ಬಾಗಲಕೋಟೆ: ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರಿಗೆ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ (Narayansa K Bhandage) ಆರ್‌ಎಸ್‌ಎಸ್ ರಕ್ಷಾಸೂತ್ರ (ರಾಖಿ) ಕಟ್ಟಿರುವುದು ಕಂಡುಬಂದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರದೇಶಗಳ ಪರಿಶೀಲನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಪರಾಮರ್ಶೆಗಾಗಿ ಶುಕ್ರವಾರ ಆಗಮಿಸಿದ್ದ ಡಿ.ಕೆ. ಶಿವಕುಮಾರ್ ಅವರು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಬಳಿಕ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮುಖ್ಯಮಂತ್ರಿಗಳ ಬಳಿ ತೆರಳಿ ರಾಖಿ ಕಟ್ಟುವ ಇಚ್ಛೆ ವ್ಯಕ್ತಪಡಿಸಿದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಡಿ.ಕೆ. ಶಿವಕುಮಾರ್, ಮುಗುಳುನಗುತ್ತಲೇ ತಮ್ಮ ಕೈಮುಂದೆ ಮಾಡಿದರು. ಈ ವೇಳೆ ನಾರಾಯಣಸಾ ಭಾಂಡಗೆ ಅವರು ಮುಖ್ಯಮಂತ್ರಿಗಳ ಕೈಗೆ ಕೇಸರಿ ಬಣ್ಣದ ಸಂಘ ರಕ್ಷೆಯನ್ನು ಕಟ್ಟಿ, ಹಸ್ತಲಾಘವ ಮಾಡಿ ಶುಭ ಹಾರೈಸಿದರು.
ಈ ಅಪರೂಪದ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಾರಾಯಣಸಾ ಭಾಂಡಗೆ, ಮುಖ್ಯಮಂತ್ರಿಗಳು ಅತ್ಯಂತ ಸಂತಸದಿಂದ ಆರೆಸ್ಸೆಸ್ ರಾಖಿ ಕಟ್ಟಿಸಿಕೊಂಡರು. ನೀವು ರಾಜ್ಯದ ರಕ್ಷಣೆ ಮಾಡಿ, ನಾವು ರಾಷ್ಟ್ರ ರಕ್ಷಣೆ ಮಾಡುತ್ತೇವೆ ಎಂದು ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು. ಅಲ್ಲದೆ, ಈ ಕ್ಷಣದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿರುವ ಅವರು, "ಧರ್ಮದ ರಕ್ಷಣೆ, ನಾಡಿನ ರಕ್ಷಣೆ ನಮ್ಮ ಸಂಕಲ್ಪ. ಇದು ಸಂಘ ರಕ್ಷೆಯ ಸಂದೇಶ" ಎಂದು ಬರೆದುಕೊಂಡಿದ್ದಾರೆ.
ಪ್ರಜಾಸೇವೆಗೆ ಚಾಲನೆ ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ: ಸಿಎಂ ಡಿ.ಕೆ. ಶಿವಕುಮಾರ್
ಈ ಹಿಂದೆ ವಿಧಾನಸಭೆ ಕಲಾಪದಲ್ಲೂ ಆರ್‌ಎಸ್‌ಎಸ್ ಪ್ರಾರ್ಥನೆ ಗೀತೆಯ ಸಾಲುಗಳನ್ನು ಹಾಡಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದ ಡಿ.ಕೆ. ಶಿವಕುಮಾರ್ ಅವರ ನಡೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಬಿಜೆಪಿ ನಾಯಕರಿಂದಲೇ ಆರೆಸ್ಸೆಸ್ ರಾಖಿ ಕಟ್ಟಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.