ಬಾಗಲಕೋಟೆ: ಸರ್ಕಾರಿ ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ ವೇಳೆ ಕಟ್ಟಿಗೆ ಇರಿತದಿಂದ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಘಟನೆ ಬಾಗಲಕೋಟೆ (Bagalkot News) ಜಿಲ್ಲೆಯ ಢವಳೇಶ್ವರ ಗ್ರಾಮದ ಮೊರಬದ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
1ನೇ ತರಗತಿ ವಿದ್ಯಾರ್ಥಿಯಿಂದ 5ನೇ ತರಗತಿ ವಿದ್ಯಾರ್ಥಿ ಕಣ್ಣಿಗೆ ಕಟ್ಟಿಗೆ ಇರಿಯಲಾಗಿದೆ. 5ನೇ ತರಗತಿಯ ಸಮರ್ಥ ಎಂಬ ಬಾಲಕ ಬಲಗಣ್ಣು ಕಳೆದುಕೊಂಡಿದ್ದಾನೆ. ಭೀಮಪ್ಪ ಕಟ್ಟಿಗೆಯಿಂದ ಇರಿದಿರುವ ವಿದ್ಯಾರ್ಥಿಯಾಗಿದ್ದಾನೆ.
ತೀವ್ರ ಗಾಯದ ಹಿನ್ನೆಲೆಯಲ್ಲಿ ಕಣ್ಣಿನ ಗುಡ್ಡೆಯನ್ನೇ ವೈದ್ಯರು ತೆಗೆದಿದ್ದಾರೆ. ಪೆನ್ ವಾಪಸ್ ಕೇಳುವ ವಿಚಾರದಲ್ಲಿ ಮಕ್ಕಳಿಬ್ಬರ ನಡುವೆ ಗಲಾಟೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಣ್ಣು ಕಳೆದುಕೊಂಡ ಮಗನ ಸ್ಥಿತಿ ಕಂಡು ಕಂಗಾಲಾಗಿರೋ ಸಮರ್ಥನ ಪೋಷಕರು, ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶಾಲೆಯಲ್ಲಿ ಮಕ್ಕಳ ನಡುವೆ ಆಗಾಗ ಜಗಳ ನಡೆಯುತ್ತಿದ್ದರೂ ಕ್ರಮ ವಹಿಸಿಲ್ಲ ಎಂದು ಶಿಕ್ಷಕರ ವಿರುದ್ಧ ದೂರು ನೀಡಿದ್ದಾರೆ.
ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದೆಡೆ ಜಮಖಂಡಿ ಎಸಿ ಶ್ವೇತಾ ಬಿಡಿಕರ್‌ಗೂ ಪೋಷಕರು ದೂರು ಸಲ್ಲಿಸಿದ್ದಾರೆ. ಕರ್ತವ್ಯ ಲೋಪ ತೋರಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸಿ ನೀಡಿದ್ದಾರೆ. ಮುಖ್ಯ ಶಿಕ್ಷಕಿ ಜಯಶ್ರೀ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ಎಂಬುವವರ ವಿರುದ್ಧ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.