಮತ್ತು ಖಾಸಗಿ ವಲಯದ ವಾಣಿಜ್ಯ ವಾಹನಗಳ ಆಪರೇಟರ್‌ಗಳ ಜತೆ ಆರ್ಥಿಕ ಸಮನ್ವಯತೆ ಸಾಧಿಸುವ ದೃಷ್ಟಿಯಿಂದ ತಮ್ಮ ಸಚಿವಾಲಯದಲ್ಲಿ ಸಭೆಯನ್ನು ಆಯೋಜಿಸಿದ್ದರು.

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇವಿ ಸಾರಿಗೆ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇವಿ ವಾಹನಗಳ ಕಾರ್ಯಾಚರಣೆಯ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವುದು, ಇ-ಬಸ್‌ಗಳು ಮತ್ತು ಇ-ಟ್ರಕ್‌ಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುವುದು ಮತ್ತು ಸರ್ಕಾರ ಮತ್ತು ಖಾಸಗಿ ಪಾಲುದಾರರ ನಡುವಿನ ಸಹಯೋಗವನ್ನು ಬಲಪಡಿಸುವ ಉದ್ದೇಶದಿಂದ ಸಚಿವರು ಸಮಾಲೋಚನೆ ನಡೆಸಿದರು.

ಕಾರ್ಯದರ್ಶಿ ಕಮ್ರನ್ ರಿಜ್ವಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಡಾ. ಹನೀಫ್ ಖುರೇಷಿ ಸೇರಿದಂತೆ ಬೃಹತ್ ಕೈಗಾರಿಕೆ ಸಚಿವಾಲಯದ ಉನ್ನತ ಅಧಿಕಾರಿಗಳು ಚರ್ಚೆಯ ಸಂದರ್ಭದಲ್ಲಿ ಹಾಜರಿದ್ದರು ಮತ್ತು ಭಾರತದಲ್ಲಿ ಇವಿ ಸಾರಿಗೆ ವಲಯದ ಭವಿಷ್ಯದ ಮಾರ್ಗಸೂಚಿ ಕುರಿತು ಪಾಲುದಾರರೊಂದಿಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಎಚ್.ಡಿ. ಕುಮಾರಸ್ವಾಮಿ, ಭಾರತದಲ್ಲಿ ಪ್ರಯಾಣಿಕ ಸಾರಿಗೆ ವಲಯದ ಭವಿಷ್ಯದ ಬೆನ್ನೆಲುಬಾಗಲು ಎಲೆಕ್ಟ್ರಿಕ್ ಬಸ್‌ಗಳು ಸಜ್ಜಾಗಿವೆ. ಆದರೆ, ಸುಸ್ಥಿರ ಸಾಗಣೆ ಮತ್ತು ಸರಕು ಸಾಗಣೆಯ ಭವಿಷ್ಯವನ್ನು ರೂಪಿಸುವಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳು ಪರಿವರ್ತನಾತ್ಮಕ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಒತ್ತಿ ಹೇಳಿದರು.

ಭಾರತವು ಎಲೆಕ್ಟ್ರಿಕ್ ವಾಹನಗಳ ಸಾರಿಗೆಯತ್ತ ನಿರ್ಣಾಯಕ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಇ-ಬಸ್‌ಗಳು ಪ್ರಯಾಣಿಕರಿಗೆ ಹೆಚ್ಚು ಅನುಕೂಲ ನೀಡುತ್ತಿವೆ. ಇಂಗಾಲದ ಶೂನ್ಯ ಹೊರಸೂಸುವಿಕೆಯಿಂದ ಪರಿಸರ ರಕ್ಷಣೆಗೆ ದೊಡ್ಡ ಕೊಡುಗೆ ಕೊಡುತ್ತಿವೆ. ಭವಿಷ್ಯದಲ್ಲಿ ಇ-ಟ್ರಕ್‌ಗಳ ಸಂಚಾರವು ರಾಷ್ಟ್ರದ ಸಾರಿಗೆ ಮತ್ತು ಸರಕು ಸಾಗಣೆಯ ಹೊಸ ಯುಗವನ್ನೇ ವ್ಯಾಖ್ಯಾನಿಸುತ್ತವೆ ಎಂದು ಸಚಿವರು ಹೇಳಿದರು.

ಬ್ಯಾಂಕರುಗಳು ಹಾಗೂ ಇವಿ ವಾಣಿಜ್ಯ ವಾಹನಗಳ ಪಾಲುದಾರರ ಸಹಯೋಗದ ನೀತಿ ನಿರೂಪಣೆಯ ಮಹತ್ವದ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, ಭಾರತದ ಇವಿ ಸಾರಿಗೆಗೆ ಪಿಎಂ ಇ ಡ್ರೈವ್‌ ಯೋಜನೆಯ ಮೂಲಕ ಭಾರೀ ಉತ್ತೇಜನ ಕೊಡಲಾಗುತ್ತಿದೆ. ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಸರಕು ಸಾಗಣೆ ಮಾಡುವ ವಾಣಿಜ್ಯ ಟ್ರಕ್ಕುಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ರಾಷ್ಟ್ರದ ಆರ್ಥಿಕತೆ ಮತ್ತಷ್ಟು ವೇಗವಾಗಿ ಬೆಳೆಯಲು ಇಂದು ಶಕ್ತಿ ತುಂಬುತ್ತದೆ ಎಂದು ಪ್ರತಿಪಾದಿಸಿದರು.

ದೇಶಾದ್ಯಂತ ಸಾರಿಗೆ ಸೇವೆಗಳನ್ನು ಮುನ್ನಡೆಸುತ್ತಿರುವ ನಿರ್ವಾಹಕರು ಮತ್ತು ಪಾಲುದಾರರಿಂದ ನೇರವಾಗಿ ಅಭಿಪ್ರಾಯ ವಿನಿಮಯಕ್ಕೆ ಈ ಸಭೆ ಉತ್ತಮ ವೇದಿಕೆ ಆಗಿತ್ತು. ವಾಣಿಜ್ಯ ಇವಿ ವಾಹನಗಳ ಬಳಕೆ ಮತ್ತು ನಿಯೋಜನೆಯಲ್ಲಿ ಭವಿಷ್ಯದ ಮಾರ್ಗಸೂಚಿ ರೂಪಿಸುವಲ್ಲಿ ಸಭೆಯಲ್ಲಿ ವ್ಯಕ್ತವಾದ ಪ್ರತಿಕ್ರಿಯೆ, ಅಭಿಪ್ರಾಯಗಳು ಅತ್ಯಂತ ಮೌಲಿಕವಾಗಿದ್ದವು ಎಂದು ಸಚಿವರು ಹೇಳಿದರು.

ಈ ಉಪಕ್ರಮವು ಸುಸ್ಥಿರ ಸಾರಿಗೆ, ಪರಿಣಾಮಕಾರಿ ಸರಕು ಸಾಗಣೆ ವ್ಯವಸ್ಥೆ ನಿರ್ಮಿಸುವುದು, ಕಾರ್ಯಾಚರಣೆಯಲ್ಲಿ ದಕ್ಷತೆ, ಕ್ಷಮತೆಯನ್ನು ತರುವುದು ನಮ್ಮ ಹೆಗ್ಗುರಿ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಸರಕು ಮತ್ತು ವಾಣಿಜ್ಯ ಸಾರಿಗೆ ವ್ಯವಸ್ಥೆಗೆ ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜನರ ಜೇಬಿಗೆ ಕತ್ತರಿ ಹಾಕುತ್ತಲೇ 3 ವರ್ಷ ಸವೆಸಿದ್ದು ಒಂದು ಸಾಧನೆಯೇ?: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಸುಸ್ಥಿರತೆ, ನಾವೀನ್ಯತೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಮೂಲಕ ಭವಿಷ್ಯದತ್ತ ಮುನ್ನಡೆಯುತ್ತಿದೆ. ಇ-ಬಸ್‌ಗಳು ಮತ್ತು ಇ-ಟ್ರಕ್‌ಗಳ ಮೇಲಿನ ಒತ್ತಡವು ಕೇವಲ ಪರಿಸರಕ್ಕಷ್ಟೇ ಪೂರಕವಲ್ಲ, ಹೊಸ ಭಾರತದ ಆರ್ಥಿಕ ಮತ್ತು ಕಾರ್ಯತಂತ್ರದ ಒಂದು ಪ್ರಮುಖ ಭಾಗವಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದರು.