ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಸೈದಾಪುರದಲ್ಲಿ ಕಬ್ಬು ತುಂಬಿದ್ದ 30ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಇಟ್ಟಿರುವ ಘಟನೆ (Sugarcane Farmers Protest) ಗುರುವಾರ ನಡೆದಿದೆ. ಬೆಳೆದ ಬೆಳೆ ನಷ್ಟವಾಗಿದೆ ಎಂದು ಕಬ್ಬು ಬೆಳೆಗಾರರು ಕಣ್ಣೀರು ಇಟ್ಟಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ, ಬೆಂಕಿ ಇಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸೈದಾಪುರದ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದೆ.
ಪ್ರತಿ ಟನ್‌ಗೆ 3,500 ನೀಡಬೇಕು ಎಂದು ರೈತರು, ಮುಧೋಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಕೇವಲ ನೂರು ಹೆಚ್ಚಳ ಮಾಡಿದ್ದರಿಂದ ರೊಚ್ಚಿಗೆದ್ದ ಕೆಲವರು, ಕಾರ್ಖಾನೆ ಮುಂದೆ ನಿಲ್ಲಿಸಿದ್ದ ಕಬ್ಬು ತುಂಬಿದ್ದ ಟ್ರಾಲಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಈ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಬ್ಬು ಕಳೆದುಕೊಂಡ ರೈತರು ಕಣ್ಣೀರಿಟ್ಟಿದ್ದು, ಕಬ್ಬು ಚೆನ್ನಾಗಿತ್ತು, ಸುಟ್ಟು ಹಾಕಿದ್ದಾರೆ. ಕಬ್ಬಿನ ಜತೆ ಟ್ರ್ಯಾಕ್ಟರ್ ಟ್ರಾಲಿಗಳು ಸುಟ್ಟು ಕರಕಲಾಗಿವೆ ಎಂದು ರೈತರು ಗೋಳಾಡಿದ್ದಾರೆ. ಇದಕ್ಕೆಲ್ಲ ರೈತ ಸಂಘದವರೇ ಹೊಣೆ. ರೈತರಾಗಿದ್ದರೆ ಇವರು ಈ ರೀತಿ ಹೋರಾಟ ನಡೆಸಲ್ಲ. ಸರ್ಕಾರ ನಿಗದಿಪಡಿಸಿರುವ ದರಕ್ಕೆ ಒಪ್ಪಿಕೊಂಡು ಕಬ್ಬನ್ನು ಕಾರ್ಖಾನೆಗೆ ತಂದಿದ್ದೆವು. ಆದರೆ, ಟ್ರ್ಯಾಕ್ಟರ್‌ಗಳಿಗೆ ಬೆಚ್ಚಿ ಹಚ್ಚಿದ್ದಾರೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಆರಂಭದಲ್ಲಿ ನಿಪ್ಪಾಣಿ- ಮಹಾಲಿಂಗಪುರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿ ಟನ್ ಕಬ್ಬಿಗೆ 3,500 ರೂ. ಕೊಡಬೇಕೆಂದು ಆಗ್ರಹಿಸಿದ್ದ ರೈತರು, ಸೈದಾಪುರ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆ ಬಳಿಕ ತಾಳ್ಮೆ ಕಳೆದುಕೊಂಡ ಕೆಲ ರೈತರು ಮಹಲಿಂಗಪುರ-ನಿಪ್ಪಾಣಿ ರಸ್ತೆಯಲ್ಲಿರುವ ಸೈದಾಪುರ ಸಕ್ಕರೆ ಕಾರ್ಖಾನೆ ಅವರಣದಲ್ಲಿನ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. 30ಕ್ಕೂ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದರಿಂದ ಬೆಳೆ ಕಳೆದುಕೊಂಡ ರೈತರು ಕಣ್ಣೀರಿಟ್ಟಿದ್ದಾರೆ. ಸ್ಥಳದಲ್ಲಿ 200ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ | Karnataka Sugarcane Price: ಪ್ರತಿ ಟನ್ ಕಬ್ಬಿನ ದರ 100 ರೂ. ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ
ಈ ಬಗ್ಗ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಪ್ರತಿಕ್ರಿಯಿಸಿ, ಇದು ರೈತರು ಮಾಡಿರುವ ಕೃತ್ಯವಲ್ಲ. ರೈತರ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ಇಡೀ ರಾಜ್ಯದಲ್ಲಿ ಈ ರೀತಿಯ ಪ್ರತಿಭಟನೆ ಮಾಡಿಲ್ಲ. ಉತ್ತರ ಕರ್ನಾಟಕದ 73 ಕಾರ್ಖಾನೆಗಳಲ್ಲಿ ಕೇವಲ ನಾಲ್ಕು ಕಾರ್ಖಾನೆಗಳ ಜತೆ ಸಂಘರ್ಷ ಮಾಡಿ ಈ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಅದು ಕೂಡ ರೈತರ ಬೆಳೆಯೇ, ಅದಕ್ಕೆ ಬೆಂಕಿ ಹಚ್ಚಿದರೆ ಏನು ಪ್ರಯೋಜನ. ಯಾರು ಬೆಂಕಿ ಹಚ್ಚಿದ್ದಾರೆ ಎಂಬುವುದು ಪೊಲೀಸರ ತನಿಖೆಯಿಂದ ಹೊರಬರುತ್ತದೆ. ಸರ್ಕಾರ ಹೆಚ್ಚಿನ ದರವನ್ನೇ ನೀಡಿದೆ. ಇಡೀ ರಾಜ್ಯದ ರೈತರು ಒಪ್ಪಿದ್ದಾರೆ, ಆದರೆ, ಮುಧೋಳ ರಾಜ್ಯದ ರೈತರು ಯಾಕೆ ಒಪ್ಪಿಲ್ಲ ಎಂಬುವುದು ತಿಳಿಯದು. ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಸಹಾಯ ಮಾಡಲಿದೆ ಎಂದು ಎಂದು ತಿಳಿಸಿದ್ದಾರೆ.