ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arogya Sanjeevini Scheme: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಅ.1ರಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ

Government employees: ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಅವರು ಆದೇಶ ಹೊರಡಿಸಿದ್ದಾರೆ. ಯೋಜನೆ ಅನುಕೂಲ ಪಡೆಯಲು ಸರ್ಕಾರಿ ನೌಕರರು ಮಾಸಿಕ ವಂತಿಕೆ ನೀಡಲಬೇಕಾಗುತ್ತದೆ. ವಂತಿಗೆಯು ಸ್ವಯಂ ಚಾಲಿತವಾಗಿ ಖಾತೆಯಿಂದ ಕಡಿತವಾಗಲಿದೆ.

ಅ.1ರಿಂದ ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ

-

Prabhakara R Prabhakara R Sep 23, 2025 7:50 PM

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರೂಪಿಸಲಾಗಿರುವ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಯನ್ನು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಅವರು ಆದೇಶ ಹೊರಡಿಸಿದ್ದಾರೆ. ಯೋಜನೆ ಅನುಕೂಲ ಪಡೆಯಲು ಸರ್ಕಾರಿ ನೌಕರರು ಮಾಸಿಕ ವಂತಿಕೆ ನೀಡಲಬೇಕಾಗುತ್ತದೆ. ವಂತಿಗೆಯು ಸ್ವಯಂ ಚಾಲಿತವಾಗಿ ಖಾತೆಯಿಂದ ಕಡಿತವಾಗಲಿದೆ. ಈ ಯೋಜನೆಗೆ ಒಳಪಡುವುದು ಅಥವಾ ಒಳಪಡದೇ ಇರುವುದು ನೌಕರರ ಆಯ್ಕೆಯಾಗಿರುತ್ತದೆ. ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನದಿಂದ ಈಗಾಗಲೇ ಇರುವ ಜ್ಯೋತಿ ಸಂಜೀವಿನಿ ಯೋಜನೆ ಸ್ಥಗಿತಗೊಳ್ಳಲಿದೆ.

ಮಾಸಿಕ ವಂತಿಕೆ ಪಾವತಿ ಹೇಗೆ?

ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಒಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಯೋಜನೆ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2 ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID) ಗೆ ಜಮಾ ಮಾಡುತ್ತಾರೆ.

ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿದ್ದಲ್ಲಿ, ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ವಂತಿಕೆ ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಸಂಬಂಧಿಸಿದ ಡಿಡಿಒ ಅವರಿಗೆ ಮಾಹಿತಿ ನೀಡಬೇಕು.

HRMS ವ್ಯಾಪ್ತಿಯಲ್ಲಿರದ (ಬೇರೆ ಇಲಾಖೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯ ಸೇವೆ) ರಾಜ್ಯ ಸರ್ಕಾರಿ ನೌಕರರ ವಂತಿಕೆ ಮಾಸಿಕ ವೇತನದಲ್ಲಿ ವಂತಿಕೆಯನ್ನು ಕಟಾಯಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ವಂತಿಕೆ ಎಷ್ಟು?

ಯೋಜನೆಗೆ ಮಾಸಿಕ ವಂತಿಕೆ 2025ರ ಅಕ್ಟೋಬರ್‌ನಿಂದ ಸ್ವಯಂಚಾಲಿತವಾಗಿ ಕಡಿತವಾಗಲಿದೆ. ನೌಕರರಿಗೆ ಈ ಕೆಳಕಂಡಂತೆ ವಂತಿಗೆ ಕಡಿತವಾಗಲಿದೆ.

ಗ್ರೂಪ್‌ ಎ -1000 ರೂ.

ಗ್ರೂಪ್‌ ಬಿ - 500 ರೂ.

ಗ್ರೂಪ್‌ ಸಿ - 350 ರೂ.

ಗ್ರೂಪ್‌ ಡಿ - 250 ರೂ.

ತಂದೆ-ತಾಯಿಯ ಮಾಸಿಕ ಆದಾಯ ಮಿತಿ ಪರಿಷ್ಕರಣೆ:

ಸರ್ಕಾರಿ ನೌಕರನ ತಂದೆ ಮತ್ತು ತಾಯಿಯ ಮಾಸಿಕ ಆದಾಯ ಮಿತಿಯನ್ನು ಮಾಸಿಕ ಈ ಹಿಂದೆ 17,000 ರೂ. ನಿಗದಿಪಡಿಸಲಾಗಿತ್ತು. ಈಗ ಆದಾಯ ಮಿತಿಯನ್ನು ಪರಿಷ್ಕರಿಸಿ ಮಾಸಿಕ 27,000 ರೂ. ಗಳಿಗೆ ನಿಗದಿಪಡಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲೂ ನಗದು ರಹಿತ ವೈದ್ಯಕೀಯ ಸೇವೆ

ಯೋಜನೆಯಡಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲದೇ ಸಾರ್ವಜನಿಕ ವಲಯದ ಅಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ (Societies Registration Act, 1960) ರಡಿ ನೋಂದಾಯಿಸಲ್ಪಟ್ಟ ಸಂಸ್ಥೆಗಳು ಹಾಗೂ ಬೋಧಕ ಆಸ್ಪತ್ರೆಗಳು, ಇತ್ಯಾದಿ), ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೂಡ ನಗದು ರಹಿತ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಆರಂಭದ ಹಂತದಲ್ಲಿ ಆಲೋಪತಿ ವೈದ್ಯ ಪದ್ಧತಿಯಡಿ ಸರ್ಕಾರಿ ನೌಕರರು ಇಂತಹ ಸಂಸ್ಥೆಗಳಲ್ಲಿ ಪಡೆಯುವ ವೈದ್ಯಕೀಯ ಚಿಕಿತ್ಸಾ ವೆಚ್ಚಗಳಿಗೆ ಸಂಬಂಧಿಸಿದಂತೆ SAST ಸಂಸ್ಥೆಯು KASS ದರಗಳನ್ನು ಅನ್ವಯಿಸಿ ಮರುಪಾವತಿಸತಕ್ಕದ್ದು ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Arogya Sanjeevini Scheme: ಅ.1ರಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ; ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಧನ್ಯವಾದ

ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ ಸ್ಪಷ್ಟಿಕರಣ

ಯೋಜನೆಯಡಿ ಸರ್ಕಾರಿ ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡಲು ಪ್ರತ್ಯೇಕವಾಗಿ ಖಾಸಗಿ ಆಸ್ಪತ್ರೆಗಳನ್ನು ನೋಂದಾಯಿಸಲು ಕ್ರಮವಹಿಸಲಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶ ಅಗತ್ಯವಿದೆ. ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುವವರೆಗೆ ಸರ್ಕಾರಿ ನೌಕರರು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮಗಳಡಿ ನೋಂದಾಯಿಸಲ್ಪಟ್ಟ 500 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ (ಚಿಕಿತ್ಸಾ ವೆಚ್ಚ ಪಾವತಿಸಿ) ವೈದ್ಯಕೀಯ ಚಿಕಿತ್ಸೆ ಪಡೆಯುವ ಹಾಗೂ ತರುವಾಯ ಹಿಂಬರಿಸಿಕೊಳ್ಳುವ ಅವಕಾಶವನ್ನು ಮುಂದಿನ ಆರು ತಿಂಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಒದಗಿಸಲಾಗಿದೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಈ ಅವಕಾಶವನ್ನು ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸಿ ನೋಂದಾಯಿಸುವ ಅಥವಾ ಯೋಜನೆಯಿಂದ ಹೊರಗೆ ಉಳಿಯಲು ಇಚ್ಛೆ ವ್ಯಕ್ತಪಡಿಸುವ ಸರ್ಕಾರಿ ನೌಕರರು ಸಹ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.