ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arogya Sanjeevini Scheme: ಅ.1ರಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ; ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಧನ್ಯವಾದ

Karnataka State Government Employees Association: ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸೇರಿದಂತೆ ಅಂದಾಜು 25 ಲಕ್ಷ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ತಿಳಿಸಿದ್ದಾರೆ.

ಆರೋಗ್ಯ ಸಂಜೀವಿನಿ ಯೋಜನೆ ಜಾರಿ; ಸರ್ಕಾರಿ ನೌಕರರ ಸಂಘ ಧನ್ಯವಾದ

-

Prabhakara R Prabhakara R Sep 23, 2025 9:07 PM

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (Arogya Sanjeevini Scheme) ಅ.1ರಿಂದ ಜಾರಿಗೊಳಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಧನ್ಯವಾದ ಸಲ್ಲಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸೇರಿದಂತೆ ಅಂದಾಜು 25 ಲಕ್ಷ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಯೋಜನೆಗಾಗಿ ಸರ್ಕಾರ ವಾರ್ಷಿಕ 500 ಕೋಟಿ ರೂ. ಅನುದಾನ ಕಾಯ್ದಿರಿಸಿದೆ ಎಂದು ಸಂಘ ತಿಳಿಸಿದೆ.

ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ಧಿಷ್ಟಪಡಿಸಿರುವ ವಂತಿಗೆಯನ್ನು ಅಕ್ಟೋಬರ್‌ನಿಂದ ನೀಡಬೇಕಾಗುತ್ತದೆ. ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವಂತಿಗೆಯನ್ನು ನೀಡಬೇಕಿದೆ.

ಮಾಸಿಕ ವಂತಿಕೆಯನ್ನು ನೀಡಲು ಇಚ್ಛಿಸದೇ ಇರುವ ನೌಕರರು ಲಿಖಿತವಾಗಿ ಅ.18ರೊಳಗೆ ಸಂಬಂಧಿಸಿದ ಬಟವಾಡೆ ಅಧಿಕಾರಿಗಳಿಗೆ (ಡಿ.ಡಿ.ಒ) ಮಾಹಿತಿ ನೀಡಬೇಕು. ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು 17,000 ಗಳಿಂದ 27,000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ವಿವಾಹಿತ ಸರ್ಕಾರಿ ಮಹಿಳಾ ನೌಕರರ ತಂದೆ-ತಾಯಂದಿರೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Arogya Sanjeevini Scheme: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಅ.1ರಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ

ರಾಜ್ಯ ಸರ್ಕಾರಿ ನೌಕರರಿಗೆ ಈ ಯೋಜನೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಂಘವು ಧನ್ಯವಾದ ಸಲ್ಲಿಸುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ತಿಳಿಸಿದ್ದಾರೆ.