ಜನರ ಜೇಬಿಗೆ ಕತ್ತರಿ ಹಾಕುತ್ತಲೇ 3 ವರ್ಷ ಸವೆಸಿದ್ದು ಒಂದು ಸಾಧನೆಯೇ?: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿ
Pralhad Joshi: ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದು ಬಳಿಕ ಒಂದೊಂದೇ ಅಗತ್ಯತೆಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಮೂರು ವರ್ಷ ಸವೆಸಿದ್ದು, ಜನರನ್ನು ದುಸ್ಥಿತಿಗೆ ತಳ್ಳಿರುವುದು ಈ ಸರ್ಕಾರದ ಸಾಧನೆಯೇ? ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ಮೇ 19: ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ ಎಳೆದು, ರಾಜ್ಯವನ್ನು ಅಭಿವೃದ್ಧಿ ಶೂನ್ಯಗೊಳಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸಾಧನಾ ಸಮಾವೇಶವೇ? ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಬೇಜವಾಬ್ದಾರಿ ಮತ್ತು ದಿವಾಳಿಕೋರ ಸರ್ಕಾರವೆಂಬ ಖ್ಯಾತಿಗೆ ಪಾತ್ರವಾಗಿರುವ ಕಾಂಗ್ರೆಸ್ ಸರ್ಕಾರ, ಈಗ ಜನರ ದುಡ್ಡಿನಲ್ಲಿ 'ಸಾಧನಾ ಸಮಾವೇಶ' ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದು ಬಳಿಕ ಒಂದೊಂದೇ ಅಗತ್ಯತೆಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಮೂರು ವರ್ಷ ಸವೆಸಿದ್ದು, ಜನರನ್ನು ದುಸ್ಥಿತಿಗೆ ತಳ್ಳಿರುವುದು ಈ ಸರ್ಕಾರದ ಸಾಧನೆಯೇ? ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಜನತೆ, ರೈತರು ಮತ್ತು ಸಾರಿಗೆ ನೌಕರರು ಸಂಕಷ್ಟದಲ್ಲಿದ್ದರೆ, ಈ ಸರ್ಕಾರ ಮೂರನೇ ವರ್ಷದ ಸಾಧನಾ ಸಮಾವೇಶಕ್ಕೆ ಮುಂದಾಗಿದೆ. ಇದು ಯಾರ ಖುಷಿ ಮತ್ತು ಯಾರನ್ನು ಓಲೈಸಲು? ಎಂದಿರುವ ಸಚಿವರು, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ ಎಂದು ದೂರಿದ್ದಾರೆ.
ಈಗಾಗಲೇ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಹದಗೆಡಿಸಿದೆ. ಜಾತಿಗಣತಿ ಕಾರ್ಯದಲ್ಲಿ ತೊಡಗಿದ್ದ ನೌಕರರಿಗೆ ಈವರೆಗೂ ಪೂರ್ತಿ ಹಣ ಪಾವತಿಸಿಲ್ಲ! ನ್ಯಾಯಯುತ ಸಂಬಳ ಮತ್ತು ಸೌಲಭ್ಯಗಳಿಲ್ಲದೆ ಸಾರಿಗೆ ನೌಕರರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಹೊಸ ಬಸ್ಸುಗಳಿಲ್ಲ, ಹೊಸ ರಸ್ತೆಗಳಿಲ್ಲ, ಆಸ್ಪತ್ರೆ-ಶಾಲೆಗಳಿಗೆ ಅನುದಾನವೂ ಇಲ್ಲ ಎಂದಿದ್ದಾರೆ.
ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಈ ಕಾಂಗ್ರೆಸ್ ಸರ್ಕಾರದ ನೀತಿಯಿಂದಾಗಿ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಜನಸಾಮಾನ್ಯರು ಹೈರಾಣಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
Petrol, diesel price Hike: ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಪ್ರಲ್ಹಾದ್ ಜೋಶಿ ಸ್ಪಷ್ಟನೆ
ಗೃಹಲಕ್ಷ್ಮಿ ದಿಢೀರ್ ಮಾಯ
ಮಹಿಳೆಯರ ಅಕೌಂಟ್‌ಗೆ ಬರಬೇಕಿದ್ದ 'ಗೃಹಲಕ್ಷ್ಮಿ' ಹಣ ಈಗ ದಿಢೀರನೆ ಮಾಯವಾಗಿದೆ ಎಂದೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.