ಅಹಿಂದ ನಾಯಕ, ಕರ್ನಾಟಕದ ದೀರ್ಘಾವಧಿಯ ಸಿಎಂ ಸಿದ್ದರಾಮಯ್ಯ: ನಡೆದು ಬಂದ ಹಾದಿ ಹೀಗಿತ್ತು
Siddaramaiah: ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಜನಪ್ರತಿನಿಧಿ ಎಂಬ ದಾಖಲೆಗೆ ಪಾತ್ರರಾದ ಸಿದ್ದರಾಮಯ್ಯ ಸದ್ಯ ಸಿಎಂ ಪಟ್ಟದಿಂದ ಕೆಳಗೆ ಇಳಿದಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, ಹಲವು ದಿನಗಳಿಂದ ನಡೆಯುತ್ತಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಅಹಿಂದ ಪ್ರಬಲ ನಾಯಕನಾಗಿ ಬೆಳೆದ ಸಿದ್ದರಾಮಯ್ಯ ಅವರ ನಡೆದು ಬಂದ ಹಾದಿ ಹೇಗಿತ್ತು ಎನ್ನುವ ವಿವರ ಇಲ್ಲಿದೆ.
ಸಿದ್ದರಾಮಯ್ಯ (ಸಂಗ್ರಹ ಚಿತ್ರ) -
ಬೆಂಗಳೂರು, ಮೇ 28: ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಜನಪ್ರತಿನಿಧಿ ಎಂದು ಈ ವರ್ಷ ದಾಖಲೆ ಬರೆದ ಸಿದ್ದರಾಮಯ್ಯ (Siddaramaiah) ಇದೀಗ ಸಿಎಂ ಪಟ್ಟದಿಂದ ಕೆಳಗೆ ಇಳಿಯುವುದಾಗಿ ಘೋಷಿಸಿದ್ದಾರೆ. ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗೆ ಸದ್ಯ ತೆರೆ ಬಿದ್ದಿದ್ದು, ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ. ಸುಮಾರು 6 ತಿಂಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದೀಗ ಸಿದ್ದರಾಮಯ್ಯ ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯ ತಳ ಮಟ್ಟದಿಂದ ಹೋರಾಡುತ್ತಲೇ ಬಂದವರು. ವಕೀಲ ವೃತ್ತಿಯಿಂದ ಮುಖ್ಯಮಂತ್ರಿ ಗಾದಿವರೆಗಿನ ಅವರ ರಾಜಕೀಯ ಹಾದಿ ರೋಚಕವಾದುದು. ಆ ಕುರಿತಾದ ವಿವರ ಇಲ್ಲಿದೆ.

ಸಿದ್ದರಾಮಯ್ಯ ಆರಂಭಿಕ ಜೀವನ
78 ವರ್ಷದ ಸಿದ್ದರಾಮಯ್ಯ 1947ರಲ್ಲಿ ಜನಿಸಿದರು. ಮೈಸೂರು ಜಿಲ್ಲೆಯ ಟಿ. ನರಸಿಪುರದ ವರುಣ ಹೋಬಳಿಯ ಸಿದ್ದರಾಮನಹುಂಡಿಯ ಕುರುಬ ಗೌಡ ಸಮುದಾಯಕ್ಕೆ ಸೇರಿದ ಸಿದ್ದರಾಮೇ ಗೌಡ ಮತ್ತು ಬೋರಮ್ಮದಂಪತಿಯ 6 ಮಕ್ಕಳಲ್ಲಿ ಸಿದ್ದರಾಮಯ್ಯ ನಾಲ್ಕನೆಯವರು. ಅವರದ್ದು ಕೃಷಿ ಕುಟುಂಬ. ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತ ಸಿದ್ದರಾಮಯ್ಯ 10ನೇ ವರ್ಷದವರೆಗೆ ಶಾಲೆಗೇ ಹೋಗಿರಲಿಲ್ಲವಂತೆ. ಬಳಿಕ ನೇರವಾಗಿ 5ನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಮುಗಿಸಿದ ಅವರು ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿದರು. ಮೈಸೂರು ವಿಶ್ವ ವಿದ್ಯಾನಿಲಯದಿಂದ ಬಿ.ಎಸ್‌ಸಿ ಮತ್ತು ಎಲ್‌ಎಲ್‌ಬಿ ಪದವಿ ಪಡೆದರು. ವಕೀಲ ಚಿಕ್ಕಬೋರಯ್ಯ ಬಳಿ ಜೂನಿಯರ್ ಆಗಿ ಕೆಲಸ ಮಾಡಿದರು. ನಂತರ 1978ರವರೆಗೆ ಸ್ವಂತ ವಕೀಲ ವೃತ್ತಿ ನಡೆಸಿದರು.
ಕರ್ನಾಟಕದ ದೀರ್ಘಾವಧಿ ಸಿಎಂ ದಾಖಲೆ; ಜನರ ಆಶೀರ್ವಾದವೇ ಕಾರಣ ಎಂದ ಸಿದ್ದರಾಮಯ್ಯ
ರಾಜಕೀಯ ಎಂಟ್ರಿ
ವಕೀಲರಾಗಿದ್ದ ಸಿದ್ದರಾಮಯ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ವಿಶೇಷ. ಸಿದ್ದರಾಮಯ್ಯ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ರೈತ ಚಳವಳಿ ನೇತಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ. 1978ರಲ್ಲಿ ತಾಲೂಕು ಬೋರ್ಡ್ ಮೆಂಬರ್ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ ಸಿದ್ದರಾಮಯ್ಯ ಬಳಿಕ ಹಿಂದಿರುಗಿ ನೋಡಲೇ ಇಲ್ಲ.
1980ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಸೋಲಿನಿಂದ ಹತಾಶರಾಗದ ಅವರು 1983ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾದರು. ಬಳಿಕ ಜನತಾ ಪಾರ್ಟಿಗೆ ಸೇರಿದರು. 1985ರಲ್ಲಿ ಮಧ್ಯಂತರ ಚುನಾವಣೆ ಬಂದಾಗ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಅದೃಷ್ಟ ಪರೀಕ್ಷೆಗಿಳಿದು ಜಯ ಗಳಿಸಿದರು. ಜತೆಗೆ ಸಚಿವರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಿದ್ದರಾಮಯ್ಯ ಸಚಿವರಾಗಿ ಗಮನ ಸೆಳೆದರು. ಭಾರತೀಯ ಲೋಕದಳದಿಂದ ಜನತಾ ಪಾರ್ಟಿಗೆ ಸೇರಿದಾಗ ಸಿದ್ದರಾಮಯ್ಯ ಅವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಬೆಂಬಿಡದ ಸೋಲು
1989ರಲ್ಲಿ ಮತ್ತೆ ಸಿದ್ದರಾಮಯ್ಯ ಮತ್ತೆ ಸೋತರು. ಕಾಂಗ್ರೆಸ್ ಅಲೆಯಲ್ಲಿ ಕೊಚ್ಚಿ ಹೋದರು. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮತ್ತೊಮ್ಮೆ ಕಣಕ್ಕಿಳಿದ ಅವರನ್ನು ಕಾಂಗ್ರೆಸ್‌ನ ಎಂ. ರಾಜಶೇಖರ ಮೂರ್ತಿ ಸೋಲಿಸಿದರು. ಜನತಾ ಪಾರ್ಟಿ ಹೋಳಾದಾಗ 1992ರಲ್ಲಿ ಸಿದ್ದರಾಮಯ್ಯ ಜನತಾ ದಳ ಸೇರಿದರು. 1991ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಅದೃಷ್ಟ ಪರೀಕ್ಷೆಗಿಳಿದ ಸಿದ್ದರಾಮಯ್ಯ ಮತ್ತೆ ಸೋತರು. 1994ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದರು. ಅಲ್ಲದೆ ದೇವೇ ಗೌಡ ಸರ್ಕಾರದಲ್ಲಿ ಹಣಕಾಸು ಸಚಿವರಾದರು. ಮುಂದೆ 1996ರಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು.
ಜನತಾ ದಳ 2 ಭಾಗ
1999ರ ಚುನಾವಣೆಯ ಹೊತ್ತಿಗೆ ಜನತಾ ದಳ 2 ಭಾಗವಾಯಿತು. 1999ರಲ್ಲಿ ಜನತಾ ದಳ 2 ಹೋಳಾಗಿ ಜೆಡಿಎಸ್ ಮತ್ತು ಜೆಡಿಯು ಎಂದಾಯ್ತು. ದೇವೇ ಗೌಡ ಜತೆ ಸಿದ್ದರಾಮಯ್ಯ ಜೆಡಿಎಸ್ ಸೇರಿದರು. ಅದಾಗ್ಯೂ 1999ರ ಚುನಾವಣೆಯಲ್ಲಿ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತರು. 2004ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಗೆದ್ದರು. 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ಧರಂ ಸಿಂಗ್ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅದಾಗ್ಯೂ ಈ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ.

ಕಾಂಗ್ರೆಸ್‌ನೊಂದಿಗೆ ಹೊಸ ಅಧ್ಯಾಯ
ಮುಂದೆ ಸಿದ್ದರಾಮಯ್ಯ ರಾಜಕೀಯದ ಮತ್ತೊಂದು ಮಗ್ಗುಲಿಗೆ ಹೊರಳಿದರು. ಬದಲಾದ ಸನ್ನಿವೇಶದಲ್ಲಿ 2005ರಲ್ಲಿ ದೇವೇ ಗೌಡ ಅವರೊಂದಿಗೆ ಭಿನ್ನಾಭಿಪ್ರಾಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಂದ ಹೊರ ಬಂದರು. 2006ರ ಜುಲೈ 22ರಂದು ಸಿದ್ದರಾಮಯ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕರಾದರು. 2008ರಲ್ಲಿ ಕ್ಷೇತ್ರದ ಬದಲಾಯಿಸಿದ ಅವರು ವರುಣದಿಂದ ಸ್ಪರ್ಧಿಸಿ 5ನೇ ಬಾರಿಗೆ ಶಾಸಕರಾದರು.
2013ರಲ್ಲಿ ವರುಣದಿಂದ ಸಿದ್ದರಾಮಯ್ಯ ಮತ್ತೊಮ್ಮೆ ಜಯಗಳಿಸಿದರು. ಅದೇ ವರ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಅಹಿಂದ ವರ್ಗಗಳಿಗೆ ವಿವಿಧ ಯೋಜನೆ ಪ್ರಕಟಿಸಿ ಗಮನ ಸೆಳೆದರು. 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
ಸದ್ದು ಮಾಡಿದ ಮುಡಾ ಹಗರಣ
ಕೆಲವು ವರ್ಷಗಳ ಹಿಂದೆ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಭಾರಿ ಸದ್ದು ಮಾಡಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಸಿದ್ದರಾಮಯ್ಯ ಅವರ ಕುಟುಂಬಸ್ಥರಿಗೆ ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ದೇಶಾದ್ಯಂತ ಸುದ್ದಿಯಾಗಿತ್ತು. ಅದಾದ ಬಳಿಕ ಸಿದ್ದರಾಮಯ್ಯ ಮತ್ತು ಅವರ ಕುಟುಂಬಸ್ಥರಿಗೆ ಕ್ಲೀನ್‌ಚಿಟ್ ಸಿಕ್ಕಿತು.
ದೀರ್ಘಾವಧಿಯ ಮುಖ್ಯಮಂತ್ರಿ
ಸಿದ್ದರಾಮಯ್ಯ ಹೆಸರಲ್ಲಿ ಹಲವು ದಾಖಲೆಗಳಿವೆ. ಅವುಗಳಲ್ಲಿ ಮುಖ್ಯವಾದುದು ರಾಜ್ಯದ ದೀರ್ಘ ಕಾಲದ ಮುಖ್ಯಮಂತ್ರಿ ಎನ್ನುವುದು. 7 ವರ್ಷ 240 ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೈಲಿಗಲ್ಲು ಸಾಧಿಸಿದ ಸಿದ್ದರಾಮಯ್ಯ ದೇವರಾಜ ಅರಸು ಹೆಸರಲ್ಲಿದ್ದ ದಾಖಲೆಯನ್ನು ಈ ವರ್ಷಾರಂಭದಲ್ಲಿ ಮುರಿದರು. ಸಿದ್ದರಾಮಯ್ಯ 2013ರ ಮೇ 13ರಿಂದ 2018ರ ಮೇ 15ರವರೆಗೆ ಮೊದಲ ಅವಧಿಯಲ್ಲಿ ಹಾಗೂ 2023ರ ಮೇ 20ರಿಂದ 2026ರ ಮೇ 28ರ ತನಕ 2ನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರು.

ದಾಖಲೆಯ ಬಜೆಟ್
ಇದರೊಂದಿಗೆ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆಯೂ ಸಿದ್ದರಾಮಯ್ಯ ಹೆಸರಿನಲ್ಲಿದೆ. ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿ ಅವರು ಈವರೆಗೆ ಒಟ್ಟು 17 ಬಜೆಟ್ ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿದ, ದೇಶದಲ್ಲೇ ಎರಡನೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೀರ್ಘಾವಧಿ ಸಿಎಂ ದಾಖಲೆ ಹೊತ್ತಿನಲ್ಲೇ ವಿದಾಯದ ಮಾತುಗಳನ್ನಾಡಿದ ಸಿಎಂ ಸಿದ್ದರಾಮಯ್ಯ!
ವೈಯಕ್ತಿಕ ಜೀವನ
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಗೃಹಿಣಿ. ಹಿರಿಯ ಪುತ್ರ ರಾಕೇಶ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಹಠಾತ್ ಅನಾರೋಗ್ಯದಿಂದ ಅವರು ನಿಧನ ಹೊಂದಿದ ಮೇಲೆ ವೃತ್ತಿಯಿಂದ ವೈದ್ಯರಾದ ಕಿರಿಯ ಪುತ್ರ ಡಾ. ಎಸ್. ಯತೀಂದ್ರ ರಾಜಕೀಯ ಪ್ರವೇಶಿಸಿದರು. ಪ್ರಸ್ತುತ ಯತೀಂದ್ರ ತಂದೆಗೆ ರಾಜಕೀಯದಲ್ಲಿ ನೆರವಾಗುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟದಿಂದ ಕೆಳಗೆ ಇಳಿದಿದ್ದು, ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.